ರಂಗಸ್ವಾಮಿ ಎಂ.ಮಾದಾಪುರ, ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅದ್ಧೂರಿತನ ಅನುದಾನಕ್ಕೂ ಅನ್ವಯವಾಗುತ್ತಿದ್ದು, ಪ್ರಸಕ್ತ ಸಾಲಿನ ದಸರಾ ಮಹೋತ್ಸವಕ್ಕೆ ಅಂದಾಜು ೫೦ ಕೋಟಿ ರೂ. ಖರ್ಚಾಗಲಿದೆ. ಇದು ದಸರಾಕ್ಕಾಗಿ ಸರ್ಕಾರ ಖರ್ಚು ಮಾಡುತ್ತಿರುವ ಐತಿಹಾಸಿಕ ಗರಿಷ್ಠ ಮೊತ್ತ ಎಂಬ ದಾಖಲೆಗೆ ಸಾಕ್ಷಿಯಾಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಂಬೂ ಸವಾರಿ ಉದ್ಘಾಟನಾ ಕಾರ್ಯಕ್ರಮ ಸೇರಿದಂತೆ ಅರಮನೆ ಅಂಗಳದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅರಮನೆ ಆಡಳಿತ ಮಂಡಳಿ ೫ ಕೋಟಿ ರೂ. ಖರ್ಚು ಮಾಡಲಿದೆ. ನಗರಾದ್ಯಂತ ನಡೆಯುವ ಕಾರ್ಯಕ್ರಮಗಳಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ೧೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರ ಹೊರತಾಗಿ ದಸರಾ ಖರ್ಚು- ವೆಚ್ಚಗಳಿಗಾಗಿ 35.5 ಕೋಟಿ ರೂ. ಅನುದಾನ ಕೋರಿ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ.
ಸಾರ್ವಕಾಲಿಕ ದಾಖಲೆ
ದಸರಾ ಮಹೋತ್ಸವ ರಾಜಾಳ್ವಿಕೆ ಮತ್ತು ಪ್ರಜಾಪ್ರಭುತ್ವದ ಕೊಂಡಿ. ನಾಡಹಬ್ಬದ ಹೆಸರಿನಲ್ಲಿ ರಾಜ್ಯ ಸರ್ಕಾರವೇ ನವರಾತ್ರಿ ಉತ್ಸವವನ್ನೂ ಮೈಸೂರಿನಲ್ಲಿ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿದೆ. ದಸರಾ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ದಸರಾ ಸ್ವರೂಪ ತೀರ್ಮಾನ ಮಾಡುತ್ತಾರೆ. ಅದಕ್ಕೆ ಪೂರಕವಾದ ಅನುದಾನವನ್ನೂ ಒದಗಿಸುವ ವಾಡಿಕೆ ಹಲವು ವರ್ಷಗಳಿಂದಲೂ ಇದೆ.
2017ರಲ್ಲಿ ಡಾ.ಎಚ್.ಸಿ.ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ದಸರಾಕ್ಕೆ 15 ಕೋಟಿ ರೂ. ಖರ್ಚು ಮಾಡಲಾಗಿತ್ತು. ಜಿ.ಟಿ.ದೇವೇಗೌಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ 2019ರ ದಸರಾಕ್ಕೆ 25 ಕೋಟಿ ರೂ. ಖರ್ಚಾಗಿತ್ತು. 2020ರಲ್ಲಿ ಕೋವಿಡ್ ಮೊದಲ ಅಲೆ ಮತ್ತು 2021ರಲ್ಲಿ ಎರಡನೇ ಅಲೆಯ ಕಾರಣದಿಂದ ಸರಳವಾಗಿ ದಸರಾ ಆಚರಿಸಲಾಯಿತು. ಬಿಡುಗಡೆಯಾಗಿದ್ದ ಅನುದಾನದಲ್ಲೇ ಉಳಿಕೆ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಮೂಲಕ ವಿಶ್ವಾಸಾರ್ಹತೆ ಗಳಿಸಿದ್ದರು. ಈ ಬಾರಿ ನಾಡಹಬ್ಬದ ಇತಿಹಾಸದಲ್ಲೇ ಗರಿಷ್ಠ ಮೊತ್ತದ ಅನುದಾನ ಬಳಕೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ | Dasara 2022 | ಸಾಂಪ್ರದಾಯಿಕ, ಅದ್ಧೂರಿ, ಅಂತಾರಾಷ್ಟ್ರೀಯ ಮೈಸೂರು ದಸರಾ: ಸಿಎಂ ಸಭೆಯಲ್ಲಿ ತೀರ್ಮಾನ
2020ರಲ್ಲಿ 2.91 ಕೋಟಿ ರೂ.
ಕೋವಿಡ್ ಮೊದಲ ಅಲೆಯ ಕಾರಣದಿಂದ 2020ರಲ್ಲಿ ಜಂಬೂ ಸವಾರಿಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಿದ್ದ ರಾಜ್ಯ ಸರ್ಕಾರ, ೧೦ ಕೋಟಿ ರೂ. ಅನುದಾನ ನೀಡತ್ತು. ಮುಡಾದಿಂದ ೫ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ೧೫ ಕೋಟಿ ರೂ.ಗಳಲ್ಲಿ ಖರ್ಚಾಗಿದ್ದು, ಕೇವಲ 2.91 ಕೋಟಿ ರೂ. ಮಾತ್ರ.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 44 ಲಕ್ಷ ರೂ., ಆನೆಗಳ ನಿರ್ವಹಣೆಗೆ 35 ಲಕ್ಷ ರೂ., ಉದ್ಘಾಟನೆ, ಜಂಬೂ ಸವಾರಿಗೆ 41 ಲಕ್ಷ ರೂ., ರಾಜವಂಶಸ್ಥರಿಗೆ ಗೌರವ ಧನ 40 ಲಕ್ಷ ರೂ., ಶ್ರೀರಂಗಪಟ್ಟಣ ದಸರಾಕ್ಕೆ 50 ಲಕ್ಷ ರೂ., ಚಾಮರಾಜನಗರ ದಸರಾಕ್ಕೆ 36 ಲಕ್ಷ ರೂ. ಸೇರಿ ಒಟ್ಟು 2,91,83,167 ರೂ. ಖರ್ಚು ಮಾಡಲಾಗಿತ್ತು.
ದಸರಾ ಪೂರ್ವ ಸಿದ್ಧತೆಗಳಿಗೆ ಅಂತ ಪ್ರತ್ಯೇಕ ಅನುದಾನ ಇರುವುದಿಲ್ಲ. ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅರಮನೆ ಆಡಳಿತ ಮಂಡಳಿಯಿಂದ ೫ ಕೋಟಿ ರೂ. ಮತ್ತು ಹೊರಗಿನ ಕಾರ್ಯಕ್ರಮಗಳಿಗೆ ಮುಡಾದಿಂದ ೧೦ ಕೋಟಿ ರೂ. ಬಳಸಿಕೊಳ್ಳಲು ಸರ್ಕಾರದ ಅನುಮೋದನೆ ಪಡೆಯಲಾಗಿದೆ. ದಸರಾಕ್ಕಾಗಿ 35.5 ಕೋಟಿ ರೂ. ಅನುದಾನ ನೀಡುವಂತೆ ಕೋರಿ ಮಂಗಳವಾರ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ಪರಿಶೀಲನೆ ನಡೆಸಿ ಮುಂದಿನ ವಾರಾಂತ್ಯದಲ್ಲಿ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
| ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ, ಮೈಸೂರು
2021ರಲ್ಲಿ 57 ಲಕ್ಷ ರೂ. ಉಳಿತಾಯ
ಕೊರೊನಾ ಎರಡನೇ ಅಲೆಯಿಂದಾಗಿ 2021ರಲ್ಲೂ ಸರಳವಾಗಿ ದಸರಾ ಆಚರಣೆ ಮಾಡಲಾಯಿತು. ರಾಜ್ಯ ಸರ್ಕಾರ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಈ ಪೈಕಿ 5.42 ಕೋಟಿ ರೂ. ಖರ್ಚು ಮಾಡಿದ್ದ ಜಿಲ್ಲಾಡಳಿತ, 57 ಲಕ್ಷ ರೂ. ಉಳಿತಾಯ ಮಾಡಿತ್ತು.
ಕಲಾವಿದರ ಸಂಭಾವನೆಗೆ 1.03 ಕೋಟಿ ರೂ., ವಿದ್ಯುತ್ ದೀಪಾಲಂಕಾರಕ್ಕೆ 93 ಲಕ್ಷ ರೂ. ಖರ್ಚಾಗಿತ್ತು. ಜಂಬೂ ಸವಾರಿ ವೆಬ್ ಕಾಸ್ಟಿಂಗ್‌ಗೆ 11 ಲಕ್ಷ ರೂ., ದೂರದರ್ಶನದಲ್ಲಿ ನೇರ ಪ್ರಸಾರ ಮಾಡಿದ್ದಕ್ಕೆ 6.22 ಲಕ್ಷ ರೂ., ದಸರಾ ಸಮಿತಿಗಳ ಲೇಖನ ಸಾಮಗ್ರಿಗೆ 3245 ರೂ. ಹೀಗೆ ಎಲ್ಲ ಖರ್ಚು ವೆಚ್ಚಗಳ ವಿವರವನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ | ದಸರಾ ಉದ್ಘಾಟನೆಗೆ ರಜನಿಕಾಂತ್, ಇಳಯರಾಜ ಹೆಸರು ಪ್ರಸ್ತಾಪ
ಪ್ರಾಯೋಜಕತ್ವ ಪಡೆಯಲು ಸಭೆ
ನಾಡಹಬ್ಬ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕ ಮತ್ತು ವೈಭವಯುತವಾಗಿ ಆಚರಿಸಲು ಖಾಸಗಿ ಪ್ರಾಯೋಜಕತ್ವ ಪಡೆದುಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ ಸೆಪ್ಟೆಂಬರ್ ೧ರಂದು ೧೩ ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.
ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5 ರವರೆಗೆ ದಸರಾ ಮಹೋತ್ಸವ ನಡೆಯಲಿದೆ. ನವರಾತ್ರಿ ದಿನಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸಲು ಆಸಕ್ತಿ ಇರುವ ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‌ಗಳು ಹಾಗೂ ಪ್ರಾಯೋಜಕತ್ವ ವಹಿಸಲು ಆಸಕ್ತಿ ಇರುವ ಇತರೆ ಸಂಸ್ಥೆಗಳ ಸಭೆ ಏರ್ಪಡಿಸಲಾಗಿದೆ. ಆಸಕ್ತ ಸಂಘ ಸಂಸ್ಥೆ, ಕೈಗಾರಿಕೆ, ಇತರೆ ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸುವಂತೆ ತಮ್ಮ ಸಲಹೆ, ಸೂಚನೆ ಹಾಗೂ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿಗಳಾದ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.