Site icon Vistara News

Valmiki Corporation Scam: ವಾಲ್ಮೀಕಿ ನಿಗಮ ಅಕ್ರಮ ಕೇಸ್‌; 16 ಕಂಪನಿಗಳಿಗೆ 80 ಕೋಟಿ ವರ್ಗಾವಣೆ, ಯಾರಿಗೆ ಎಷ್ಟು ಹಣ?

Valmiki Corporation Scam

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣದಲ್ಲಿ (Valmiki Corporation Scam) ಭ್ರಷ್ಟಾಚಾರ ಆರೋಪಗಳು ಕೇಳಿಬಂದಿರುವುದರಿಂದ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳು ಒತ್ತಾಯಿಸುತ್ತಿವೆ. ಹೀಗಾಗಿ ಅವ್ಯವಹಾರದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಈ ನಡುವೆ ಹಗರಣದಲ್ಲಿ ಒಟ್ಟು 16 ಕಂಪನಿಗಳಿಗೆ ಸುಮಾರು 80 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಆಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಬಹುಕೋಟಿ ಹಗರಣದಲ್ಲಿ ಸಚಿವ ನಾಗೇಂದ್ರ ತಲೆ ದಂಡ ಬಹುತೇಕ ಫಿಕ್ಸ್‌ ಎನ್ನಲಾಗುತ್ತಿದೆ. ಎಸ್‌ಐಟಿ ವರದಿ ಬಳಿಕವೂ ಸಿಬಿಐ ಎಂಟ್ರಿ ಬಹುತೇಕ ಖಚಿತ ಎನ್ನಲಾಗಿದೆ. ಯೂನಿಯನ್ ಬ್ಯಾಂಕ್ ದೂರಿನ ಅನ್ವಯ ಸಿಬಿಐ ಎಂಟ್ರಿ ಸಾಧ್ಯತೆ ಇದೆ. ಇನ್ನು ಪ್ರಕರಣದಲ್ಲಿ ಐಟಿ ಕಂಪನಿಗಳು, ಸೆಕ್ಯೂರಿಟಿ ಏಜೆನ್ಸಿಗಳು, ಡಿಟೆಕ್ಟಿವ್ ಕಂಪನಿಗಳು ಹಾಗೂ ಎಂಟು ಜನರ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಒಟ್ಟು 16 ಕಂಪನಿಗಳಿಗೆ 79.30 ಕೋಟಿ ವರ್ಗಾವಣೆಯಾಗಿದೆ ಎನ್ನಲಾಗಿದೆ.

ಐದು ಹಂತದಲ್ಲಿ ಹಣ ವರ್ಗಾವಣೆ

ಮಾರ್ಚ್ 6

ಮೊದಲ ಹಣ ವರ್ಗಾವಣೆ ಮಾರ್ಚ್ 6ರಂದು ನಡೆದಿದೆ. ನಾಲ್ಕು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ 20 ಕೋಟಿಯನ್ನು ಅಧಿಕಾರಿಗಳು ವರ್ಗಾಯಿಸಿದ್ದಾರೆ.

ಮಾರ್ಚ್ 11

ಎರಡನೇ ಹಣ ವರ್ಗಾವಣೆ ನಡೆದಿರೋದು ಮಾರ್ಚ್ 11 ರಂದು. ಎರಡು ಕಂಪನಿಗಳಿಗೆ 9 ಕೋಟಿ 60 ಲಕ್ಷ ವರ್ಗಾವಣೆ ಮಾಡಲಾಗಿದೆ.

ಮಾರ್ಚ್ 30

ಮೂರನೇ ವರ್ಗಾವಣೆ ಮಾರ್ಚ್ 30ರಂದು ನಡೆದಿದೆ. ಬರೋಬ್ಬರಿ 40.10 ಕೋಟಿ ಮೊತ್ತ ವರ್ಗಾವಣೆ ಮಾಡಲಾಗಿದೆ ಒಟ್ಟು ಎಂಟು ಕಂಪನಿಗಳಿಗೆ ನಾಲ್ಕು ಕೋಟಿ 10 ಲಕ್ಷ ವರ್ಗಾವಣೆ ಆಗಿದೆ.

ಏಪ್ರಿಲ್ 23

ನಾಲ್ಕನೇ ಹಣ ವರ್ಗಾವಣೆ ಏಪ್ರಿಲ್ 2ರಂದು ಆಗಿದೆ. ಒಂದು ಕಂಪನಿಯ ಅಕೌಂಟ್‌ಗೆ 4.50 ಕೋಟಿ ವರ್ಗಾವಣೆ ಮಾಡಲಾಗಿದೆ

ಮೇ 6

ಐದನೇ ಹಣ ವರ್ಗಾವಣೆ ಮೇ 6 ರಂದು ನಡೆದಿದೆ. 5.10 ಕೋಟಿ ವರ್ಗಾವಣೆ ಮಾಡಲಾಗಿದೆ. ಒಂದು ಕಂಪನಿಯ ಅಕೌಂಟ್‌ಗೆ ಹಣ ವರ್ಗಾವಣೆ ಆಗಿದೆ.

ಯಾವ್ಯಾವ ಕಂಪನಿಗೆ ಎಷ್ಟೆಷ್ಟು ಹಣ ವರ್ಗಾವಣೆ?

  1. ಟಾಲೆನ್ ಕ್ಯೂ ಸಾಫ್ಟ್‌ವೇರ್ ಇಂಡಿಯಾ ಪ್ರೈ. ಲಿ. – 5,10,00,000 ರೂ
  2. ಸಿಸ್ಟಮ್ ಅಂಡ್ ಸರ್ವೀಸ್ ಕಂಪೆನಿ – 4,55,00,000 ರೂ
  3. ರಾಮ್ ಎಂಟರ್‌ಪ್ರೈಸಸ್ – 5,07,00,000 ರೂ.
  4. ಸ್ಕಿಲ್ ಮ್ಯಾಪ್ ಟ್ರೈನಿಂಗ್ ಅಂಡ್ ಸರ್ವಿಸಸ್ ಪ್ರೈ. ಲಿ. – 4,84,00,000 ರೂ.
  5. ಸ್ವಾಪ್‌ ಡಿಸೈನ್ ಪ್ರೈ. ಲಿ – 5,15,00,000 ರೂ.
  6. ಜಿ.ಎನ್ ಇಂಡಸ್ಟ್ರೀಸ್ – 4,42,00,000 ರೂ.
  7. ನಾವೆಲ್ ಸೆಕ್ಯುರಿಟಿ ಸರ್ವಿಸಸ್ ಪ್ರೈ. ಲಿ. – 4,56,00,000 ರೂ.
  8. ಸುಜಲ್ ಎಂಟರ್‌ಪ್ರೈಸಸ್ – 5,63,00000 ರೂ.
  9. ಗ್ರಾಬ್ ಎ ಗ್ರಬ್ ಸರ್ವಿಸಸ್ ಪ್ರೈ. ಲಿ. – 5,88,00,000 ರೂ.
  10. V6 ಬ್ಯುಸಿನೆಸ್ ಸರ್ವಿಸಸ್ – 4,50,01,500 ರೂ.
  11. ನಿತ್ಯಾ ಸೆಕ್ಯುರಿಟಿ ಸರ್ವಿಸಸ್ – 4,47,50,000 ರೂ.
  12. ವೋಲ್ಟಾ ಟೆಕ್ನಾಲಜಿ ಸರ್ವಿಸಸ್ – 5,12,50,000 ರೂ.
  13. ಅಕಾರ್ಡ್ ಬ್ಯುಸಿನೆಸ್ ಸರ್ವಿಸಸ್ – 5,46,85,000 ರೂ.
  14. ಹ್ಯಾಪಿಯಸ್ಟ್ ಮೈಂಡ್ಸ್ ಟೆಕ್ನಾಲಜಿ ಲಿಮಿಟೆಡ್ – 4,53,15,000 ರೂ.
  15. ಮ್ಯಾನ್ಹು ಎಂಟರ್‌ಪ್ರೈಸಸ್ – 5,01,50,000 ರೂ.
  16. ವೈ.ಎಂ ಎಂಟರ್‌ಪ್ರೈಸಸ್ – 4,98,50,000 ರೂ.

ಎಂಡಿ, ಲೆಕ್ಕಾಧಿಕಾರಿ ಬಂಧನ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಎಸ್ಐಟಿ ಅಧಿಕಾರಿಗಳು ನಿಗಮದ ಅಧಿಕಾರಿಗಳನ್ನು ಬಂಧಿಸಿದ್ದಾರೆ. ವ್ಯವಸ್ಥಾಪಕ ನಿರ್ದೇಶಕ ಜೆ. ಜಿ. ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರುಶುರಾಮ್‌ ಜಿ. ದುರ್ಗಣ್ಣನವರ್ ಬಂಧಿತರು. ಹಗರಣ ಬೆಳಕಿಗೆ ಬಂದ ನಂತರ ಮೇ 30ರಂದು ಇಬ್ಬರನ್ನೂ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಇಲಾಖಾ ವಿಚಾರಣೆಗೆ ಕಾಯ್ದಿರಿಸಿ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಪ್ರಕರಣ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿದ್ದ ಇಬ್ಬರನ್ನೂ ಅಧಿಕಾರಿಗಳು ಬಂಧಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ

ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಬ್ಯಾಂಕ್‌ಗಳಿಗೆ ವರ್ಗಾವಣೆ ಆಗಿರುವ ಮಾಹಿತಿ ಬಿಡುಗಡೆ ಮಾಡಿದ ಬಿಜೆಪಿ, ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದೆ.

ಎಕ್ಸ್‌ ವೇದಿಕೆಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಭ್ರಷ್ಟಾತಿ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ತಮ್ಮ ಭ್ರಷ್ಟ ಸಚಿವರನ್ನು ಕಾಪಾಡಿಕೊಳ್ಳಲು ಇದೀಗ ಬೃಹನ್ನಳೆ ನಾಟಕ ಆರಂಭಿಸಿದೆ. ಪರಿಶಿಷ್ಟ ಪಂಗಡಕ್ಕೆ ಸೇರಬೇಕಾಗಿದ್ದ ಅಷ್ಟೊಂದು ಕೋಟಿ ಹಣ ಮುಖ್ಯಮಂತ್ರಿ ಹಾಗೂ ಸಚಿವರ ಸೂಚನೆ ಇಲ್ಲದೆ ತೆಲಂಗಾಣದ ಯಾವುದೋ ಕಂಪೆನಿಗೆ ವರ್ಗಾವಣೆ ಆಗಲು ಹೇಗೆ ಸಾಧ್ಯ? ಸಿಎಂ ಸಿದ್ದರಾಮಯ್ಯನವರೇ, ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ ನೀವು ಕೂಡ ಅದೇ ಕೆಲಸ ಮಾಡುತ್ತಿದ್ದೀರಿ. ಮೊದಲು ಆ ಕೆಲಸ ಬಿಡಿ ಈ ಹಗರಣದಲ್ಲಿ ನಿಮಗೆ ಸಿಕ್ಕಿರುವ ಪಾಲೆಷ್ಟು ಹೇಳಿ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ | ವಾಲ್ಮೀಕಿ ನಿಗಮದ ಚಂದ್ರಶೇಖರ್‌ ಆತ್ಮಹತ್ಯೆ, 87 ಕೋಟಿ ರೂ. ಹಗರಣ; ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯುವ ಬದಲು, ಅಕ್ರಮ ಹಣ ವರ್ಗಾವಣೆ ಸಂಬಂಧ ಬ್ಯಾಂಕ್‌ಗಳ ಮೇಲೆ ಮತ್ತು ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಕ್ರಮ ಹಣ ವರ್ಗಾವಣೆ ಸಂಬಂಧ CBI ಗೆ ದೂರು ದಾಖಲಿಸಿದ್ದರೂ, ಸಿದ್ದರಾಮಯ್ಯ ಸರ್ಕಾರ ಮಾತ್ರ SIT, CID ತನಿಖೆ ಎಂದು ಕಾಲಹರಣ ಮಾಡಿ #ATMSarkaraಕ್ಕೆ ಕ್ಲೀನ್ ಚಿಟ್ ಕೊಟ್ಟಕೊಳ್ಳುವ ವಿಫಲ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದೆ.

Exit mobile version