Site icon Vistara News

Tippu jayanti | AIMIM ನಡೆಗೆ ಶ್ರೀರಾಮ ಸೇನೆ ತೀವ್ರ ವಿರೋಧ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಉದ್ವಿಗ್ನ ಸ್ಥಿತಿ

Eidgah maidan

ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಎಐಎಂಐಎಂ ಪಕ್ಷದ ನಡೆಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪ್ರಮೋದ್‌ ಮುತಾಲಿಕ್‌ ನೇತೃತ್ವದ ಶ್ರೀರಾಮ ಸೇನೆ ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆಚರಣೆಯನ್ನು ತಡೆಯುವ ಉದ್ದೇಶದಿಂದ ಮೈದಾನಕ್ಕೆ ನುಗ್ಗುವುದಾಗಿ ಎಚ್ಚರಿಸಿದೆ. ಹೀಗಾಗಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ.

ಈದ್ಗಾ ಮೈದಾನದಲ್ಲಿ ಕಳೆದ ಅದೆಷ್ಟೋ ವರ್ಷಗಳಿಂದ ಅದೆಷ್ಟೋ ವರ್ಷಗಳಿಂದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇರಲಿಲ್ಲ. ಆದರೆ, ಇತ್ತೀಚೆಗೆ ಮೈದಾನದಲ್ಲಿ ಗಣೇಶೋತ್ಸವ ಅಚರಣೆಗೆ ಅನುಮತಿ ನೀಡಿದ ಬಳಿಕ ಬೇರೆ ಸಂಘಟನೆಗಳು ಕೂಡಾ ತಮಗೂ ಅವಕಾಶ ಕೊಡಿ ಎಂದು ಕೇಳಿವೆ. ಗಣೇಶೋತ್ಸವ ಆಚರಣೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಹಾಗಾಗಿ ಬೇರೆ ಕಾರ್ಯಕ್ರಮಗಳ ಆಚರಣೆಗೂ ವಿರೋಧಿಸಬಾರದು ಎನ್ನುವ ಆಗ್ರಹ ಜೋರಾಗಿದೆ.

ಮಧ್ಯಾಹ್ನ ೧೨ ಗಂಟೆಗೆ ಕಾರ್ಯಕ್ರಮ
ಎಐಎಂಐಎಂ ಪಕ್ಷದ ಮುಖಂಡ ವಿಜಯ್ ಗುಂಟ್ರಾಳ ಅವರ ನೇತೃತ್ವದಲ್ಲಿ ಮಧ್ಯಾಹ್ನ ೧೨ ಗಂಟೆಯ ಬಳಿಕ ಟಿಪ್ಪು ಜಯಂತಿ ಆಚರಣೆಗೆ ಎಲ್ಲ ರೀತಿಯಲ್ಲೂ ಸಿದ್ಧತೆಗಳು ನಡೆದಿವೆ. ಬಿಜೆಪಿ ಆಡಳಿತ ಇರುವ ಹುಬ್ಬಳ್ಳಿ ಮಹಾನಗರ ಪಾಲಿಕೆ ಮೇಯರ್, ಬಿಜೆಪಿ ನಾಯಕ ಈರೇಶ್ ಅಂಚಟಗೇರಿ ಅವರು ಆಚರಣೆಗೆ ಅವಕಾಶ ನೀಡಿದ್ದಾರೆ. ಆದರೆ, ಇದುವರೆಗೆ ಟಿಪ್ಪು ಆಚರಣೆಯಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ ನಾಯಕರೇ ಈಗ ವಿರೋಧಿಸುತ್ತಿದ್ದಾರೆ. ಹೀಗಾಗಿ ಈದ್ಗಾ ಮೈದಾನದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಮೈದಾನ ಎರಡು ಭಾಗವಾಗಿ ವಿಭಜನೆ
ಕಳೆದ ಗಣೇಶೋತ್ಸವ ಸಂದರ್ಭದಲ್ಲಿ ಮಾಡಿದಂತೆ ಈ ಬಾರಿಯೂ ಮೈದಾನವನ್ನು ಎರಡು ಭಾಗ ಮಾಡಲಾಗಿದೆ. ಈದ್ಗಾ ಕಟ್ಟಡ ಇರುವ ಭಾಗ ಒಂದು ಕಡೆ, ಇನ್ನೊಂದು ಕಡೆ ಖಾಲಿ ಮೈದಾನ. ಕಳೆದ ಬಾರಿ ಖಾಲಿ ಮೈದಾನ ಭಾಗದಲ್ಲಿ ಗಣೇಶೋತ್ಸವ ಮಾಡಲಾಗಿತ್ತು. ಈ ಬಾರಿ ಈದ್ಗಾ ಕಟ್ಟಡ ಇರುವ ಜಾಗವನ್ನು ಪ್ರತ್ಯೇಕಿಸಿ ಅಲ್ಲಿ ಖುಲ್ಲಾ ನಡೆಯುವ ಜಾಗವನ್ನು ಟಿಪ್ಪು ಜಯಂತಿಗಾಗಿ ನಿಗದಿ ಮಾಡಲಾಗಿದೆ.

ಗಣೇಶ ಉತ್ಸವದಲ್ಲಿ ಮಾಡಿದ್ದಂತೆ ಮೈದಾನದ ಮಧ್ಯ ಬಟ್ಟೆಯಿಂದ ತಡೆಗೋಡೆ ಕಟ್ಟಲಾಗಿದೆ. ಜತೆಗೆ ಪೊಲೀಸರು ಈದ್ಗಾ ಮೈದಾನದ ಸುತ್ತ ಬ್ಯಾರಿಕೇಡ್ ಅಳವಡಿಸಿದ್ದಾರೆ.

ಏನಿದು ಈದ್ಗಾ ಮೈದಾನ-ಟಿಪ್ಪು ಜಯಂತಿ ವಿವಾದ?
ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡುವಂತೆ ಎಐಎಂಐಎಂ ಪಕ್ಷ ಮಹಾನಗರ ಪಾಲಿಕೆಗೆ ಮನವಿ ನೀಡಿತ್ತು. ಮಹಾನಗರ ಪಾಲಿಕೆ ಕಚೇರಿಯಲ್ಲಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡುವ ಸಂಬಂಧ ಬುಧವಾರ ಮೇಯರ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸದಸ್ಯರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹದ ನಂತರ ಟಿಪ್ಪು ಜಯಂತಿ ಆಚರಣೆಗೆ ಮೇಯರ್‌ ಈರೇಶ್ ಅಂಚಟಗೇರಿ ಅನುಮತಿ ನೀಡಿದ್ದಾರೆ.

ಸಭೆಯ ನಂತರ ಮೇಯರ್ ಈರೇಶ್ ಅಂಚಟಗೇರಿ ಮಾತನಾಡಿ, ಈದ್ಗಾ ಮೈದಾನ ಮಹಾನಗರ ಪಾಲಿಕೆಯ ಆಸ್ತಿ, ಅಲ್ಲಿ ಯಾವುದೇ ಕಾರ್ಯಕ್ರಮ ಮಾಡಬೇಕಿದ್ದರೆ ಪಾಲಿಕೆ ಅನುಮತಿ ಅಗತ್ಯ. ಎಐಎಂಐಎಂ ಪಕ್ಷದವರು ಟಿಪ್ಪು ಜಯಂತಿ ಆಚರಿಸಲು ಅನುಮತಿ ಕೋರಿದ್ದರು. ಶಾಂತ ರೀತಿಯಿಂದ ಜಯಂತಿ ಆಚರಿಸಲು ಕೆಲವು ನಿಬಂಧನೆಗಳನ್ನು ವಿಧಿಸಿ ಅವಕಾಶ ಕೊಡಲಾಗಿದೆ. ಪಾಲಿಕೆಯಿಂದ ಕಾರ್ಯಕ್ರಮ ನಡೆಸುವವರಿಗೆ ಇಂತಿಷ್ಟು ದರ ನಿಗದಿಪಡಿಸಲಾಗಿದೆ. ಕನಕ ಜಯಂತಿ ಸೇರಿದಂತೆ ಇನ್ನಾವುದೇ ಕಾರ್ಯಕ್ರಮ ಮಾಡಬೇಕಾದರೂ ಚರ್ಚಿಸಿ ಅವಕಾಶ ಕೊಡಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್‌, ಎಐಎಂಐಎಂ ಪಕ್ಷದ ಸದಸ್ಯರಿಂದಲೇ ಆಕ್ರೋಶ
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ನೀಡಿದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹಿಂದು ಸಂಘಟನೆಗೆಳು ಎಚ್ಚರಿಕೆ ನೀಡಿದ್ದವು. ಆದರೆ ಈಗ ಅನುಮತಿ ನೀಡಿರುವುದರಿಂದ ಹಿಂದು ಸಂಘಟನೆಗಳ ಜತೆಗೆ ಕಾಂಗ್ರೆಸ್‌ ಹಾಗೂ ಎಐಎಂಐಎಂ ಪಕ್ಷದ ಸದಸ್ಯರೂ ಪಾಲಿಕೆ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ವಿಪಕ್ಷ ಕಾಂಗ್ರೆಸ್ ನಾಯಕ ದೊರಾಜ ಮಣಿಕುಂಟ್ಲ ಪ್ರತಿಕ್ರಿಯಿಸಿ, ವಿವಾದಿತ ಈದ್ಗಾ ಮೈದಾನದಲ್ಲಿ ಯಾವುದೇ ಜಯಂತಿ ಆಚರಣೆಗೆ ಅವಕಾಶ ಕೊಡಬಾರದು. ಆದರೆ ಮೇಯರ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬೇಕಿದ್ದರೆ ಪಾಲಿಕೆಗೆ ಸೇರಿದ ಬೇರೆ ಜಾಗದಲ್ಲಿ ಟಿಪ್ಪು ಜಯಂತಿ ಮಾಡಲಿ. ಬಿಜೆಪಿಯವರು ರಾಜಕೀಯ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಈದ್ಗಾದಲ್ಲಿ ಟಿಪ್ಪು ಸೇರಿ ಎಲ್ಲ ಮಹನೀಯರ ಜಯಂತಿಗೆ ಅನುಮತಿ ಕೊಡಲು ಮುಂದಾಗಿರುವುದು ತಪ್ಪು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಧರ್ಮ ಧರ್ಮಗಳ ನಡುವೆ ಜಗಳ ತಂದಿಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅದೇ ರೀತಿ ಎಐಎಂಐಎಂ ಪಾಲಿಕೆ ಸದಸ್ಯ ನಜೀರ್‌ ಅಹ್ಮದ್ ಹೊನ್ನಳ್ಳಿ ಅವರು, ಈದ್ಗಾ ಮೈದಾನ ಒಂದು ಪವಿತ್ರವಾದ ಸ್ಥಳ. ಅಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಬಾರದು. ಬೇರೆ ಯಾವುದಾದರೂ ಸ್ಥಳದಲ್ಲಿ ಟಿಪ್ಪು ಜಯಂತಿ ಮಾಡಲಿ. ನಮ್ಮದೇ ಎಐಎಂಐಎಂ ಪಕ್ಷದ ಕೆಲವು ಮುಖಂಡರು ಈದ್ಗಾದಲ್ಲಿ ಮೈದಾನದಲ್ಲಿ ಟಿಪ್ಪು ಜಯಂತಿ ಮಾಡುತ್ತಿರುವುದು ಸರಿಯಲ್ಲ. ಈ ಕುರಿತು ರಾಜ್ಯ ನಾಯಕರ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು.

ಓಬವ್ವ, ಕನಕ ಜಯಂತಿ ಆಚರಣೆಗೆ ಅನುಮತಿ ಕೋರಿ ಮನವಿ
ಗಣೇಶ ಹಬ್ಬದ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದರಿಂದ ವಿವಿಧ ಜಯಂತಿ, ಹಬ್ಬಗಳ ಆಚರಣೆಗಳಿಗೆ ಅವಕಾಶ ಕೋರಿ ಹಲವು ಸಂಘಟನೆಗಳು ಮನವಿ ಪತ್ರ ಸಲ್ಲಿಸಿವೆ. ಹೀಗಾಗಿ ಟಿಪ್ಪು ಜಯಂತಿಗೂ ಅವಕಾಶ ನೀಡುವ ಸಂದಿಗ್ಧ ಪರಿಸ್ಥಿತಿ ಪಾಲಿಕೆಯದ್ದಾಗಿತ್ತು. ಹೀಗಾಗಿ ಟಿಪ್ಪು ಜಯಂತಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ನ.11ರಂದು ಈದ್ಗಾ ಮೈದಾನದಲ್ಲಿ ಒನಕೆ ಓಬವ್ವ ಜಯಂತಿಗೆ ಅನುಮತಿ ಕೋರಿ ಮನವಿ‌‌ ಸಲ್ಲಿಸಲಾಗಿತ್ತು. ಅದೇ ರೀತಿ ಶ್ರೀರಾಮ ಸೇನೆಯಿಂದ ಅದೇ ದಿನದಂದು ಕನಕ ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಗಿದೆ.

Exit mobile version