Site icon Vistara News

Valmiki Corporation Scam: ಸಚಿವ ನಾಗೇಂದ್ರ ಇಂದೇ ರಾಜೀನಾಮೆ: ಖಚಿತಪಡಿಸಿದ ಡಿಸಿಎಂ ಡಿಕೆಶಿ

Valmiki corporation Scam

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ (Valmiki Corporation Scam) ಹೆಸರು ಕೇಳಿಬಂದಿರುವ ಸಚಿವ ನಾಗೇಂದ್ರ (Minister B Nagendra) ಇಂದೇ ತಮ್ಮ ರಾಜೀನಾಮೆಯನ್ನು ಸಿಎಂಗೆ ತಲುಪಿಸಲಿದ್ದಾರೆ. ಈ ವಿಚಾರವನ್ನು ಡಿಸಿಎಂ ಡಿಕೆ ಶಿವಕುಮಾರ್‌ ಖಚಿತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿಕೆಶಿ ಅವರು, “ನಾಗೇಂದ್ರ ಸ್ವಯಂಪ್ರೇರಿತವಾಗಿ ರಾಜೀನಾಮೆಗೆ ಮುಂದಾಗಿದ್ದಾರೆ”. ಹಗರಣದಿಂದಾಗಿ ಪಕ್ಷ ಹಾಗೂ ಸರ್ಕಾರದ ಘನತೆಗೆ ಧಕ್ಕೆ ಆಗಬಾರದೆಂದು ನಾಗೇಂದ್ರ ಸ್ವಯಂ ಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ನಾನು, ಗೃಹ ಸಚಿವರು, ಸಚಿವ ನಾಗೇಂದ್ರ ಅವರ ಜತೆ ಚರ್ಚೆ ಮಾಡಿದ್ದೇವೆ. ಅವರು ಈ ಅಕ್ರಮದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಆದರೆ, ಪಕ್ಷದ ಹಾಗೂ ಸರ್ಕಾರದ ಘನತೆಗೆ ಧಕ್ಕೆ ಬರಬಾರದು ಎಂದು ಸ್ವತಃ ನಾಗೇಂದ್ರ ಅವರೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇಂದೇ ಅವರು ರಾಜೀನಾಮೆ ನೀಡಬಹುದು ಎಂದು ತಿಳಿಸಿದ್ದಾರೆ.

ಸರ್ಕಾರ ರಾಜೀನಾಮೆ ಸ್ವೀಕರಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ಮುಖ್ಯಮಂತ್ರಿಗಳು ಪಕ್ಷದ ಹೈಕಮಾಂಡ್ ಜತೆ ಚರ್ಚೆ ಮಾಡಿ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ನಾಗೇಂದ್ರ ಬೆಂಬಲಕ್ಕೆ ನಿಂತ ಸಿಎಂ ಸಿದ್ದರಾಮಯ್ಯ!

ವಾಲ್ಮೀಕಿ ನಿಗಮ ಹಗರಣದ ಹಿನ್ನೆಲೆಯಲ್ಲಿ (Valmiki Corporation Scam) ಸಚಿವ ಬಿ. ನಾಗೇಂದ್ರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ.

ಸಚಿವ ನಾಗೇಂದ್ರ ರಾಜೀನಾಮೆಗೆ ಸೂಚನೆ ಕೊಟ್ಟೀದ್ದೀರಾ ಎಂಬ ವಿಧಾನಸೌಧದಲ್ಲಿ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಪ್ರತಿಭಟನೆ, ಪಾದಯಾತ್ರೆ ಮಾಡುವವರು ಮಾಡಲಿ,. ಕರೆದು ಮಾತನಾಡಿದ ತಕ್ಷಣ ರಾಜೀನಾಮೆ ಕೊಡಿ ಎಂದರ್ಥವಲ್ಲ. ಪ್ರಕರಣದ ತನಿಖೆ ಆಗಲಿ, ವರದಿ ಬರಲಿ ಎಂದು ಹೇಳಿದ್ದಾರೆ.

ಬಿಜೆಪಿಯವರು ರಾಜಭವನಕ್ಕೆ ಹೋದರೆ ಹೋಗಲಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಕುರಿತ ತನಿಖೆಗೆ ಎಸ್ಐಟಿ ರಚನೆ ಆಗಿದೆ. ಎಸ್ಐಟಿಯವರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮುಗಿಯಲಿ ಎಂದು ಸಿಎಂ ಹೇಳಿದರು.

ನಾಗೇಂದ್ರರನ್ನು ಕರೆದು ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಎಲ್ಲ ಸಚಿವರನ್ನು ಕರೆದು ಮಾತನಾಡುತ್ತೇನೆ. ಅದರಂತೆ ನಾಗೇಂದ್ರ ಜತೆಗೂ ಮಾತನಾಡಿದ್ದೇನೆ ಎಂದರು. ಹಾಗಿದ್ದರೆ‌ ರಾಜೀನಾಮೆಗೆ ಸೂಚನೆ ನೀಡಿದ್ದೀರಾ ಎಂಬ ಪ್ರಶ್ನೆಗೆ, ಸಿಎಂ ಉತ್ತರಿಸದೇ ಮೌನಕ್ಕೆ ಶರಣಾದರು.

Exit mobile version