Site icon Vistara News

ವಿಸ್ತಾರ ಸಂಪಾದಕೀಯ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಪಕ್ಷಕ್ಕೆ ಬಲ ತುಂಬಲಿ

BY Vijayendra

BY VIjayendra To Take Charge As Karnataka BJP President; Who Will Miss The Programme?

ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷರ (BJP State President) ನೇಮಕವಾಗಿದೆ. ಶಿಕಾರಿಪುರ ಶಾಸಕ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ, ಪ್ರಭಾವಿ ಯುವ ನಾಯಕ ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ದೀಪಾವಳಿಗೆ ಮುನ್ನವೇ ಬಿಜೆಪಿ ಹೈಕಮಾಂಡ್‌ ರಾಜ್ಯ ಬಿಜೆಪಿ ಮತ್ತು ಬಿಎಸ್‌ವೈ ಕುಟುಂಬಕ್ಕೆ ಈ ವಿಶೇಷ ಕೊಡುಗೆಯನ್ನು ನೀಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಿದೆ. ನಳಿನ್‌ ಕುಮಾರ್‌ ಕಟೀಲ್‌ ಅವರ ಅಧಿಕಾರಾವಧಿ ಒಂದು ವರ್ಷದ ಹಿಂದೆಯೇ ಮುಕ್ತಾಯವಾಗಿದ್ದು, ಮುಂದಿನ ರಾಜ್ಯಾಧ್ಯಕ್ಷರು ಯಾರಾಗುತ್ತಾರೆ ಎಂಬ ಕಾತರವಿತ್ತು. ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಹೈಕಮಾಂಡ್‌ ಅಳೆದೂ ಸುರಿದೂ ದೊಡ್ಡ ನಿರ್ಧಾರವವನ್ನೇ ಮಾಡಿದೆ. ಈ ಆಯ್ಕೆ ಪಕ್ಷವನ್ನು ಕಟ್ಟುವಲ್ಲಿ ಹೇಗೆ ನೆರವಾಗಲಿದೆ, ಮುಂದಿನ ಚುನಾವಣೆಯಲ್ಲಿ ಏನು ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ(Vistara Editorial).

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು ಸುಣ್ಣವಾಗಿತ್ತು. ವಿಜಯೇಂದ್ರ ಅವರು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಿ ಪಕ್ಷಕ್ಕೆ ಮರುಶಕ್ತಿ ನೀಡುವ ನಡೆಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ. ನಾಲ್ಕೂವರೆ ದಶಕಗಳ ಕಾಲ ಶಿಕಾರಿಪುರ ಕ್ಷೇತ್ರವನ್ನು ಹಾಗೂ ರಾಜ್ಯ ಬಿಜೆಪಿಯನ್ನು ಆಳಿದ ಮಾಜಿ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ವಿಚಾರದಲ್ಲಿ ಒಂದು ಬಗೆಯ ಶೂನ್ಯವೇ ಉಂಟಾಗಿತ್ತು. ಶಿಕಾರಿಪುರ ಕ್ಷೇತ್ರವನ್ನೇನೋ ವಿಜಯೇಂದ್ರ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಬಿಜೆಪಿಯಲ್ಲಿ ಯಡಿಯೂರಪ್ಪ ಹೊರತುಪಡಿಸಿದರೆ ಅವರಷ್ಟೇ ಸುದೀರ್ಘ ಹೋರಾಟದ ಹಿನ್ನೆಲೆಯಿಂದ ಬಂದ, ಜನಬೆಂಬಲವನ್ನು ಹೊಂದಿದ, ಬಲಿಷ್ಠ ಸಮುದಾಯದ ಬೆಂಬಲವನ್ನೂ ಹೊಂದಿರುವ ಇನ್ನೊಬ್ಬ ನಾಯಯ ಪಕ್ಷದಲ್ಲಿರಲಿಲ್ಲ. ಹಲವು ನಾಯಕರುಗಳು ಇದ್ದರೂ ಪ್ಯಾನ್‌ ಕರ್ನಾಟಕ ವರ್ಚಸ್ಸಿನ ನಾಯಕರ ಕೊರತೆಯೇ ಇತ್ತು. ರಾಜ್ಯಾಧ್ಯಕ್ಷ ಹುದ್ದೆಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ. ರವಿ, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಹೈಕಮಾಂಡ್‌ ವಿಜಯೇಂದ್ರ ಅವರನ್ನು ಈ ಹುದ್ದೆಗೆ ಏರಿಸಿದೆ.

ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿ, ಸ್ಫೂರ್ತಿ ತುಂಬಿ ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸಬಲ್ಲ ನಾಯಕನೆಂದು ಹೈಕಮಾಂಡ್‌ಗೆ ವಿಜಯೇಂದ್ರ ಕುರಿತು ಭರವಸೆ ಮೂಡಿರುವುದು ಸ್ಪಷ್ಟ. ರಾಜ್ಯದಲ್ಲಿ ಬಿಜೆಪಿಯ ಗಟ್ಟಿ ಅಸ್ತಿವಾರವಾಗಿದ್ದ ಲಿಂಗಾಯತ ಸಮಾಜ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲೆ ಮುನಿಸಿಕೊಂಡಿತ್ತು. ಈ ಹಾನಿಯನ್ನು ಸರಿ ಮಾಡಿ ಮತ್ತೆ ಅವರನ್ನು ಸೆಳೆಯಲು ಲಿಂಗಾಯತ ಸಮಾಜದ ಪ್ರಭಾವಿ ನಾಯಕನಿಗೆ ಪಟ್ಟ ಕಟ್ಟಲಾಗಿದೆ. ಈ ಕ್ರಮ ಲಿಂಗಾಯತ ಸಮುದಾಯವನ್ನು ಪಕ್ಷದತ್ತ ಮತ್ತೆ ಸೆಳೆಯಬಹುದೇ ನೋಡಬೇಕು. ವಿಜಯೇಂದ್ರ ಅವರು ತಮ್ಮ ಸಂಘಟನಾ ಶಕ್ತಿ, ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ತಾಕತ್ತನ್ನು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿಯೂ ದುಡಿದಿದ್ದಾರೆ. ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಯಾವ ಹುದ್ದೆ ಇಲ್ಲದೆ ಇದ್ದಾಗಲೂ ಅವರ ಸೂಚನೆಯಂತೆ ಕೆಲಸ ಮಾಡುವ ಟೀಮ್‌ಗಳು ರಾಜ್ಯಾದ್ಯಂತ ಇವೆ. ಇನ್ನೂ ಯುವಕರಾಗಿರುವ ಅವರಿಗೆ ರಾಜ್ಯ ಸುತ್ತಿ ಪಕ್ಷ ಕಟ್ಟುವ ಹುಮ್ಮಸ್ಸು ಕೂಡ ಇದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ತುಂಬ ಮುಖ್ಯ. ಬಿ.ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದರೆ ಬಿಎಸ್‌ವೈ ಅವರನ್ನು ನೇರವಾಗಿ ಬಳಸಿಕೊಳ್ಳಬಹುದು ಮತ್ತು ಅವರ ಅನುಭವವನ್ನು ಪೂರ್ಣವಾಗಿ ಬಳಸಿಕೊಳ್ಳಬಹುದು ಎಂದೂ ಪಕ್ಷ ಲೆಕ್ಕಾಚಾರ ಹಾಕಿದೆ. ಇದು ಲಿಂಗಾಯಿತ ಸಮುದಾಯದಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸಲಿದೆ. ರಾಜ್ಯದಲ್ಲಿ ಯುವ ನಾಯಕತ್ವಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ಸಂದೇಶವನ್ನು ಈ ಆಯ್ಕೆ ಸಾರಿದೆ. ಪಕ್ಷದ ಸಂಘಟನೆ ಮತ್ತು ನಾಯಕತ್ವದ ವಿಷಯದಲ್ಲಿ ʼಗೆಲುವಿನ ಶಕ್ತಿʼಗೇ ಮಣೆ ಎಂಬ ಸಂದೇಶವನ್ನು ಕೂಡ ದಾಟಿಸಿದೆ. ಬಿಜೆಪಿಗೆ ಈಗ ಯಾವುದೇ ಟೀಕೆಗಳಿಗೆ ಹೆದರದೆ, ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಹೋಗುವ ನಾಯಕತ್ವ ಬೇಕಾಗಿದೆ. ಅಂಥ ಗುಣವನ್ನು ಬಿವೈ ವಿಜಯೇಂದ್ರ ಪ್ರದರ್ಶಿಸಿದ್ದಾರೆ. ಹಲವು ಬಾರಿ ಅವಕಾಶ ತಪ್ಪಿದರೂ ಪಕ್ಷಕ್ಕೆ ಕುಂದುಂಟಾಗದಂತೆ ನಡೆದುಕೊಂಡರೆ ಪಕ್ಷ ಸೂಕ್ತ ಕಾಲದಲ್ಲಿ ತಕ್ಕ ಗೌರವ ನೀಡುತ್ತದೆ ಎಂಬುದನ್ನು ಸಾರಲು ಬಿಜೆಪಿ ಮುಂದಾಗಿದೆ.

ಇದೇ ರೀತಿ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನವನ್ನು ಕೂಡ ತುಂಬಬೇಕಿದೆ. ಇಲ್ಲದೇ ಹೋದರೆ ವಿಧಾನಸಭೆಯಲ್ಲಿ ಆಡಳಿತ ಪಕ್ಷವನ್ನು ಎದುರಿಸಲು ನಾಯಕನಿಲ್ಲ ಎಂದಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಕ್ರಿಯಾಶೀಲ ಹಾಗೂ ಚುರುಕಾದ ಪ್ರತಿಪಕ್ಷ ಇರಬೇಕು. ಸದ್ಯ ಅದು ಇಲ್ಲ. ಸೋಲಿನಿಂದ ಹತಾಶವಾಗಿರುವ ಪಕ್ಷ ಮತ್ತೆ ಮೇಲೇಳಲು ಹುರುಪಿನ ನಾಯಕತ್ವ ನೆರವಾಗಬಹುದು. ರಾಜ್ಯಾಧ್ಯಕ್ಷ ಸ್ಥಾನ ತುಂಬಿದಂತೆಯೇ ಪ್ರತಿಪಕ್ಷ ನಾಯಕನ ಸ್ಥಾನವನ್ನೂ ತುಂಬಿದರೆ, ಇಮ್ಮಡಿ ಉತ್ಸಾಹದಿಂದ ಪಕ್ಷದ ನಾಯಕರು ಕೆಲಸ ಮಾಡಲು ಸಾಧ್ಯವಿದೆ. ಅದು ರಾಜ್ಯದ ರಾಜಕೀಯ ಮತ್ತಷ್ಟು ಚಟುವಟಿಕೆ, ಕ್ರಿಯಾಶೀಲತೆಯಿಂದ ತುಂಬಲು ಎಡೆಮಾಡಿಕೊಡಲಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಕ್ರಿಮಿನಲ್‌ ಸಂಸದರು, ಶಾಸಕರ ಕೇಸ್‌ಗಳು ಶೀಘ್ರ ವಿಲೇವಾರಿಯಾಗಲಿ

Exit mobile version