Site icon Vistara News

ವಿಸ್ತಾರ ಸಂಪಾದಕೀಯ: ಝಿಕಾ ವೈರಸ್‌ ಬಗ್ಗೆ ಆತಂಕ ಬೇಡ, ಎಚ್ಚರ ಇರಲಿ

Zika Virus

Don't worry about the Zika virus, just be alert

ಮೊದಲು ರಾಯಚೂರಿನಲ್ಲಿ, ನಂತರ ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ (Zika Virus) ಕಾಣಿಸಿಕೊಂಡಿದೆ. ಹಿನ್ನೆಲೆಯಲ್ಲಿ ಸದ್ಯ ಯಾರೂ ಭಯಪಡುವುದು ಬೇಡ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundu Rao) ಹೇಳಿಕೆ ನೀಡಿದ್ದಾರೆ. ಈ ನಡುವೆ ಆರೋಗ್ಯ ಇಲಾಖೆಯಿಂದ ಝಿಕಾ ವೈರಸ್ ಮಾರ್ಗಸೂಚಿ (Health Department Guidelines) ಬಿಡುಗಡೆಯಾಗಿದೆ. ಈ ನಿಯಮವನ್ನು ರಾಜ್ಯದ ಜನತೆ ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ನಿಜವೇನೆಂದರೆ, ಝಿಕಾ ಸೋಂಕು ಯಾರಿಗೂ ಅಂಟಿಲ್ಲ; ಬದಲಿಗೆ ಸೊಳ್ಳೆಗಳಲ್ಲಿ ವೈರಸ್‌ ಕಾಣಿಸಿಕೊಂಡಿದೆ. ಮೊದಲಿಗೇ ಹೇಳಬೇಕಾದ ಮಾತೆಂದರೆ ಇದು ನಿಫಾದಷ್ಟು ಗಂಭೀರವಾದ ಸೋಂಕಲ್ಲ. ಕೋವಿಡ್‌ನಷ್ಟು ಸಾಂಕ್ರಾಮಿಕವೂ ಅಲ್ಲ. ಆದರೆ ಹರಡುವಿಕೆಯ ಮುನ್ನವೇ ಎಚ್ಚರಿಕೆ ವಹಿಸುವುದು ಸೂಕ್ತವಾದುದು.

10 ದಿನಗಳ ಹಿಂದೆ ಝಿಕಾ ವೈರಸ್ ರಿಪೋರ್ಟ್ ಬಂದಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಕಳೆದ 15 ದಿನಗಳಲ್ಲಿ ಇಬ್ಬರಿಗೆ ಝಿಕಾ ವೈರಸ್‌ ತಗುಲಿದೆ. ಝಿಕಾ ಹಾಗೂ ನಿಫಾ ವೈರಸ್ ಬೇರೆ ಬೇರೆ. ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು. ನಿಫಾ ಸೋಂಕು ಗಂಭೀರವಾದುದು. ಇದರಲ್ಲಿ ಮರಣ ಪ್ರಮಾಣ ಕೂಡ ಹೆಚ್ಚು. ಝಿಕಾ ಸೋಂಕಿನಲ್ಲಿ ಮರಣ ಪ್ರಮಾಣ ತುಂಬ ಕಡಿಮೆಯಾಗಿದ್ದರೂ, ಬಾಣಂತಿಯರು, ಮಕ್ಕಳು ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ಇದುವರೆಗೂ ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ. ರೋಗ ಲಕ್ಷಣ ಇದ್ದವರ ಸ್ಯಾಂಪಲ್ ಪಡೆಯಲಾಗಿದೆ. ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ನೀಡಿರುವ ಝಿಕಾ ವೈರಸ್ ಮಾರ್ಗಸೂಚಿ ಪ್ರಕಾರ ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ಜನರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.

ಪ್ರಧಾನವಾಗಿ, ಏಡಿಸ್‌ ಸೊಳ್ಳೆಯಿಂದ ಹರಡುವ ರೋಗವಿದು. ಥೇಟ್‌ ಡೆಂಗೆ, ಚಿಕೂನ್ ಗುನ್ಯಾ ಅಥವಾ ಹಳದಿ ಜ್ವರದ ಮಾದರಿಯಲ್ಲಿ ಇದು ಹರಡುತ್ತದೆ. ಕಣ್ಣು ಕೆಂಪಾಗುವಿಕೆ, ತಲೆ ನೋವು, ಜ್ವರ, ಕೀಲುಗಳಲ್ಲಿ ನೋವು, ಗಂಧೆಗಳು, ಸ್ನಾಯುಗಳಲ್ಲಿ ನೋವು ಇವೆಲ್ಲ ರೋಗದ ಲಕ್ಷಣಗಳು. ಇದರ ಸೊಳ್ಳೆಗಳು ಹೆಚ್ಚಾಗಿ ದಾಳಿ ಮಾಡುವುದು ಹಗಲು ಹೊತ್ತಿನಲ್ಲಿ. ಇವು ಮನೆಯ ಒಳಗೆ-ಹೊರಗೆ ಎಂಬ ಭೇದವಿಲ್ಲದೆ, ಎಲ್ಲೆಂದರಲ್ಲಿ ಇರುತ್ತವೆ. ಹಾಗಾಗಿ ಸೊಳ್ಳೆಗಳಿಂದ ದೂರವಿರುವುದು, ಮನೆಯ ಆಸುಪಾಸು ಅವುಗಳನ್ನು ನಿರ್ಮೂಲನೆ ಮಾಡುವುದು ಉಚಿತ. ಹಾಗೆಂದು ಸೋಂಕು ಹರಡುವುದಕ್ಕೆ ಇದೊಂದೇ ಮಾರ್ಗವೂ ಅಲ್ಲ. ತಾಯಿಯಿಂದ ಹೊಟ್ಟೆಯಲ್ಲಿರುವ ಮಗುವಿಗೆ, ಎದೆಹಾಲಿನಿಂದ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ರೋಗ ಹರಡಬಹುದು. ರಕ್ತಪೂರಣದಿಂದ ಹರಡುವ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ ಕೋವಿಡ್‌ನಂತೆ ಕೆಮ್ಮು, ಸೀನಿನಿಂದ ಹರಡುವುದಿಲ್ಲ. ರಕ್ತಪರೀಕ್ಷೆಯಿಂದ ದೇಹದಲ್ಲಿ ವೈರಸ್‌ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು. ಪರೀಕ್ಷೆಯಲ್ಲಿ ಝಿಕಾ ವೈರಸ್‌ ಸೋಂಕು ಖಾತ್ರಿಯಾದರೆ, ವೈದ್ಯರನ್ನು ಸಂಪರ್ಕಿಸಿ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಕ್ವಾರಂಟೈನ್‌ ಅಗತ್ಯವಿಲ್ಲ. ಸಾಕಷ್ಟು ದ್ರವಾಹಾರ, ವಿಶ್ರಾಂತಿ ಕಡ್ಡಾಯವಾಗಿ ರೋಗಿಗಳಿಗೆ ಬೇಕು.

ಇದನ್ನೂ ಓದಿ: Zika Virus : ಝಿಕಾ ವೈರಸ್ ತಡೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ಯಾವುದೇ ಬಗೆಯ ಸೋಂಕು ವೈರಸ್‌ ಇರಲಿ, ಆರೋಗ್ಯ ಇಲಾಖೆಯ ಜೊತೆಗೆ ನಾಗರಿಕರು ಕೈಗೂಡಿಸಿದರೆ ಮಾತ್ರ ಅದರ ನಿವಾರಣೆ ಸುಲಭಸಾಧ್ಯ. ಸೊಳ್ಳೆಗಳ ಮೂಲವನ್ನು ಮೊದಲು ನಾಶಪಡಿಸಬೇಕು. ಮಲಗುವಾಗ ಸೊಳ್ಳೆಪರದೆ ಬಳಸಬೇಕು. ನಿಂತ ನೀರಿನಲ್ಲಿ ಏಡಿಸ್‌ ಸೊಳ್ಳೆಗಳು ಸಂಸಾರ ಮಾಡುತ್ತವೆ. ಅಂಥವು ಮನೆಯ ಸುತ್ತಲೆಲ್ಲೂ ಇಲ್ಲದಂತೆ ನೋಡಿಕೊಳ್ಳಬೇಕು. ಸಂಜೆ ಹಾಗೂ ಮುಂಜಾನೆ ತುಂಬು ತೋಳಿನ ಮತ್ತು ಕಾಲಿನ ವಸ್ತ್ರಗಳನ್ನು ಧರಿಸುವುದು, ಸೊಳ್ಳೆ ನಿರೋಧಕ ಕ್ರೀಮ್‌, ಸ್ಪ್ರೇ ಬಳಸಬಹುದು. ಶಿಶುಗಳ ತೊಟ್ಟಿಲು, ಹಾಸಿಗೆಗಳಿಗೆ ಸೊಳ್ಳೆಪರದೆ ಬಳಸುವುದು, ಸೊಳ್ಳೆಗಳ ಉಪಟಳ ತೀರಾ ಹೆಚ್ಚಿರುವ ಪ್ರದೇಶವಾಗಿದ್ದರೆ ಫಾಗಿಂಗ್‌ ಮಾಡುವುದು ಉಚಿತ. ನೀರು ಶೇಖರಣಾ ಪರಿಕರಗಳನ್ನು ಮುಚ್ಚಿಡಬೇಕು, ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಇನ್ನು ಆರೋಗ್ಯ ಇಲಾಖೆ ಈ ವಿಚಾರದಲ್ಲಿ ಹೈ ಅಲರ್ಟ್‌ ವಹಿಸಬೇಕಾದುದು ಅಗತ್ಯ. ಕೋವಿಡ್‌ನಿಂದ ಕಲಿತ ಪಾಠಗಳು ಈ ಸಂದರ್ಭದಲ್ಲಿ ನೆರವಿಗೆ ಬರಬೇಕು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version