Site icon Vistara News

ವಿಸ್ತಾರ ಸಂಪಾದಕೀಯ: ವಿದ್ಯಾರ್ಥಿನಿಯರಿಗೆ ವರವಾಗಲಿ ರಾಜ್ಯ ಸರ್ಕಾರದ ‘ಶುಚಿ’ ಯೋಜನೆ

menstrual cup suchi

ಕಾಲೇಜು ವಿದ್ಯಾರ್ಥಿನಿಯರಿಗೆ ‘ಮೈತ್ರಿ ಮುಟ್ಟಿನ ಕಪ್‌’ಗಳ ವಿತರಣೆಯ ಮೂಲಕ ನನೆಗುದಿಗೆ ಬಿದ್ದಿದ್ದ ‘ಶುಚಿ’ ಯೋಜನೆಗೆ ಸೋಮವಾರ ಸಿದ್ದರಾಮಯ್ಯ ಅವರ ಸರ್ಕಾರ ಚಾಲನೆ ನೀಡಿದೆ. ಈ ಯೋಜನೆಯಡಿ ಪದವಿ ಪೂರ್ವ ಶಿಕ್ಷಣದವರೆಗಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ವಿತರಿಸುವ ಬದಲು, ಪರಿಸರ ಸ್ನೇಹಿ ಹಾಗೂ ಹತ್ತಾರು ವರ್ಷ ಬಾಳಿಕೆ ಬರುವ ಮೆನ್‌ಸ್ಟ್ರುಯಲ್ ಕಪ್‌ಗಳನ್ನು ‘ಶುಚಿ- ನನ್ನ ಮೈತ್ರಿ’ ಹೆಸರಿನಲ್ಲಿ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಿದೆ. ಯುವತಿಯರು ಮತ್ತು ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಈ ಯೋಜನೆಯು ಅತ್ಯಂತ ಸ್ತುತ್ಯಾರ್ಹವಾಗಿದೆ(Vistara Editorial).

ಭಾರತೀಯ ಸಮಾಜ ಸಾಕಷ್ಟು ಮುಂದುವರಿದಿದ್ದರೂ ಇಂದಿಗೂ ಮುಟ್ಟಿನ ಬಗ್ಗೆ ಅನೇಕ ಮಿಥ್ಯೆಗಳು, ತಪ್ಪು ಕಲ್ಪನೆಗಳು, ಮೂಢನಂಬಿಕೆಗಳು ನಮ್ಮಲ್ಲಿವೆ. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಋತುಚಕ್ರದ ವೇಳೆ ಬಟ್ಟೆಗಳನ್ನು ಬಳಸುವಂಥ ಅಶುಚಿ ಪದ್ಧತಿಗಳು ಜಾರಿಯಲ್ಲಿವೆ. ಇದರಿಂದ ಮಹಿಳೆಯರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಋತುಚಕ್ರದ ಕುರಿತು ಇರುವ ಮೌಢ್ಯಗಳೂ ದೂರವಾಗಿಲ್ಲ. ವಿಶೇಷವಾಗಿ ಬುಡಕಟ್ಟು ಜನಾಂಗಗಳಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ. ಮುಟ್ಟಾದ ಮಹಿಳೆಯರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ವರದಿಗಳನ್ನು ನಾವು ಆಗಾಗ ಓದುತ್ತಲೇ ಇರುತ್ತವೆ. ಹಾಗಾಗಿ, ರಾಜ್ಯ ಸರ್ಕಾರವು ‘ಶುಚಿ-ನನ್ನ ಮೈತ್ರಿ’ ಮೂಲಕ ಮಹಿಳಾ ಆರೋಗ್ಯದ ಕಡೆಗೆ ವಿಶೇಷ ಆಸ್ಥೆ ತೋರಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

ಮುಟ್ಟಿನ ಕಪ್‌ಗಳನ್ನು ಅಧಿಕ ಸಮಯದವರೆಗೆ, ಅಂದರೆ ಗರಿಷ್ಠ 8 ಗಂಟೆಗಳವರೆಗೆ ಬಳಸಬಹುದು. ಹಾಗೆಯೇ, ಸೂಕ್ತ ನಿರ್ವಹಣೆಯೊಂದಿಗೆ ಕನಿಷ್ಠ 8ರಿಂದ 10 ವರ್ಷಗಳವರೆಗೆ ಮರುಬಳಕೆ ಮಾಡಬಹುದಾಗಿದೆ. ಮುಟ್ಟಿನ ಕಪ್ ಬಳಸಲು ನಿಬಂಧನೆಗಳೇನೂ ಇಲ್ಲ. ತಿರುಚಿದ ಗರ್ಭಕೋಶ ಹೊಂದಿರುವ ಮಹಿಳೆಯರು, ಕಾಲೇಜಿಗೆ ಹೋಗುವವರು, ಕೆಲಸ ಮಾಡುವವರು, ಮಹಿಳಾ ಕ್ರೀಡಾಪಟುಗಳು ಎಲ್ಲರೂ ಯಾವುದೇ ತೊಂದರೆ ಇಲ್ಲದೇ ಬಳಸಬಹುದಾಗಿದೆ.

ಈ ಮುಟ್ಟಿನ ಕಪ್ ಬಳಕೆಯೂ ಬಹಳ ಸರಳವಾಗಿರುತ್ತದೆ; ಶುಚಿತ್ವ ಕಾಪಾಡಲು ಸಾಧ್ಯವಾಗುತ್ತದೆ. ಬಟ್ಟೆ ಬಳಕೆಯಿಂದಾಗುವ ಯಾವುದೇ ಪರಿಣಾಮಗಳಿರುವುದಿಲ್ಲ. ಸೋಂಕು ಹರಡುವುದಾಗಲೀ, ರಕ್ತ ಒಸರುವಂಥ ಸಮಸ್ಯೆಗಳಾಗಲಿ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಮುಟ್ಟಿನ ಕಪ್‌ಗಳ ಬಳಕೆ ಹೆಚ್ಚಾಗುತ್ತಿದೆ. ಈ ಹೊಸ ರೂಢಿಯನ್ನು ರಾಜ್ಯ ಸರ್ಕಾರವೇ ಮುಂದೆ ನಿಂತು ಮಹಿಳೆಯರಿಗೆ ಪರಿಚಯಿಸುತ್ತಿರುವುದು ಸ್ವಾಗತಾರ್ಹ ನಡೆಯಾಗಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಜಿ20 ಶೃಂಗಸಭೆ ವೇದಿಕೆಯಲ್ಲಿ ಚೀನಾಗೆ ಸೆಡ್ಡು ಹೊಡೆದ ಭಾರತ

ಮೈತ್ರಿ ಮುಟ್ಟಿನ ಕಪ್ ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಯಾಕೆಂದರೆ, ಮಹಿಳೆಯೊಬ್ಬಳು ತನ್ನ ಎಲ್ಲ ಋತುಚಕ್ರಗಳನ್ನು ಪೂರೈಸುವ ಹೊತ್ತಿಗೆ ಸುಮಾರು 200 ಕೆಜಿಗಳಷ್ಟು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾಳೆ ಎನ್ನುತ್ತದೆ ಅಧ್ಯಯನ ವರದಿಯೊಂದು. ಈ ಸಮೀಕರಣದ ಪ್ರಕಾರವೇ ಲೆಕ್ಕ ಹಾಕಿದರೆ, ಎಷ್ಟೊಂದು ತ್ಯಾಜ್ಯ ಸೃಷ್ಟಿಯಾಗುತ್ತದೆ ಎಂಬುದನ್ನು ಊಹಿಸಬಹುದಾಗಿದೆ. ಹಾಗಾಗಿ, ಮೈತ್ರಿ ಮುಟ್ಟಿನ ಕಪ್ ವಿತರಣೆ ಯೋಜನೆಯು ಪರಿಸರ ಹಿತ ಕಾಯುವಲ್ಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಆರಂಭಿಕ ಹಂತದಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿನಿಯರಿಗೆ ಮಾತ್ರವೇ ಸೀಮಿತವಾಗಿರುವ ಈ ‘ಶುಚಿ ನನ್ನ ಮೈತ್ರಿ’ ಯೋಜನೆಯನ್ನು ಎಲ್ಲ ಮಹಿಳೆಯರಿಗೂ ವಿಸ್ತರಿಸಿದರೆ ಸೂಕ್ತವಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಈ ಕುರಿತು ಹೆಚ್ಚಿನ ಲಾಭವಾಗುವುದರಲ್ಲಿ ಸಂದೇಹವಿಲ್ಲ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version