ಬೆಂಗಳೂರು: ವಾಲ್ಮೀಕಿ ನಿಗಮದ (Valmiki Corporation Scam) ಹಗರಣಕ್ಕೆ ಸಂಬಂಧಿಸಿ ನಿನ್ನೆ ಸಚಿವ ನಾಗೇಂದ್ರ (Minister B Nagendra) ಜೊತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಮಾತುಕತೆ ನಡೆಸಿದ್ದು, ಇಂದು ರಾಜೀನಾಮೆ (Resignation) ಕೊಡಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಭೇಟಿ ವೇಳೆ, ನಾಳೆ ಈ ಕುರಿತು ಇನ್ನಷ್ಟು ಮಾತನಾಡಲು ಬರುವಂತೆ ಸಿಎಂ ತಿಳಿಸಿದ್ದು, ಇಂದು ಬಹುತೇಕ ರಾಜೀನಾಮೆಗೆ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ನಿನ್ನೆಯೇ ಸಿಎಂ ರಾಜೀನಾಮೆಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ನಾಗೇಂದ್ರ, ಸಿಎಂ ಇಂದು ಬರೋದಕ್ಕೆ ತಿಳಿಸಿದ್ದಾರೆ ಅನ್ನುತ್ತಿದ್ದಾರೆ. ಬಹುತೇಕ ಇಂದು ಸ್ಪಷ್ಟ ಚಿತ್ರಣ ಸಿಗಲಿದೆ. ಒಂದು ವೇಳೆ ಸಿಎಂ ಸೂಚನೆ ಮೇರೆಗೆ ಇಂದು ರಾಜೀನಾಮೆ ಕೊಟ್ಟರೆ ಸರ್ಕಾರದ ಮೊದಲ ವಿಕೆಟ್ ಪತನವಾಗಲಿದೆ.
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಹಾಗೂ ಅವರ ಡೆತ್‌ನೋಟ್ ಬಯಲಾದ ಬಳಿಕ ಬೆಳಕಿಗೆ ಬಂದ ಹಗರಣದ ಬಳಿಕ ಇಷ್ಟು ದಿನ ನಾಗೇಂದ್ರ ಯಾರ ಕೈಗೂ ಸಿಕ್ಕಿರಲಿಲ್ಲ, ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ನಿನ್ನೆ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ನಾಗೇಂದ್ರ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ವಾಲ್ಮೀಕಿ ನಿಗಮ ಆಕ್ರಮ ಹಣ ವರ್ಗಾವಣೆ ವಿಚಾರ ಕುರಿತು ಸಿಎಂ ಚರ್ಚಿಸಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಅನ್ನು ಸಚಿವ ನಾಗೇಂದ್ರ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಜಮೀರ್ ಸಹ ಉಪಸ್ಥಿತರಿದ್ದರು. ವಾಲ್ಮೀಕಿ ನಿಗಮದ 185 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪ್ರತಿಪಕ್ಷಗಳು ಬಿಗಿ ಪಟ್ಟು ಹಿಡಿದಿವೆ. ಬಿಜೆಪಿ ನಾಗೇಂದ್ರ ವಿರುದ್ಧ ರಣಕಹಳೆ ಮೊಳಗಿಸಿದೆ. ಈಗಾಗಲೇ ಈ ಪ್ರಕರಣಕ್ಕೆ ಸಿಬಿಐ ಎಂಟ್ರಿಯಾಗಿದೆ. ಹೀಗಾಗಿ ಏನಾದರೂ ಒಂದು ಕ್ರಮ ತೆಗೆದುಕೊಳ್ಳುವುದು ಸಿಎಂಗೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ನಾಗೇಂದ್ರರನ್ನು ಕರೆಸಿ ಚರ್ಚೆ ಮಾಡಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಈಗಾಗಲೇ ನೈತಿಕ ಹೊಣೆ ಹೊತ್ತು ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕಾಗಿತ್ತು ಎಂದು ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಸೂಚಿಸಿದ್ದಾರೆ. ಸಂಪುಟದ ಸಹೋದ್ಯೋಗಿಗಳೇ ಮುಗುಂ ಆಗಿದ್ದಾರೆ. ಹೀಗಾಗಿ, ಸಿಬಿಐಯಲ್ಲಿ ಎಫ್ಐಆರ್ ದಾಖಲು ಆಗುತ್ತಿದ್ದಂತೆ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
45 ಕೋಟಿ ರೂ. ಸೀಜ್
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ವರ್ಗಾವಣೆ ಕೇಸ್ ಸಂಬಂಧಿಸಿ SITಯಿಂದ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್‌ನಲ್ಲಿದ್ದ 45 ಕೋಟಿ ರೂ. ಸೀಜ್ ಮಾಡಲಾಗಿದೆ. ಬಂಧಿತ ಆರೋಪಿ ಸತ್ಯನಾರಾಯಣ್ ಒಡೆತನದ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ ಖಾತೆಗೆ ನಿಗಮದಿಂದ 94.73 ಕೋಟಿ ರೂ. ವರ್ಗಾವಣೆಯಾಗಿತ್ತು. ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ 94.73 ಕೋಟಿ ರೂ.ನಲ್ಲಿ ಬಹುಪಾಲು ಹಣ ಡ್ರಾ ಆಗಿದೆ. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್‌ಐಟಿ ತನಿಖೆ ಮುಂದುವರಿಸಿದೆ.
ಸದ್ಯ ಈ ಪ್ರಕರಣದಲ್ಲಿ ಇದುವರೆಗೆ ಐವರನ್ನು ಎಸ್‌ಐಟಿ ಬಂಧಿಸಿದೆ. ಪದ್ಮನಾಭ, ಪರಶುರಾಮ್, ನೆಕ್ಕುಂಟಿ ನಾಗರಾಜ್, ನಾಗೇಶ್ವರ ರಾವ್, ಸತ್ಯನಾರಾಯಣ ಬಂಧನವಾಗಿದೆ. ಐವರನ್ನು ಕಸ್ಟಡಿಗೆ ಪಡೆದು SIT ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: Valmiki Corporation Scam : ವಾಲ್ಮಿಕಿ ನಿಗಮ ಹಗರಣ; ಆಂಧ್ರದ ಫಸ್ಟ್ ಬ್ಯಾಂಕ್ ಅಧ್ಯಕ್ಷ . ಸಚಿವ ನಾಗೇಂದ್ರ ಆಪ್ತರ ಬಂಧನ