Site icon Vistara News

ಶೆಲ್ಟರ್‌ ಗುಂಬಜ್‌ | ಹುಷಾರು, ನಾಳೆ ಬಸ್‌ ನಿಲ್ದಾಣವನ್ನೇ ದರ್ಗಾ ಅಂತ ಕ್ಲೇಮ್‌ ಮಾಡಬಹುದು ಎಂದ ಸೂಲಿಬೆಲೆ

Chakravarti Sulibele

ಧಾರವಾಡ: ಏನೂ ಇಲ್ಲದ ಕಡೆ ದರ್ಗಾ ಕಟ್ಟಿಕೊಳ್ಳುವ ಇವರು ನಾಳೆ ಬಸ್‌ ನಿಲ್ದಾಣವನ್ನೇ ದರ್ಗಾ ಎಂದು ಕ್ಲೇಮು ಮಾಡಬಹುದು: ಹೀಗೆಂದು ಹೇಳಿದ್ದಾರೆ ಚಿಂತಕ ಚಕ್ರವರ್ತಿ ಸೂಲಿಬೆಲೆ. ಯಮಕನ ಮರಡಿಯಲ್ಲಿ ನಡೆಯುವ ʻನಾನೂ ಹಿಂದುʼ ಸಮಾವೇಶದಲ್ಲಿ ಭಾಗವಹಿಸಲು ತೆರಳುವ ಮಧ್ಯೆ ಧಾರವಾಡದಲ್ಲಿ ಮಾತನಾಡಿದ ಅವರು ಮೈಸೂರಿನಲ್ಲಿ ತಲೆ ಎತ್ತಿರುವ ಶೆಲ್ಟರ್‌ ಗುಂಬಜ್‌ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು.

ಮೊದಲು ಕೇಳಬಹುದಿತ್ತು!
ʻʻಬಸ್ ನಿಲ್ದಾಣವನ್ನು ಬಸ್ ನಿಲ್ದಾಣ ಆಗಿ ಇರಲಿಕ್ಕೆ ಬಿಡಬೇಕು, ಬೇಕು ಬೇಕೆಂದು ಈ ರೀತಿ ತುರುಕುವ ಕೆಲಸ ನಡೆದಿದೆ. ಇದಕ್ಕೆ ಸಂಸದ ಪ್ರತಾಪ ಸಿಂಹ ವಿರೋಧ ಮಾಡಿದ್ದಾರೆ. ಅದರಲ್ಲಿ ಡಬಲ್ ಸ್ಟ್ಯಾಂಡರ್ಡ್ ಪ್ರಶ್ನೆಯೇ ಇಲ್ಲ. ಸಂಸದರಾಗಿ ಆ ಗುಂಬಜ್‌ ಬಗ್ಗೆ ವಿರೋಧ ಮಾಡುವ ಹಕ್ಕು ಅವರಿಗೆ ಇದೆ. ಅದನ್ನು ಅವರು ಮಾಡಿದ್ದಾರೆ. ನಿಜವೆಂದರೆ, ಈ ಶೆಲ್ಟರ್‌ ಕಟ್ಟುವ ಅನುಮತಿ ಕೊಡುವಾಗ ಯೋಚನೆ ಮಾಡಬೇಕಿತ್ತು. ಈಗ ಯೋಚನೆ ಮಾಡುವುದು ಕೂಡಾ ಸರಿ ಇದೆʼʼ ಎಂದು ಹೇಳಿದರು.

ಇದೊಂದೇ ಅಲ್ಲ, ಬೇರೇನೂ ಇದೆ ಅಂದ ಸೂಲಿಬೆಲೆ
ʻʻಬಸ್‌ ಶೆಲ್ಟರ್‌ ಮೇಲೆ ಮೂರು ಮೂರು ಗುಂಬಜ್‌ ಮಾಡಿ ಪಕ್ಕಾ ಯಾವುದೋ ಮತೀಯ ಕಟ್ಟಡದಂತೆ ಮಾಡಿದ್ದಾರೆ. ಮೈಸೂರಿನಲ್ಲಿ ಮಾತ್ರವಲ್ಲ, ಬೆಂಗಳೂರಿನಲ್ಲಿ ವಿದ್ಯುತ್ ಇಲಾಖೆಗೆ ಸೇರಿದ ಕಟ್ಟಡವೂ ಇದೇ ಸ್ವರೂಪದಲ್ಲಿ ಇದೆ. ಶಿವಾನಂದ ಸರ್ಕಲ್‌ನಲ್ಲಿ ಇರುವ ಕಟ್ಡಡ ನೋಡಿದಾಗ ಕೊಲ್ಲಿ ರಾಷ್ಟ್ರದ ಮಾದರಿ ನೋಡಿದ ಹಾಗೆ ಆಗುತ್ತಿದೆʼʼ ಎಂದು ಹೇಳಿದರು ಸೂಲಿಬೆಲೆ.

ʻʻಕೆಲವರು ರೈಲ್ವೇ ನಿಲ್ದಾಣದಲ್ಲೇ ಘೋರಿ ಹಾಕಿಕೊಂಡು ದರ್ಗಾ‌ ಮಾಡಿಕೊಳ್ಳುತ್ತಾರೆ. ಹಂಪಿಯಲ್ಲಂತೂ ಗಲ್ಲಿ ಗಲ್ಲಿಗೂ ದರ್ಗಾ‌ ಮಾಡುವಂತ ಪರಿಸ್ಥಿತಿ ತಂದಿದ್ದಾರೆ. ಏನೂ ಇಲ್ಲದ ಕಡೆ ದರ್ಗಾ ಕಟ್ಟಬಹುದಾದರೆ, ನಾಳೆ ಬಸ್ ನಿಲ್ದಾಣವನ್ನೇ ದರ್ಗಾ ಎಂದು ಹೇಳಿ ಕುಳಿತುಕೊಳ್ಳಬಹುದು. ಆಗ ಅದನ್ನು ತೆರವು ಮಾಡೋಕೆ ಆಗದೆ ಇರುವ ಸ್ಥಿತಿ‌‌ ನಿರ್ಮಾಣ ಆಗಬಹುದುʼʼ ಎಂದು ಎಚ್ಚರಿಸಿದರು ಸೂಲಿಬೆಲೆ.

ಕೇಸರಿ ವಿರೋಧಿಗಳು ವಿವೇಕಾನಂದ ವಿರೋಧಿಗಳು!
ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರದಲ್ಲಿ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ʻʻಪ್ರತಿಪಕ್ಷಗಳಿಗೆ ಕೇಸರಿ ಬಣ್ಣ ಎಂದರೆ ಯಾಕೆ ತಲೆ ಕೆಡುತ್ತದೋ ಗೊತ್ತಿಲ್ಲ. ನಮ್ಮ ಧ್ವಜದಲ್ಲಿ ಕೇಸರಿ ಬಣ್ಣ ಇದೆ. ಕೇಸರಿ ಬಣ್ಣವನ್ನು ಸೂಕ್ತವಾಗಿ ಬಳಸಿಕೊಂಡು ಪೇಂಟ್ ಮಾಡಿದ್ರೆ ಅದಕ್ಕೆ ಹಿಂದುತ್ವದ ಬ್ರಾಂಡ್‌ ಮಾಡುವುದು ಸರಿಯಲ್ಲ. ಬಣ್ಣಗಳಲ್ಲಿ ಎಲ್ಲವೂ ಇರುವುದರಿಂದ ಅದನ್ನ ಸೂಕ್ತವಾಗಿ ಬಳಸಿಕೊಂಡರೆ ಯಾವುದೇ ಸಮಸ್ಯೆ ಇಲ್ಲʼʼ ಎಂದರು.

ʻʻಕೆಲವರಿಗೆ ಕೇಸರಿ ಬಣ್ಣದ ಮೇಲೆ ಇರುವಂತೆ ಸ್ವಾಮಿ ವಿವೇಕಾನಂದ ಮೇಲೆ ಕೂಡಾ ಆಕ್ರೋಶ ಇದೆ. ಇದು ದುರಂತಕಾರಿ‌ ಸಂಗತಿ. ವಿವೇಕಾನಂದರು ಅತ್ಯಂತ ಶ್ರೇಷ್ಠ ವ್ಯಕ್ತಿ. ಜಗತ್ತಿಗೆ ಭಾರತವನ್ನು ಮತ್ತೊಮ್ಮೆ ತೊರಿಸಿಕೊಟ್ಟಂತ ವ್ಯಕ್ತಿ. ಭಾರತ ಎಂದರೆ ಕೆಟ್ಟದ್ದು ಎಂದು ಆಲೋಚನೆ ಇತ್ತು. ಅಂತಹ ಸ್ಥಿತಿಯಲ್ಲಿ ಭಾರತವನ್ನು ಮತ್ತೊಮ್ಮೆ ಜಗತ್ತಿನ‌ ಮುಂದೆ ಪ್ರಸ್ತುತಪಡಿಸಿ ಭಾರತದ ಬಗ್ಗೆ ಹೆಮ್ಮೆ ಮೂಡಿಸಿದರುʼʼ ಎಂದು ವಿವರಿಸಿದರು ಸೂಲಿಬೆಲೆ.

ʻʻವಿವೇಕಾನಂದರ ಫೋಟೊ ಇಡುವುದು ಮುಂದಿನ ಪೀಳಿಗೆಯ ಭಾರತ ನಿರ್ಮಾಣಕ್ಕೆ ಸಹಾಯವಾಗಲಿದೆ. ಬರೀ ವಿವೇಕಾನಂದರು ಅಷ್ಟೇ ಅಲ್ಲ, ದೊಡ್ಡ ಸಾಧನೆ ಮಾಡಿದಂತಹ ಶಿವಾಜಿ ಮಹಾರಾಜ್,‌ ಕೃಷ್ಣ ದೇವರಾಯ, ಅರವಿಂದರು ಕೂಡಾ ಶಾಲಾ ಮಕ್ಕಳಿಗೆ ಪರಿಚಯ ಆಗಬೇಕು. ಸರ್ಕಾರ ಈ ಬಗ್ಗೆ ಹೆಜ್ಜೆ ಇಡುತ್ತಿರುವುದು ಹೆಮ್ಮೆʼʼ ಎಂದರು.

ಹಿಂದು ಹೆಣ್ಮಕ್ಕಳ ಕೊಲೆ ಬಗ್ಗೆ ಎಚ್ಚರವಿರಲಿ
ಅಫ್ತಾಬ್ ಎನ್ನುವ ವ್ಯಕ್ತಿ ಶ್ರದ್ಧಾ ಎಂಬ ಹಿಂದು ಹೆಣ್ಣು ಮಗಳನ್ನು ೩೫ ಬಾರಿ ತುಂಡರಿಸಿ ಅದನ್ನು ಫ್ರಿಜ್‌ನಲ್ಲಿಟ್ಟು ಎಸೆಯುವ ಎಸೆಯುವ ವಾತಾವರಣ ನಿರ್ಮಾಣ ಆಗಿರುವುದು ಅಪಾಯಕಾರಿ. ನಾವು ಇನ್ನೂ ಹೆಚ್ಚು ಜಾಗೃತ ಆಗಬೇಕು, ಮುಂದಿನ ಪೀಳಿಗೆಗೆ ಇದಕ್ಕೆ ಬೇಕಾದ ಶಿಕ್ಷಣ ನೀಡಬೇಕಿದೆ ಎಂದರು ಸೂಲಿಬೆಲೆ.
ಉಡುಪಿಯ ಶಾಲೆಯಲ್ಲಿ ಅಜಾನ್ ನೃತ್ಯ ಮಾಡಿದ‌‌ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಈ ರೀತಿ ಆಗಬಾರದು, ಸಮಾಜದಲ್ಲಿ ಜಾಗೃತಿ ಇರಬೇಕು, ಹಿಂದೂ ಸಮಾಜ ಜಾಗೃತ ಆಗಬೇಕು. ಎಚ್ಚರಿಕೆಯಿಂದ ಇರಬೇಕು ಎಂದರು.

ಇದನ್ನೂ ಓದಿ | Swabhimani hindu| ಸತೀಶ್‌ ಜಾರಕಿಹೊಳಿ ತವರಲ್ಲೇ ನಡೆಯಲಿದೆ ಸೂಲಿಬೆಲೆ ನೇತೃತ್ವದ ನಾನೂ ಹಿಂದು ಸಮಾವೇಶ!

Exit mobile version