Site icon Vistara News

ವಿಧಾನಸಭೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ ಖಚಿತ; ತಂದೆಯ ಕ್ಷೇತ್ರದಿಂದಲೇ ʼಶಿಕಾರಿʼ?

vijayendra by bjp

ಬೆಂಗಳೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈ ಮಾತನ್ನು ಸ್ವತಃ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತುಮಕೂರಿನಲ್ಲಿ ಖಚಿತಪಡಿಸಿದ್ದಾರೆ.

ತುಮಕೂರಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘಧ ಫಧಾಧಿಕಾರಿಗಳ ಪದಗ್ರಹಣ ಸಮಾರಂಭದ ನಂತರ ಸುದ್ದಿಗಾರರ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿದ್ದಾರೆ. ವಿಜಯೇಂದ್ರ ತುಮಕೂರಿನ ಗುಬ್ಬಿಯಿಂದ ಸ್ಪರ್ಧೆ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವುದು ಇನ್ನೂ ನಿರ್ಧಾರ ಆಗಿಲ್ಲ. ಆದರೆ ಸ್ಪರ್ಧೆ ಮಾಡುತ್ತಾರೆ. ಕ್ಷೇತ್ರದ ಕುರಿತು ಇನ್ನೂ ನಿರ್ಧಾರ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ | ಆಡುಮುಟ್ಟದ ಸೊಪ್ಪಿಲ್ಲ, ಬಿಎಸ್‌ವೈ ಮುಟ್ಟದ ಕ್ಷೇತ್ರವೇ ಇಲ್ಲ: ತಂದೆಯನ್ನು ವಿಜಯೇಂದ್ರ ಹಾಡಿ ಹೊಗಳಿದ್ದೇಕೆ?

ಯಡಿಯೂರಪ್ಪ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗುವ ಸಾಧ್ಯತೆಯಿದೆ. 2018ರ ವಿಧಾನಸಭೆ ಚುನಾವಣೆಗೂ ಮುನ್ನ ವಿಜಯೇಂದ್ರ ಯಾವುದೇ ಸಂಘಟನಾತ್ಮಕ ಹೊಣೆ ಹೊತ್ತಿರಲಿಲ್ಲ. ಹಳೆ ಮೈಸೂರಿನಲ್ಲಿ ಬಿಜೆಪಿ ಬಲವಾಗಿಲ್ಲ, ಅಲ್ಲಿ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸಿದರೆ ಒಳ್ಳೆಯದು ಎಂದು ಯಡಿಯೂರಪ್ಪ ಯೋಚಿಸಿದ್ದರು. ಚುನಾವಣೆ ಟಿಕೆಟ್‌ ಘೋಷಣೆ ಆಗುವುದಕ್ಕೂ ಮುನ್ನವೇ ವಿಜಯೇಂದ್ರ ಕಣಕ್ಕಿಳಿದು ವರುಣಾದಲ್ಲಿ ಹವಾ ಸೃಷ್ಟಿಸಿದ್ದರು. ಇಲ್ಲಿ ವಿಜಯೇಂದ್ರ ಗೆದ್ದರೆ ತಮ್ಮ ಉತ್ತರಾಧಿಕಾರಿಯಾಗಲು ದಾರಿ ಸುಗಮ ಎಂಬ ಲೆಕ್ಕಾಚಾರವನ್ನೂ ಬಿಎಸ್‌ವೈ ಹೊಂದಿದ್ದರು.

ಆದರೆ ನಾಮಪತ್ರ ಸಲ್ಲಿಕೆಗೆ ಒಂದು ದಿನ ಇರುವಂತೆ ಬಿಜೆಪಿ ವರಿಷ್ಠರು ವಿಜಯೇಂದ್ರಗೆ ಟಿಕೆಟ್‌ ನಿರಾಕರಿಸಿದರು. ಸ್ವತಃ ಯಡಿಯೂರಪ್ಪ ಅವರೇ ವರುಣಾಕ್ಕೆ ತೆರಳಿ ಬಹಿರಂಗವಾಗಿ ಈ ವಿಚಾರವನ್ನು ಘೋಷಣೆ ಮಾಡುವಂತೆ ಮಾಡಲಾಯಿತು.

ಇತ್ತೀಚೆಗಷ್ಟೆ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಸದಸ್ಯರನ್ನು ಆಯ್ಕೆ ಮಾಡುವ ಸಮಯದಲ್ಲಿ ವಿಜಯೇಂದ್ರ ಅವರನ್ನು ಹೇಗಾದರೂ ಮಾಡಿ ಎಂಎಲ್‌ಸಿ ಮಾಡಿಸುವ ಪ್ರಯತ್ನ ನಡೆಯಿತು. ಆದರೆ ಬಿಜೆಪಿ ದೆಹಲಿ ಮಟ್ಟದಲ್ಲಿ ಮತ್ತೆ ತಿರಸ್ಕೃತವಾಯಿತು. ಇನ್ನೇನಿದ್ದರೂ 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಪಡೆಯುವುದು ಮಾತ್ರ ಉಳಿದಿರುವ ಅವಕಾಶ.

ಶಿಕಾರಿಪುರವೇ ಸೇಫ್‌

ವಿಜಯೇಂದ್ರ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಚರ್ಚೆ ಮತ್ತೆ ಶುರುವಾಗಿದೆ. 2018ರಲ್ಲಿ ಕೈತಪ್ಪಿದ್ದ ವರುಣಾ ಕ್ಷೇತ್ರದಲ್ಲಿ ಹೆಚ್ಚಿನ ಲಿಂಗಾಯತರಿದ್ದು, ಅಲ್ಲಿಯೇ ಸ್ಪರ್ಧೆ ಮಾಡಿ ಎಂದು ಕಾರ್ಯಕರ್ತರು ದುಂಬಾಲು ಬಿದ್ದಿದ್ದಾರೆ. ಆದರೆ ಈ ವಿಚಾರ ಮಾಜಿ ಸಿಎಂ ಸಿದ್ದರಾಮಯ್ಯ ನಿದ್ದೆಗೆಡಿಸಿದೆ. ತಮ್ಮ ಪುತ್ರನ ಭವಿಷ್ಯ ಎಲ್ಲಿ ಡೋಲಾಯಮಾನವಾಗುತ್ತದೋ ಎಂದು ಚಿಂತೆಗೀಡಾಗಿದ್ದಾರೆ. ಇತ್ತೀಚೆಗಷ್ಟೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ಅವರನ್ನು ʼಆಕಸ್ಮಿಕʼ ಭೇಟಿ ಮಾಡಿದ ಸಂದರ್ಭದಲ್ಲಿ ಈ ವಿಚಾರ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ಪುತ್ರನ ಕ್ಷೇತ್ರದಲ್ಲಿ ಸ್ಪರ್ಧೆ ಬೇಡ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ವಿಜಯೇಂದ್ರ ಅವರು ತುಮಕೂರಿನ ಗುಬ್ಬಿ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎಂಬ ಚರ್ಚೆಗಳು ಕೆಲ ದಿನದಿಂದ ನಡೆಯುತ್ತಿವೆ. ಆದರೆ ಬೇರೆ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು ಅಲ್ಲಿ ಈಗಾಗಲೆ ಇರುವ ಸ್ಥಳೀಯ ಕಾರ್ಯಕರ್ತರಿಗಕಿರಿಕಿರಿ ಉಂಟು ಮಾಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಈಗಾಗಲೆ ಎರಡು ಬಾರಿ ಆಫರ್‌ ರಿಜೆಕ್ಟ್‌ ಮಾಡಿರುವ ಬಿಜೆಪಿ ವರಿಷ್ಟರು ಈ ಬಾರಿಯೂ ಅದೇ ನಡೆ ಅನುಸರಿಸುವುದಿಲ್ಲ ಎನ್ನಲು ಯಾವುದೇ ಗ್ಯಾರಂಟಿ ಇಲ್ಲ. ಅದೂ ಅಲ್ಲದೆ, ಅತ್ತ ಯಡಿಯೂರಪ್ಪ ಅಥವಾ ಕುಟುಂಬದ ಇನ್ನೊಬ್ಬ ಸದಸ್ಯರಿಗೆ ಶಿಕಾರಿಪುರವನ್ನು ಕೇಳಿ ಮತ್ತೊಂದು ಟಿಕೆಟ್‌ ಬೇಡಿಕೆ ಇಟ್ಟರೆ ಈಡೇರುವುದು ಬಹುತೇಕ ಅಸಾಧ್ಯ. ಹಾಗಾಗಿ ವಿಜಯೇಂದ್ರ ಸೇಫ್‌ ಸೀಟ್‌ ಹುಡುಕಿಕೊಂಡಿದ್ದಾರೆ.

ಇದನ್ನೂ ಓದಿ | ಪಕ್ಷದ ತೀರ್ಮಾನವೇ ಅಂತಿಮ ಎಂದ ಬಿ.ವೈ. ವಿಜಯೇಂದ್ರ

ಸದ್ಯ ಬಿ.ಎಸ್‌. ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಶಿಕಾರಿಪುರ ಕ್ಷೇತ್ರದಿಂದಲೇ ಶಾಸಕರಾಗುವ ಪಯಣ ಆರಂಭಿಸಲು ಬಹುತೇಕ ನಿರ್ಧಾರ ಮಾಡಿದ್ದಾರೆ. ಈಗಾಗಲೆ ವಯಸ್ಸಿನ ಕಾರಣಕ್ಕೆ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇನ್ನೂ ಹತ್ತು ವರ್ಷ ರಾಜಕಾರಣದಲ್ಲಿರುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರಾದರೂ ಶಾಸಕನಾಗಿಯೇ ಇರುತ್ತೇನೆ ಎಂದಿಲ್ಲ.

ಶಿಕಾರಿಪುರದಿಂದ ತಾವು ಸ್ಪರ್ಧೆ ಮಾಡುವುದಿಲ್ಲ, ಅದರ ಬದಲಿಗೆ ವಿಜಯೇಂದ್ರಗೆ ಟಿಕೆಟ್‌ ನೀಡಿ ಎಂದು ಯಡಿಯೂರಪ್ಪ ಹೇಳಿದರೆ ವರಿಷ್ಠರು ತಿರಸ್ಕಾರ ಮಾಡುವುದು ಬಹುತೇಕ ಅಸಾಧ್ಯ. ಅದಕ್ಕೂ ಮಿಗಿಲಾಗಿ, ಯಡಯೂರಪ್ಪ ಅವರ ಕ್ಷೇತ್ರವನ್ನೇ ಗೆದ್ದರೆ, ಯಡಿಯೂರಪ್ಪ ಉತ್ತರಾಧಿಕಾರಿ ವಿಜಯೇಂದ್ರ ಎಂಬ ಸಂದೇಶವನ್ನು ನೀಡಲು ಸಹಕಾರವಾಗುತ್ತದೆ. ಬೇರೆ ಕಾರ್ಯಕರ್ತರಿಗೆ ಕಿರಿಕಿರಿಯಾಗುವ ಸಂದರ್ಭವೂ ಬರುವುದಿಲ್ಲ. ಇದೆಲ್ಲದರಿಂದಾಗಿ ಶಿಕಾರಿಪುರವನ್ನೇ ಆಯ್ಕೆ ಮಾಡಿಕೊಳ್ಳಲು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಹುತೇಕ ನಿರ್ಧಾರ ಮಾಡಿದ್ದು, ಕೆಲ ಸಮಯದಲ್ಲೆ ಬಹಿರಂಗವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ವಿಜಯೇಂದ್ರನಿಗೆ ಸಾಮರ್ಥ್ಯ ಇದೆ, ಭವಿಷ್ಯದಲ್ಲಿ ಅವಕಾಶ ಸಿಗಲಿದೆ: BSY

Exit mobile version