ಬೆಂಗಳೂರು: ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯ ಹಲ್ಲು ಕೀಳಲೋ ಎಂಬಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು(ಎಸಿಬಿ) ಹೈಕೋರ್ಟ್ ರದ್ದುಪಡಿಸಿದೆ. ತಾವು ಅಧಿಕಾರಕ್ಕೆ ಬಂದರೆ ಎಸಿಬಿ ರದ್ದುಪಡಿಸುತ್ತೇವೆ ಎಂದು ವಾಗ್ದಾನ ಮಾಡಿದ್ದರೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳದೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ನ್ಯಾಯಾಲಯದಿಂದಾಗಿ ಲೋಕಾಯುಕ್ತ ಮತ್ತೆ ಬಲಗೊಳ್ಳುವ ಭರವಸೆ ಮೂಡಿದೆ. ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರವೇ ಧ್ವಜಾರೋಹಣ ಮಾಡಲಿದೆ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತ ಮೂವರ ವಿವರ ಲಭ್ಯವಾಗಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಎಸಿಬಿ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು; ಎಲ್ಲ ಕೇಸ್ ಲೋಕಾಯುಕ್ತಕ್ಕೆ ಶಿಫ್ಟ್
ಲೋಕಾಯುಕ್ತಕ್ಕೆ ಪರ್ಯಾಯವಾಗಿ ರಚಿಸಲಾಗಿದ್ದ ಎಸಿಬಿ ವ್ಯವಸ್ಥೆಯನ್ನು ಹೈಕೋರ್ಟ್ ರದ್ದುಗೊಳಿಸಿ ಮಹತ್ವದ ಆದೇಶವನ್ನು ನೀಡಿದ್ದು, ಹಾಲಿ ಇರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸುವಂತೆ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶವನ್ನು ನೀಡಿದೆ. ಈ ಮೂಲಕ ಎಸಿಬಿ ಪೊಲೀಸ್ ಠಾಣೆಗಳೂ ಸಹ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಲೋಕಾಯುಕ್ತಕ್ಕೆ ಮರುಜೀವ ಬರಲಿದೆ. ಅಲ್ಲದೆ, ಇದುವರೆಗೆ ಎಸಿಬಿ ನಡೆಸುತ್ತಿರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಹೊಸ ಸಂಸ್ಥೆಯಿಂದ ಲೋಕಾಯುಕ್ತ ದುರ್ಬಲವಾಯಿತು ಎಂಬ ಆರೋಪ ಕೇಳಿಬಂದಿತ್ತು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
2. ಜಮೀರ್ ಅಹ್ಮದ್‌ಗೆ ಹಿನ್ನಡೆ: ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯ ಸರ್ಕಾರದಿಂದಲೇ ಧ್ವಜಾರೋಹಣ
ಅನೇಕ ದಿನಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ಚಾಮರಾಜಪೇಟೆ ಮೈದಾನದಲ್ಲಿ ತಾವು ಧ್ವಜಾರೋಹಣ ಮಾಡುತ್ತೇವೆ ಎಂದು ಹೇಳಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಕಂದಾಯ ಇಲಾಖೆಗೆ ಜಾಗ ಸೇರಿದ್ದು, ಇಲಾಖೆಯಿಂದಲೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನಡೆಸಲಾಗುತ್ತದೆ ಎಂದು ಕಂದಾಯ ಇಲಾಖೆ ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಆರ್. ಅಶೋಕ್, ಚಾಮರಾಜಪೇಟೆ ಮೈದಾನದ ವಿವಾದ ನಡೆದುಕೊಂಡು ಬಂದ ಹಾದಿಯನ್ನು ಒಂದೊಂದಾಗಿ ವಿವರಿಸಿದರು. ಕಂದಾಯ ಇಲಾಖೆಗೆ ಮೈದಾನ ಸೇರುವುದರಿಂದಾಗಿ, ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯಡಿ ಅಸಿಸ್ಟೆಂಟ್ ಕಮಿಷನರ್ ಧ್ವಜಾರೋಹಣ ಮಾಡುತ್ತಾರೆ ಎಂದು ಆರ್. ಅಶೋಕ್ ತಿಳಿಸಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
3. praveen nettaru | ಪ್ರವೀಣ್ ಕೊಲೆ ಪ್ರಕರಣದಲ್ಲಿ BIG BREAKING: ಬಂಧಿತ ಮೂವರಿಗೆ ಎಸ್‌ಡಿಪಿಐ, ಪಿಎಫ್‌ಐ ನಂಟು
ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಧಾನ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಜುಲೈ ೨೬ರಂದು ರಾತ್ರಿ ೮ ಗಂಟೆಯ ಹೊತ್ತಿಗೆ ಬೈಕ್‌ನಲ್ಲಿ ಬಂದು ಪ್ರವೀಣ್ ಅವರನ್ನು ಅಟ್ಟಾಡಿಸಿ ಕೊಂದು ಹಾಕಿದ್ದ ಮೂವರು ಪ್ರಧಾನ ಹಂತಕರು ಬಲೆಗೆ ಬಿದ್ದಿರಲಿಲ್ಲ. ಪೊಲೀಸರು ಬಹುಸಾಹಸದಿಂದ ಅವರನ್ನು ಬಂಧಿಸುವಲ್ಲಿ ಈಗ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಶಿಯಾಬುದ್ದೀನ್, ರಿಯಾಜ್ ಅಂಕತಡ್ಕ ಮತ್ತು ರಶೀದ್ ಎಲಿಮಲೆ ಎಂದು ಗುರುತಿಸಲಾಗಿದೆ. ಎಲ್ಲರೂ ಸುಳ್ಯ ತಾಲೂಕಿನವರು. ಆರೋಪಿಗಳ ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
4. ಜನಗಣಮನವನ್ನು ಅವಮಾನಿಸಿದ ಬರಗೂರು ರಾಮಚಂದ್ರಪ್ಪ?: ಕಾದಂಬರಿಯ ಪದ್ಯ ವೈರಲ್
ಮೂರು ತಿಂಗಳ ಹಿಂದೆ ರಾಜ್ಯದೆಲ್ಲೆಡೆ, ನಾಡಗೀತೆಗೆ ಅವಮಾನದ ವಿಚಾರ ಚರ್ಚೆಯಾಗಿತ್ತು. ಪ್ರೊ. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ರಚನಾ ಸಮಿತಿಯ ಪಠ್ಯವನ್ನು ಪರಿಷ್ಕರಿಸಿದ್ದ ಲೇಖಕ ರೋಹಿತ್ ಚಕ್ರತೀರ್ಥ ವಿರುದ್ಧ ಈ ಆರೋಪ ಕೇಳಿಬಂದಿತ್ತು. ರೋಹಿತ್ ಚಕ್ರತೀರ್ಥ ಅವರು ಹಿಂದೊಮ್ಮೆ ನಾಡಗೀತೆಯನ್ನು ತಿರುಚಿ ಅವಮಾನ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಪ್ರೊ. ಬರಗೂರು ರಾಮಚಂದ್ರಪ್ಪ ಅವರೇ ಕಾದಂಬರಿಯೊಂದರಲ್ಲಿ ರಾಷ್ಟ್ರಗೀತೆ ಜನಗಣಮನವನ್ನು ಅವಮಾನಿಸಿದ್ದಾರೆ, ಗಂಗೆಯನ್ನು ಹಾದರಕ್ಕೆ ಹೋಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರೊ. ಬರಗೂರು ರಾಮಚಂದ್ರಪ್ಪ ಅವರು ತಮ್ಮ ʻಭರತನಗರಿʼ ಕಾದಂಬರಿಯಲ್ಲಿ ಇಂಥ ಪದ್ಯವೊಂದನ್ನು ಬರೆದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
5. ವಿಸ್ತಾರ Explainer | ಮೋದಿಯನ್ನು ಎದುರಿಸ ಬಯಸುವ ನಾಯಕರಿವರು! ಏನಿವರ ಶಕ್ತಿ, ದೌರ್ಬಲ್ಯ?
ಮುಂದಿನ ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಆದರೆ ಎಲ್ಲ ಪಕ್ಷಗಳಲ್ಲೂ ಚುನಾವಣೆಯ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಮತ್ತೆ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನೇ ತೋರಿಸುವುದು ಖಚಿತವಾಗಿದೆ. ಪ್ರತಿಪಕ್ಷಗಳಲ್ಲಿ ನರೇಂದ್ರ ಮೋದಿ ಅವರಿಗೆ ಮುಖಾಮುಖಿಯಾಗಿ ನಿಲ್ಲಬಲ್ಲವರು ಯಾರಿದ್ದಾರೆ ಎಂಬ ಹುಡುಕಾಟ ಆರಂಭವಾಗಿದೆ. ಸದ್ಯ ಐದು ಮಂದಿಯ ಹೆಸರು ಕೇಳಿಸುತ್ತಿದೆ- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಸಂಯುಕ್ತ ಜನತಾ ದಳ ನಾಯಕ ನಿತೀಶ್ ಕುಮಾರ್, ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಕೆ.ಚಂದ್ರಶೇಖರ ರಾವ್. ಈ ನಾಯಕರ ಸಾಮರ್ಥ್ಯ, ಬಲಹೀನತೆಗಳು, ಗುಣಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
6. Heavy Rain | ಉಕ್ಕಿ ಹರಿಯುವ ಸೇತುವೆ ದಾಟಲು ಜೆಸಿಬಿ ಮೊರೆ ಹೋದ ಶಾಲಾ ಮಕ್ಕಳು!
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವೆಂಕಟಹಳ್ಳಿ- ಜಂಬರಡಿ ಗ್ರಾಮದ ಸಮೀಪದ ಶಾಲಾ ಮಕ್ಕಳು, ಸ್ಥಳೀಯರು ತಮ್ಮ ಜೀವ ಪಣಕ್ಕಿಟ್ಟು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ (Heavy Rain) ಮುಂದುವರಿದಿದ್ದು, ಕೆರೆಕಟ್ಟೆ – ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಪರಿಣಾಮ ಮಲೆನಾಡಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯಿಂದ ಸೇತುವೆಯ ರಸ್ತೆ ಜಲಾವೃತವಾಗಿದ್ದು, ಒಂದೆಡೆಯಿಂದ ಮತ್ತೊಂದೆಡೆ ಜನರು ಹಾಗೂ ಮಕ್ಕಳ ಓಡಾಟಕ್ಕೆ ತೊಂದರೆ ಆಗಿದೆ. ಸೇತುವೆ ಮೇಲೆ ರಭಸವಾಗಿ ಹರಿಯುತ್ತಿರುವ ನೀರನ್ನು ಲೆಕ್ಕಿಸದೇ ಜೆಸಿಬಿ ಬಕೆಟ್ ಮೇಲೆ ಶಾಲಾ ಮಕ್ಕಳು ನಿಂತು ಸೇತುವೆ ದಾಟುತ್ತಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
7. ಅಮೃತಮಹೋತ್ಸವ | ಆ. 15ರಂದು ಬಿಎಂಟಿಸಿಯಲ್ಲಿ ದುಡ್ಡೇ ಕೊಡದೆ ಫ್ರೀ ಆಗಿ ಓಡಾಡೋ ಸ್ವಾತಂತ್ರ್ಯ!
ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಾಗರಿಕರಿಗೆ ಬಿಎಂಟಿಸಿ ವಿಶೇಷ ಕೊಡುಗೆಯನ್ನು ನೀಡಿದೆ. ಅದೇನೆಂದರೆ, ಅವತ್ತು ಯಾರು ಯಾವ ಬಸ್‌ನಲ್ಲಿ ಎಷ್ಟು ಬಾರಿ ಓಡಾಡಿದರೂ ಫುಲ್ ಫ್ರೀ, ಒಂದು ಪೈಸೆಯನ್ನೂ ಕೊಡಬೇಕಾಗಿಲ್ಲ!
ಹೌದು. ಬಿಎಂಟಿಸಿ ತನ್ನ ಎಲ್ಲಾ ಬಸ್‌ಗಳಲ್ಲಿ ಇಡೀ ದಿನ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮಾಡಿದೆ. ಆಗಸ್ಟ್ ೧೫ರಂದು ಇಡೀದಿನ ಬೆಂಗಳೂರಿನಲ್ಲಿ ಯಾರು ಎಲ್ಲಿಗೆ ಬೇಕಾದರೂ ಸಂಚರಿಸಬಹುದು, ಹಣ ಕೊಟ್ಟು ಟಿಕೆಟ್ ಪಡೆದುಕೊಳ್ಳಬೇಕಾದ ಅವಶ್ಯಕತೆಯೇ ಇಲ್ಲ ಎಂದು ಬಿಎಂಟಿಸಿ ನಿಗಮ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದ್ದಾರೆ. ಅದೇ ರೀತಿ ಬೆಂಗಳೂರು ಮೆಟ್ರೋದಲ್ಲೂ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
8. ಉತ್ತರ ಪ್ರದೇಶದ ಯಮುನಾ ನದಿಯಲ್ಲಿ ಮುಳುಗಿದ ದೋಣಿ; 20 ಮಂದಿ ದುರ್ಮರಣ
ಉತ್ತರ ಪ್ರದೇಶ ಬಾಂದಾದಲ್ಲಿ ಯಮನಾ ನದಿಯಲ್ಲಿ ದೋಣಿಯೊಂದು ಮುಳುಗಿ (Boat Capsizes In Yamuna) ಸುಮಾರು 20 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ಕು ಮೃತದೇಹ ಸಿಕ್ಕಿದೆ. ಈ ಬೋಟ್ ಮರ್ಕಾ ಘಾಟ್ನಿಂದ ಫತೇಹ್ಪುರಕ್ಕೆ ಹೋಗುತ್ತಿತ್ತು. 40ಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಿದ್ದರು. ಅದೆಷ್ಟೋ ಮಹಿಳೆಯರು ತಮ್ಮ ಪತಿಯ ಮನೆಯಿಂದ ತವರು ಮನೆಗೆ, ಸೋದರರಿಗೆ ರಕ್ಷಾ ಬಂಧನ ಕಟ್ಟಲು ಹೋಗುತ್ತಿದ್ದರು. ಆದರೆ ದೋಣಿ ಮಾರ್ಗ ಮಧ್ಯೆ ನದಿಯಲ್ಲಿ ಮುಳುಗಿದೆ. ಮೃತದೇಹಗಳನ್ನು ನದಿಯಿಂದ ಹೊರಗೆ ತೆಗೆಯುವ, ನಾಪತ್ತೆಯಾದವರನ್ನು ಹುಡುಕಿ, ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈ ಬೋಟ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚು ಜನರನ್ನು ತುಂಬಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
9. ಕಾಂಗ್ರೆಸ್ ಟ್ವೀಟ್ ಎಫೆಕ್ಟ್: ದಿನಕ್ಕೆ 2 ಗಂಟೆ ಹೆಚ್ಚು ಕೆಲಸ ಮಾಡಲು ಸಿಎಂ ಬೊಮ್ಮಾಯಿ ನಿರ್ಧಾರ!
ಕಾಂಗ್ರೆಸ್ ಟ್ವಿಟರ್‌ನಲ್ಲಿ ಆರಂಭಿಸಿದ ಸಿಎಂ ಬದಲಾವಣೆ ಕುರಿತ ಚರ್ಚೆಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಮಾಡಲು ನನಗೆ ಹೆಚ್ಚಿನ ಪ್ರೇರಣೆ ಸಿಕ್ಕಿದೆ ಎಂದಿದ್ದಾರೆ. ಮೈಸೂರು ಪ್ರವಾಸಕ್ಕೆ ಹೊರಡುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬೊಮ್ಮಾಯಿ, ಕಾಂಗ್ರೆಸ್‌ನವರು ತಮ್ಮನ್ನು ತಾವು ಏನೋ ಎಂದುಕೊಂಡಿದ್ದಾರೆ. ಅವರ ಮನಸ್ಸಿನಲ್ಲಿ ಅತಂತ್ರ ಇದೆ. ಅದನ್ನು ರಾಜ್ಯದ ತುಂಬಾ ಹರಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದನ್ನು ರಾಜ್ಯದ ಜನರು ನಂಬುವುದಿಲ್ಲ. ಇದೆಲ್ಲದರಿಂದ ನನ್ನ ನಿರ್ಣಯಗಳು ಮತ್ತಷ್ಟು ಗಟ್ಟಿಯಾಗಿವೆ. ರಾಜ್ಯದ ಹಿತಾಸಕ್ತಿ ಕಾಯಲು ಮತ್ತಷ್ಟು ಪ್ರೇರಣೆ ಲಭಿಸಿದೆ. ಬರುವ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ, ಪಕ್ಷದ ಚಟುವಟಿಕೆಗಳ ಕಡೆಗೆ ಇನ್ನೂ ಹೆಚ್ಚಿನ ಗಮನ ನೀಡುತ್ತೇನೆ. ಪ್ರತಿದಿನ ಇನ್ನೂ ಎರಡು ಗಂಟೆ ಹೆಚ್ಚು ಕೆಲಸ ಮಾಡುತ್ತೇನೆ ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
10. ರಾಜೌರಿ ಸೇನಾನೆಲೆಯಲ್ಲಿ ಆತ್ಮಹತ್ಯಾ ದಾಳಿ, ಮೂವರು ಯೋಧರ ಸಾವು, ಇಬ್ಬರು ಉಗ್ರರ ಹತ್ಯೆ
ಜಮ್ಮು ಮತ್ತು ಕಾಶ್ಮೀರ ಕಣಿವೆಯ ರಜೌರಿಯ ಭೂಸೇನಾ ನೆಲೆ ಬಳಿ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ. ರಜೌರಿಯಿಂದ 25 ಕಿಮೀ ದೂರದ ಪರ್ಗಲ್ ಎಂಬಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ದಾಟಿ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರನ್ನು ಸೇನಾಯೋಧರು ತಡೆದಾಗ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸ್ ಹೆಚ್ಚುವರಿ ಡೈರೆಕ್ಟರ್ ಜನರಲ್ ಮುಕೇಶ್ ಸಿಂಗ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮೂವರು ಯೋಧರು ಬಲಿಯಾದರು. ಇಬ್ಬರು ಭಯೋತ್ಪಾದಕರು ಸತ್ತರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.