ಮೈಸೂರು: ಮೇಲ್ವರ್ಗದವರಿಗೆ ಮೀಸಲಾತಿ ಕೊಟ್ಟಿರುವುದು ಸಂವಿಧಾನ ವಿರೋಧಿ ನೀತಿಯಾಗಿದೆ. ಬ್ರಾಹ್ಮಣ ಸಮುದಾಯಕ್ಕೆ ಮೀಸಲಾತಿ ಕೊಡಲಾಗಿದೆ. ಇದು ಸರಿಯಾದ ಕ್ರಮ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹೆಗ್ಗಡದೇವನಕೋಟೆಯಲ್ಲಿ ಗುರುವಾರ (ಅ.೨೭) ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೇಲ್ವರ್ಗದ ಜನರಿಗೆ ಮೀಸಲಾತಿಯನ್ನು ಕೊಟ್ಟಿದ್ದರ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ವಿಶ್ವಕರ್ಮ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಾಡಿದವನು ನಾನು. ಅವಕಾಶ ಸಿಕ್ಕಿದರೆ ನಿಮ್ಮ ಸಮುದಾಯಕ್ಕೆ ಹೆಚ್ಚಿನ ಅನುದಾನ ಕೊಡುತ್ತೇನೆ. ವಿಶ್ವಕರ್ಮ ಜಯಂತಿ ಆಚರಣೆ ಘೋಷಣೆ ಮಾಡಿದವನೂ ನಾನೇ. ಮುಂದೆ ನನಗೆ ಅವಕಾಶ ಸಿಕ್ಕರೆ ಹೆಚ್ಚಿನ ಅನುದಾನ ಕೊಡುತ್ತೇನೆ. ವಿಶ್ವಕರ್ಮ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇದೆ. ಕುಲಶಾಸ್ತ್ರ ಅಧ್ಯಯನ ವರದಿ ಬರಲಿ. ಅದನ್ನು ನೋಡಿಕೊಂಡು ನಿರ್ಧಾರ ಮಾಡೋಣ. ಸಮಾಜ ನಿಂತ ನೀರಾಗಿದೆ. ಚಾಲನಾ ಶಕ್ತಿ ಇಲ್ಲದ ಸಮುದಾಯಗಳು ಅಭಿವೃದ್ಧಿ ಆಗವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ | SCST ಮೀಸಲಾತಿ | ಕಾಕಾ ಕಾಲೇಲ್ಕರ್ ಸಮಿತಿಯಿಂದ ಮಂಡಲ್‌ವರೆಗೆ BJP ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ
ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ಇದೆ. ಇದು ಹೇಗೆ ಹುಟ್ಟಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಾವೆಲ್ಲರೂ ಮನುಷ್ಯರು. ಸದ್ಯ ದೇಶದಲ್ಲಿ ರಾಜಪ್ರಭುತ್ವ ಇಲ್ಲ. ನಮಗೆ ಸ್ವಾತಂತ್ರ್ಯ ಸಿಕ್ಕ ಮೇಲೆ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ. ಎಲ್ಲರಿಗೂ ಸಮಾನ ಹಕ್ಕುಗಳು ಸಿಕ್ಕಿವೆ. ಇವೆಲ್ಲದರ ಹೊರತಾಗಿಯೂ ಜಾತಿ ವ್ಯವಸ್ಥೆ ಜೀವಂತವಾಗಿದೆ. ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದ್ದರೂ ಕೆಲವರಿಗೆ ಮಾತ್ರ ನ್ಯಾಯ ಸಿಕ್ಕಿದೆ ಎಂದು ಹೇಳಿದರು.
ವಿಶ್ವಕರ್ಮರಿಗೆ ವಿಶೇಷವಾದ ನೈಪುಣ್ಯತೆ ಇದೆ. ಕಾಯಕದಲ್ಲಿ ನಿರತರಾದ ಕಾರಣ ಶಿಕ್ಷಣದಿಂದ ವಂಚಿತರಾದರು. ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯರನ್ನು ಬಿಟ್ಟರೆ ಬೇರೆ ವರ್ಗದವರಿಗೆ ಶಿಕ್ಷಣ ಕಲಿಯುವ ಅವಕಾಶ ಸಿಗಲಿಲ್ಲ. ನಮ್ಮ ಅಪ್ಪ, ಅಮ್ಮ ವಿದ್ಯಾವಂತರಲ್ಲ. ನನಗ ಶಿಕ್ಷಣ ಸಿಕ್ಕಿತು. ಹೀಗಾಗಿ ನಾನು ಲಾಯರ್ ಆದೆ, ಮುಖ್ಯಮಂತ್ರಿಯಾದೆ. ಈ ಸಂವಿಧಾನ ಇರಲಿಲ್ಲವಾಗಿದ್ದರೆ, ಮೋದಿ ಪ್ರಧಾನ ಮಂತ್ರಿಯಾಗಲು ಸಾಧ್ಯವಿರಲಿಲ್ಲ. ಸಂವಿಧಾನ ಬೇಡವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕುಟೀಲ್ ಹೇಳಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ವಿಶೇಷ ಮೀಸಲಾತಿ ಬೇಕೆಂದು ವಿಶ್ವಕರ್ಮ ಮುಖಂಡ ಕೆ.ಪಿ. ನಂಜುಂಡಿ ಕೇಳಿದ್ದಾರೆ. ವಿಶ್ವಕರ್ಮರಲ್ಲಿ ಬುದ್ಧಿವಂತರಿದ್ದಾರೆ. ಆದರೆ, ಶಿಕ್ಷಣದಿಂದ ವಂಚಿತರಾಗಿದ್ದೀರಿ. ನಿಮ್ಮ ಮಕ್ಕಳು ಕೂಡ ವೈದ್ಯರು, ಶಿಕ್ಷಕರಾಗಬೇಕು. ವಿದ್ಯೆ ಯಾರಪ್ಪನ ಮನೆಯ ಸ್ವತ್ತಲ್ಲ. ಜಾತಿಯಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲರಿಗೂ ಅವಕಾಶ ಮಾಡಿಕೊಟ್ಟೆ. ರಾಜಕೀಯ ಅಧಿಕಾರ ಬಹಳ ಪ್ರಬಲವಾದ ಅಸ್ತ್ರ.
ನಿಮ್ಮ ಸಮುದಾಯದಲ್ಲಿ ಶಾಸಕರು ಕೂಡ ಆಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ | SCST ಮೀಸಲಾತಿ ಕಣ್ಣೊರೆಸುವ ತಂತ್ರ ಎಂದ ಸಿದ್ದರಾಮಯ್ಯ
ನನ್ನ ಕಾಲದಲ್ಲಿ ಯಾವ ಜಯಂತಿಗಳಿಗೂ ಸರ್ಕಾರಿ ರಜೆ ಘೋಷಣೆ ಮಾಡಲಿಲ್ಲ. ಬದಲಾಗಿ ಕಾರ್ಯಕ್ರಮ ಮಾಡಲು ಸೂಚನೆ ಕೊಟ್ಟೆ. ಮತ್ತೆ ನಮಗೆ ಅವಕಾಶ ಸಿಕ್ಕಿದರೆ ನಿಮ್ಮ ಜನಾಂಗಕ್ಕೆ ಹೆಚ್ಚು ಅವಕಾಶ ಕೊಡುತ್ತೇವೆ ಎಂದು ಹೇಳಿದರು.
ಮುಖಾಮುಖಿಯಾದರೂ ಮಾತನಾಡದ ಗುರು-ಶಿಷ್ಯರು
ಒಂದೇ ವೇದಿಕೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ. ದೇವೇಗೌಡ ಕಾಣಿಸಿಕೊಂಡರೂ ಪರಸ್ಪರ ಮಾತುಕತೆ ಇರಲಿಲ್ಲ. ಸಿದ್ದರಾಮಯ್ಯ ಅವರನ್ನು ಕಂಡು ದೂರದಲ್ಲೇ ಜಿಟಿಡಿ ಕೈ ಮುಗಿದರು. ಅಲ್ಲದೆ, ಜಿಟಿಡಿ ಬರುವುದನ್ನು ದೂರದಿಂದಲೇ ನೋಡಿದ ಸಿದ್ದರಾಮಯ್ಯ ಸುಮ್ಮನೆ ಕುಳಿತಿದ್ದರು. ಜಿ.ಟಿ. ದೇವೇಗೌಡ ಪುತ್ರ ಹರೀಶ್ ಅವರನ್ನೂ ಸಿದ್ದರಾಮಯ್ಯ ಮಾತನಾಡಿಸಲಿಲ್ಲ. ಒಂದೇ ವೇದಿಕೆಯಲ್ಲಿ ಇದ್ದರೂ ದೂರ ದೂರ ಕುಳಿತ ಉಭಯ ನಾಯಕರು. ಕಾಂಗ್ರೆಸ್ ಸೇರುವುದಾಗಿ ಹೇಳಿ ಜೆಡಿಎಸ್‌ನಲ್ಲೇ ಉಳಿದ ಹಿನ್ನೆಲೆಯಲ್ಲಿ ಜಿಟಿಡಿ ಜತೆ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡರು.
ವಿಶ್ವಕರ್ಮ ಪೀಠಾಧ್ಯಕ್ಷ ಶ್ರೀ ಅನಂತ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಶಾಸಕ ಅನಿಲ್ ಚಿಕ್ಕಮಾದು, ಎಂಎಲ್‌ಸಿ ಡಾ.ತಿಮ್ಮಯ್ಯ, ಸಮುದಾಯದ ಮುಖಂಡರಾದ ಕೆ.ಪಿ.ನಂಜುಂಡಿ, ರಘು ಆಚಾರ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಇದನ್ನೂ ಓದಿ | ಕಾಂಗ್ರೆಸ್ ಪ್ರವಾಸಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್; ಸಿದ್ದರಾಮಯ್ಯ, ಡಿಕೆಶಿಗೆ ತಲಾ 14 ಲೋಕಸಭಾ ಕ್ಷೇತ್ರ ಹಂಚಿಕೆ