ಮೈಸೂರು: ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಬರೆದಿರುವ ʻಟಿಪ್ಪು ನಿಜ ಕನಸುಗಳುʼ ಪುಸ್ತಕ ಬಿಡುಗಡೆಗೆ ಮೊದಲೇ ಸದ್ದು ಮಾಡಿದೆ. ಈ ಪುಸ್ತಕ ಭಾನುವಾರ ಸಂಜೆ ನಾಲ್ಕು ಗಂಟೆಗೆ ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಎಸ್.ಎಲ್. ಭೈರಪ್ಪ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಚಿಂತಕರಾದ ವಾದಿರಾಜ್ ಮತ್ತು ರೋಹಿತ್ ಚಕ್ರತೀರ್ಥ ಅವರು ಭಾಗವಹಿಸಲಿದ್ದಾರೆ. ಈ ನಾಟಕ ಕೃತಿಯ ಮೊದಲ ರಂಗ ಪ್ರದರ್ಶನ ನ. ೨೦ರಂದು ನಡೆಯಲಿದೆ.
ಈ ಪುಸ್ತಕ ಬಿಡುಗಡೆಯಾಗುವ ಮೊದಲೇ ಮೇಲ್ಮನೆ ಸದಸ್ಯರಾಗಿರುವ ಎಚ್. ವಿಶ್ವನಾಥ್ ಅವರು ಅಡಿರುವ ಅಡ್ಡ ಮಾತು, ಕೃತಿಯ ಲೇಖಕರು ಮತ್ತು ರಂಗಾಯಣ ನಿರ್ದೇಶಕರಾಗಿರುವ ಅಡ್ಡಂಡ ಕಾರ್ಯಪ್ಪ ಕೆಂಡಾಮಂಡಲರಾಗಿದ್ದಾರೆ. ಹಾಗಿದ್ದರೆ, ವಿಶ್ವನಾಥ್ ಹೇಳಿದ್ದೇನು? ಅದಕ್ಕೆ ಅಡ್ಡಂಡ ಕಾರ್ಯಪ್ಪ ನೀಡಿದ ಪ್ರತಿಕ್ರಿಯೆ ಏನು? ಇದರ ನಡುವೆ ಟಿಪ್ಪು ಪ್ರತಿಮೆ ಸ್ಥಾಪನೆಯ ಬಗ್ಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್ ಈ ನಾಟಕದ ಬಗ್ಗೆ ಏನು ಹೇಳುತ್ತಾರೆ ಎಂಬುದರ ವಿವರ ಇಲ್ಲಿದೆ.
ಅಡ್ಡಂಡ ಕಾರ್ಯಪ್ಪ ಅಲ್ಲ, ಅಡ್ನಾಡಿ ಕಾರ್ಯಪ್ಪ!
ಟಿಪ್ಪು ಜಯಂತಿ ಸಂದರ್ಭದಲ್ಲಿ ಮಾತನಾಡಿದ್ದ ಎಂಎಲ್‌ಸಿ ಎಚ್. ವಿಶ್ವನಾಥ್ ಟಿಪ್ಪು ಗುಣಗಾನ ಮಾಡಿ ಕೊನೆಗೆ ಅಡ್ಡಂಡ ಕಾರ್ಯಪ್ಪರ ನಾಟಕದ ಬಗ್ಗೆ ಪ್ರಸ್ತಾಪಿಸಿದ್ದರು.
ʻʻಜಗತ್ತಿನ ವೀರಾಧಿವೀರರೆಲ್ಲ ಶತ್ರುಗಳ ವಿರುದ್ಧ ಮಂಡಿಯೂರಿದ್ದಾರೆ. ಆದರೆ ಶತ್ರುಗಳ ವಿರುದ್ಧ ಮಂಡಿಯೂರದ ಏಕೈಕ ವ್ಯಕ್ತಿ ಟಿಪ್ಪು ಸುಲ್ತಾನ್. ಟಿಪ್ಪುವನ್ನು ಟಿಪ್ಪು ಅಂತ ಕರೆಯಲು ಯಾವ ಪಕ್ಷವಾದರೇನು? ನಾನು ಯಾವ ಪಕ್ಷದಲ್ಲಿ ಇದ್ದಾಗಲೂ ಟಿಪ್ಪು ಸ್ವಾಭಿಮಾನಿ ಕನ್ನಡಿಗ, ಟಿಪ್ಪು ಸುಲ್ತಾನ್ ಮೈಸೂರು ಹುಲಿ ಎಂದೇ ಹೇಳುತ್ತೇನೆʼʼ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.
ʻʻಜಾತಿ, ಧರ್ಮ, ಪಕ್ಷಗಳನ್ನು ಮೀರಿದ ವ್ಯಕ್ತಿತ್ವ ಅವರದ್ದು. ಚರಿತ್ರೆಯನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಶೃಂಗೇರಿಯಲ್ಲಿ ಈಗಲೂ ಸಲಾಂ ಆರತಿ ನಡೆಯುತ್ತದೆ. ನಂಜನಗೂಡು ಶ್ರೀಕಂಠೇಶ್ವರನಿಗೆ ಹಕೀಂ ನಂಜುಂಡ ಅಂತ ಹೆಸರಿಟ್ಟವರು ಯಾರು? ಯಾರೋ ಏನೋ ಹೇಳುತ್ತಾರೆ ಅಂತ ಚರಿತ್ರೆ ಬದಲಾಗಿ ಬಿಡುವುದಿಲ್ಲ. ಸಂಸದ ಪ್ರತಾಪ ಸಿಂಹ ಅವರು, ಟಿಪ್ಪು ಕೊಡಗಿನಲ್ಲಿ 80 ಸಾವಿರ ಜನರ ಹತ್ಯಾಕಾಂಡ ನಡೆಸಿದ ಅಂತ ಹೇಳಿದ್ದಾರೆ. ಆಗ ಮೈಸೂರು ಸಾಮ್ರಾಜ್ಯದ ಜನಸಂಖ್ಯೆ ಎಷ್ಟಿತ್ತು ಅನ್ನುವ ಸಾಮಾನ್ಯ ಜ್ಞಾನ ಬೇಡವೇ?ʼʼ ಎಂದು ಎಚ್. ವಿಶ್ವನಾಥ್ ಕೇಳಿದ್ದರು.
ಅದರೊಂದಿಗೆ ಅವರು ಆಡಿದ ಇನ್ನೊಂದು ಮಾತು ಸದ್ದಾಗಿದೆ. ʻʻಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅಲ್ಲ, ಅಡ್ನಾಡಿ ಕಾರ್ಯಪ್ಪ. ಅವನೇನು ಟಿಪ್ಪು ಬಗ್ಗೆ ಪುಸ್ತಕ ಬರೆಯೋದು? ಟಿಪ್ಪು ಕಾಲದಲ್ಲಿ ಕಾರ್ಯಪ್ಪ ಹುಟ್ಟಿದ್ನ? ಟಿಪ್ಪು ನಿಜ ಕನಸು ನಾಟಕವನ್ನು ನಾನು ಖಂಡಿಸುತ್ತೇನೆʼʼ ಎಂದಿದ್ದರು.
ವಿಶ್ವನಾಥ್ ತ್ರಿಕಾಲ ಜ್ಞಾನಿನಾ ಎಂದು ಕೇಳಿದ ಅಡ್ಡಂಡ ಕಾರ್ಯಪ್ಪ
ವಿಶ್ವನಾಥ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಅಡ್ಡಂಡ ಕಾರ್ಯಪ್ಪ, ಅವರು ತ್ರಿಕಾಲ ಜ್ಞಾನಿಗಳು. ಪುಸ್ತಕ ಓದಿಲ್ಲ, ನಾಟಕ ನೋಡಿಲ್ಲ. ಆಗಲೇ ವಿರೋಧ ಮಾಡುತ್ತಿದ್ದಾರೆ. ಎಲ್ಲವೂ ಇವರಿಗೆ ಮುಂಚಿತವಾಗಿಯೇ ಗೊತ್ತಾಗಿ ಬಿಡುತ್ತಾ? ಮೊದಲು ಪುಸ್ತಕ ಓದಲಿ, ನಾಟಕ ನೋಡಲಿ. ಬಳಿಕ ವಿಮರ್ಶೆ ಮಾಡಲಿ. ನಾನು ಬೇಡ ಅನ್ನೋದಿಲ್ಲʼʼ ಎಂದು ಆಕ್ಷೇಪಿಸಿದರು.
ʻʻನಾನು ಇತಿಹಾಸ ಬದಲಿಸುತ್ತಿಲ್ಲ. ಆದರೆ ಅವರು ಹೇಳಿದ್ದೇ ಇತಿಹಾಸವಲ್ಲ ಅಂತ ಪ್ರತಿಪಾದಿಸುತ್ತಿದ್ದೇನೆ. ಗಿರೀಶ್ ಕಾರ್ನಾಡ್‌ಗೆ ಜ್ಞಾನಪೀಠ ಪ್ರಶಸ್ತಿ ಬಂದಿರಬಹುದು. ಆದರೆ ಅವರು ಅರ್ಬನ್ ನಕ್ಸಲ್ ಅಂತ ಬೋರ್ಡ್ ಹಾಕಿಕೊಂಡಿದ್ದರು. ಟಿಪ್ಪು ಧರ್ಮಾಂಧನಾಗಿದ್ದ. ಕನ್ನಡವನ್ನು ಸಂಪೂರ್ಣವಾಗಿ ವಿರೋಧಿಸಿದ್ದ. ಇದನ್ನು ನಾಟಕದ ಮೂಲಕ ತೋರಿಸಲು ಪ್ರಯತ್ನ ಮಾಡುತ್ತಿದ್ದೇನೆʼʼ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದರು.
ಪುಸ್ತಕ ಬಿಡುಗಡೆ ಆಗಲಿ, ಆಮೇಲೆ ತಡೆಯಾಜ್ಞೆ ಬಗ್ಗೆ ಯೋಚನೆ ಎಂದ ಸೇಠ್
ʻʻಇನ್ನೂ ಪುಸ್ತಕ ಬಿಡುಗಡೆ ಆಗಿಲ್ಲ. ಮೊದಲು ಪುಸ್ತಕ ಬಿಡುಗಡೆ ಆಗಲಿ. ಅದರಲ್ಲಿ ಏನಿದೆ ಎಂದು ನೋಡಿಕೊಳ್ಳುತ್ತೇವೆ. ಬಳಿಕ ಕಾನೂನು ಹೋರಾಟ ಮಾಡುತ್ತೇವೆʼʼ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ʻʻಟಿಪ್ಪು ಬಗ್ಗೆ ಅನೇಕರು ಪುಸ್ತಕ ಬರೆದಿದ್ದಾರೆ. ಪರ- ವಿರೋಧ ಎರಡೂ ರೀತಿಯ ಪುಸ್ತಕಗಳು ಬಂದಿವೆ. ಎಲ್ಲವೂ ನಮ್ಮ ಪರವಾಗಿಯೇ ಇರಬೇಕು ಅಂತೇನೂ ಇಲ್ಲ. ಅಡ್ಡಂಡ ಕಾರ್ಯಪ್ಪ ಕೊಡಗಿನ ವಿಚಾರವನ್ನೇ ಮುಂದಿಟ್ಟುಕೊಂಡು ಬರೆದಿದ್ದಾರೆ. ಅದರಲ್ಲಿ ಏನಿದೆ ಅಂತ ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ. ಪುಸ್ತಕ ಬಿಡುಗಡೆಯಾದ ಬಳಿಕ ನಾಟಕಕ್ಕೆ ತಡೆಯಾಜ್ಞೆ ತರುತ್ತೇನೆʼʼ ಎಂದು ತನ್ವೀರ್ ಸೇಠ್ ವಿಸ್ತಾರ ನ್ಯೂಸ್‌ಗೆ ತಿಳಿಸಿದರು.
ಇದನ್ನೂ ಓದಿ | ಹಿಂದು ವಿವಾದ ಬೆನ್ನಲ್ಲೇ ಟಿಪ್ಪು ಪ್ರತಿಮೆಯ ಕಿಡಿ; ಕಾಂಗ್ರೆಸ್ ನಾಯಕರಿಗೆ ಚೆಲ್ಲಾಟ, ಡಿಕೆಶಿಗೆ ಸಂಕಟ!