ಚಿಕ್ಕೋಡಿ: ಮಂಗಳವಾರ ರಾತ್ರಿ ನಿಧನರಾದ ರಾಜ್ಯದ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ(Umesh Katti) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬುಧವಾರ ರಾತ್ರಿ ಅವರ ಸ್ವಗ್ರಾಮವಾದ ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆಯಿತು. ಉತ್ತರ ಕರ್ನಾಟಕ ಪ್ರಬಲ ಧ್ವನಿಯಾಗಿ, ನೇರ ನುಡಿಯ ಮೂಲಕವೇ ಜನ ಮನ ಗೆದ್ದಿದ್ದ ಕತ್ತಿ ಅವರ ಪಾರ್ಥಿವ ಶರೀರವನ್ನು ಅವರ ತಂದೆ ಮತ್ತು ತಾಯಿಯ ಸಮಾಧಿಯ ಪಕ್ಕದಲ್ಲೇ ಸಂಸ್ಕಾರ ಮಾಡುವ ವೇಳೆ ಸಾವಿರಾರು ಅಭಿಮಾನಿಗಳು ಮತ್ತು ಕುಟುಂಬಿಕರು ತಡೆಯಲಾಗದೆ ಕಣ್ಣೀರು ಸುರಿಸಿದರು.
ಮಂಗಳವಾರ ರಾತ್ರಿ ೯.೩೦ರ ಹೊತ್ತಿಗೆ ಮನೆಯಲ್ಲಿ ಇದಕ್ಕಿದ್ದಂತೆ ಅಸ್ವಸ್ಥರಾದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ನಾಡಿನಾದ್ಯಂತ ಇರುವ ಅವರ ಅಭಿಮಾನಿಗಳ ಕಣ್ಣೀರ ನಡುವೆ ಅವರ ಪಾರ್ಥಿವ ಶರೀರವನ್ನು ಬುಧವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಒಯ್ದು ಅಂತಿಮ ಕ್ರಿಯೆ ನಡೆಸಲಾಯಿತು.
ಸ್ವಗ್ರಾಮದ ಬೆಲ್ಲದ ಬಾಗೇವಾಡಿಯ ಮನೆಯ ಬಳಿ ಉಮೇಶ್ ಕತ್ತಿ ಮೃತದೇಹಕ್ಕೆ ಪೂಜೆ ಸಲ್ಲಿಸಿದ ಬಳಿಕ ಅಂತ್ಯಕ್ರಿಯೆ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಯಿತು. ಗ್ರಾಮದ ಗದ್ದೆಯಲ್ಲಿ ತಂದೆ ಮತ್ತು ತಾಯಿ ಸಮಾಧಿ ಪಕ್ಕದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಲಾಯಿತು.
ಸಮಯದ ಅಭಾವ ಹಿನ್ನೆಲೆ ಪಾರ್ಥಿವ ಶರೀರ ಬರುವ ಮುನ್ನವೇ ಬೆಲ್ಲದ ಬಾಗೇವಾಡಿಯ ಮಹಾಂತ ವಿರಕ್ತ ಮಠದ ಶಿವಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಸಮಾಧಿಯ ಅಷ್ಟ ದಿಕ್ಕುಗಳಲ್ಲಿ ಪೂರ್ಣಕುಂಭವಿಟ್ಟು ಪೂಜೆ ಮಾಡಲಾಯಿತು. ಜಂಗಮ ವಟುಗಳಿಂದ ಅರಿಶಿಣ, ಕುಂಕುಮ ಇಟ್ಟು, ರಂಗೋಲಿ ಬಿಡಿಸಿ ಸಮಾಧಿ ಅಲಂಕಾರ ಮಾಡಲಾಗಿತ್ತು.
ಇದನ್ನೂ ಓದಿ | 8 ಬಾರಿ ಶಾಸಕ ಉಮೇಶ್ ಕತ್ತಿ ಇನ್ನು 8 ತಿಂಗಳು ಇದ್ದಿದ್ದರೆ ಧರ್ಮ ಸಿಂಗ್ ದಾಖಲೆ ಮುರಿಯುತ್ತಿದ್ದರು !
ಇದಕ್ಕೂ ಮುನ್ನ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಕೊಂಡೊಯ್ಯಲಾದ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಳವಾಗಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಕತ್ತಿ ಅವರ ಹುಟ್ಟೂರು ಬೆಲ್ಲದ ಬಾಗೇವಾಡಿಯವರೆಗೆ ವಾಹನದ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬೆಲ್ಲದ ಬಾಗೇವಾಡಿ ಹೊರವಲಯದ ವಿಶ್ವರಾಜ್ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್, ಎಚ್.ಡಿ.ರೇವಣ್ಣ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರ ರಾಜಕೀಯ ನಾಯಕರು, ಗಣ್ಯರು, ಸಾರ್ವಜನಿಕರು, ಕಾರ್ಖಾನೆ ಸಿಬ್ಬಂದಿ ಅಂತಿಮ ದರ್ಶನ ಪಡೆದರು.
ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುವಾಗ ದಾರಿಯುದ್ದಕ್ಕೂ ನಿಂತ ಸಾರ್ವಜನಿಕರು ಅಗಲಿದ ನಾಯಕನಿಗೆ ಅಶ್ರುತರ್ಪಣ ಸಲ್ಲಿಸಿದರು. ಕೆಲವರು ವಾಹನವನ್ನು ತಡೆದು ಅಂತಿಮ ದರ್ಶನಕ್ಕೆ ಒತ್ತಾಯಿಸಿದರು. ಕಣ್ಣೀರಿಡುತ್ತಲೇ ಜನರತ್ತ ಕೈಮುಗಿದ ರಮೇಶ್ ಕತ್ತಿ, ಅಂತಿಮ ಸಂಸ್ಕಾರಕ್ಕೆ ತಡವಾಗುತ್ತದೆ, ತೆರಳಲು ಬಿಡಿ ಎಂದು ಮನವಿ ಮಾಡಿದರು. ಉಮೇಶ್ ಕತ್ತಿ ಮೃತದೇಹದ ಜತೆ ತವರಿಗೆ ಬಂದ ರಮೇಶ್ ಕತ್ತಿ ಅವರನ್ನು ತಬ್ಬಿಕೊಂಡ ಅಭಿಮಾನಿಗಳು, ಕಾರ್ಯಕರ್ತರು ಅಯ್ಯೋ ಅಣ್ಣ ಎಂದು ಕಣ್ಣೀರಾದರು. ಕತ್ತಿ ಅವರ ಸ್ವಗ್ರಾಮದಲ್ಲಿ ಯುವಕರು ವಿಶೇಷ ನಮನ ಸಲ್ಲಿಸಿದರು. ಗ್ರಾಮದಲ್ಲಿ ಇಂಗ್ಲಿಷ್‌ನ UK ಅಕ್ಷರದ ರೀತಿಯಲ್ಲಿ ಸಾಲಾಗಿ ನಿಂತು ತಮ್ಮ ಆತ್ಮೀಯ ನಾಯಕನನ್ನು ನೆನೆದರು.
ಇದನ್ನೂ ಓದಿ | ಉಮೇಶ್ ಕತ್ತಿ ನಿಧನ ಹಿನ್ನೆಲೆ: ನಾಳೆ ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಸೆ.11ಕ್ಕೆ ಮುಂದೂಡಿಕೆ