Site icon Vistara News

ವಿಸ್ತಾರ TOP 10 NEWS | ರಾಜ್ಯದಲ್ಲಿ ಮಳೆ ಪ್ರಹಾರದಿಂದ ಬಾಂಗ್ಲಾ ಪ್ರಧಾನಿ ಪ್ರವಾಸದವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 06092022

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೂಲಸೌಕರ್ಯದ ಸಾಮರ್ಥ್ಯ ಮೀರಿ ಸುರಿಯುತ್ತಿರುವ ಮಳೆ ಅಪಾರ ಹಾನಿ ಉಂಟುಮಾಡಿದ್ದು, ಬೆಂಗಳೂರು ಸೇರಿ ವಿವಿಧೆಡೆ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಯಿಂದಾದ ಅವ್ಯವಸ್ಥೆಯ ಕುರಿತು ರಾಜಕೀಯ ಹಗ್ಗಜಗ್ಗಾಟವೂ ಆರಂಭವಾಗಿದೆ. ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಜತೆಗೆ ಪ್ರಧಾನಿ ಮೋದಿ ಮಾತುಕತೆ ನಡೆಯುತ್ತಿದೆ, ವಿಧಾನಸಭೆ ಚುನಾವಣೆಗೂ ಮುನ್ನ ರ‍್ಯಾಲಿಗಳ ವೇಳಾಪಟ್ಟಿಯನ್ನು ಬಿಜೆಪಿ ಘೋಷಿಸಿದೆ, ಮೈಸೂರು ಪಾಲಿಕೆ ಬಿಜೆಪಿ ತೆಕ್ಕೆಗೆ ಬಂದಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Rain News: ರಾಜ್ಯಾದ್ಯಂತ ಮಳೆ, ಸಿಡಿಲ ಹೊಡೆತಕ್ಕೆ ಇಬ್ಬರು ಪೊಲೀಸರ ಸಹಿತ ಎಂಟು ಮಂದಿ ಬಲಿ
ರಾಜ್ಯದಲ್ಲಿ ವರುಣಾರ್ಭಟ ಮುಂದುವರಿದಿದೆ. ಸುಮಾರು ೧೫ ಜಿಲ್ಲೆಗಳು ಒಮ್ಮಿಂದೊಮ್ಮೆಗೇ ಸುರಿಯವ, ಪ್ರವಾಹ ಸೃಷ್ಟಿಸುವ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆಯ ಹೊಡೆತ, ಕುಸಿಯುವ ಮನೆಗಳು, ಪ್ರವಾಹ, ಸಿಡಿಲ ಹೊಡೆತ ಮತ್ತು ವಿದ್ಯುತ್‌ ಆಘಾತಕ್ಕೆ ಒಳಗಾಗಿ ಇಬ್ಬರು ಪೊಲೀಸರು ಸೇರಿದಂತೆ ಎಂಟು ಮಂದಿ ಮಂಗಳವಾರ ಪ್ರಾಣ ಕಳೆದುಕೊಂಡಿದ್ದಾರೆ.
1️⃣ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತೊಂಡಿಹಾಳ ಹಳ್ಳದಲ್ಲಿ ಇಬ್ಬರು ಪೊಲೀಸರು ಕೊಚ್ಚಿ ಹೋಗಿದ್ದಾರೆ.
2️⃣ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರದಲ್ಲಿ ಅಖಿಲಾ (೨೩) ಎಂಬವರು ವಿದ್ಯುತ್‌ ಆಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.
3️⃣ಚಾಮರಾಜನಗರದ ಯಳಂದೂರು ತಾಲೂಕಿನ ಕೆಸ್ತೂರಿನಲ್ಲಿ ರೇವಣ್ಣ ಎಂಬ ರೈತರೊಬ್ಬರು ಜಮೀನಿನಲ್ಲಿ ಭತ್ತ ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
4️⃣ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಕಾಟಾಪುರ ಗ್ರಾಮದ ನಿವಾಸಿಯಾಗಿರುವ ಸಣ್ಣನೀಲಪ್ಪ ಹಾದಿಮನಿ (೫೫) ಅವರು ಹೊಲದಲ್ಲಿದ್ದಾಗ ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದಾರೆ.
5️⃣ಶಿವಮೊಗ್ಗದ ಮಲವಗೊಪ್ಪದ ಇಂದಿರಾನಗರ ಬಡಾವಣೆಯಲ್ಲಿ ಮನೆ ಕುಸಿದಿದ್ದು, ಗೌರಮ್ಮ (೬೯) ಎಂಬ ಮಹಿಳೆ ಮೃತಪಟ್ಟಿದ್ದಾರೆ.

2. ಬೆಂಗಳೂರಿನಲ್ಲಿ ಮುಂದುವರಿದ ಮಹಾಮಳೆ ಆರ್ಭಟ, ರಾತ್ರಿ ಆಯಿತೆಂದರೆ ಭಯ!
ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರವನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಮಹಾ ಮಳೆ ಮಂಗಳವಾರವೂ ತನ್ನ ಉಗ್ರಾವತಾರವನ್ನು ಮುಂದುವರಿಸಿತ್ತು. ಸೋಮವಾರ ರಾತ್ರಿ ಇಡೀ ಸುರಿದ ಮಹಾ ಮಳೆಯಿಂದ ಹೊರವರ್ತುಲ ರಸ್ತೆಯ ಉದ್ದಕ್ಕೂ ಭಯಾನಕ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಬೆಳಂದೂರು, ಸರ್ಜಾಪುರ ರಸ್ತೆಯ ಆಸುಪಾಸಿನಲ್ಲಿರುವ ಮನೆಗಳಿಗೆ, ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ನೀರು ಇನ್ನೂ ಇಳಿದಿಲ್ಲ. ಕೆಲವೊಂದು ಕಡೆ ದೋಣಿಗಳ ಮೂಲಕ, ಟ್ರ್ಯಾಕ್ಟರ್‌, ಜೆಸಿಬಿಗಳ ಮೂಲಕ ಜನರು ಸಂಚಾರ ಮಾಡಬೇಕಾಯಿತು. ಹಗಲೆಲ್ಲ ಬಿಸಿಲು ಜೋರಾಗಿದ್ದರೆ ಸಂಜೆಯ ಹೊತ್ತಿಗೆ ಮಳೆ ಶುರುವಾಗುತ್ತದೆ. ಹೀಗಾಗಿ ಜನ ಕತ್ತಲಾಗುತ್ತಿದ್ದಂತೆಯೇ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿರಬೇಕಾದ ಸ್ಥಿತಿ ಬಂದಿದೆ. ಈ ಮಳೆ ಆರ್ಭಟ ಇನ್ನೂ ನಾಲ್ಕು ದಿನಗಳ ಕಾಲ ಮುಂದುವರಿಯುಲಿದೆ. ಈ ನಡುವೆ ಸ್ವಲ್ಪ ನೆಮ್ಮದಿಯ ವಿಚಾರ ಎಂದರೆ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ನೀರು ಸರಬರಾಜು ಬುಧವಾರ ಮರು ಆರಂಭವಾಗಲಿದೆ.
👉🏿 ವಿಲ್ಲಾದಲ್ಲಿ ಶ್ವಾನ ವಿಲವಿಲ, ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣೆ
👉🏿 ಕನಸಿನ ಮನೆಗಳು ನೀರಲ್ಲಿ ಮುಳುಗಡೆ; ಬೋಟ್‌ ಮೂಲಕ ಜನರ ರಕ್ಷಣೆ

3. ಬೆಂಗಳೂರು ಅವ್ಯವಸ್ಥೆಗೆ ಕಾರಣವೇ ಕಾಂಗ್ರೆಸ್‌ ಎಂದ ಸಿಎಂ ಹೇಳಿಕೆ: ರಾಜಕೀಯ ಹಗ್ಗಜಗ್ಗಾಟ
ಬೆಂಗಳೂರಿನಲ್ಲಿ ಮಳೆಯಿಂದಾಗಿ ನೀರು ಎಲ್ಲೆಡೆ ನಿಂತು ಜನರಿಗೆ ಸಮಸ್ಯೆ ಆಗಲು ಈ ಹಿಂದಿನ ಕಾಂಗ್ರೆಸ್‌ ಆಡಳಿತವೇ ಕಾರಣ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ರಾಜಕೀಯ ವಾಗ್ವಾದಕ್ಕೆ ಕಾರಣವಾಯಿತು. ಎಗ್ಗಿಲ್ಲದೆ ಕೆರೆಗಳಲ್ಲಿ, ಕೆರೆ ಬಂಡ್ ಹಾಗೂ ಬಫರ್ ವಲಯಗಳಲ್ಲಿ ಅನುಮತಿಗಳನ್ನು ನೀಡಿದ್ದಾರೆ. ಯಾವುದೇ ನಿಯಮಾವಳಿ ಇಲ್ಲದೆ ಅನುಮತಿ ನೀಡಿದ್ದಾರೆ ಎಂದರು.
ಈ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌, ಆಡಳಿತ ಈಗ ಬಿಜೆಪಿ ಕೈಯಲ್ಲಿದೆ. ಅಧಿಕಾರ ನಡೆಸುತ್ತಿರುವವರು ಹೊಣೆ ಹೊರುವ ಬದಲಿಗೆ ಕಾಂಗ್ರೆಸ್‌ ಹೆಗಲಿಗೆ ಹೊರಿಸುತ್ತಿದ್ದಾರೆ. ಅಧಿಕಾರ ನಡೆಸಲಾಗದಿದ್ದರೆ ರಾಜೀನಾಮೆ ನೀಡಿ ಹೊರಬನ್ನಿ ಎಂದರು.
ಸಂಜೆ ವೇಳೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಮಳೆ, ಪ್ರವಾಹದ ವಿಷಯದಲ್ಲಿ ರಾಜಕೀಯವಾಗುತ್ತಿರುವುದು ದುರ್ದೈವದ ಸಂಗತಿ. ಮಳೆ ಯಾವ ಪಕ್ಷವನ್ನೂ ನೋಡಿ ಬರುವುದಿಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಸಣ್ಣ ಪ್ರವೃತ್ತಿಯಾಗಿದೆ ಎಂದು ತಿಳಿಸಿದರು.

4. ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್‌: ಅಕ್ಟೋಬರ್‌ನಲ್ಲಿ 7ನೇ ವೇತನ ಆಯೋಗ ರಚನೆ ಎಂದ ಸಿಎಂ
ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು 2022ರ ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಘೋಷಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿದ್ದ ಮೊದಲ ʼರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನʼ ಸಮಾರಂಭದಲ್ಲಿ ಮಾತನಾಡಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಇನ್ಫೋಸಿಸ್‌ ಸ್ಪ್ರಿಂಗ್‌ಬೋರ್ಡ್: ವಿದ್ಯಾರ್ಥಿಗಳಿಗೆ 12,300 ಕೋರ್ಸ್ ಉಚಿತವಾಗಿ ಕಲಿಸುವ ಒಪ್ಪಂದಕ್ಕೆ ಅಂಕಿತ
ವಿದ್ಯಾರ್ಥಿಗಳನ್ನು ವೃತ್ತಿ ಮತ್ತು ಬದುಕಿಗೆ ಸಜ್ಜುಗೊಳಿಸುವ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮತ್ತು ರಾಜ್ಯ ಸರ್ಕಾರದ ಎಲ್ಲ ವಿಶ್ವ ವಿದ್ಯಾಲಯಗಳು, ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಜತೆ ಮಂಗಳವಾರ ಒಡಂಬಡಿಕೆಗೆ ಅಂಕಿತ ಹಾಕಿದವು. ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ಈ ಕಾರ್ಯಕ್ರಮ ನಡೆಯಿತು. ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ (https://infyspringboard.onwingspan.com) ವ್ಯವಸ್ಥೆಯಡಿ 12,300 ಕೋರ್ಸುಗಳು ಉಚಿತವಾಗಿ ಲಭ್ಯವಿವೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Modi and Sheikh | 25 ವರ್ಷದಲ್ಲಿ ಭಾರತ – ಬಾಂಗ್ಲಾ ದೇಶ ನಡುವಿನ ಒಪ್ಪಂದಗಳು ಹೊಸ ಎತ್ತರಕ್ಕೆ: ಮೋದಿ
ನಾಲ್ಕು ದಿನಗಳ ಕಾಲ ಭಾರತದ ಪ್ರವಾಸದಲ್ಲಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಮುಂದಿನ 25 ವರ್ಷಗಳಲ್ಲಿ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಒಪ್ಪಂದಗಳು ಹೊಸ ಎತ್ತರವನ್ನು ತಲುಪಲಿವೆ ಎಂದು ನರೇಂದ್ರ ಮೋದಿ ಅವರು ಹೇಳಿದರು.
ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ವ್ಯಾಪಾರ ವೇಗವಾಗಿ ಹೆಚ್ಚುತ್ತಿದೆ. ನಾವು ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಅಣು ವಲಯಗಳಿಗೂ ಈ ಸಹಕಾರವನ್ನು ವಿಸ್ತರಿಸಲಿದ್ದೇವೆ. ವಿದ್ಯುತ್ ಪ್ರಸರಣ ಲೈನ್ ವಿಸ್ತರಿಸುವ ಸಂಬಂಧವೂ ಉಭಯ ರಾಷ್ಟ್ರಗಳ ಮಧ್ಯೆ ಮಾತುಕತೆಗಳು ನಡೆಯುತ್ತಿವೆ ಎಂದು ಪ್ರಧಾನಿ ಅವರು ಇದೇ ವೇಳೆ ತಿಳಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Election 2023 | ಕಟೀಲ್‌ ಟೀಂ ಒಂದು ಕಡೆ, CM-BSY ಟೀಂ ಮತ್ತೊಂದು ಕಡೆ: ಪ್ರವಾಸಕ್ಕೆ ಸಜ್ಜಾದ BJP
ರಾಜ್ಯ ಸರ್ಕಾರದ ಮೂರು ವರ್ಷದ ಸಂಭ್ರಮದ ಕಾರ್ಯಕ್ರಮ ಆಯೋಜನೆ ಮೂಲಕ ವಿಧಾನಸಭೆ ಚುನಾವಣೆಗೆ ಚಾಲನೆ ನೀಡಬೇಕು ಎಂಬ ಬಿಜೆಪಿ ಪ್ರಯತ್ನಕ್ಕೆ ಕೊನೆಗೂ ಕಾಲಕೂಡಿ ಬಂದಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹಾಗೂ ಸಿಎಂ ಬೊಮ್ಮಾಯಿ-ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ. ಈ ಕುರಿತು ತಾತ್ಕಾಲಿಕ ಪ್ರವಾಸದ ವಿವರವನ್ನು ಬಿಡುಗಡೆ ಮಾಡಲಾಗಿದೆ. 104 ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯ ಬಿಜೆಪಿಯ ಎರಡು ತಂಡಗಳ ಪ್ರವಾಸ ಏರ್ಪಡಿಸಲಾಗುತ್ತದೆ. ರಾಜ್ಯಾಧ್ಯಕ್ಷರ ತಂಡ ಪ್ರವಾಸದ 52 ಕ್ಷೇತ್ರಗಳಲ್ಲಿ ಬೂತ್, ಶಕ್ತಿ ಕೇಂದ್ರಗಳ, ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಲಿದೆ. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿಗಳ ತಂಡ ಇನ್ನೊಂದು ಭಾಗದಲ್ಲಿ ಪ್ರವಾಸ ಮಾಡಲಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. BJP ತೆಕ್ಕೆಗೆ ಮೈಸೂರು ಮೇಯರ್‌ ಗದ್ದುಗೆ: ಕೇಳದೇ ಇದ್ದರೂ JDSನವರೇ ಮತ ನೀಡಿದ್ದಾರೆ ಎಂದ ಪಕ್ಷ !
ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಅಂತಿಮ ಕ್ಷಣದಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಗೆ ಜೆಡಿಎಸ್‌ ಬೆಂಬಲ ನೀಡಿದ್ದು, ಎರಡನೇ ಅವಧಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಬಿಜೆಪಿ ಸದಸ್ಯ ಶಿವಕುಮಾರ್‌ ಅವರು ಮೈಸೂರು ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಉಪಮೇಯರ್‌ ಆಗಿ ಬಿಜೆಪಿಯ ಡಾ. ಜಿ. ರೂಪ ಯೋಗೀಶ್ ಆಯ್ಕೆಯಾಗಿದ್ದಾರೆ. 65 ಸದಸ್ಯರ ಪಾಲಿಕೆಯಲ್ಲಿ ಸಂಖ್ಯಾ ಬಲದಲ್ಲಿ ಬಿಜೆಪಿ ಮುಂದಿದೆ. ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಕಾಂಗ್ರೆಸ್, ಜೆಡಿಎಸ್ ಇದ್ದು, ಈ ಬಾರಿ ಮೂರೂ ಪಕ್ಷಗಳ ನಡುವೆ ಅಧಿಕೃತವಾಗಿ ಯಾವುದೇ ಮೈತ್ರಿ ಏರ್ಪಟ್ಟಿರಲಿಲ್ಲ. ಹಾಗಾಗಿ ಎಲ್ಲ ಪಕ್ಷಗಳೂ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದ್ದವು. ಆದರೆ ಅಂತಿಮ ಕ್ಷಣದಲ್ಲಿ ಬಿಜೆಪಿಗೆ ಜೆಡಿಎಸ್‌ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಚಾಳಿ ಬಿಡದ ಪಾಕಿಸ್ತಾನ; ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘನೆ
ಪಾಕಿಸ್ತಾನದ ಸೈನಿಕರು ಇಂದು ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದಾರೆ. ಭಾರತದ ಗಡಿ ಭದ್ರತಾ ಪಡೆ ಸಿಬ್ಬಂದಿ (BSF) ಮೇಲೆ ಅಪ್ರೋಚದಿತ ಗುಂಡಿನ ದಾಳಿ ನಡೆಸಿದ್ದಾರೆ. ಗಡಿ ಭಾಗದಲ್ಲಿ ಒಂದೋ ಉಗ್ರರ ಕಾಟ ಇಲ್ಲವೇ, ಪಾಕಿಸ್ತಾನ ಸೈನಿಕರ ಪುಂಡಾಟ ಇದ್ದೇ ಇರುತ್ತದೆ. ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದ ನಂತರ ಸ್ವಲ್ಪ ದಿನಗಳವರೆಗೆ ಪಾಕ್​ನಿಂದ ಒಂದೇ ಸಮನೆ ಕದನ ವಿರಾಮ ಉಲ್ಲಂಘನೆಯಾಗುತ್ತಿತ್ತು. 2021ರ ಫೆಬ್ರವರಿಯಿಂದ ಈಚೆಗೆ ಪಾಕಿಸ್ತಾನಿ ಸೈನಿಕರು ಯುದ್ಧ ವಿರಾಮ ಉಲ್ಲಂಘಿಸುವ ವರ್ತನೆ ತೋರಿಸಿರಲಿಲ್ಲ. ಆದರೆ ಈಗ ಮತ್ತೆ ಪಾಕ್​ ತನ್ನ ಚಾಳಿ ಮುಂದುವರಿಸಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
Terrorists Killed | ಕಾಶ್ಮೀರದಲ್ಲಿ ಯೋಧನ ಹತ್ಯೆಗೈದಿದ್ದ ಇಬ್ಬರು ಉಗ್ರರ ಎನ್‌ಕೌಂಟರ್!

10. Ramya Politics | ರಾಜಕೀಯ ಅಖಾಡಕ್ಕೆ ನಟಿ ರಮ್ಯಾ ರೀ ಎಂಟ್ರಿ?
ರಮ್ಯಾ ರಾಜಕೀಯ (Ramya Politics) ಅಖಾಡಕ್ಕೆ ಮರಳುತ್ತಾರಾ..? ಹೀಗೊಂದು ಪ್ರಶ್ನೆ ಕಳೆದ ಕೆಲ ದಿನಗಳಿಂದ ರಮ್ಯಾ ಅಭಿಮಾನಿ ಬಳಗವನ್ನು ಕಾಡುತ್ತಿದೆ. ಈ ರೀತಿ ಅಭಿಮಾನಿಗಳಿಗೆ ಅನುಮಾನ ಕಾಡಲು ಕಾರಣ ರಮ್ಯಾ ಮಾಡಿರುವ ಟ್ವೀಟ್. ಕೆಲ ದಿನಗಳಿಂದ ರಾಜ್ಯದ ಸಂಸದರು ಹಾಗೂ ಶಾಸಕರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರಮ್ಯಾ, ಅಭಿಮಾನಿಗಳಲ್ಲಿ ಹೊಸ ಕುತೂಹಲ ಕೆರಳುವಂತೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ರಾಜಕೀಯ ರೀ ಎಂಟ್ರಿ ಕುರಿತು ಚರ್ಚೆ ಆರಂಭವಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇನ್ನಷ್ಟು ಪ್ರಮುಖ ಸುದ್ದಿಗಳು

💥Arshdeep Singh | ಟ್ರೋಲ್‌ಗಳಿಂದ ಮಗನ ಆತ್ಮವಿಶ್ವಾಸ ವೃದ್ಧಿಸಲಿದೆ ಎಂದು ಅರ್ಶ್‌ದೀಪ್‌ ಪೋಷಕರು
💥Warrior Mother | ತಾಯಿಗಿಂತ ದೊಡ್ಡ ಯೋಧ ಇಲ್ಲ, ಹುಲಿ ಜತೆ 20 ನಿಮಿಷ ಕಾದಾಡಿ ಮಗನ ರಕ್ಷಿಸಿದ ಅಮ್ಮ!
💥ನನ್ನ ದೇಶ ನನ್ನ ದನಿ ಅಂಕಣ | ವಿಷಸರ್ಪಗಳನ್ನು ಓಲೈಸುವ ರಾಜಕಾರಣ ಇನ್ನು ಬೇಕಿಲ್ಲ
💥ರಾಜ ಮಾರ್ಗ ಅಂಕಣ | ಅವನಿಯ ಕಾಲುಗಳಲ್ಲಿ ಶಕ್ತಿಯೇ ಇಲ್ಲ; ಆದರೆ, ಇಡೀ ದೇಶ ಎದ್ದು ನಿಂತು ಸಲಾಂ ಅನ್ನುತ್ತಿದೆ!

Exit mobile version