ಕಾರವಾರ: ಸಮುದ್ರದ ಅಲೆಗೆ ಸಿಲುಕಿ ಪ್ರವಾಸಿ (Drowned in Water) ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಉತ್ತರಕನ್ನಡದ ಭಟ್ಕಳದ ಮುರ್ಡೇಶ್ವರ ಕಡಲತೀರದಲ್ಲಿ ಘಟನೆ ನಡೆದಿದೆ. ಗೌತಮ್ (17) ಮೃತ ದುರ್ದೈವಿ.
ಬೆಂಗಳೂರಿನ ವಿದ್ಯಾ ಸೌಧ ಪ್ರಥಮ ದರ್ಜೆ ಕಾಲೇಜಿನಲ್ಲಿ 220 ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಈಜಲು ಸಮುದ್ರಕ್ಕೆ ಇಳಿದಿದ್ದಾರೆ. ಅಲೆಗಳ ಅಬ್ಬರಕ್ಕೆ ಗೌತಮ್ ಸಿಲುಕಿ ಮೃತಪಟ್ಟರೆ, ಇನ್ನೋರ್ವ ವಿದ್ಯಾರ್ಥಿ ಧನುಶ್ ಎಂಬಾತನನ್ನು ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಅಸ್ವಸ್ಥನಾಗಿದ್ದ ಧನುಶ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಮುದ್ರದ ಅಲೆಯಲ್ಲಿ ಮೋಜು ಮಸ್ತಿ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಮುರ್ಡೇಶ್ವರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಹಿಟ್ ಆ್ಯಂಡ್ ರನ್‌ಗೆ ತಮಿಳುನಾಡು ಮೂಲದ ವಿದ್ಯಾರ್ಥಿ ಬಲಿ
ಭೀಕರ ಹಿಟ್ ಆ್ಯಂಡ್ ರನ್ ವಿಡಿಯೋ ಬೆಚ್ಚಿ ಬೀಳಿಸುವಂತಿದೆ. ತಮಿಳುನಾಡು ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಕೊಡಗು ಜಿಲ್ಲೆ ಕುಶಾಲನಗರ ಬಳಿಯ ರಾಷ್ಟ್ರೀಯ ಹೆದ್ದಾರಿ 275ರ ಗಂಧದಕೋಟೆ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ವಿದ್ಯಾರ್ಥಿ ಅಗಸ್ಟೀನ್ (19) ಮೃತ ದುರ್ದೈವಿ. ಮತ್ತೋರ್ವ ವಿದ್ಯಾರ್ಥಿ ರವಿಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ನಾಮಕಲ್‌ನ ಇಂಜಿನಿಯರಿಂಗ್ ಕಾಲೇಜಿನ 70 ವಿದ್ಯಾರ್ಥಿಗಳು ನಾಮಕಲ್‌ನಿಂದ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದರು. ರಸ್ತೆ ಬದಿ ಟೀ ಕುಡಿಯಲು ನಿಂತಿದ್ದಾಗ, ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಅಗಸ್ಟೀನ್ ಸ್ಥಳದಲ್ಲೇ ಮೃತಪಟ್ಟರೆ, ರವಿಕುಮಾರ್ ಗಾಯಗೊಂಡಿದ್ದಾನೆ.
ಲಾರಿಗೆ ಬೈಕ್ ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು
ಹಿಂಬದಿಯಿಂದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೆ ಯುವಕನೊರ್ವ ಮೃತಪಟ್ಟಿದ್ದಾನೆ. ಮಂಡ್ಯದ ಕೆಆರ್ ಪೇಟೆಯ ಮೋದೂರು ಗ್ರಾಮದ ಬಳಿ ಘಟನೆ ನಡೆದಿದೆ. ಶ್ರೀರಂಗಪಟ್ಟಣದ ಬಲ್ಲೇನಹಳ್ಳಿ ಮೂಲದ ಶ್ರೇಯಸ್ ಗೌಡ (27) ಸ್ಥಳದಲ್ಲೆ ಮೃತಪಟ್ಟವರು. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೊತ್ತಿ ಉರಿದ ಫ್ಯಾಕ್ಟರಿ
ಬೆಳಗಾವಿಯಲ್ಲಿ ಸ್ಪಾರ್ಕ್ ತಯಾರಿಸುವ ಫ್ಯಾಕ್ಟರಿಗೆ ಬೆಂಕಿ ತಗುಲಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಬೆಳಗಾವಿ ಕಣಬಗರಿ ಇಂಡಸ್ಟ್ರಿಯಲ್ ಪ್ರದೇಶದ ಆಟೋ ನಗರದಲ್ಲಿ ಘಟನೆ ನಡೆದಿದೆ. ಪ್ರೊ.ಮಹಾದೇವ ರಾಠೋಡ ಮಾಲೀಕತ್ವದ ಸೋನಾಕ್ಷಿ ಇನೋವೇಷನ್ಸ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಗೆ
ತಡರಾತ್ರಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.
ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಕ್ಕೆ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನಾ ಸ್ಥಳಕ್ಕೆ ಮಾಳಮಾರುತಿ ಪಿಎಸ್ಐ ಹೊನ್ನಪ್ಪ ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಮಾಳಮಾರುತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಾರ್ಟ್ ಸರ್ಕ್ಯೂರ್ಟ್; ಐವರು ಪ್ರಾಣಾಪಾಯದಿಂದ ಪಾರು
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು, ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿ ಆಗಿವೆ. ವಾಸದ ಮನೆಯಲ್ಲಿದ್ದ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ನಗರದ ಹೊಸಲೈನ್ ರಸ್ತೆಯಲ್ಲಿ ಘಟನೆ ನಡೆದಿದೆ. ಮುಸ್ತಾಫ್ ಎಂಬುವವರಿಗೆ ಸೇರಿದ ಮನೆಯಲ್ಲಿ ರೆಫ್ರಿಜರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ. ಆರು ಮನೆಗಳಿರುವ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಬೆಂಕಿ ಅವಘಡ ನಡೆದಿದೆ. ಅದೃಷ್ಟವಶಾತ್ ರೆಫ್ರಿಜರೇಟರ್‌ನಲ್ಲಿ ಪಕ್ಕದಲ್ಲೆ ಇದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆ ಮಂದಿ ಎಲ್ಲ ಹೊರಗೆ ಓಡಿ ಬಂದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ