Site icon Vistara News

Murder Case : ಬುದ್ದಿವಾದ ಹೇಳಿದ್ದಕ್ಕೆ ತಾಯಿಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌

Murder case

ತುಮಕೂರು: ತಾಯಿ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಾದ ಮಗನೊಬ್ಬ ಬರ್ಬರವಾಗಿ ಕೊಲೆ (Murder Case) ಮಾಡಿದ್ದ. ಇದೀಗ ಕೊಲೆ ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತುಮಕೂರು ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಅಪರಾಧಿ ವಿರೂಪಾಕ್ಷ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ತುಮಕೂರಿನ ಕುಣಿಗಲ್ ತಾಲ್ಲೂಕು ಹಂಗರಹಳ್ಳಿ ಗ್ರಾಮದ ನಿವಾಸಿ ವಿರೂಪಾಕ್ಷ, ಬುದ್ದಿವಾದ ಹೇಳಿದ್ದ ತಾಯಿ ಜಯಮ್ಮಳನ್ನು 2021 ಜನವರಿ 15ರಂದು ರಾತ್ರಿ ಕೊಲೆ ಮಾಡಿದ್ದ. ವಿರೂಪಾಕ್ಷ ಕೆಲಸ ಮಾಡದೆ ಮನೆಯಲ್ಲೇ ಇರುತ್ತಿದ್ದ. ಜಯಮ್ಮ ಹೂ ಹಾಗೂ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಇತ್ತ ಹಣ ನೀಡುವಂತೆ ಪದೇ ಪದೇ ತಾಯಿಯನ್ನು ಪೀಡಿಸಿ ವಿರೂಪಾಕ್ಷ ಗಲಾಟೆ ಮಾಡುತ್ತಿದ್ದ. ಹಣ ನೀಡಲು ನಿರಾಕರಿಸಿ ಜಯಮ್ಮ ಮಗನಿಗೆ ಬುದ್ದಿವಾದ ಹೇಳಿದ್ದರು.

ಗಲಾಟೆ ನಂತರ ಜಯಮ್ಮ ಮಲಗಿದ್ದ ವೇಳೆ ತಲೆ ಮೇಲೆ ಖಾರ ಅರೆಯುವ ಗುಂಡು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ಗುರುಪ್ರಸಾದ್ ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪಣ ವರದಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಟಿ.ಆರ್ ಅರುಣ್ ಹಾಗೂ ಕೆ.ಸಿ ದೀಪಕ್ ವಾದ ಮಂಡಿಸಿದ್ದರು. ವಾದ- ವಿವಾದ ಆಲಿಸಿ ನ್ಯಾ.ವೈ.ಎಲ್ ಲಡಖಾನ್ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ನ್ಯಾಯಾಲಯವು ಐಪಿಸಿ 302 ಅಡಿಯಲ್ಲಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version