Site icon Vistara News

Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !

Items worth 47 crore Rs including cash seized in six days in the state

Items worth 47 crore Rs including cash seized in six days in the state

ಬೆಂಗಳೂರು: ದೇಶದ ವಿವಿಧೆಡೆ ಚುನಾವಣೆ ನಡೆಸಿರುವ ಭಾರತೀಯ ಚುನಾವಣಾ ಆಯೋಗ ಇದೀಗ ಕರ್ನಾಟಕದಲ್ಲಿ ಚುನಾವಣೆ ನಡೆಸಲು ಸಜ್ಜಾಗಿದೆ. ಇತ್ತೀಚೆಗಷ್ಟೆ ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ನಡೆಸಿದ ಆಯೋಗಕ್ಕೆ ಕರ್ನಾಟಕದಲ್ಲಿ ವಿಚಿತ್ರ ಸಮಸ್ಯೆ ಎದುರಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ನಡೆಸುವಾಗ ಅಲ್ಲಿದ್ದ ಸವಾಲೆಂದರೆ ಬೆಟ್ಟಗುಡ್ಡ ಪ್ರದೇಶಗಳು. ಸರಿಯಾದ ರಸ್ತೆ, ಸಂಪರ್ಕ ಇಲ್ಲದ ಕಡೆಗಳಿಗೆ ಮತಗಟ್ಟೆಯ ಉಪಕರಣ, ಮಾನವ ಸಂಪನ್ಮೂಲವನ್ನು ಸಾಗಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಆದರೆ ಕರ್ನಾಟಕದಲ್ಲಿ ಮೊದಲನೆಯದಾಗಿ ನಗರ ಮತದಾರರ ಆಲಸ್ಯ ಸವಾಲಾಗಿದೆ.

#image_title

ನಗರ ಪ್ರದೇಶದ ಮತದಾರರ ಆಲಸ್ಯ ಹಾಗೂ ಹಣದ ಪ್ರಾಬಲ್ಯವು ಕರ್ನಾಟಕದಲ್ಲಿ ಪ್ರಮುಖ ಸವಾಲಾಗಿದೆ. ಕರ್ನಾಟಕದಲ್ಲಿ ಒಟ್ಟಾರೆ ಮತದಾನ ಪ್ರಮಾಣ ಉತ್ತಮವಾಗಿದ್ದರೂ ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ಇದೆ. 2013ರಲ್ಲಿ ಕರ್ನಾಟಕದಲ್ಲಿ ಒಟ್ಟಾರೆ ಶೇ.71.83 ಮತದಾನವಾಗಿತ್ತು. 2018ರಲ್ಲಿ ಶೇ. 72.44 ಆಗಿತ್ತು. ಆದರೆ ಬೆಂಗಳೂರಿನಲ್ಲಿ ಕೇವಲ ಶೇ.50ರ ಆಸುಪಾಸಿನಲ್ಲಿ ಮತದಾನವಾಗಿತ್ತು. ಅದರಲ್ಲೂ 2013ರ ಹೋಲಿಕೆಯಲ್ಲಿ ಕಡಿಮೆಯಾಗಿತ್ತು. ಇದು ಚುನಾವಣಾ ಆಯೋಗಕ್ಕೆ ದೊಡ್ಡ ತಲೆಬಿಸಿಯಾಗಿದೆ. ಇದಕ್ಕಾಗಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲು ಐಐಎಸ್‌ಸಿ ಮೂಲಕ ಎಲೆಕ್ಥಾನ್‌ (Electhon) ಮಾಡಲಾಗಿತ್ತು. ತಂತ್ರಜ್ಞಾನ ಹಾಗೂ ಚಟುವಟಿಕೆಗಳ ಮೂಲಕ ಮತದಾರರನ್ನು ಆಕರ್ಷಿಸಲು ಪ್ರಯತ್ನಿಸಲಾಯಿತು ಎಂದು ರಾಜೀವ್‌ ಕುಮಾರ್‌ ಹೇಳಿದರು.

ಕರ್ನಾಟಕ ಚುನಾವಣೆಯಲ್ಲಿ ಮತ್ತೊಂದು ಸವಾಲೆಂದರೆ ಹಣದ ಹೊಳೆ ಎಂದು ರಾಜೀವ್‌ ಕುಮಾರ್‌ ಹೇಳಿದರು. ಈ ಹಿಂದಿನ ಚುನಾವಣೆಗಳಲ್ಲಿ ಗುಜರಾತ್‌ನಲ್ಲಿ 810 ಕೋಟಿ ರೂ., ಹಿಮಾಚಲ ಪ್ರದೇಶದಲ್ಲಿ 57.24 ಕೋಟಿ ರೂ., ಮೇಘಾಲಯದಲ್ಲಿ 74.18 ಕೋಟಿ ರೂ., ನಾಗಾಲ್ಯಾಂಡ್‌ 50.02 ಕೋಟಿ ರೂ., ತ್ರಿಪುರಾದಲ್ಲಿ 45.44 ಕೋಟಿ ರೂ. ಸೇರಿ ಒಟ್ಟು 1,028 ಕೋಟಿ ರೂ. ಸೀಜ್‌ ಮಾಡಲಾಗಿತ್ತು.

ಇದನ್ನು ತಡೆಯಲು ಚುನಾವಣಾ ಆಯೋಗ ಬಿಗಿ ಕ್ರಮಕ್ಕೆ ಮುಂದಾಗಿದೆ. 2018ರಲ್ಲಿ 61 ಇದ್ದ, ಹಣಕಾಸು ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಈ ಬಾರಿ 81ಕ್ಕೆ ಹೆಚ್ಚಾಗಿದೆ. ಅದೇ ರೀತಿ ಚುನಾವಣಾ ನಿಗಾ ಕುರಿತು ಎಲ್ಲ ವಿಭಾಗಗಳಲ್ಲೂ ಶಕ್ತಿ ಹೆಚ್ಚಳ ಮಾಡಲಾಗಿದೆ.

ಕರ್ನಾಟಕದ ಒಟ್ಟು 16 ರಾಜ್ಯಗಳು ನೆರೆ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತವೆ. ಇದರಲ್ಲಿ ಆರು ಜಿಲ್ಲೆಗಳು ಎರಡು ರಾಜ್ಯಯದೊಂದಿಗೆ, ಉಳಿದ 13 ಜಿಲ್ಲೆಗಳು ಒಂದು ರಾಜ್ಯದೊಂದಿಗೆ ಗಡಿ ಹಂಚಿಕೊಳ್ಳುತ್ತಿವೆ. ಈ 19 ಜಿಲ್ಲೆಗಳಲ್ಲಿ 171 ಅಂತಾರಾಜ್ಯ ಚೆಕ್‌ಪೋಸ್ಟ್‌ ರಚಿಸಲಾಗಿದೆ.

ಇದರ ಜತೆಗೆ ಮತದಾರರಲ್ಲಿ ನೈತಿಕತೆ ಮೂಡಿಸಲು ಅನೇಕ ಕಾರ್ಯಕ್ರಮ ಮೂಡಿಸುತ್ತಿದೆ. ಸಿ ವಿಜಿಲ್‌ ಮೊಬೈಲ್‌ ಆಪ್‌ ಮೂಲಕ ಜನರೇ ಅಕ್ರಮಗಳನ್ನು ಆಯೋಗದ ಗಮನಕ್ಕೆ ತರುವುದನ್ನು ಪ್ರೋತ್ಸಾಹಿಸಲಾಗುತ್ತಿದೆ. ಜನರು ನೀಡುವ ದೂರಿಗೆ ತಕ್ಷಣವೇ ಸ್ಪಂದಿಸುವ ಜತೆಗೆ ಕೈಗೊಂಡ ಕ್ರಮವನ್ನೂ ತಿಳಿಸಿಕೊಡಲಾಗುತ್ತದೆ ಎಂದು ರಾಜೀವ್‌ ಹೇಳಿದರು. ಕಳೆದ ವಿಧಾನಸಭೆ ಚುನಾವಣೆ ಇಡೀ ಪ್ರಕ್ರಿಯೆಯಲ್ಲಿ ವಶಕ್ಕೆ ಪಡೆದ ವಸ್ತು, ಹಣದ ಮೌಲ್ಯಕ್ಕಿಂತಲೂ ಹೆಚ್ಚಿನ ಹಣ ಹಾಗೂ ವಸ್ತುಗಳನ್ನು ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ವಶಕ್ಕೆ ಪಡೆಯಲಾಗಿದೆ. ಇದು ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಹಣದ ಹರಿವಿನ ಪ್ರಮಾಣ. ಈ ಬಾರಿ ಹಣದ ಹರಿವನ್ನು ಸಂಪೂರ್ಣ ತಡೆಗಟ್ಟಲು ಚುನಾವಣಾ ಆಯೋಗ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ

Exit mobile version