ಉಡುಪಿ: ಕೊರೊನಾ ಮಹಾಮಾರಿಯ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಯಾರಾಗಿರುವ ಕೋವಿಶೀಲ್ಡ್ ವ್ಯಾಕ್ಸಿನ್ ಬಗ್ಗೆ ಕೇಳಿಬಂದಿದ್ದ ಅಪಸ್ವರಕ್ಕೆ ಸಂಶೋಧನೆಯೊಂದು ತೆರೆ ಎಳೆದಿದೆ. ಪುರುಷತ್ವಕ್ಕೆ ಭಾರಿ ಹೊಡೆತ ಕೊಡಲಿದೆ ಎಂಬ ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ಸಂಶೋಧನೆ ಮಾಡಿದ್ದು, ಕೋವಿಶೀಲ್ಡ್‌ನಿಂದ ಪುರುಷತ್ವಕ್ಕೆ (Male fertility) ಯಾವುದೇ ಹಾನಿ ಇಲ್ಲ ಎಂದು ಘೋಷಣೆ ಮಾಡಿದೆ.
ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಿಂದ ಇಂಥದ್ದೊಂದು ಮಹತ್ವದ ಸಂಶೋಧನೆ ನಡೆದಿದ್ದು, ಕೋವಿಡ್ ವಿರುದ್ಧ ಹೋರಾಡಲು ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ತೆಗೆದುಕೊಳ್ಳಬಹುದು ಎಂದು ಷರಾ ಬರೆದಿದೆ. ಈ ವ್ಯಾಕ್ಸಿನ್ ಪಡೆದುಕೊಳ್ಳುವುದರಿಂದ ವೀರ್ಯದ ಗುಣಮಟ್ಟದಲ್ಲಿ ಸಹ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸಂಶೋಧನೆ ತಿಳಿಸಿದೆ.
ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಡಾ.(ಪ್ರೊ.) ಸತೀಶ್ ಅಡಿಗ ನೇತೃತ್ವದ ಭಾರತೀಯ ಫರ್ಟಿಲಿಟಿ ತಜ್ಞರ ಐವರ ತಂಡದಿಂದ ಈ ಸಂಶೋಧನೆ ನಡೆದಿದೆ. ಇಂಗ್ಲೆಂಡ್ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಆ್ಯಂಡ್ ಫರ್ಟಿಲಿಟಿಯ ಅಧಿಕೃತ ಜರ್ನಲ್‌ನ ಸೆ.5ರ ಸಂಚಿಕೆಯಲ್ಲಿ ಸಂಶೋಧನಾ ವರದಿ ಪ್ರಕಟಗೊಂಡಿದೆ.
ಇದನ್ನೂ ಓದಿ | Ukrain Students | ಉಕ್ರೇನ್‌ನಿಂದ ಬಂದ ಮೆಡಿಕಲ್ ಸ್ಟೂಡೆಂಟ್ಸ್‌ಗೆ ಬೇರೆ ವಿವಿಗಳಲ್ಲಿ ಅಧ್ಯಯನಕ್ಕೆ ಅವಕಾಶ
೫೩ ಮಂದಿಯ ವೀರ್ಯದ ಸ್ಯಾಂಪಲ್
ವ್ಯಾಕ್ಸಿನ್ ತೆಗೆದುಕೊಂಡ ಪುರುಷನ ವೀರ್ಯದ ಗುಣಮಟ್ಟ, ಸಂಖ್ಯೆ, ಚಲನೆಯ ಗುಣ, ಲೈಂಗಿಕ ಸಾಮರ್ಥ್ಯದಲ್ಲಿ ಯಾವುದೂ ಬದಲಾವಣೆಯಾಗಿಲ್ಲ. ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಕಂಡುಬಂದಿಲ್ಲ. ಎಂಬುದು ಅಧ್ಯಯನದ ಮೂಲಕ ದೃಢಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಂಶೋಧನೆಗಾಗಿ 53 ಮಂದಿಯ ವೀರ್ಯವನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಳ್ಳುವ ಮೊದಲು ಅವರ ವೀರ್ಯವನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿತ್ತು. ವ್ಯಾಕ್ಸಿನೇಷನ್ ಆದ ಎರಡು ತಿಂಗಳ ನಂತರ ಮತ್ತೊಮ್ಮೆ ವೀರ್ಯದ ಗುಣಮಟ್ಟವನ್ನು ಪರೀಕ್ಷಿಸಲಾಗಿತ್ತು. ವ್ಯಾಕ್ಸಿನ್ ಪಡೆದ ನಂತರವೂ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ ಎಂದು ಹೇಳಲಾಗಿದೆ. ಕೋವಿಡ್-19ಕ್ಕೆ ಪಾಸಿಟಿವ್ ಬಂದ ಅಥವಾ ಕೋವಿಡ್‌ನ ಗುಣಲಕ್ಷಣ ಕಂಡುಬಂದ ವ್ಯಕ್ತಿಗಳನ್ನು ಅಧ್ಯಯನಕ್ಕೆ ಪರಿಗಣಿಸಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ | Adar Poonawalla | ಸೀರಂ ಇನ್‌ಸ್ಟಿಟ್ಯೂಟ್‌ಗೆ ಅದಾರ್ ಪೂನಾವಾಲಾ ಹೆಸರಿನಲ್ಲೇ 1 ಕೋಟಿ ರೂ. ವಂಚನೆ