Site icon Vistara News

ಧರ್ಮ ಸಂಘರ್ಷಕ್ಕೆ ಕಾರಣವಾಗಲಿದೆಯೇ ಶ್ರೀರಂಗಪಟ್ಟಣ ಉರೂಸ್‌ ಮೆರವಣಿಗೆ

urus mandya

ಮಂಡ್ಯ : ಶ್ರೀರಂಗಪಟ್ಟಣದ ಗಂಜಾಂನಲ್ಲಿ ಮಂಗಳವಾರ (ಜೂ.28) 230ನೇ ಉರೂಸ್ ಆಚರಣೆ ವೇಳೆ ನಡೆಯಲಿರುವ ಬೃಹತ್‌ ಮೆರವಣಿಗೆ ಧರ್ಮ ಸಂಘರ್ಷಕ್ಕೆ ಕಾರಣವಾಗಲಿದೆಯಾ ಎಂಬ ಅನುಮಾನ ಸೃಷ್ಟಿಸಿದೆ. ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಅದ್ಧೂರಿ ಮೆರಣಿಗೆ ನಡೆಸಲು ಮುಸ್ಲಿಮರು ಮುಂದಾಗಿದ್ದಾರೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಜನರನ್ನು ಕರೆದುಕೊಂಡು ಬಂದು ಸ್ಥಳೀಯವಾಗಿ ಅಶಾಂತಿ ಸೃಷ್ಟಿಸಲಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಆಕ್ಷೇಪಿಸಿವೆ. ಹೀಗಾಗಿ ಈ ಬಾರಿಯ ಉರೂಸ್‌ ಧರ್ಮಗಳ ನಡುವಿನ ಜಿದ್ದಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.

ಟಿಪ್ಪು ಸುಲ್ತಾನ್‌ ಸ್ಮರಣಾರ್ಥ ಜೂನ್ 27,28,29 ಮೂರು ದಿನಗಳ ಕಾಲ ಉರೂಸ್ ನಡೆಯಲಿದೆ. ಹಲವು ವರ್ಷಗಳಿಂದ ಕಾರ್ಯಕ್ರಮ ನಡೆಯುತ್ತಿದ್ದರೂ, ಸ್ಥಳೀಯರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಈ ಬಾರಿ ಸುಮಾರು 30ರಿಂದ 40 ಸಾವಿರ ಜನರು ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನು ಓದಿ| ಶ್ರೀರಂಗಪಟ್ಟಣದಲ್ಲಿ ಉರೂಸ್ ನಿಷೇಧಿಸುವಂತೆ ಭಜರಂಗದಳ ಒತ್ತಾಯ

ಮಂಗಳವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜಾಮೀಯಾ ಮಸೀದಿಯಿಂದ ದರಿಯಾದೌಲತ್‌ನಲ್ಲಿರುವ ಟಿಪ್ಪು ಸಮಾಧಿಯವರೆಗೆ ಬೃಹತ್ ಸೆಂದಿಲ್ ಮೆರವಣಿಗೆ ನಡೆಯಲಿದೆ. ಸ್ಥಳದಲ್ಲಿ ಬಿಗಿ ಪೋಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಇನ್ನು ಜಿಲ್ಲಾಡಳಿತ ಕೂಡ ಯಾವುದೇ ಕೋಮು ಗಲಭೆಯಾಗದಂತೆ ಎಚ್ಚರಿಕೆ ವಹಿಸಿದೆ. ಸಂಜೆ 6 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ಇರಲಿದೆ. ಜೊತೆಗೆ ರಾತ್ರಿ ಸಾರ್ವಜನಿಕರಿಗೆ ಊಟ ವಿತರಣೆ ಕಾರ್ಯಕ್ರಮ ಇರಲಿದೆ.

ನಿನ್ನೆ (ಸೋಮವಾರ) ಭಜರಂಗ ದಳ ಶ್ರೀರಂಗಪಟ್ಟಣದಲ್ಲಿ ನಡೆಯುವ ಉರೂಸ್ ಆಚರಣೆಯನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿತ್ತು. ಹಿಂದೂ ಸಂಘಟನೆಗಳು ಬೃಹತ್ ಮೆರವಣಿಗೆ ಮಾಡಲು ಮುಂದಾದರೆ, ಶ್ರೀರಂಗಪಟ್ಟಣದ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಆದರೆ, ಮುಸ್ಲಿಂ ಸಂಘಟನೆಗಳೆಲ್ಲಾ ಸೇರಿ ಸುಮಾರು 30 ರಿಂದ 40 ಸಾವಿರ ಜನರನ್ನು ಸೇರಿಸಿಕೊಂಡು ಬೃಹತ್ ಮೆರವಣಿಗೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಕೂಡಲೇ ಉರೂಸ್ ಆಚರಣೆಯನ್ನು ನಿಷೇಧಿಸುವಂತೆ ಭಜರಂಗದಳ ಕಾರ್ಯಕರ್ತರು ಒತ್ತಾಯಿಸಿದ್ದರು.

ಏನಿದು ಉರೂಸ್ ಆಚರಣೆ

ಮುಸಲ್ಮಾನರು ಪ್ರತಿ ವರ್ಷ ಬಕ್ರೀದ್ ಹಬ್ಬಕ್ಕೂ ಮುನ್ನ ಈ ಉರೂಸ್​ ಶ್ರದ್ಧೆ, ಭಕ್ತಿಯಿಂದ ಆಚರಣೆ ಮಾಡುತ್ತಾರೆ. ವೀರ ಮರಣ ಹೊಂದಿದವರನ್ನು ಸ್ಮರಿಸುತ್ತಾರೆ . ಎಲ್ಲಾ ದರ್ಗಾಗಳಲ್ಲೂ ಮೂರು ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರಗಳು ಮಾಡಲಾಗುತ್ತದೆ. ಮೂರು ದಿನಗಳ ಕಾಲ ಅದ್ಧೂರಿ ಮೆರವಣಿಗೆ, ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.

ಇದನ್ನು ಓದಿ| ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದಕ್ಕೆ ಬಿಗ್‌ ಟ್ವಿಸ್ಟ್‌: ವೈರಲ್‌ ವಿಡಿಯೋ ಸತ್ಯವೂ ಬಹಿರಂಗ !

Exit mobile version