ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗವಾದ ಕುಮಟಾ ತಾಲೂಕಿನ ಆಸುಪಾಸಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ನಿರ್ಮಾಣ ಮಾಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಆದರೆ, ಜಾಗದ ಹುಡುಕಾಟ ನಡೆಸಲಾಗುತ್ತಿದೆ. ಜಾಗ ಅಂತಿಮಗೊಂಡ ಬಳಿಕ ನಿರ್ಧಾರವನ್ನು ಪ್ರಕಟ ಮಾಡಲಾಗುತ್ತದೆ. ಅಂತಿಮವಾಗಿ ಆರ್ಥಿಕ ಇಲಾಖೆಯು ಮುಖ್ಯಮಂತ್ರಿಯವರ ಬಳಿಯೇ ಇರುವುದರಿಂದ ಒಪ್ಪಿಗೆ ಸಿಗಲಿದೆ ಎಂದು ಹೇಳಲಾಗಿದೆ.
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಂಬಂಧ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರನ್ನೊಳಗೊಂಡ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಸಭೆಯಲ್ಲಿ ಏನೇನು ಚರ್ಚೆ?
ಯಾವುದೇ ಇಲಾಖೆ ಇದ್ದರೂ ಸಹ ಅಂತಿಮವಾಗಿ ಮುಖ್ಯಮಂತ್ರಿಗಳೇ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಅಂಶಗಳನ್ನೂ ಪರಿಶೀಲನೆ ನಡೆಸಿದ ಬಳಿಕ ಮುಂದಿನ ನಿರ್ಧಾರವನ್ನು ಸಿಎಂ ಪ್ರಕಟಿಸುತ್ತಾರೆ. ಹೀಗಾಗಿ ಈ ಬಗ್ಗೆ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸಬೇಕಿದೆ. ಜಿಲ್ಲೆಯ ಶಾಸಕರು ಒಮ್ಮತದಿಂದ ಆಸ್ಪತ್ರೆಗೆ ಜಾಗವನ್ನು ಗುರುತಿಸುವತ್ತ ಗಮನಹರಿಸಬೇಕು ಎಂಬ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಇದನ್ನೂ ಓದಿ | Super Speciality Hospital | ಕೊನೆಗೂ ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿಎಂ, ಆರೋಗ್ಯ ಸಚಿವರ ಭೇಟಿ ಶೀಘ್ರ
ಕ್ರಿಮ್ಸ್‌ನಲ್ಲಿ ಏಕೆ ಅಸಾಧ್ಯ?
ಕಾರವಾರದಲ್ಲಿ ಈಗಾಗಲೇ ಇರುವ ವೈದ್ಯಕೀಯ ಕಾಲೇಜನ್ನು (ಕ್ರಿಮ್ಸ್) ಮೇಲ್ದರ್ಜೆಗೇರಿಸಿ ಅಲ್ಲಿಯೇ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಸಂಬಂಧ ಚರ್ಚೆ ನಡೆದಿದೆ. ಆದರೆ, ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಸಾಲದು ಎಂಬ ವಿಷಯ ಗಮನಕ್ಕೆ ಬಂದಿದೆ. ನಿರ್ಮಾಣಕ್ಕೆ ಬೇಕಿರುವ ಜಮೀನು ಬೇರೆ ಬೇರೆ ಇಲಾಖೆಗೆ ಸೇರಿದ್ದಾಗಿದೆ ಎಂಬ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಆದರೆ, ಈ ಮೆಡಿಕಲ್ ಕಾಲೇಜಿಗೆ ಸಕಲ ಸೌಕರ್ಯವನ್ನು ಕೊಡುವ ಸಂಬಂಧ ಮಾತುಕತೆಗಳಾಗಿವೆ ಎನ್ನಲಾಗಿದೆ.
ನಮ್ಮ ಪ್ರಸ್ತಾವನೆಗೆ ಸರ್ಕಾರ ಒಪ್ಪಿದೆ- ಕೋಟ ಶ್ರೀನಿವಾಸ ಪೂಜಾರಿ
ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ವ್ಯಾಪ್ತಿಯನ್ನು ಗಮನಿಸಿದಾಗ ಕುಮಟಾವನ್ನು ಹೃದಯಭಾಗವೆಂದು ಪರಿಗಣಿಸಬಹುದಾಗಿದ್ದು, ತಾಲೂಕಿನ ಅಕ್ಕಪಕ್ಕದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾಪವನ್ನು ಸಭೆಯಲ್ಲಿ ಇಡಲಾಯಿತು. ಈ ಬಗ್ಗೆ ಚರ್ಚೆ ನಡೆಸಿ ಕೊನೆಗೂ ಆರೋಗ್ಯ ಸಚಿವರು ಒಪ್ಪಿಗೆ ನೀಡಿದ್ದಾರೆ. ಅಲ್ಲದೆ ಅಧಿವೇಶನ ಬಳಿಕ ಜಿಲ್ಲೆಗೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲೆಯ ಯಾವ ಭಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಪರಿಶೀಲನೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಆ ನಂತರ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ನಿರ್ಮಾಣ ಮಾಡುವ ಬಗ್ಗೆ ಸರ್ಕಾರದಿಂದ ಘೋಷಣೆಯಾಗಲಿದೆ. ನಮ್ಮ ಬೇಡಿಕೆಗಳಿಗೆ ಆರೋಗ್ಯ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ, ಈಗಿರುವ ಮೆಡಿಕಲ್ ಕಾಲೇಜಿಗೆ ಎಲ್ಲ ಸೌಲಭ್ಯ ಒದಗಿಸಲೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸುದ್ದಿಗಾರರಿಗೆ ತಿಳಿಸಿದರು.
ಸ್ಪೀಕರ್ ಕಾಗೇರಿ, ಸಿಎಂ ಬೊಮ್ಮಾಯಿ ಜತೆ ಚರ್ಚೆ- ಸುಧಾಕರ್
ಕಾರವಾರದಲ್ಲಿರುವ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಸಾಲುವುದಿಲ್ಲ. ಅದಕ್ಕೆ ಬೇಕಾದ ಜಮೀನು ಬೇರೆ ಬೇರೆ ಇಲಾಖೆಗೆ ಸೇರಿದ್ದಾಗಿದೆ. ಹೀಗಾಗಿ ಸ್ಥಳ ಇನ್ನೂ ಅಂತಿಮ ಮಾಡಿಲ್ಲ. ಸ್ಥಳದ ವಿಚಾರವಾಗಿ ಸ್ಪೀಕರ್ ಕಾಗೇರಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ಚರ್ಚೆ ಮಾಡಿ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಸುಧಾಕರ್ ಹೇಳಿದರು.
ಅಧಿವೇಶನದ ಬಳಿಕ ಉತ್ತರ ಕನ್ನಡ ಜಿಲ್ಲೆಯ ಪ್ರವಾಸವನ್ನು ಮಾಡುತ್ತೇವೆ. ಸಚಿವರು, ಶಾಸಕರನ್ನೂ ಜತೆಗೆ ಕರೆದೊಯ್ದು ಆರೋಗ್ಯ ವ್ಯವಸ್ಥೆ ಬಗ್ಗೆ ಸಮಾಲೋಚನೆ ಮಾಡಲಾಗುವುದು. ಅಂತಿಮವಾಗಿ ಆರ್ಥಿಕ ಇಲಾಖೆ ಮುಖ್ಯಮಂತ್ರಿ ಬಳಿಯೇ ಇದೆ. ಜಾಗ ಸಿಕ್ಕ ಬಳಿಕ ಸಿಎಂ ಈ ಬಗ್ಗೆ ನಿರ್ಧಾರವನ್ನು ಪ್ರಕಟಿಸುತ್ತಾರೆ ಎಂದು ಎಂದು ಸಚಿವ ಸುಧಾಕರ್ ತಿಳಿಸಿದರು.
ಭೌಗೋಳಿಕ ದೃಷ್ಟಿಕೋನ ಗಮನದಲ್ಲಿದೆ
ಇಡೀ ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆ ನಿರ್ಮಾಣವನ್ನು ಮಾಡಲಾಗುವುದು. ಎಲ್ಲ ಪ್ರದೇಶಗಳಿಗೂ ಸೂಕ್ತ ಎಂದು ಅನ್ನಿಸುವಂತಹ ಜಾಗದಲ್ಲಿ ನಿರ್ಮಾಣ ಮಾಡುತ್ತೇವೆ. ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಮನಸ್ಸು ಸರ್ಕಾರಕ್ಕಿದೆ ಎಂದು ಸಚಿವ ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮತ್ತು ಉ.ಕ. ಜಿಲ್ಲೆಯ ಜನಪ್ರತಿನಿಧಿಗಳು, ಮಿಂಟೋ ಆಸ್ಪತ್ರೆ ನಿರ್ದೇಶಕಿ ಸುಜಾತಾ ರಾಥೋಡ್ ಸೇರಿದಂತೆ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಗೆ ಸರ್ಕಾರ ಬದ್ಧ: ಸಚಿವ ಡಾ.ಕೆ.ಸುಧಾಕರ್