ಮೈಸೂರು: ನಗರದ ಮಾತಾ ಆಸ್ಪತ್ರೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ (Female foeticide) ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸರ್ಕಾರಿ ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಆದೇಶ ಹೊರಡಿಸಿದ್ದಾರೆ.
ಮೈಸೂರಿನ ಹಿಂದಿನ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ರವಿ. ಪಿ ಮತ್ತು ಮೈಸೂರು ತಾಲೂಕು ಆರೋಗ್ಯಾಧಿಕಾರಿ ರಾಜೇಶ್ವರಿ ಅವರನ್ನು ಅಮಾನತು ಮಾಡಲಾಗಿದೆ. ಭ್ರೂಣ ಹತ್ಯೆ ತಡೆಯುವಲ್ಲಿ ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಮೈಸೂರಿನ ಮಾತಾ ಆಸ್ಪತ್ರೆ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಯ ಕೇಂದ್ರವಾಗಿತ್ತು. ಇತ್ತೀಚೆಗೆ 900 ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆಸ್ಪತ್ರೆಗೆ ಬೀಗ ಜಡಿಯಲಾಗಿತ್ತು. ಈ ದಂಧೆಯಲ್ಲಿ ಭಾಗಿಯಾಗಿದ್ದ ಮಾತಾ ಆಸ್ಪತ್ರೆಯ ಮಾಲೀಕ, ಪ್ರಮುಖ ಆರೋಪಿ ಚಂದನ್ ಬಲ್ಲಾಳ್ ಸೇರಿ 9 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ಇದನ್ನೂ ಓದಿ | Gender Detection : ಕಾರಿನೊಳಗೆ ವೈದ್ಯನ ಶವ ಪತ್ತೆ: ಭ್ರೂಣ ಹತ್ಯೆ ತನಿಖೆಗೆ ಹೆದರಿ ಆತ್ಮಹತ್ಯೆ?
ರಾಜ್ಯದಲ್ಲಿ ಪತ್ತೆಯಾದ ಭ್ರೂಣ ಹತ್ಯೆ ಜಾಲ ಅತ್ಯಂತ ಭಯಾನಕವಾಗಿದೆ. ಮಗುವಿನ ಲಿಂಗ ಪತ್ತೆ ಹಚ್ಚಿ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವ ಈ ಜಾಲದಲ್ಲಿ ಹಲವಾರು ವೈದ್ಯರು, ಲ್ಯಾಬ್‌ಗಳು, ಸ್ಕ್ಯಾನಿಂಗ್ ಸೆಂಟರ್‌ಗಳು ಭಾಗಿಯಾಗಿವೆ. ಮೊದಲು ಈ ಪ್ರಕರಣ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಪತ್ತೆಯಾಯಿತಾದರೂ ಮುಂದೆ ಅದು ಮಂಡ್ಯ ಮತ್ತು ಮೈಸೂರಿನ ಕಡೆಗೆ ವಿಸ್ತರಿಸಿದೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಭ್ರೂಣ ಹತ್ಯೆ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ.
1500ಕ್ಕೂ ಹೆಚ್ಚು ಭ್ರೂಣ ಹತ್ಯೆ
ಆರಂಭದಲ್ಲಿ 900 ಭ್ರೂಣಗಳ ಹತ್ಯೆ ನಡೆದಿರಬಹುದು ಎಂದು ಹೇಳಲಾಗಿತ್ತು. ಆದರೆ, ಈಗ ಅದು 1500ಕ್ಕೂ ಹೆಚ್ಚು ಅಂಶ ಬಯಲಾಗಿದೆ. ಭ್ರೂಣ ಹತ್ಯೆ ಕೇಸಲ್ಲಿ ಇಬ್ಬರು ವೈದ್ಯರು, ಮೂವರು ಲ್ಯಾಬ್ ಟೆಕ್ನಿಷಿಯನ್‌ಗಳು, ಮಧ್ಯವರ್ತಿಗಳು ಸೇರಿ ಒಟ್ಟು 9 ಮಂದಿಯನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಈ ಆರೋಪಿಗಳು ಕಳೆದ ಎರಡು ವರ್ಷದಿಂದ ಈ ಕೃತ್ಯವೆಸಗುತ್ತಿರುವುದಾಗಿ ಬಾಯಿ ಬಿಟ್ಟಿದ್ದರು. ಆ ಮಾಹಿತಿ ಅಧಾರದ ಮೇಲೆ ಸುಮಾರು 900 ಭ್ರೂಣ ಹತ್ಯೆ ಮಾಡಿರಬಹುದು ಎನ್ನಲಾಗಿತ್ತು.. ಆದ್ರೆ ತನಿಖೆ ಮುಂದುವರೆಸಿದಂತೆ ಕಳೆದ ಮೂರು ತಿಂಗಳಲ್ಲೇ 242 ಭ್ರೂಣ ಹತ್ಯೆ ಮಾಡಿರೋದು ಪತ್ತೆಯಾಗಿದೆ. ಇದನ್ನು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ದೃಢಪಡಿಸಿದ್ದಾರೆ.
ಆ ಲೆಕ್ಕದಲ್ಲಿ ನೋಡಿದ್ರೆ ಎರಡು ವರ್ಷದಲ್ಲಿ ವರ್ಷಕ್ಕೆ ಕನಿಷ್ಠ ಒಂದು ಸಾವಿರ ಅಂದ್ರೂ ಕೂಡ ಎರಡು ಸಾವಿರದಷ್ಟು ಭ್ರೂಣ ಹತ್ಯೆ ಮಾಡಿರೋದು ಗೊತ್ತಾಗಿದೆ.. ಭ್ರೂಣ ಪತ್ತೆಗೆ 20 ಸಾವಿರ ರೂ. ಚಾರ್ಜ್ ಮಾಡುತ್ತಿರುವ ದಂಧೆಕೋರರು ಅದು ಹೆಣ್ಣು ಭ್ರೂಣ ಎಂದು ತಿಳಿದ ಮೇಲೆ ಅದರ ಹತ್ಯೆಗೆ ಹೆಚ್ಚುವರಿಯಾಗಿ ಮೂವತ್ತು ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ | Child Trade : ಓದಿದ್ದು ಬರೀ SSLC, ಆದ್ರೆ ಇವನು ವೃತ್ತಿಯಲ್ಲಿ ಡಾಕ್ಟರ್!
ಈ ನಡುವೆ ದಂಧೆಯಲ್ಲಿ ಭಾಗಿಯಾಗಿದ್ದು ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಮಧ್ಯವರ್ತಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದಂಧೆಗೆ ಸಹಕಾರ ನೀಡುತ್ತಿರುವ ವೈದ್ಯರು ಹಾಗೂ ಹತ್ಯೆ ಮಾಡಿಸಿದ ಪೋಷಕರನ್ನು ಕೂಡಾ ಪತ್ತೆ ಹಚ್ಚುವ ಕೆಲಸವೂ ಸಾಗಿದೆ ಎಂದು ಪೊಲೀಸರು ತಿಳಿಸಿದ್ದು, ಸದ್ಯ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ.