ಬೆಂಗಳೂರು: ಬೆಂಗಳೂರಿನ ಮೂಲಸೌಕರ್ಯ ಹಾಗೂ ಸಂಚಾರಿ ವ್ಯವಸ್ಥೆಯನ್ನು ಉಸ್ತುವಾರಿ ಮಾಡುವ ವಿವಿಧ ಸಂಸ್ಥೆಗಳು ಒಂದಕ್ಕೊಂದು ತಾಳೆ ಇಲ್ಲದೆ ಕೆಲಸ ಮಾಡುತ್ತಿರುವುದಕ್ಕೆ ಪರಿಹಾರವಾಗಿ ಏಕೀಕೃತ ಸಾರಿಗೆ ಪ್ರಾಧಿಕಾರ ರಚಿಸುವ ಉದ್ದೇಶಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ತಿಳಿಸಿದ್ದಾರೆ.
ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಭೂ ಸಂಪರ್ಕ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಬೊಮ್ಮಾಯಿ ಮಾಹಿತಿ ನೀಡಿದರು.
ಬೆಂಗಳೂರಿನ ಮೂಲಸೌಕರ್ಯವನ್ನು ನೋಡಿಕೊಳ್ಳುವ ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ಬಿಬಿಎಂಪಿ, ಬಿಡಿಎ ಜತೆಗೆ ರೈಲ್ವೆ, ಮೆಟ್ರೊವನ್ನೂ ಸೇರಿಸಿಕೊಂಡು ಒಂದು ಪ್ರಾಧಿಕಾರ ರಚನೆ ಮಾಡಬೇಕು ಎಂಬ ಪ್ರಸ್ತಾಪ ಈ ಹಿಂದಿನಿಂದಲೂ ಇದೆ. ಬೆಂಗಳೂರು ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಸಂಚಾರ ದಟ್ಣಣೆಯನ್ನೂ ಕಡಿಮೆ ಮಾಡಲು ಇದರಿಂದ ಸಹಾಯಕವಾಗಲಿದೆ. ಏಕೀಕೃತ ಪ್ರಾಧಿಕಾರದ ಪ್ರಸ್ತಾವನೆಯನ್ನು ಸಿದ್ಧಪಡಿಸಿಕೊಳ್ಳಲು ಸೂಚನೆ ನೀಡಲಾಗಿದ್ದು, ಮುಂಬರುವ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುತ್ತದೆ ಎಂದರು.
ಏಕೀಕೃತ ಸಾರಿಗೆ ಪ್ರಾಧಿಕಾರದಿಂದ ಅನೇಕ ಉಪಯೋಗಗಳಿವೆ. ಉದಾಹರಣೆಗೆ ಒಂದೇ ಫ್ಲೈಓವರ್ ಪಿಲ್ಲರ್ ಮೇಲೆ ಮೆಟ್ರೊ, ರೈಲು, ವಾಹನ ಸಂಚಾರವನ್ನೂ ನಡೆಸುವ ರೀತಿ ಯೋಜನೆ ರೂಪಿಸಬಹುದು. ಈಗಾಗಲೆ ಬೈಯಪ್ಪನಹಳ್ಳಿಯಲ್ಲಿರುವಂತೆ, ತಂತ್ರಜ್ಞಾನವನ್ನು ಉಳಿದೆಡೆಯೂ ಬಳಸಬಹುದು. ಇದರಿಂದ ಭೂಸ್ವಾಧೀನ ವೆಚ್ಚದಲ್ಲಿ ಉಳಿತಾಯವಾಗುತ್ತದೆ ಎಂದರು.
ಏಕೀಕೃತ ಪ್ರಾಧಿಕಾರವನ್ನು ರಚಿಸಬೇಕೆಂಬ ಪ್ರಸ್ತಾವನೆ ಸುಮಾರು ಎರಡು ವರ್ಷಕ್ಕೂ ಹಿಂದಿನಿಂದಲೇ ಪ್ರಸ್ತಾವನೆಯಲ್ಲಿದೆ. ಆದರೆ ವಿವಿಧ ಇಲಾಖೆಗಳ ಅಧಿಕಾರಿಗಳು ಒಪ್ಪದ ಕಾರಣಕ್ಕೆ ಇನ್ನೂ ಅನುಷ್ಠಾನವಾಗಿಲ್ಲ. ಇದೀಗ ಸಿಎಂ ಬೊಮ್ಮಾಯಿ ತಿಳಿಸಿರುವಂತೆ ಮುಂದಿನ ಅಧಿವೇಶನದಲ್ಲಿ ಕಾಯ್ದೆಯಾಗಿ ಸ್ವೀಕೃತವಾದರೆ ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.
ಇದನ್ನೂ ಓದಿ | Bengaluru Rain | ಬೋಟ್‌ನಲ್ಲಿ ತೆರಳಿ ಮಳೆ ಹಾನಿ ವೀಕ್ಷಿಸಿದ ಸಿದ್ದರಾಮಯ್ಯ: ಗೋಳು ತೋಡಿಕೊಂಡ ಜನರು
ಜತೆಗೆ, ಭೂಸ್ವಾಧೀನಕ್ಕೆ ಅವಕಾಶವಿಲ್ಲದ, ಹೆಚ್ಚಿನ ಕಟ್ಟಡಗಳಿರುವ ಪ್ರದೇಶಗಳಲ್ಲಿ ರೋಪ್‌ವೇ ಮೂಲಕ ಸಾರಿಗೆ ವ್ಯವಸ್ಥೆ ಮಾಡಬಹುದು ಎಂದು ಗಡ್ಕರಿ ಅವರು ಸಲಹೆ ನೀಡಿದ್ದಾರೆ. ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯನ್ನು ಬಳಸಿಕೊಂಡು ಪ್ರಮುಖವಾಗಿ ಐಟಿಬಿಟಿ ಕಂಪನಿಗಳಿರುವ ಪ್ರದೇಶದಲ್ಲಿ ಈ ಯೋಜನೆ ಉಪಯೋಗವಾಗಲಿದೆ.
ರಾಷ್ಟ್ರೀಯ ಹೆದ್ದಾರಿಗಳು ಸಾಗುವಲ್ಲಿ ಇರುವ ಅಂತರ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಹೆದ್ದಾರಿಗಳ ಸಂಪರ್ಕಕ್ಕೆ ಇರುವ ಖಾಲಿ ಸ್ಥಳವನ್ನು ತುಂಬಿಕೊಡುವುದಾಗಿ ಎಂದಿದ್ದಾರೆ. ರಿಂಗ್ ರೋಡ್ ಮಧ್ಯದಲ್ಲಿ ಕಾನ್ಸೆಂಟ್ರಿಕ್ ರಿಂಗ್ ರಸ್ತೆ ನಿರ್ಮಿಸುವ ಚಿಂತನೆ ನಡೆದಿದೆ. ಪುಣೆ-ಬೆಂಗಳೂರು ಹೈವೇ ಸಮಸ್ಯೆಗಳನ್ನು ಚರ್ಚೆ ಮಾಡಲಾಗಿದೆ, ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.
ಬೆಂಗಳೂರು-ಮೈಸೂರು ಹೈವೇಯಲ್ಲಿ ನೀರು ನಿಂತಿರುವ ಕಡೆ, ಮುಂದೆ ನಿಲ್ಲಬಹುದಾದ ಕಡೆ ಡ್ರೈನೇಜ್ ವ್ಯವಸ್ಥೆ ಸರಿಪಡಿಸುವುದು, ಗ್ರಾಮಸ್ಥರು ಕೇಳಿರುವಂತೆ ಎಂಟ್ರಿ-ಎಕ್ಸಿಟ್ ಕುರಿತು ಪ್ರಸ್ತಾವನೆಗಳನ್ನು ಪರಿಗಣಿಸುವುದಾಗಿ ಹೇಳಿದ್ದಾರೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಪೂನಾ ಬೆಂಗಳೂರು- ಹೆದ್ದಾರಿಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೂಡಲೇ ಸರಿಪಡಿಸಲು ಸಭೆಯಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಕಾರ್ಯದರ್ಶಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು- ಮೈಸೂರು ಕುರಿತು ಚರ್ಚೆ
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಇನ್ನಷ್ಟು ವೇಗವಾಗಿ ಪೂರ್ಣಗೊಳ್ಳಬೇಕು ಎಂದು ಚರ್ಚೆ ನಡೆದಿದೆ. ಜತೆಗೆ, ಅಲ್ಲಿನ ಮಳೆನೀರು ಚರಂಡಿ ವ್ಯವಸ್ಥೆಗಳ ತೊಡಕುಗಳ ಬಗ್ಗೆ ಹೊಸದಾಗಿ ಗೊತ್ತಾಗಿದೆ. ಎಲ್ಲೆಲ್ಲಿ ನೀರು ನಿಂತಿದೆ ಹಾಗೂ ಎಲ್ಲೆಲ್ಲಿ ನೀರು ನಿಲ್ಲಬಹುದೆಂದು ತಿಳಿದುಕೊಂಡು ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಹೊಸ ಯೋಜನೆ ತಯಾರಿಸಲು ಸಚಿವರು ಸೂಚಿಸಿದ್ದಾರೆ. ಎಕ್ಸಿಟ್ ಪಾಯಿಂಟ್‌ಗಳ ಬಗ್ಗೆ ಬೇಡಿಕೆಯಿದ್ದು, ಈ ಕುರಿತೂ ಚರ್ಚಿಸುವುದಾಗಿ ತಿಳಿಸಿದ್ದಾರೆ. ಇದು ತಾಂತ್ರಿಕ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಪ್ರೋತ್ಸಾಹದಾಯಕ ಚರ್ಚೆ
ಪೂನಾ – ಬೆಂಗಳೂರು ಹೆದ್ದಾರಿಯಿಂದ ಚನ್ನೈ ರಾಷ್ಟ್ರೀಯ ಹೆದ್ದಾರಿ ಬಳಿ ತಮಿಳು ನಾಡು ಮೂಲಕ ಹಾದುಹೋಗಿ ವಾಪಸ್ಸು ಬರುತ್ತದೆ. ಈ ಮಧ್ಯೆ 40-50ಕಿಮೀ ನೇರವಾಗಿ ಸಂಪರ್ಕ ಮಾಡಲು ಸಾಧ್ಯವಿದೆ. ಹೊಸದಾಗಿ ಈ ಅಂಶವನ್ನೂ ಅಳವಡಿಸಿಕೊಳ್ಳಬೇಕೆಂಬ ವಿಚಾರವನ್ನು ತಿಳಿಸಲಾಗಿದೆ. ಅದನ್ನು ಪರಿಶೀಲಿಸುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಕೇಂದ್ರ ರಸ್ತೆ ನಿಧಿಯಡಿ ನಿಯಮಿತ ಕಾಮಗಾರಿಗಳು, ಅದಕ್ಕೆ ಅಗತ್ಯವಿರುವ ಅನುದಾನ, ಹೆಚ್ಚಿನ ಹೆದ್ದಾರಿಗಳನ್ನು ಘೋಷಿಸುವುದರ ಬಗ್ಗೆ ಈಗಾಗಲೇ ಪತ್ರವನ್ನು ಕಳುಹಿಸಲಾಗಿತ್ತು. ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಮತ್ತೊಮ್ಮೆ ಈ ಬಗ್ಗೆ ಸಭೆ ನಡೆಸಿ ಕೂಡಲೇ ಏನು ಮಾಡಲು ಸಾಧ್ಯ, ಎಲ್ಲಾ ಏಜೆನ್ಸಿಗಳು, ಸರ್ಕಾರದ ಪ್ರಾಧಿಕಾರಗಳು ಹೇಗೆ ಕೆಲಸ ಮಾಡಲು ಸಾಧ್ಯ? ಕೇಂದ್ರ ಸರ್ಕಾರದಿಂದ ಏನು ಮಾಡಲು ಸಾಧ್ಯ ಎನ್ನುವ ಬಗ್ಗೆ ಸ್ಥೂಲವಾಗಿ ಚರ್ಚಿಸಲಾಗುವುದು ಎಂದು ನಿತಿನ್ ಗಡ್ಕರಿ ಅವರು ಭರವಸೆ ನೀಡಿದ್ದಾರೆ. ಚರ್ಚೆ ಬಹಳಷ್ಟು ಪ್ರೋತ್ಸಾಹದಾಯಕವಾಗಿದೆ. ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ಚರ್ಚೆ ಮಾಡಲಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಬೈಪಾಸ್
ಕಳೆದ ಬಾರಿ ಹುಬ್ಬಳ್ಳಿ ಧಾರವಾಡದ ಬೈಪಾಸ್ ಖಾಸಗಿಯವರಿಗೆ ಹಸ್ತಾಂತರವಾಗಿ ಟೆಂಡರ್ ಆಗಿದೆ. ಬಹುತೇಕವಾಗಿ 2-3 ತಿಂಗಳಲ್ಲಿ ಪ್ರಾರಂಭವಾಗುತ್ತದೆ ಎಂದರು. ಮುಖ್ಯವಾಗಿ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು, ಶಿರಾಡಿ ಘಾಟ್ ನಿಂದ ಹಿಡಿದು ಪ್ರಮುಖ ಹೆದ್ದಾರಿಗಳ ಬಗ್ಗೆ ಚರ್ಚೆ ಆಗಿದೆ. ಬೆಂಗಳೂರಿನ ಬಗ್ಗೆ ಪ್ರತ್ಯೇಕವಾಗಿ ಚರ್ಚೆಯಾಗಲಿದೆ. ಇಂದು ಮುಖ್ಯವಾಗಿ ಬೆಂಗಳೂರಿನ ಸಂಚಾರ ದಟ್ಟಣೆಯ ಸುಧಾರಣೆಯ ಬಗ್ಗೆ ಚರ್ಚೆಯಾಗಿದೆ ಎಂದರು.
ಮೋಹನ್‌ದಾಸ್ ಪೈ ಉದ್ದೇಶ ಸರಿಯಿದೆ
ಉದ್ಯಮಿ ಮೋಹನ್‌ದಾಸ್ ಪೈ ಅವರು ಸರ್ಕಾರವನ್ನು ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸರ್ಕಾರದ ಅನೇಕ ಕೆಲಸಗಳನ್ನು ಂೋಹನದಾಸ್ ಪೈ ಶ್ಲಾಘಿಸಿದ್ದಾರೆ. ಅವರಿಗೆ ಸಮಾಜದ ಬಗ್ಗೆ ಕಾಳಜಿ ಇದೆ. ಅವರಿಗೆ ಅನುಭವವಿದೆ, ಅವರ ಸಲಹೆಯನ್ನು ಪರಿಗಣಿಸುತ್ತೇವೆ. ಸಮಸ್ಯೆಗಳು ಬಂದಾಗ ತಿಳಿಸಿದ್ದಾರೆ, ಅದನ್ನೂ ಪರಿಗಣಿಸುತ್ತೇವೆ. ಅವರ ಉದ್ದೇಶ ಒಳ್ಳೆಯದಾಗಿದೆ, ಅದನ್ನು ಸ್ವೀಕರಿಸುತ್ತೇವೆ. ಸ್ಥಳೀಯ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದರು.
ಬೆಂಗಳೂರಿನ ಈಗಿನ ಸಮಸ್ಯೆಗಳು ಹಿಂದಿನ ಸರ್ಕಾರಗಳಿಂದ ಬಂದಿರುವ ಬಳುವಳಿ ಎಂದು ಪುನರುಚ್ಚರಿಸಿದ ಸಿಎಂ ಬೊಮ್ಮಾಯಿ, ಆದರೆ ಈ ಸಮಸ್ಯೆಗಳಿಂದ ವಿಮುಖವಾಗುತ್ತಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿ ಪರಿಹರಿಸುತ್ತೇವೆ ಎಂದರು.
ಇದನ್ನೂ ಓದಿ | Bangalore Rain| ಬೆಂಗಳೂರು ಬಿಟ್ಟು ಹೋಗಲ್ಲ, ಮಳೆ ಸಮಸ್ಯೆ ಪರಿಹಾರದ ಭರವಸೆ ಇದೆ ಎಂದ ಐಟಿ ಕಂಪನಿಗಳು