ಕಾಂಗ್ರೆಸ್ನ ಇಬ್ಬರು ಮುಖಂಡರ ನಡುವಿನ ಸಂಭಾಷಣೆ ಇಲ್ಲಿದೆ...
ಬೆಂಗಳೂರು: ಕಾಂಗ್ರೆಸ್ ಪಕ್ಷವು 2014ರ ಬಳಿಕ ದೇಶಾದ್ಯಂತ ಅವನತಿಯ ಹಾದಿಯಲ್ಲಿ ಸಾಗುತ್ತಿದೆ. ಕಾಂಗ್ರೆಸ್ಗೆ ಈ ಗತಿ ಬರಲು ಕಾರಣ ಏನು? ಪ್ರಧಾನಿ ನರೇಂದ್ರ ಮೋದಿಯ ಹವಾ ಇದಕ್ಕೆ ಕಾರಣವೇ ಅಥವಾ ಇದಕ್ಕೆ ಕಾಂಗ್ರೆಸ್ನ ಸ್ವಯಂಕೃತ ಪ್ರಮಾದಗಳೇ ಹೊಣೆಯೇ? ಕಾಂಗ್ರೆಸ್ನಲ್ಲಿ ಹಲವು ದಶಕಗಳಿಂದ ನಾನಾ ಹುದ್ದೆಗಳನ್ನು ನಿಭಾಯಿಸಿರುವ ಹಿರಿಯ ನಾಯಕಿ ಮತ್ತು ಪಕ್ಷದ ಮುಖಂಡರೊಬ್ಬರ ನಡುವಿನ ದೂರವಾಣಿ ಸಂಭಾಷಣೆ (Viral Audio) ಈ ಪ್ರಶ್ನೆಗಳಿಗೆ “ಪ್ರಾಮಾಣಿಕ ಉತ್ತರʼವನ್ನು ಕೊಟ್ಟಿದೆ.
ತಮ್ಮ ಕಣ್ಣೆದುರೇ ದೊಡ್ಡ ಪಕ್ಷವೊಂದು ಪತನಗೊಳ್ಳುತ್ತಿರುವುದನ್ನು ಕಂಡು ಆಗುವ ಅಸಹಾಯಕತೆ ಈ ನಾಯಕಿಯ ದನಿಯಲ್ಲಿದೆ. ಅವರು ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಬೆಳವಣಿಗೆ ಬಗ್ಗೆ ಎಳೆಎಳೆಯಾಗಿ ಚರ್ಚಿಸಿದ್ದಲ್ಲದೆ, ಸೋಲಿಗೆ ಪ್ರಮುಖ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.
ಈ ಹಿರಿಯ ನಾಯಕಿ ಮತ್ತು ಮುಖಂಡರ ನಡುವಿನ ಸಂಭಾಷಣೆಯ ಸಾರ ಹೀಗಿದೆ:
- ಜನ ನಮ್ಮನ್ನು ತಿರಸ್ಕರಿಸಿದ್ದಾರೆ. ನಮ್ಮ ರಕ್ಷಣೆಗೆ ಈಗ ಯಾರೂ ಬರಲು ಸಾಧ್ಯವಿಲ್ಲ.
- ಇಷ್ಟು ದೊಡ್ಡ ಪಾರ್ಟಿಯ ಸಂಸದರ ಸಂಖ್ಯೆ 44ಕ್ಕೆ ಇಳಿದಿದೆ. ಹೀಗೇ ಆದರೆ ಮುಂದೆ ನಮ್ಮ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನೇ ಚುನಾವಣೆ ಆಯೋಗ ರದ್ದು ಮಾಡಬಹುದು.
- ಪದಾಧಿಕಾರಿಗಳ ಪಟ್ಟಿ, ನೇಮಕ ಯಾವುದನ್ನೂ ನಮ್ಮವರು ಸರಿಯಾಗಿ ಮಾಡುತ್ತಿಲ್ಲ. ಪ್ರತಿಯೊಂದಕ್ಕೂ, ಇದು ಎಐಸಿಸಿ ಆದೇಶ ಎನ್ನುತ್ತಾರೆ. ಇದರಿಂದ ಸೋನಿಯಾ ಗಾಂಧಿ ಅವರಿಗೂ ಕೆಟ್ಟ ಹೆಸರು.
- ಮುಂದೆ ನಮಗೆ ಅಭ್ಯರ್ಥಿಗಳು ಸಿಗೋದೂ ಕಷ್ಟ ಇದೆ. ಕಾಂಗ್ರೆಸ್ನಿಂದ ನಿಂತು ಸೋಲೋದು ಯಾರಿಗೆ ಬೇಕಾಗಿದೆ?
- ಪಕ್ಷದಿಂದ ಈಗ ದುಡ್ಡೂ ಬರ್ತಾ ಇಲ್ಲ. ಅದೆಲ್ಲ ಸೀತಾರಾಮ ಕೇಸರಿ, ನರಸಿಂಹ ರಾವ್ ಕಾಲಕ್ಕೇ ಮುಗಿದು ಹೋಯ್ತು. ಈಗೇನಿದ್ದರೂ ದುಡ್ಡು ತಗೊಂಡು ಟಿಕೆಟ್ ಕೊಡೋದು.
- ನಮ್ಮವರೀಗ ಪ್ರತಿಯೊಂದಕ್ಕೂ ಪ್ರಧಾನಮಂತ್ರಿಯನ್ನು ಬೈಯೋದು, ಹೋಮ್ ಮಿನಿಸ್ಟರ್ ಅವರನ್ನು-ಫಿನಾನ್ಸ್ ಮಿನಿಸ್ಟರ್ ಅವರನ್ನು, ಕೇಂದ್ರ ಸರ್ಕಾರವನ್ನು ಟೀಕಿಸೋದು ಮಾಡ್ತಾ ಇದ್ದಾರೆ. ಹೀಗೆ ಮಾಡಿದರೆ ನಮ್ಮ ಪಕ್ಷ ಮತ್ತೆ ಮೇಲೇಳಲು ಸಾಧ್ಯವೇ ಇಲ್ಲ. ನಾವು ಹೀಗೆ ಮಾಡಬಾರದು. ನಾವು ಸಂಘಟನೆಯಲ್ಲಿ ಸ್ಟ್ರಾಂಗ್ ಆದರೆ, ಸಹಜವಾಗಿಯೇ ಬಿಜೆಪಿ ವೀಕ್ ಆಗುತ್ತದೆ.
- ಇನ್ನೂ 10 ವರ್ಷ ನಮಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಯೋಗಿ ಎಷ್ಟೊಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅಯೋಧ್ಯೆ ಮತ್ತು ಕಾಶಿಯ ಚಿತ್ರಣವನ್ನೇ ಬದಲಿಸಿದ್ದಾರೆ. 30 ಮೆಡಿಕಲ್ ಕಾಲೇಜ್ ಮಾಡ್ತಾ ಇದ್ದಾರೆ. ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಘಟಕ ಸ್ಥಾಪಿಸಿದ್ದಾರೆ. ಅಲ್ಲಿಯ ಜನ ಈಗ ಯೋಗಿ ಪರವಾಗಿದ್ದಾರೆ.
- ಅವರು ಯೋಗಿ, ಯಾವುದೇ ಸ್ವಾರ್ಥ ಇಲ್ಲ. ನಮ್ಮವರೆಲ್ಲ ಬರೀ ಭೋಗಿ.
- ನಮಗೆ ಸುದೀರ್ಘ ಅವಕಾಶ ಇದ್ದಾಗ ನಾವೂ ಈ ರೀತಿ ಅಭಿವೃದ್ಧಿ ಕಾರ್ಯ ಮಾಡಬಹುದಿತ್ತು. ಆದರೆ, ಇಷ್ಟು ವರ್ಷ ಏನೂ ಮಾಡಲಿಲ್ಲ. ಇಡೀ ದೇಶವನ್ನು ನಾವು ಹಾಳುಗೆಡವಿದೆವು.
- ಇಂದಿರಾಗಾಂಧಿ ಕಾಲದಿಂದಲೂ ನಮ್ಮ ಪಕ್ಷದಲ್ಲಿ ಲೋಕಲ್ ಲೀಡರ್ಗಳನ್ನು ಬೆಳೆಯಲು ಬಿಡಲಿಲ್ಲ. ಹಾಗಾಗಿ ಪಕ್ಷಕ್ಕೆ ಇಂದು ಈ ಸ್ಥಿತಿ ಬಂದಿದೆ.