ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ(PFI) ಮತ್ತು ಅದರ ಸಹವರ್ತಿ ಸಂಘಟನೆಗಳ ನಿಷೇಧ ಸುದ್ದಿಈಗ ಸದ್ದು ಮಾಡುತ್ತಿದೆ. ಅನ್‌ಲಾಫುಲ್ ಆಕ್ಟಿವಿಟೀಸ್(ಪ್ರಿವಿನ್ಷನ್) ಆಕ್ಟ್- ಯುಎಪಿಎ(UAPA) ಅಡಿ ಪಿಎಫ್ಐ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಿ, ನಿಷೇಧಿಸಲಾಗಿದೆ. ಹಾಗಾಗಿ, ಯುಎಪಿಎ ಕಾಯಿದೆಯ ಬಗ್ಗೆ ಕುತೂಹಲ ಸಹಜ. ಭಾರತದಲ್ಲಿ ಕಾನೂನುಬಾಹಿರ, ದೇಶದ್ರೋಹ, ಭಯೋತ್ಪಾದನೆ, ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸಂಘ-ಸಂಸ್ಥೆಗಳು, ವ್ಯಕ್ತಿಗಳ ವಿರುದ್ದ ಈ ಯುಎಪಿಎ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಯುಎಪಿಎ ಎಂದರೇನು? ಗರಿಷ್ಠ ಶಿಕ್ಷೆ ಏನು? ಯುಎಪಿಎ ಪರ ಮತ್ತು ವಿರೋಧ ಚರ್ಚೆಗಳೇನು ಎಂಬಿತ್ಯಾದಿ ಮಾಹಿತಿಯನ್ನು ಈ ವಿಸ್ತಾರ Explainerನಲ್ಲಿ ಓದಿ.
ಏನಿದು ಯುಎಪಿಎ?
Unlawful Activities (Prevention) Act ಅನ್ನು ಸಂಕ್ಷಿಪ್ತವಾಗಿ ಯುಎಪಿಎ ಎಂದ ಕರೆಯಲಾಗುತ್ತದೆ. ಭಾರತದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದೇ ಈ ಕಾನೂನಿನ ಮುಖ್ಯ ಉದ್ದೇಶ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಕಾಯ್ದೆಯು ಸರ್ಕಾರಕ್ಕೆ ನೀಡುತ್ತದೆ. 1967ರ ಈ ಕಾಯಿದೆಗೆ ಹಲವು ಬಾರಿ ತಿದ್ದುಪಡಿಯಾಗಿದೆ. ತೀರಾ ಇತ್ತೀಚಿನ ತಿದ್ದುಪಡಿ ಎಂದರೆ, 2019ರ ತಿದ್ದುಪಡಿ. ಈ ತಿದ್ದುಪಡಿ ಅನ್ವಯ ಕೇಂದ್ರ ಸರ್ಕಾರವು ಯಾವುದೇ ವ್ಯಕ್ತಿಯನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸದೇ ಉಗ್ರ ಎಂದು ತೀರ್ಮಾನಿಸಬಹುದಾಗಿದೆ. ಈ ಕಾನೂನನ್ನು ಉಗ್ರ ನಿಗ್ರಹ ಕಾಯಿದೆ ಎಂದೂ ಕರೆಯಲಾಗುತ್ತದೆ.
ಈ ಕಾಯ್ದೆಯ ಹಿನ್ನೆಲೆ ಏನು?
ಯುಎಪಿಎ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಅದರ ಹಿನ್ನೆಲೆಯನ್ನು ಕೂಡ ತಿಳಿದುಕೊಳ್ಳಬೇಕು. ಭಾರತದಲ್ಲಿ ಉಗ್ರ ಚಟುವಟಿಕೆ ನಿಗ್ರಹಕ್ಕೆ ಸಂಬಂಧಿಸಿದಂತೆ ಟಾಡಾ(TADA) ಮತ್ತು ಪೋಟಾ (POTA) ಕಾಯ್ದೆಗಳು ಅಸ್ತಿತ್ವದಲ್ಲಿದ್ದವು. ಆದರೆ, 1995ರಲ್ಲಿ ಟಾಡಾ ಕಾಯ್ದೆಯನ್ನು ಹಿಂಪಡೆಯಲಾಯಿತು. ಬಳಿಕ 2004ರಲ್ಲಿ ಪೋಟಾ ಕಾಯ್ದೆಯನ್ನು ಕೈ ಬಿಡಲಾಯಿತು. 1967ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜಾರಿಗೆ ತಂದಿದ್ದ ಯುಎಪಿಎ ಕಾಯ್ದೆಯನ್ನು ಬಲಪಡಿಸಲಾಯಿತು. ಇದಕ್ಕಾಗಿ 2004, 2008, 2013 ಮತ್ತು 2019ರಲ್ಲಿ ತಿದ್ದುಪಡಿಗಳನ್ನು ತರುವ ಮೂಲಕ ಮತ್ತಷ್ಟು ಅಧಿಕಾರಗಳನ್ನು ನೀಡಲಾಯಿತು. 2008ರ ಎನ್ಐಎ ಕಾಯ್ದೆಯಡಿ ರಚನೆಯಾಗಿರುವ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್ಐಎ) ಸದ್ಯ ಕೇಂದ್ರ ಸರ್ಕಾರದ ಈ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಜಾರಿಯ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತಿದೆ.
ಯಾರು ಉಗ್ರ, ಯಾವುದು ಉಗ್ರ ಸಂಘಟನೆ?
ಯಾವುದೇ ಸಂಘಟನೆ ಅಥವಾ ವ್ಯಕ್ತಿ ಉಗ್ರ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಭಯೋತ್ಪಾದನೆಗೆ ಸಿದ್ಧತೆ ನಡೆಸಿದ್ದರೆ, ಪ್ರೋತ್ಸಾಹಿಸುತ್ತಿದ್ದರೆ ಅಥವಾ ಉಗ್ರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ ಅಂಥ ಸಂಘಟನೆ ಅಥವಾ ವ್ಯಕ್ತಿಯನ್ನು ಉಗ್ರ ಅಥವಾ ಉಗ್ರ ಸಂಘಟನೆ ಎಂದು ಹೆಸರಿಸಲು ಈ ಕಾಯಿದೆ ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಈ ಕಾಯ್ದೆಯಡಿ ಆರೋಪ ಸಾಬೀತಾದರೆ ಗಲ್ಲು ಶಿಕ್ಷೆ ಹಾಗೂ ಆಜೀವ ಶಿಕ್ಷೆಯನ್ನು ಗರಿಷ್ಠ ಶಿಕ್ಷೆಯಾಗಿ ನೀಡಬಹುದು. ಕೇಂದ್ರ ಸರ್ಕಾರಕ್ಕೆ ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಘಟನೆಗಳು ನಡೆಸುತ್ತಿವೆ ಎಂದು ಅನಿಸಿದರೆ, ಅಂಥ ಸಂಘಟನೆಗಳನ್ನು ನಿಷೇಧ ಮಾಡಲಾಗಿದೆ ಎಂದು ಅಧಿಕೃತವಾಗಿ ಗೆಜೆಟ್ ಮೂಲಕ ನೋಟಿಫಿಕೇಷನ್ ಹೊರಡಿಸಬಹುದು. ಈ ಕಾಯ್ದೆಯ ಅನುಸಾರ ಭಾರತೀಯ ಹಾಗೂ ವಿದೇಶಿಗರ ವಿರುದ್ಧ ಆರೋಪವನ್ನುಹೊರಿಸಬಹುದು.
ಇದನ್ನೂ ಓದಿ | Terror Funding Case | ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಸಾಯೋವರೆಗೆ ಜೈಲು
ಆಸ್ತಿ ಜಪ್ತಿಗೆ ಎನ್ಐಎಗೆ ಅಧಿಕಾರ
ಭಯೋತ್ಪಾದನೆಗೆ ಬಳಕೆಯಾಗುತ್ತಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಎನ್ಐಎಗೆ ಈ ಕಾಯಿದೆ ನೀಡುತ್ತದೆ. ಆದರೆ, ತನಿಖಾಧಿಕಾರಿ ಇದಕ್ಕಾಗಿ ಪೂರ್ವಾನುಮತಿಯನ್ನು ಪೊಲೀಸ್ ಪ್ರಧಾನ ನಿರ್ದೇಶಕರಿಂದ ಪಡೆದುಕೊಳ್ಳಬೇಕಾಗುತ್ತದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಯೊಬ್ಬರು ತನಿಖೆ ನಡೆಸಿದರೆ, ಅಂತಹ ಆಸ್ತಿಯನ್ನು ವಶಪಡಿಸಿಕೊಳ್ಳಲು ಎನ್‌ಐಎ ಮಹಾನಿರ್ದೇಶಕರ ಅನುಮೋದನೆಯನ್ನು ಪಡೆಯುವುದು ಅಗತ್ಯವಾಗಿರುತ್ತದೆ.
ಎನ್ಐಎನಿಂದ ತನಿಖೆ
ಈ ಕಾಯಿದೆಯ ಅನುಸಾರ ಯಾವುದೇ ಅಪರಾಧ ತನಿಖೆಯನ್ನು ಡೆಪ್ಯುಟಿ ಸುಪರಿಟೆಂಡೆಂಟ್ ಆಫ್ ಪೊಲೀಸ್ ಶ್ರೇಣಿಯ ಅಥವಾ ಅಸಿಸ್ಟಂಟ್ ಕಮಿಷನ್ ಆಫ್ ಪೋಲಿಸ್ ಅಥವಾ ಅದಕ್ಕೂ ಮೇಲ್ಪಟ್ಟ ಅಧಿಕಾರಿಗಳ ಮೂಲಕ ಕೈಗೊಳ್ಳಬಹುದು. ಹಾಗೆಯೇ, ಎನ್ಐಎಗೆ ತನಿಖೆಯ ಜವಾಬ್ದಾರಿಯನ್ನು ವಹಿಸಿದರೆ, ಈ ಏಜೆನ್ಸಿಯ ಇನ್ಸ್‌ಪೆಕ್ಟರ್ ಅಥವಾ ಅದಕ್ಕೂ ಮೇಲ್ಪಟ್ಟ ಶ್ರೇಣಿಯ ಅಧಿಕಾರಿ ತನಿಖೆ ನಡೆಸಬೇಕಾಗುತ್ತದೆ.
ಗರಿಷ್ಠ ಶಿಕ್ಷೆ ಏನು?
ಯುಎಪಿಎ ಕಾಯ್ದೆಯಡಿ ಅಪರಾಧಿಗೆ ಗರಿಷ್ಠ ಐದು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಜೀವಾವಧಿ ಶಿಕ್ಷೆ ವಿಧಿಸಬಹುದು. ಗರಿಷ್ಠ ಪ್ರಕರಣದಲ್ಲಿ ಗಲ್ಲು ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಈ ಕಾಯ್ದೆಯಡಿ ಬಂಧಿತರಾದವರಿಗೆ ಜಾಮೀನು ದೊರೆಯುವ ಅವಕಾಶಗಳು ಬಹಳ ಕಡಿಮೆಯಾಗಿರುತ್ತದೆ.
ಟೀಕೆ ತಪ್ಪಲಿಲ್ಲ
ಸರ್ಕಾರಕ್ಕೆ ಅಪರಿಮಿತ ಅಧಿಕಾರವನ್ನು ನೀಡುವ ಈ ಯುಎಪಿಎ ಕಾಯ್ದೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಸರ್ಕಾರವು ಈ ಕಾಯ್ದೆಯನ್ನು ಬಳಸಿಕೊಂಡು ತನ್ನ ರಾಜಕೀಯ ವಿರೋಧಿಗಳನ್ನು, ತನ್ನನೀತಿಗಳನ್ನು ಒಪ್ಪಿಕೊಳ್ಳದವರನ್ನು ಹಣಿಯಲು ಬಳಸಿಕೊಳ್ಳುತ್ತಿದೆ ಎಂಬ ಆರೋಪವಿದೆ. ಯಾಕೆಂದರೆ, ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ಉಗ್ರ ಮತ್ತು ಉಗ್ರ ಸಂಘಟನೆ ಎಂದು ಘೋಷಿಸಲು ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಈ ಕಾಯ್ದೆ ನೀಡುತ್ತದೆ. ಈ ಕಾನೂನಿನ ಸ್ವರೂಪವು ಸಂವಿಧಾನದತ್ತವಾಗಿರುವ ಭಾರತೀಯ ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತರುವಂತಿದೆ ಎಂಬುದು ಕಾಯ್ದೆಯನ್ನು ವಿರೋಧಿಸುವವರ ಅಭಿಪ್ರಾಯವಾಗಿದೆ.
ಈ ಕಾಯ್ದೆಗೆ 2019ರಲ್ಲಿ ತರಲಾದ ತಿದ್ದುಪಡಿಯ ಮುನ್ನ ಯಾವುದೇ ಶಾಸನಾತ್ಮಕ ಚರ್ಚೆಗಳನ್ನು ಮಾಡಿಲ್ಲ. ಸರ್ಕಾರ ತನ್ನ ಮೂಗಿನ ನೇರಕ್ಕೆ ತಿದ್ದುಪಡಿಗಳನ್ನು ತಂದಿದೆ ಎಂಬುದು ಗಂಭೀರ ಆರೋಪವಾಗಿದೆ. ಯಾವುದೇ ಒಬ್ಬ ವ್ಯಕ್ತಿಯನ್ನು ಉಗ್ರ ಎಂದು ಘೋಷಿಸುವ ಅಧಿಕಾರವು ಸಾಂವಿಧಾನಿಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಈ ಅಧಿಕಾರವನ್ನು ಕೇಂದ್ರ ಸರ್ಕಾರವು ದುರುಪಯೋಗ ಕೂಡ ಮಾಡಿಕೊಳ್ಳಬಹುದು ಎಂದು ಆತಂಕ ಹಲವರದ್ದು. ಯಾವುದೇ ಕೋರ್ಟ್ ನಿರ್ಣಯದಕ್ಕಿಂತ ಮುಂಚೆಯೇ ವ್ಯಕ್ತಿಯೊಬ್ಬನನ್ನು ಉಗ್ರ ಎಂದು ಪರಿಗಣಿಸುವುದು, ಆರೋಪ ಸಾಬೀತವಾಗೋವರೆಗೂ ಆರೋಪಿ ಮುಗ್ಧ ಎಂಬ ಕಾನೂನಿನ ಮೂಲ ತತ್ವಕ್ಕೆ ವಿರುದ್ಧವಾಗಿದೆ. ಕೆಲವೊಮ್ಮೆ ತಪ್ಪು ಗ್ರಹಿಕೆಯಿಂದ ಉಗ್ರ ಎಂದು ಘೋಷಿಸಲ್ಪಟ್ಟರೆ, ಆ ವ್ಯಕ್ತಿ ವೃತ್ತಿ, ಜೀವನ, ವರ್ಚಸ್ಸು ಎಲ್ಲವೂ ಹಾಳಾಗುತ್ತದೆ ಎಂಬುದು ಕಾಯ್ದೆ ವಿರೋಧಿಸುವವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ |BANNED | ಪಿಎಫ್‌ಐ, ಸಹಸಂಘಟನೆಗಳಿಗೆ ಐದು ವರ್ಷ ನಿಷೇಧ: ಕೇಂದ್ರ ಸರಕಾರ ಘೋಷಣೆ