ರಾಜ್ಯದ ಹಾಗೂ ದೇಶದ ಪ್ರತಿಷ್ಠಿತ ಹೃದ್ರೋಗ ಸಂಸ್ಥೆಗಳಲ್ಲೊಂದಾದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (Jayadeva Hospital) ನಿರ್ದೇಶಕ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ (Dr C N Manjunath) ಅವರ ಸೇವಾವಧಿ ಜ.31ರಂದು ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮಂಗಳವಾರ ಭಾವಪೂರ್ಣವಾಗಿ ಬೀಳ್ಕೊಟ್ಟರು. ಎರಡ್ಮೂರು ವರ್ಷಗಳ ಹಿಂದೆಯೇ ಅವರ ಅಧಿಕಾರಾವಧಿಯು ಮುಕ್ತಾಯವಾಗಿದ್ದರೂ ಸರ್ಕಾರಗಳು ಅವರ ಸೇವಾವಧಿಯನ್ನು ವಿಸ್ತರಿಸುತ್ತಾ ಬಂದಿದ್ದವು. ದಕ್ಷ ವ್ಯಕ್ತಿಯ ನೇತೃತ್ವ ದೊರೆತರೆ ಸಂಸ್ಥೆಯೊಂದು ಯಾವ ರೀತಿ ಅಭಿವೃದ್ದಿಯಾಗಬಲ್ಲದು ಮತ್ತು ಅದು ಹೇಗೆ ಜನೋಪಕಾರಿಯಾಗಬಹುದು ಎಂಬುದಕ್ಕೆ ಇಂದು ಜಯದೇವ ಹೃದ್ರೋಗ ಸಂಸ್ಥೆ ಉದಾಹರಣೆಯಾಗಿದೆ. ಅದರ ಬಹುತೇಕ ಶ್ರೇಯವು ಡಾ. ಮಂಜನಾಥ್ ಅವರಿಗೇ ಸಲ್ಲುತ್ತದೆ(Vistara Editorial).
1989ರಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಸೇರಿದ ಡಾ. ಮಂಜುನಾಥ್ ಅವರು 2007ರಲ್ಲಿ ಸಂಸ್ಥೆಗೆ ನಿರ್ದೇಶಕರಾದರು. ಅಲ್ಲಿಂದ ಈ ಆಸ್ಪತ್ರೆಯ ಒಟ್ಟು ಚಿತ್ರಣವೇ ಬದಲಾಯಿತು. ಪ್ರಪಂಚದ ಯಾವುದೇ ಖಾಸಗಿ ಆಸ್ಪತ್ರೆಯ ವ್ಯವಸ್ಥೆಯನ್ನು ಮೀರಿಸುವ, ʼಮೊದಲು ಆರೈಕೆ ನಂತರ ಪಾವತಿʼ ನೀತಿಯನ್ನು ಜಾರಿಗೆ ತಂದರು. ಇದರಿಂದ ಲಕ್ಷಾಂತರ ಹೃದಯ ರೋಗಿಗಳಿಗೆ ಭಾರಿ ಉಪಕಾರವಾಗಿದೆ. ಡಾ. ಮಂಜುನಾಥ್ ಅವರು ಇಎಸ್ಐ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆ, ಮೈಸೂರು, ಬೀದರ್‌ನಂಥ ಹಿಂದುಳಿದ ಜಿಲ್ಲೆಗಳ ಆಸ್ಪತ್ರೆಗಳಲ್ಲೂ ಶಾಖೆಗಳನ್ನು ವಿಸ್ತರಿಸಿ ನಾಡಿನ ಆರೋಗ್ಯ ಕ್ಷೇತ್ರಕ್ಕೆ ನೆರವಾಗಿದ್ದಾರೆ. ಅಂತಹ ಪರಿಣಿತರ ಶುದ್ಧ ಹಸ್ತ ಆಡಳಿತ ಧುರೀಣರನ್ನು ನಮ್ಮೊಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಉಳಿಸಿಕೊಂಡು ಅವರ ಪರಿಣತಿಯನ್ನು ಸಾಮಾನ್ಯ ಜನರಿಗೆ ಒದಗಿಸುವ ಅವಶ್ಯಕತೆ ಮುಂದೆಯೂ ಇದೆ. ಹೃದ್ರೋಗ ಸಂಸ್ಥೆಯಿಂದ ಅವರು ಹೊರ ಬಂದರೂ, ಅವರ ಸೇವೆಯನ್ನು ಯಾವುದೇ ರೂಪದಲ್ಲಾದರೂ ಸರ್ಕಾರವು ಬಳಸಿಕೊಳ್ಳಬೇಕು.
ಡಾ. ಸಿ.ಎನ್. ಮಂಜುನಾಥ್ ಅವರು ನಿರ್ದೇಶಕರಾಗಿ 16 ವರ್ಷಗಳ ಕಾಲ ದುಡಿದಿದ್ದಾರೆ. ಈ ಅವಧಿಯಲ್ಲಿ ಸಂಸ್ಥೆಯು ಶೇ.500ರಷ್ಟು ಪ್ರಗತಿ ಸಾಧಿಸಿದೆ. 300 ಹಾಸಿಗೆಗಳಿದ್ದ ಆಸ್ಪತ್ರೆಯು ಇಂದು 2000 ಹಾಸಿಗೆಗಳ ಆಸ್ಪತ್ರೆಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತಿದೊಡ್ಡ ಹೃದ್ರೋಗ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ. ಆಸ್ಪತ್ರೆಯನ್ನು ಪಂಚತಾರಾ ಆಸ್ಪತ್ರೆಯನ್ನಾಗಿ ರೂಪಿಸುವ ಕನಸು ಕಂಡು, ಅದನ್ನು ನನಸು ಮಾಡಿದ್ದಾರೆ. ಆ ಖುಷಿ ಅವರಲ್ಲಿದೆ. ಶ್ರೀಮಂತರಿಗೆ ದೊರೆಯುವ ಆರೋಗ್ಯ ಸೇವೆಯನ್ನು ಡಾ. ಮಂಜುನಾಥ್ ಅವರು ನಿರ್ಗತಿಕರು, ಬಡವರಿಗೂ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ, ನಿಜರ್ಥದಲ್ಲಿ ಅವರು ‘ವೈದ್ಯೋ ನಾರಾಯಣೋ ಹರಿಃ’
ಡಾ. ಸಿ.ಎನ್. ಮಂಜುನಾಥ್ ಅವರು ತಮ್ಮ ಅವಧಿಯಲ್ಲಿ 75 ಲಕ್ಷ ಹೊರ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಿದ್ದಾರೆ. 8 ಲಕ್ಷ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದೊರೆಯುವ ಗುಣಮಟ್ಟದ ಚಿಕಿತ್ಸೆ, ಪಾರದರ್ಶಕ ಆಡಳಿತ ವ್ಯವಸ್ಥೆಗೆ ಕೇಂದ್ರ ಸರ್ಕಾರವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೇ ಮಾದರಿಯನ್ನು ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳು ಅಳಡಿಸಿಕೊಳ್ಳಲು ಶಿಫಾರಸು ಮಾಡಿರುವುದು ಡಾ. ಮಂಜುನಾಥ ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಕಾರಣಕ್ಕಾಗಿಯಾಗಿಯೇ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಕೂಡ ಅರಸಿ ಬಂದಿದೆ.
ಡಾ. ಸಿ.ಎನ್. ಮಂಜುನಾಥ್ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಅವರ ಅಳಿಯ. 2005ರಲ್ಲಿ ಮಂಜುನಾಥ್ ಅವರು ಆಸ್ಪತ್ರೆ ತೊರೆದು ವಿದೇಶಕ್ಕೆ ಹೋಗುವ ಮನಸ್ಸು ಮಾಡಿದ್ದರು. ಆಗ ದೇವೇಗೌಡರು ಇಲ್ಲೇ ಉಳಿಯುವಂತೆ ಸೂಚಿಸಿದ್ದರು. ಅವರ ಮಾತಿಗೆ ಮನ್ನಣೆ ನೀಡಿ ಉಳಿದರು ಮತ್ತು ಜಯದೇವ ಹೃದ್ರೋಗ ಆಸ್ಪತ್ರೆಯನ್ನು ವಿಶ್ವಮಾನ್ಯ ಆಸ್ಪತ್ರೆಯನ್ನಾಗಿ ಮಾಡಿದರು. ಒಂದು ವೇಳೆ, ಅಂದು ವಿದೇಶಕ್ಕೆ ಹೋಗಿದ್ದರೆ, ಕನಿಷ್ಠ ವೆಚ್ಚದಲ್ಲಿ ಬಡವರಿಗೆ ಹೃದಯ ರೋಗ ವಾಸಿ ಎಂಬ ಮಾತು ವಾಸ್ತವಕ್ಕೆ ಬರುತ್ತಿರಲಿಲ್ಲ! 66 ವರ್ಷದ ಡಾ. ಮಂಜುನಾಥ ಅವರ ಪೂರ್ಣ ಹೆಸರು. ಚೋಳೇನಹಳ್ಳಿ ನಂಜಪ್ಪ ಮಂಜುನಾಥ್. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೋಳೇನಹಳ್ಳಿ ಅವರ ಊರು. ಡಾ. ಮಂಜುನಾಥ ಅವರಿಂದಾಗಿ ಈ ಊರು ಕೂಡ ಪ್ರಸಿದ್ಧವಾಗಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು.
ಒಳ್ಳೆಯದೆಲ್ಲವೂ ಅಂತ್ಯವಾಗಲೇಬೇಕು ಎಂಬ ಮಾತಿನಂತೆ ಡಾ. ಸಿ.ಎನ್. ಮಂಜುನಾಥ್ ಅವರು ಸಂತೋಷದಿಂದಲೇ ತಮ್ಮ ಹುದ್ದೆಯಿಂದ ಈಗ ನಿರ್ಗಮಿಸುತ್ತಿದ್ದಾರೆ. ಅವರು ತೋರಿದ ಹಾದಿಯಲ್ಲಿ ಮುಂಬರುವ ನಿರ್ದೇಶಕರು ನಡೆಯಲಿ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆಗೆ ಬರುವ ರೋಗಿಗಳಿಗೆ ಡಾ.ಮಂಜುನಾಥ್ ಅವರ ಕೊರತೆಯಾಗದಂತೆ ನೋಡಿಕೊಳ್ಳಲಿ. ಡಾ. ಮಂಜುನಾಥ್ ಅವರು ಸೇವೆಯಿಂದ ನಿವೃತ್ತರಾಗಿದ್ದಾರಷ್ಟೇ. ಅವರ ತಜ್ಞತೆಯನ್ನು ಸರ್ಕಾರವು ಅಗತ್ಯ ಬಿದ್ದಾಗ ಪಡೆದುಕೊಳ್ಳಲು ಹಿಂಜರಿಯಬಾರದು.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಮಿ ನಿಷೇಧಿಸಿದರೆ ಸಾಲದು, ಇದರ ತಳಿಗಳನ್ನೂ ನಿಗ್ರಹಿಸಬೇಕು