Site icon Vistara News

ವಿಸ್ತಾರ ಸಂಪಾದಕೀಯ: ಹೆಣ್ಣು ಭ್ರೂಣ ಹತ್ಯೆ ತಡೆ ಕಾರ್ಯಪಡೆ ಶೀಘ್ರ ಜಾರಿಯಾಗಲಿ

Vistara Editorial, anti- female foeticide Task Force Should implemented soon

ಹೆಣ್ಣು ಭ್ರೂಣ ಹತ್ಯೆಗಳನ್ನು (Female Foeticide) ತಡೆಯಲು ರಾಜ್ಯ ಮಟ್ಟದ ಕಾರ್ಯಪಡೆ ರಚಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ (Belagavi Winter Session) ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ನಡೆದ ಚರ್ಚೆ ವೇಳೆ ಸಚಿವರು ಮಾತನಾಡಿದರು. ಇತ್ತೀಚೆಗೆ ಬಲು ವ್ಯಾಪಕವಾಗಿ ಹರಡಿಕೊಂಡ ಹೆಣ್ಣು ಭ್ರೂಣ ಹತ್ಯೆ ದಂಧೆಯ ಕರಾಳ ವಿವರಗಳು ಒಂದೊಂದಾಗಿ ಬಯಲಾಗಿದ್ದವು. ಅಬಾರ್ಷನ್‌ ಮಾಡಿಸಿದ ಭ್ರೂಣಗಳನ್ನು ಕಾವೇರಿ ನದಿಯಲ್ಲಿ ಎಸೆಯುವುದು, ಟಾಯ್ಲೆಟ್‌ನಲ್ಲಿ ಎಸೆದು ಫ್ಲಶ್‌ ಮಾಡುತ್ತಿದ್ದುದು, 6 ತಿಂಗಳ ಮಕ್ಕಳನ್ನೂ ಗರ್ಭದಿಂದ ಹೊರತೆಗೆದಿರುವುದು, ಅವು ಗರ್ಭದಿಂದ ಹೊರ ತೆಗೆದ ಕೆಲ ಸಮಯದ ನಂತರ ಸಾಯುತ್ತಿದ್ದುದು ಮುಂತಾದ ಬರ್ಬರ ವಿವರಗಳೂ ಬಯಲಿಗೆ ಬಂದಿದ್ದವು. ಇದು ಮಾನವೀಯತೆಯನ್ನೇ ಮರೆತ ಒಂದು ಕ್ರೂರ ದಂಧೆಯಾಗಿರುವುದು ಕಂಡುಬಂದಿತ್ತು. ಇಂಥದ್ದನ್ನು ತಡೆಯುವ ನಿಟ್ಟಿನಲ್ಲಿ ತನಿಖೆ ವ್ಯಾಪಕವಾಗಿ ನಡೆದಿದ್ದು, ಕಾರ್ಯಪಡೆಯನ್ನು ರಚಿಸುವ ಚಿಂತನೆ ಶೀಘ್ರವಾಗಿ ಜಾರಿಗೆ ಬಂದರೆ ಉತ್ತಮ(Vistara Editorial).

ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ಪ್ರಕರಣ ತಡೆಗೆ ನಿಯಮ ಇದೆ. ಆದರೆ ಈ ನಿಯಮ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಬಿಗಿ ಕಾನೂನು ಇದ್ದರೂ ಸಾವಿರಾರು ಸಂಖ್ಯೆಯಲ್ಲಿ ಭ್ರೂಣ ಹತ್ಯೆ ಆಗುತ್ತಿರುವುದು ಸಮಾಜ ತಲೆ ತಗ್ಗಿಸುವಂಥದು. ಈಗಾಗಲೇ ಭ್ರೂಣ ಹತ್ಯೆ ಕೇಸ್ ಅನ್ನು ಸಿಐಡಿಗೆ ವಹಿಸಲಾಗಿದೆ. ಇದರ ಜತೆಗೆ ಕಾನೂನಾತ್ಮಕವಾಗಿ, ಆಡಳಿತಾತ್ಮಕವಾಗಿಯೂ ಈ ಪ್ರಕರಣವನ್ನು ನಿರ್ವಹಿಸುವ ರೀತಿ ಬದಲಾಗಬೇಕಿದೆ. ಅನಧಿಕೃತ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ ಆಗಬೇಕು. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಮಾಡುವುದು ಉದ್ದೇಶ. ಭ್ರೂಣ ಪರೀಕ್ಷೆ ನಿಯಮದ ಪ್ರಕಾರ ಮಾಡಬೇಕು. ಯಾವುದೇ ಕಾರಣಕ್ಕೂ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮಾಡಬಾರದು. ಭ್ರೂಣಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡಿದ್ದು ಸಾಬೀತಾದರೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕಿದೆ. ಈ ಪ್ರಕರಣಗಳಲ್ಲಿ ಯಾವ ಸೆಕ್ಷನ್‌ ಹಾಕಬೇಕು, ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯದ ಬಗ್ಗೆಯೂ ಚರ್ಚೆ ನಡೆಯಬೇಕು. ಅಲ್ಟ್ರಾ ಸೌಂಡ್ ಮಿಷನ್ ಖರೀದಿಗೂ ಮಾರಾಟಕ್ಕೂ ಸರ್ಕಾರದ ಅನುಮತಿ ಪಡೆಯಬೇಕು. ಅದರ ಬಳಕೆಯ ಬಗ್ಗೆ ವಿವರವನ್ನೂ ಪಡೆಯಬೇಕಿದೆ. ಹೆಣ್ಣು ಭ್ರೂಣ ಹತ್ಯೆ ತಡೆಯಲು ಮಾಹಿತಿ ನೀಡುವವರಿಗೂ ಪ್ರೋತ್ಸಾಹಧನ ನೀಡಬಹುದು. ಆರೋಗ್ಯ ಇಲಾಖೆ ಅಧಿಕಾರಿಗಳ ದಿಢೀರ್ ಭೇಟಿ, ಪರಿಶೀಲನೆ ಮುಖ್ಯ.

ಭ್ರೂಣ ಲಿಂಗ ಪತ್ತೆ ಮಾಡುವ ವೈದ್ಯರು, ಕ್ಲಿನಿಕ್‌ಗಳನ್ನು ಮೊದಲು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುವ ಕೆಲಸ ಆಗಬೇಕು. ಹಣದ ದುರಾಶೆಯಿಂದ ಈ ಕೃತ್ಯ ಮಾಡುವ ವೈದ್ಯರು ಕ್ಷಮೆಗೆ ಅರ್ಹರಲ್ಲ. ಗರ್ಭದ ಸ್ಕ್ಯಾನಿಂಗ್‌ ಮಾಡುವ ವೇಳೆ ಲಿಂಗ ಪತ್ತೆ ಮಾಡಿ ಅದನ್ನು ನಿಗೂಢ ಪಾಸ್‌ವರ್ಡ್‌ಗಳ ಮೂಲಕ ಹೆತ್ತವರಿಗೆ ತಿಳಿಸುವ ಕ್ರಮ ಜಾರಿಯಲ್ಲಿದೆ. ಇದು ನಿಲ್ಲಬೇಕು. ಕಾನೂನು ರಕ್ಷಕರು, ಆರೋಗ್ಯ ಸೇವಾ ನಿರೀಕ್ಷಕರು ಈ ಬಗ್ಗೆ ಅಲರ್ಟ್‌ ಆಗಬೇಕು. ಅಕ್ರಮವಾಗಿ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯಲ್ಲಿ ಭಾಗಿಯಾಗಿರುವವರೆಗ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಶಿಕ್ಷೆಯ ಜೊತೆಗೆ ಶಿಕ್ಷಣವೂ ತುಂಬ ಅಗತ್ಯವಾಗಿದೆ. ಹೆತ್ತವರಿಗೆ ವೃದ್ಧಾಪ್ಯದಲ್ಲಿ ಗಂಡು ಮಾತ್ರ ದಿಕ್ಕು, ಹೆಣ್ಣು ಮಗು ಏನಿದ್ದರೂ ಅನ್ಯರ ಮನೆ ಸೇರುವವಳು ಎಂಬ ಭಾವನೆ, ಆಕೆಯ ವಿದ್ಯಾಭ್ಯಾಸ ಇತ್ಯಾದಿಗಳಿಗೆ ಮಾಡುವ ಖರ್ಚೆಲ್ಲ ವ್ಯರ್ಥ ಎಂದು ತಿಳಿಯುವ ಜನರು ದೇಶದ ತುಂಬಾ ಇದ್ದಾರೆ. ಇಂದು ಹೆಣ್ಣು- ಗಂಡು ನಡುವೆ ಯಾವುದೇ ಭೇದವಿಲ್ಲ ಎಂಬುದನ್ನು ಇವರಿಗೆ ಮನದಟ್ಟು ಮಾಡಿಸಬೇಕಿದೆ. ದೇಶದಲ್ಲಿರುವ ಎಲ್ಲ ಧರ್ಮ, ಸಮುದಾಯ, ಪಂಥಗಳು, ಅಕ್ಷರಸ್ಥರು, ಅನಕ್ಷರಸ್ಥರು, ಶ್ರೀಮಂತರು-ಬಡವರ ವರ್ಗಗಳಲ್ಲಿ ಈ ಪಿಡುಗನ್ನು ಕಾಣಬಹುದು. ಇದಕ್ಕೆ ಗ್ರಾಮೀಣ ಪ್ರದೇಶ, ನಗರ ಪ್ರದೇಶ ಎಂಬ ಭೇದ ಭಾವವೂ ಇಲ್ಲ.

ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ದಕ್ಷಿಣ ಭಾರತದ ರಾಜ್ಯಗಳು ಈ ಹೆಣ್ಣು ಭ್ರೂಣ ಹತ್ಯೆ ತಡೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿವೆ. ಮಧ್ಯ ಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢಗಳಲ್ಲಿ ಈ ಪ್ರಕರಣಗಳು ಹೆಚ್ಚು ಆದರೂ, ಈಗ ಹೊರ ಬಿದ್ದಿರುವ ಮಾಹಿತಿಯನ್ನು ನೋಡುತ್ತಿದ್ದರೆ ಕರ್ನಾಟಕವೂ ಏನೂ ಕಡಿಮೆಯಿಲ್ಲ ಎನ್ನುವಂತಾಗುತ್ತಿದೆ. ಈ ಕಳಂಕವನ್ನು ನಾವು ತೊಡೆದುಕೊಳ್ಳಬೇಕಿದೆ. ಕಾನೂನು ಜಾರಿ, ಜಾಗೃತಿ ಜತೆಗೆ ತಂದೆ-ತಾಯಿಗಳ ಮನೋಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: 370ನೇ ವಿಧಿ ಬಗ್ಗೆ ಕೋರ್ಟ್‌ ತೀರ್ಪು ಐತಿಹಾಸಿಕ, ಅದರ ಬೆಳಕಿನಲ್ಲಿ ಮುನ್ನಡೆಯೋಣ

Exit mobile version