ಹುಬ್ಬಳ್ಳಿ: ಹಿಂದು ಸಂಘಟನೆಗಳ ವಿರೋಧದ ನಡುವೆ ನಗರದ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಟಿಪ್ಪು ಜಯಂತಿ ಆಚರಣೆ ಅವಕಾಶ ನೀಡುವಂತೆ ಎಐಎಂಐಎಂ ಪಕ್ಷ ಪಾಲಿಕೆಗೆ ಮನವಿ ಮಾಡಿತ್ತು. ಹೀಗಾಗಿ ಹಲವು ನಿಬಂಧನೆಗಳೊಂದಿಗೆ ನ.10ರಂದು ಟಿಪ್ಪು ಜಯಂತಿ ಆಚರಿಸಲು ಅವಕಾಶ ನೀಡಲಾಗಿದೆ.
ಮಹಾನಗರ ಪಾಲಿಕೆ ಕಚೇರಿಯಲ್ಲಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡುವ ಸಂಬಂಧ ಬುಧವಾರ ಮೇಯರ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸದಸ್ಯರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹದ ನಂತರ ಟಿಪ್ಪು ಜಯಂತಿ ಆಚರಣೆಗೆ ಮೇಯರ್ ಈರೇಶ್ ಅಂಚಟಗೇರಿ ಅನುಮತಿ ನೀಡಿದ್ದಾರೆ.
ಸಭೆಯ ನಂತರ ಮೇಯರ್ ಈರೇಶ್ ಅಂಚಟಗೇರಿ ಮಾತನಾಡಿ, ಈದ್ಗಾ ಮೈದಾನ ಮಹಾನಗರ ಪಾಲಿಕೆಯ ಆಸ್ತಿ, ಅಲ್ಲಿ ಯಾವುದೇ ಕಾರ್ಯಕ್ರಮ ಮಾಡಬೇಕಿದ್ದರೆ ಪಾಲಿಕೆ ಅನುಮತಿ ಅಗತ್ಯ. ಎಐಎಂಐಎಂ ಪಕ್ಷದವರು ಟಿಪ್ಪು ಜಯಂತಿ ಆಚರಿಸಲು ಅನುಮತಿ ಕೋರಿದ್ದರು. ಶಾಂತ ರೀತಿಯಿಂದ ಜಯಂತಿ ಆಚರಿಸಲು ಕೆಲವು ನಿಬಂಧನೆಗಳನ್ನು ವಿಧಿಸಿ ಅವಕಾಶ ಕೊಡಲಾಗಿದೆ. ಪಾಲಿಕೆಯಿಂದ ಕಾರ್ಯಕ್ರಮ ನಡೆಸುವವರಿಗೆ ಇಂತಿಷ್ಟು ದರ ನಿಗದಿಪಡಿಸಲಾಗಿದೆ. ಕನಕ ಜಯಂತಿ ಸೇರಿದಂತೆ ಇನ್ನಾವುದೇ ಕಾರ್ಯಕ್ರಮ ಮಾಡಬೇಕಾದರೂ ಚರ್ಚಿಸಿ ಅವಕಾಶ ಕೊಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್, ಎಐಎಂಐಎಂ ಪಕ್ಷದ ಸದಸ್ಯರಿಂದಲೇ ಆಕ್ರೋಶ
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ನೀಡಿದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹಿಂದು ಸಂಘಟನೆಗೆಳು ಎಚ್ಚರಿಕೆ ನೀಡಿದ್ದವು. ಆದರೆ ಈಗ ಅನುಮತಿ ನೀಡಿರುವುದರಿಂದ ಹಿಂದು ಸಂಘಟನೆಗಳ ಜತೆಗೆ ಕಾಂಗ್ರೆಸ್ ಹಾಗೂ ಎಐಎಂಐಎಂ ಪಕ್ಷದ ಸದಸ್ಯರೂ ಪಾಲಿಕೆ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ವಿಪಕ್ಷ ಕಾಂಗ್ರೆಸ್ ನಾಯಕ ದೊರಾಜ ಮಣಿಕುಂಟ್ಲ ಪ್ರತಿಕ್ರಿಯಿಸಿ, ವಿವಾದಿತ ಈದ್ಗಾ ಮೈದಾನದಲ್ಲಿ ಯಾವುದೇ ಜಯಂತಿ ಆಚರಣೆಗೆ ಅವಕಾಶ ಕೊಡಬಾರದು. ಆದರೆ ಮೇಯರ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬೇಕಿದ್ದರೆ ಪಾಲಿಕೆಗೆ ಸೇರಿದ ಬೇರೆ ಜಾಗದಲ್ಲಿ ಟಿಪ್ಪು ಜಯಂತಿ ಮಾಡಲಿ. ಬಿಜೆಪಿಯವರು ರಾಜಕೀಯ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಈದ್ಗಾದಲ್ಲಿ ಟಿಪ್ಪು ಸೇರಿ ಎಲ್ಲ ಮಹನೀಯರ ಜಯಂತಿಗೆ ಅನುಮತಿ ಕೊಡಲು ಮುಂದಾಗಿರುವುದು ತಪ್ಪು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಧರ್ಮ ಧರ್ಮಗಳ ನಡುವೆ ಜಗಳ ತಂದಿಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅದೇ ರೀತಿ ಎಐಎಂಐಎಂ ಪಾಲಿಕೆ ಸದಸ್ಯ ನಜೀರ್ ಅಹ್ಮದ್ ಹೊನ್ನಳ್ಳಿ ಸ್ಪಂದಿಸಿ, ಈದ್ಗಾ ಮೈದಾನ ಒಂದು ಪವಿತ್ರವಾದ ಸ್ಥಳ. ಅಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಬಾರದು. ಬೇರೆ ಯಾವುದಾದರೂ ಸ್ಥಳದಲ್ಲಿ ಟಿಪ್ಪು ಜಯಂತಿ ಮಾಡಲಿ. ನಮ್ಮದೇ ಎಐಎಂಐಎಂ ಪಕ್ಷದ ಕೆಲವು ಮುಖಂಡರು ಈದ್ಗಾದಲ್ಲಿ ಮೈದಾನದಲ್ಲಿ ಟಿಪ್ಪು ಜಯಂತಿ ಮಾಡುತ್ತಿರುವುದು ಸರಿಯಲ್ಲ. ಈ ಕುರಿತು ರಾಜ್ಯ ನಾಯಕರ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಟಿಪ್ಪು ಜಯಂತಿ ಮಾಡಿಯೇ ತೀರುತ್ತೇವೆ
ಎಐಎಂಐಎಂ ಪಕ್ಷದ ಮುಖಂಡ ವಿಜಯ್ ಗುಂಟ್ರಾಳ ಮಾತನಾಡಿ, ಈದ್ಗಾ ಮೈದಾನದಲ್ಲಿ ನಾವು ಟಿಪ್ಪು ಜಯಂತಿ ಮಾಡಿಯೇ ಮಾಡುತ್ತೇವೆ. ನಮ್ಮ ಪಕ್ಷದ ಹಿರಿಯರು ಹಾಗೂ ಸ್ಥಳೀಯ ನಾಯಕರ ಜತೆ ನಾನು ಮಾತನಾಡಿದ್ದೇನೆ. ಯಾವುದೋ ಆಮಿಷಕ್ಕೆ ಒಳಗಾಗಿ ನಮ್ಮ ಸ್ಥಳೀಯ ನಾಯಕರು ಯೂಟರ್ನ್ ಹೊಡೆದಿದ್ದಾರೆ. ಈಗಾಗಲೇ ನಿರ್ಧರಿಸಿದಂತೆ ನ.10ರಂದು ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ ಎಂದರು.
ಓಬವ್ವ, ಕನಕ ಜಯಂತಿ ಆಚರಣೆಗೆ ಅನುಮತಿ ಕೋರಿ ಮನವಿ
ಗಣೇಶ ಹಬ್ಬದ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದರಿಂದ ವಿವಿಧ ಜಯಂತಿ, ಹಬ್ಬಗಳ ಆಚರಣೆಗಳಿಗೆ ಅವಕಾಶ ಕೋರಿ ಹಲವು ಸಂಘಟನೆಗಳು ಮನವಿ ಪತ್ರ ಸಲ್ಲಿಸಿವೆ. ಹೀಗಾಗಿ ಟಿಪ್ಪು ಜಯಂತಿಗೂ ಅವಕಾಶ ನೀಡುವ ಸಂದಿಗ್ಧ ಪರಿಸ್ಥಿತಿ ಪಾಲಿಕೆಯದ್ದಾಗಿತ್ತು. ಹೀಗಾಗಿ ಟಿಪ್ಪು ಜಯಂತಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ನ.11ರಂದು ಈದ್ಗಾ ಮೈದಾನದಲ್ಲಿ ಒನಕೆ ಓಬವ್ವ ಜಯಂತಿಗೆ ಅನುಮತಿ ಕೋರಿ ಮನವಿ ಸಲ್ಲಿಸಲಾಗಿತ್ತು. ಅದೇ ರೀತಿ ಶ್ರೀರಾಮ ಸೇನೆಯಿಂದ ಅದೇ ದಿನದಂದು ಕನಕ ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ | U B Banakar | ಬಿಜೆಪಿಗೆ ಗುಡ್‌ಬೈ ಹೇಳಿದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ ಬಣಕಾರ್, ಕಾಂಗ್ರೆಸ್ ಸೇರ್ಪಡೆ ಪಕ್ಕಾ