Site icon Vistara News

ಸಮಾನ ವೇತನಕ್ಕಾಗಿ ಮುಷ್ಕರ, ಇಂದು ಸರ್ಕಾರಿ ಆಸ್ಪತ್ರೆಗಳ ಸೇವೆ ವ್ಯತ್ಯಯ ಸಾಧ್ಯತೆ

ಬೆಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಆಗ್ರಹಿಸಿ ಆರೋಗ್ಯ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ಸಿಬ್ಬಂದಿಗಳು ಮತ್ತೊಮ್ಮೆ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಜುಲೈ 8ರಂದು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗಳಿಂದ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಭಾಗಿಯಾಗಲಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವುದಿಲ್ಲ‌ ವೈದ್ಯರು!

ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆಯು ಕಾಯಂ ನೌಕರರಿಗಿಂತ ಹೆಚ್ಚಿದೆ. ವೈದ್ಯರುಗಳು, ನರ್ಸ್, ಲ್ಯಾಬ್ ಟೆಕ್ನಿಷಿಯನ್ಸ್ ಹಾಗೂ ಸಿಬ್ಬಂದಿಗಳು ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಗಳು ಇಲ್ಲದೇ ರೋಗಿಗಳಿಗೆ ಸಂಕಷ್ಟ ಎದುರಾಗಬಹುದು.

ಇವರ ಬೇಡಿಕೆಗಳೇನು?

ನಿವೃತ್ತ ಐಎಎಸ್‌ ಅಧಿಕಾರಿ ಶ್ರೀನಿವಾಸಾಚಾರಿ ಸಮಿತಿ ರಚಿಸಿ ವರದಿ ಸಲ್ಲಿಸಿ ವರ್ಷಗಳು ಕಳೆದರೂ ನೌಕರರ ಶ್ರೇಯೋಭಿವೃದ್ಧಿ ವಿಚಾರ ಅನುಷ್ಠಾನಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನವೇತನ, ಸೇವಾಭದ್ರತೆ, ವಯೋಮಿತಿ ಸಡಿಲಿಕೆ ಹೆಚ್ಚಳ, ಕೃಪಾಂಕ ಹೆಚ್ಚಳ, ವರ್ಗಾವಣೆ, ಹೊರಗುತ್ತಿಗೆ ನೌಕರರಿಗೆ ಸರ್ಕಾರದ ಸಂಸ್ಥೆಯಿಂದ ನಿರ್ವಹಣೆ ಮಾಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಬೆಂಗಳೂರು ಚೆಲೋಗೆ ಕರೆ ನೀಡಲಾಗಿದೆ.

ಇದನ್ನೂ ಓದಿ | National Doctors day | ವೈದ್ಯರ ಮೇಲೆ ಒತ್ತಡ ಹೆಚ್ಚಿಸಿದ ಈಡಿಯಟ್‌ ಸಿಂಡ್ರೋಮ್‌: ಡಾ. ಸಿ. ಎನ್‌. ಮಂಜುನಾಥ್‌ ಕಳವಳ

Exit mobile version