Site icon Vistara News

Mangalore Pub Attack | ಅಂದು ಶ್ರೀರಾಮಸೇನೆ, ಇಂದು ಬಜರಂಗದಳ ಕಾರ್ಯಕರ್ತರಿಂದ ಪಬ್‌ ದಾಳಿ

Mangalore Pub Attack

ಮಂಗಳೂರು: ನಗರದ ಪಬ್‌ವೊಂದರಲ್ಲಿ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿಯಲ್ಲಿ ಕುಡಿದು ಮೋಜು ಮಸ್ತಿ ಮಾಡುತ್ತಿದ್ದಾರೆಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ದಾಳಿ (Mangalore Pub Attack) ನಡೆಸಿದ್ದ ಪ್ರಕರಣ ಸಂಬಂಧ ಇನ್ನೊಂದು ಮಾಹಿತಿ ಹೊರಬಿದ್ದಿದೆ. ಇದೇ ಪಬ್‌ ಮೇಲೆ ೧೩ ವರ್ಷಗಳ ಹಿಂದೆಯೂ ಇದೇ ವಿಚಾರವಾಗಿ ಹಿಂದು ಸಂಘಟನೆಯೊಂದರಿಂದ ದಾಳಿ ನಡೆದಿತ್ತು. ಅಂದರೆ, ಸ್ಥಳ ಒಂದೇ ಆದರೂ ಪಬ್‌ ಮತ್ತು ಸಂಘಟನೆಗಳೆರಡರ ಹೆಸರು ಬೇರೆ ಬೇರೆ!

ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿಯಲ್ಲಿ ಕುಡಿದು ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ರಾತ್ರಿ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದರು. ಮಂಗಳೂರಿನ ರಿ-ಸೈಕಲ್ ದಿ ಲಾಂಜ್ ಪಬ್‌ ಒಳ ನುಗ್ಗಿ ಪಾರ್ಟಿ ನಿಲ್ಲಿಸುವಂತೆ ಗಲಾಟೆ ನಡೆಸಿ, ವಿದ್ಯಾರ್ಥಿಗಳನ್ನು ಹೊರಹಾಕಿದ್ದರು. ಇದು ಈಗ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದ್ದು, ಸಾರ್ವಜನಿಕ ವಲಯದಲ್ಲಿ ವಾದ-ಪ್ರತಿವಾದಗಳೂ ನಡೆಯುತ್ತಿವೆ. ಪೊಲೀಸರು ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಆದರೆ, ಈ ಪಬ್‌ ಇತಿಹಾಸವನ್ನು ನೋಡಿದಾಗ ಇದೇ ರೀತಿಯ ದಾಳಿಯು ೨೦೦೯ರಲ್ಲಿಯೂ ನಡೆದಿತ್ತು ಎಂಬ ವಿಚಾರ ತಿಳಿದುಬಂದಿದೆ. ಈಗಿನ ರಿ-ಸೈಕಲ್ ಲಾಂಜ್ ಪಬ್‌ ಆಗ ಅಮ್ನೇಶಿಯಾ ಪಬ್‌ ಆಗಿತ್ತು. ಇದರ ಮೇಲೆ ಶ್ರೀರಾಮಸೇನೆ ಕಾರ್ಯಕರ್ತರು ದಾಳಿ ನಡೆಸಿ ವಿವಾದ ಎಬ್ಬಿಸಿದ್ದರು. ನೈತಿಕ ಪೊಲೀಸ್‌ಗಿರಿ ವಿರುದ್ಧ ಸಾಕಷ್ಟು ಚರ್ಚೆಗಳು, ಪ್ರತಿಭಟನೆಗಳು ಸಹ ನಡೆದಿದ್ದವು.

೨೦೦೯ರಲ್ಲಿ ಆಗಿದ್ದೇನು?

2009ರಲ್ಲಿ ಮಂಗಳೂರಿನ ಅಮ್ನೇಶಿಯಾ ಪಬ್‌ನಲ್ಲಿ ಯುವಕ, ಯುವತಿಯರ ಪಾರ್ಟಿ ಮಾಡುವುದಲ್ಲದೆ, ಕುಡಿದು ಅರೆಬೆತ್ತಲೆ ನರ್ತನದಲ್ಲಿ ತೊಡಗಿದ್ದರು ಎಂದು ಆರೋಪಿಸಿ ಶ್ರೀರಾಮಸೇನೆಯ 25ಕ್ಕೂ ಹೆಚ್ಚು ಕಾರ್ಯಕರ್ತರು ದಾಳಿ ನಡೆಸಿದ್ದರು. ಇವರ ಈ ದಾಂಧಲೆ ಪ್ರಕರಣವು ಆಗ ಭಾರಿ ಸುದ್ದಿಯನ್ನು ಮಾಡಿದ್ದು, ದೇಶಾದ್ಯಂತ ಸಂಚಲನ ಮೂಡಿಸಿತ್ತು. ಅಮ್ನೇಶಿಯಾ ಹೆಸರಿನಲ್ಲಿ ಬೇರೆಯವರ ಮಾಲೀಕತ್ವದಲ್ಲಿ ನಡೆಸಲಾಗುತ್ತಿತ್ತು. ಇದೀಗ ಮತ್ತೆ ಬಜರಂಗದಳದ ಕಾರ್ಯಕರ್ತರು ಅದೇ ಪಬ್‌ ಮೇಲೆ ದಾಳಿ ನಡೆಸಿದ್ದಾರೆ.

ಸ್ಥಳಕ್ಕೆ ಪೊಲೀಸ್‌ ಆಯುಕ್ತರ ಭೇಟಿ

ನಗರದ ಹಂಪನಕಟ್ಟೆ ಬಳಿ ಇರುವ ರಿ-ಸೈಕಲ್ ಲಾಂಜ್ ಪಬ್‌ಗೆ ಸೋಮವಾರ (ಜುಲೈ ೨೫) ರಾತ್ರಿ ಬಜರಂಗದಳ ಕಾರ್ಯಕರ್ತರಿಂದ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪಬ್‌ಗೆ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದಾಳಿ ನಡೆಸಿದ್ದ ಸುಮಾರು 40 ಜನ ಕಾರ್ಯಕರ್ತರ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ | Mangalore Pub Attack | ವಿದ್ಯಾರ್ಥಿಗಳ ವಿದಾಯ ಕೂಟದ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ

Exit mobile version