ಹಾಸನ: ವಿಧವೆಯೊಂದಿಗೆ ಸ್ನೇಹ ಬೆಳೆಸಿ, ಅದು ಪ್ರೇಮಕ್ಕೆ ತಿರುಗಿದ ನಂತರ ಬಾಳು ಕೊಡುವುದಾಗಿ ಯಾರಿಗೂ ತಿಳಿಯದಂತೆ ನಾಲ್ಕು ಗೋಡೆಯ ಮಧ್ಯೆ ತಾಳಿಕಟ್ಟಿದ್ದ ಯೋಧ ಕಿರಣ್‌ಕುಮಾರ್, ಈಗ ಅದೇ ಮಹಿಳೆ ಜತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನಗರದ ಎಂ.ಹೊಸಕೊಪ್ಪಲು ನಿವಾಸಿ ಆಶಾ ಮತ್ತು ತಾಲೂಕಿನ ಮುತ್ತಿಗೆ ಗ್ರಾಮದ ಕಿರಣ್ ಕುಮಾರ್ ಇಬ್ಬರೂ ಶಾಂತಿ ಗ್ರಾಮ ಬಳಿಯ ಅರಣ್ಯದಲ್ಲಿ ಒಂದೇ ಮರದಲ್ಲಿ ನೇಣಿಗೆ ಶರಣಾಗಿದ್ದು, ಮದುವೆ ಪುರಾಣ ದುರಂತ ಅಂತ್ಯ ಕಂಡಿದೆ.
ಕಳೆದ ೧೦ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಿರಣ್ ಕುಮಾರ್, ರಜೆ ಮೇಲೆ ಊರಿಗೆ ಬಂದಾಗ, ಮೂರು ವರ್ಷದ ಹಿಂದೆ ಆಶಾಳ ಪರಿಚಯವಾಗಿತ್ತು. ಆಶಾಳ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದು, ಆಕೆಗೆ ಪದವಿ ಮುಗಿಸಿರೋ ಮಗಳು ಮತ್ತು ಮಗ ಇದ್ದಾರೆ. ಆದರೂ ಆಕೆಯೊಂದಿಗಿನ ಆರಂಭದ ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿತ್ತು.
ಇದನ್ನೂ ಓದಿ | ಮದುವೆ ವಂಚನೆ | ವಿವಾಹ ಮಂಟಪಕ್ಕೆ ಓಡೋಡಿ ಬಂದಳು; ಅಷ್ಟರಲ್ಲಾಗಲೇ ಮುಗಿದೇ ಹೋಗಿತ್ತು ಗಂಡನ 2ನೇ ಮದುವೆ!
ನಂತರ ನಿನ್ನನ್ನು ನಂಬುವುದು ಹೇಗೆ ಎಂದು ಆಶಾ ಪ್ರಶ್ನೆ ಮಾಡಿದಾಗ, ಇಲ್ಲ ಇಲ್ಲ ನಾನು ಕಡೆವರೆಗೂ ನಿನ್ನ ಜತೆಯಲ್ಲೇ ಇರುವೆ ಎಂದು ನಂಬಿಸಿ ದೇವರ ಫೋಟೊ ಮುಂದೆ ನಾಲ್ಕು ಗೋಡೆಯ ಮಧ್ಯೆ ಕಿರಣ್‌ಕುಮಾರ್, ಆಶಾಳಿಗೆ ತಾಳಿ ಕಟ್ಟಿ ಆಕೆಯೊಂದಿಗೆ ಸಂಸಾರ ಮಾಡಲು ಆರಂಭಿಸಿದ್ದ. ಆದರೆ ಮನೆಯವರಿಗೆ ಹೆದರಿ, ಈ ವಿಷಯವನ್ನು ಅವರಿಗೆ ಹೇಳಿರಲಿಲ್ಲ.
ಈ ನಡುವೆ ಮನೆಯವರು ಕಿರಣ್‌ಗೆ ಮದುವೆ ಮಾಡಲು ನಿರ್ಧರಿಸಿ ಹುಡುಗಿಯನ್ನೂ ಗೊತ್ತು ಮಾಡಿ ಗುರುವಾರ ನಗರದ ಹೊರ ವಲಯದ ಸಾಧನಾ ಕಲ್ಯಾಣ ಮಂಟಪದಲ್ಲಿ ವಿವಾಹ ನಿಶ್ಚಯ ಮಾಡಿದ್ದರು. ಇದಕ್ಕೆ ಮರು ಮಾತನಾಡದ ಕಿರಣ್, ಮನೆಯವರ ಒತ್ತಡಕ್ಕೆ ಮಣಿದು ಇನ್ನೊಂದು ಮದುವೆಗೆ ಓಕೆ ಎಂದಿದ್ದ. ಎಲ್ಲರ ಸಮ್ಮುಖದಲ್ಲಿ ಮದುವೆ ನಡೆಯುವ ವೇಳೆ ವಿಷಯ ತಿಳಿದು ಅಲ್ಲಿಗೆ ಧಾವಿಸಿದ್ದ ಆಶಾ, ಮೊದಲ ಮದುವೆ ಗುಟ್ಟನ್ನು ರಟ್ಟು ಮಾಡಿದ್ದಳು.
ಕಿರಣ್ ನನ್ನನ್ನು ಮದುವೆಯಾಗಿದ್ದು, ತಿಂಗಳುಕಟ್ಟಲೆ ಸಂಸಾರ ನಡೆಸಿ ನಂತರ ಕರ್ತವ್ಯಕ್ಕೆ ತೆರಳಿದ್ದ. ಆರು ತಿಂಗಳ ಬಳಿಕ ರಜೆ ಮೇಲೆ ಬಂದು ಮತ್ತೊಂದು ಮದುವೆ ತಯಾರಾಗಿದ್ದಾನೆ ಎಂದು ದೂರಿದ್ದಳು. ಅಷ್ಟೇ ಅಲ್ಲ, ನಿನಗೆ ಎರಡು ಲಕ್ಷ ರೂ. ಕೊಡುತ್ತೇನೆ. ಮದುವೆ ಮಂಟಪಕ್ಕೆ ಬರಬೇಡ ಎಂದೂ ಹೇಳಿದ್ದ. ಯಾವುದೇ ಹಣ ನೀಡಿಲ್ಲ ಎಂದು ಬಹಿರಂಗ ಪಡಿಸಿದ್ದಳು. ಇದರಿಂದ ಇನ್ನೊಬ್ಬಳಿಗೆ ಕಿರಣ್ ತಾಳಿ ಕಟ್ಟಿದ್ದರೂ ಮದುವೆ ಊರ್ಜಿತ ಆಗಿರಲಿಲ್ಲ. ನಂತರ ಪ್ರಕರಣ ಬಡಾವಣೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಮದುವೆ ಮನೆಯಲ್ಲಿ ರಂಪಾಟ ನಡೆದ ನಂತರವೂ ಕಿರಣ್ ಕುಮಾರ್ ಮತ್ತು ಆಶಾ ಜತೆಯಾಗಿ ಹೋಗಿ ಅರಣ್ಯದ ಮಧ್ಯೆ ಮರವೊಂದಕ್ಕೆ ಪ್ರತ್ಯೇಕವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ. ಇಬ್ಬರೂ ಗುರುವಾರ ಧರಿಸಿದ್ದ ಬಟ್ಟೆಯಲ್ಲೇ ನೇಣಿಗೆ ಶರಣಾಗಿದ್ದು, ಅಂದು ರಾತ್ರಿಯೇ ಸಾಯುವ ನಿರ್ಧಾರ ಮಾಡಿರುವ ಶಂಕೆ ಮೂಡಿದೆ. ಸ್ಥಳೀಯರಿಂದ ಮಾಹಿತಿ ಪಡೆದ ಶಾಂತಿಗ್ರಾಮ ಪೊಲೀಸರು, ಮೃತದೇಹಗಳನ್ನು ಕೆಳಗಿಳಿಸಿ, ಹಿಮ್ಸ್ ಆಸ್ಪತ್ರೆಗೆ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಈ ಸಂಬಂಧ ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇಶ ಕಾಯುವ ಹೆಮ್ಮೆಯ ಸೇವೆಗೆ ಸೇರಿ ಸಾರ್ವಜನಿಕವಾಗಿ ಅಪಾರ ಹೆಮ್ಮೆ ಗೌರವ ಸಂಪಾದನೆ ಮಾಡಿದ್ದ ಕಿರಣ್ ಕುಮಾರ್, ವೈಯಕ್ತಿಕವಾಗಿ ಮಾಡಬಾರದ ಕೆಲಸ ಮಾಡಲು ಹೋಗಿ ಹೆಣವಾಗಿರುವುದು ಆತನ ಮನೆಯವರು, ಸಂಬಂಧಿಕರಲ್ಲಿ ಮುಜುಗರ ತರಿಸಿದೆ. ಮತ್ತೊಂದೆಡೆ ತಂದೆ ಗತಿಸಿದ ನಂತರ ತಾಯಿಯೇ ಸರ್ವಸ್ವ ಎಂದುಕೊಂಡಿದ್ದ ಆಶಾಳ ಇಬ್ಬರು ಮಕ್ಕಳು ಈಗ ಅನಾಥವಾಗಿದ್ದಾರೆ. ಹೆಣ್ಣು ಹಠಕ್ಕೆ ಬಿದ್ದರೆ, ಗಂಡು ತನ್ನ ನಿರ್ಧಾರದಲ್ಲಿ ಎಡವಿದರೆ ಏನೆಲ್ಲ ಆಗಲಿದೆ ಎಂಬುವುದಕ್ಕೆ ಈ ದುರಂತ ಸಾಕ್ಷಿಯಾಗಿದೆ.
ಇದನ್ನೂ ಓದಿ | Attempt to Murder | ಗುರಾಯಿಸಿದನೆಂಬ ಕಾರಣಕ್ಕೆ ಮಚ್ಚಿನಿಂದ ಹಲ್ಲೆ; ನೇತಾಡಿದ ಕಾಲುಗಳು!