Site icon Vistara News

ವಿಸ್ತಾರ TOP 10 NEWS | CM ಕುರ್ಚಿ ಏರಿದ ಶಿಂಧೆ, ಕಕ್ಷೆ ಸೇರಿದ 3 ಉಪಗ್ರಹಗಳು ಸೇರಿ ಪ್ರಮುಖ ಸುದ್ದಿಗಳಿವು

vistara top to news 30062022

ಬೆಂಗಳೂರು: ನೆರೆಯ ಮಹಾರಾಷ್ಟ್ರ ರಾಜಕಾರಣದಲ್ಲಿ ರಾಷ್ಟ್ರವೇ ಅಚ್ಚರಿ ಪಡುವಂತಹ ಬೆಳವಣಿಗೆಯಲ್ಲಿ ಏಕನಾಥ್‌ ಶಿಂಧೆ ಸಿಎಂ ಸ್ಥಾನ ಪಡೆದಿದ್ದಾರೆ. ಸಾಮಾನ್ಯ ಆಟೋ ರಿಕ್ಷಾ ಚಾಲಕನಿಂದ ಈ ಸ್ಥಾನದವರೆಗೆ ಬಂದ ರೀತಿಯೇ ಅನನ್ಯ. ಇಸ್ರೋ ಯಶಸ್ವಿಯಾಗಿ ಮೂರು ಉಪಗ್ರಹಗಳ ಉಡಾವಣೆ ಮಾಡಿರುವ ಸಾಧನೆ ಒಂದೆಡೆಯಾದರೆ, ಚಾಮರಾಜನಗರದಲ್ಲಿ ಗರ್ಭಿಣಿಯನ್ನು ಕಾಡು ಮಾರ್ಗದಲ್ಲಿ ಹೊತ್ತೊಯ್ದ ಸ್ಥಿತಿ ಮತ್ತೊಂದೆಡೆ. ದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಗುಚ್ಛ ವಿಸ್ತಾರ TOP 10 NEWS.

೧. ಮಹಾ ಅಚ್ಚರಿ: ಮುಖ್ಯಮಂತ್ರಿ ಪಟ್ಟ ಏಕನಾಥ್‌ ಶಿಂಧೆಗೆ, ಉಪ ಮುಖ್ಯಮಂತ್ರಿಯಾದ ಫಡ್ನವೀಸ್‌
ಉದ್ಧವ್‌ ಠಾಕ್ರೆ ರಾಜೀನಾಮೆ ಕೊಟ್ಟ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್‌ ಗುರುವಾರ ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ, ʻನಾನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗುವುದಿಲ್ಲ. ಏಕನಾಥ ಶಿಂಧೆ(Eknath Shinde) ಸಿಎಂ ಹುದ್ದೆಗೆ ಏರಲಿದ್ದಾರೆʼ ಎಂದು ಸ್ವತಃ ದೇವೇಂದ್ರ ಫಡ್ನವೀಸ್‌ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. ತಾವು ಸರ್ಕಾರದ ಭಾಗವಾಗುವುದಿಲ್ಲ ಎಂದು ಪ್ರಾರಂಭದಲ್ಲಿ ಹೇಳಿದ್ದರೂ ವರಿಷ್ಠರ ಒತ್ತಾಯದ ಮೇರೆಗೆ ಡಿಸಿಎಂ ಸ್ಥಾನವನ್ನು ಫಡ್ನವೀಸ್‌ ಒಪ್ಪಿಕೊಂಡರು. ರಾಜಭವನದಲ್ಲಿ ಇಬ್ಬರೂ ಪ್ರಮಾಣವಚನ ಸ್ವೀಕರಿಸಿದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

2. Maha politics | ಏಕನಾಥ್‌ ಶಿಂಧೆ; ಅಂದು ಆಟೋ ಡ್ರೈವರ್‌, ಇಂದು ಮಹಾ ಸರ್ಕಾರದ ಚಾಲಕ!
ಮಹಾರಾಷ್ಟ್ರ ವಿಕಾಸ ಅಘಾಡಿ ಸರಕಾರದಲ್ಲಿ ಸಚಿವರಾಗಿದ್ದ ಏಕನಾಥ್‌ ಶಿಂಧೆ ಬಂಡಾಯವೆದ್ದು ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ (Maha politics) ಸೃಷ್ಟಿಸಿದ್ದಲ್ಲದೆ ಇದೀಗ ಅವರು ಮುಖ್ಯಮಂತ್ರಿ ಹುದ್ದೆಗೂ ಏರಿಬಿಟ್ಟಿದ್ದಾರೆ. ಶಿವಸೇನೆ ಬಂಡಾಯ ಪಡೆ ಮತ್ತು ಬಿಜೆಪಿ ಮೈತ್ರಿ ಸರಕಾರದಲ್ಲಿ ದೇವೇಂದ್ರ ಫಡ್ನವೀಸ್‌ ಮುಖ್ಯಮಂತ್ರಿಯಾಗುತ್ತಾರೆ ಎಂದೇ ಭಾವಿಸಲಾಗಿತ್ತಾದರೂ ಅಚ್ಚರಿಯ ಬೆಳವಣಿಗೆಯಲ್ಲಿ ಶಿಂಧೆಯೇ ಮುಖ್ಯಮಂತ್ರಿಯಾಗಿದ್ದಾರೆ. ಹಾಗಿದ್ದರೆ ಈ ಏಕನಾಥ ಶಿಂಧೆ ಯಾರು? (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೩. Rajasthan murder: ಜೈಪುರದಲ್ಲಿ ಸರಣಿ ಸ್ಫೋಟಕ್ಕೆ ಸ್ಕೆಚ್‌ ಹಾಕಿದ್ದ ಕನ್ಹಯ್ಯ ಲಾಲ್‌ ಹಂತಕರು, NIA ತನಿಖೆ ವೇಳೆ ಬಯಲು
ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್‌ ಎಂಬ ಹಿಂದೂ ಟೇಲರ್‌ನನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಹಂತಕರಾದ ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಮತ್ತು ಮಹಮ್ಮದ್‌ ಗೌಸ್‌ ಎಂಬ ಕಿರಾತಕರು ಈ ಹಿಂದೆ ಜೈಪುರದಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು ನಡೆಸಿದ್ದರು ಎಂಬ ಅಂಶ ಎನ್‌ಐಎ ತನಿಖೆ ವೇಳೆ ಬಯಲಾಗಿದೆ.
ನೂಪುರ್‌ ಶರ್ಮ ಅವರ ವಿವಾದಾತ್ಮಕ ಹೇಳಿಕೆಗೆ ಪೂರಕವಾಗಿ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾರೆಂಬ ಕಾರಣಕ್ಕೆ ಕನ್ಹಯ್ಯ ಲಾಲ್‌ ಅವರನ್ನು ಕೊರಳು ಕತ್ತರಿಸಿ ಕೊಂದ ಈ ದುಷ್ಟರು ಸಾಮಾನ್ಯರಲ್ಲ. ಬಹು ವರ್ಷಗಳಿಂದಲೇ ಈ ಭಾಗದಲ್ಲಿ ಹಲವಾರು ದ್ವೇಷ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

4. ಬೇಡ, ಜಂಗಮ ಪ್ರತಿಭಟನೆ: ಹೆದ್ದಾರಿಯಲ್ಲಿ ಹಾಹಾಕಾರ
ಬೇಡ ಜಂಗಮ ಮೀಸಲು ಹೋರಾಟ ಸಮಾವೇಶಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಸಾವಿರಾರು ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲೇ ದಿಢೀರ್ ಧರಣಿ ನಡೆಸಿದ ಕಾರಣ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಬುಧವಾರ (29 ಜೂನ್‌) ಸಂಜೆಯಿಂದಲೇ ನಾನಾ ಜಿಲ್ಲೆಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ ಕಡೆಗೆ ಹೊರಟಿದ್ದ ಪ್ರತಿಭಟನಾಕಾರರು, ಸಮಾವೇಶಕ್ಕೆ ಸರ್ಕಾರ ಅನುಮತಿ ನಿರಾಕರಿಸಿದ ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿಯೇ ಹೆದ್ದಾರಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಶಿರಾ-ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಕಡೆ ಗುರುವಾರ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಬೆಂಗಳೂರಿನಲ್ಲಿ ಮೇಕಾರ್‌ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸ್ಥಳಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗಮಿಸಿ ಮನವಿ ಸ್ವೀಕರಿಸಿದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

5. ಆಲ್ಟ್‌ ನ್ಯೂಸ್‌ಸಹ ಸ್ಥಾಪಕ ಮೊಹಮ್ಮದ್‌ ಜುಬೇರ್‌ ಬೆಂಗಳೂರು ಮನೆ ಮಹಜರ್‌
ಸಮುದಾಯಗಳ ನಡುವೆ ದ್ವೇಷ ಭಾವನೆ ಬಿತ್ತುವ ಪೋಸ್ಟ್‌ ಮಾಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ನನ್ನು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಬೆಂಗಳೂರಿನ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯ ಕಾವಲ್ ಭೈರಸಂದ್ರದ ಚಿನ್ನಣ್ಣ ಲೇಔಟ್‌ನಲ್ಲಿರುವ ಮನೆಗೆ ಗುರುವಾರ ಕರೊದೊಯ್ದ ಪೊಲೀಸರು ಮಹಜರ್‌ ನಡೆಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

6. ವಿಸ್ತಾರ Explainer| ತಂದೆಯ ತಪ್ಪನ್ನು ಮಾಡದೆ ಮಕ್ಕಳಿಗೆ ರಿಲಯನ್ಸ್‌ ಸಾಮ್ರಾಜ್ಯ ಹಂಚುತ್ತಿರುವ ಮುಕೇಶ್‌ ಅಂಬಾನಿ!
ಅದು ೧೩ ವರ್ಷಗಳ ಹಿಂದಿನ ಸನ್ನಿವೇಶ. ಬಿಲಿಯನೇರ್‌ ಮುಕೇಶ್‌ ಅಂಬಾನಿ ಹಾಗೂ ಕಿರಿಯ ಸೋದರ ಅನಿಲ್‌ ಅಂಬಾನಿ ಅವರು ಮುಂಬಯಿನಲ್ಲಿ ತಾಯಿ ಕೋಕಿಲಾಬೆನ್‌ ಅಂಬಾನಿಯವರ ಜತೆಗಿದ್ದರೂ, ತಂದೆ ಕಟ್ಟಿದ ರಿಲಯನ್ಸ್‌ ಸಾಮ್ರಾಜ್ಯದ ಪಾಲಿಗೋಸ್ಕರ ಕೋರ್ಟ್‌ಗಳಲ್ಲಿ ಪರಸ್ಪರ ಕಾದಾಡುತ್ತಿದ್ದರು. ಧೀರೂಭಾಯಿ ಅಂಬಾನಿಯವರು ಕಟ್ಟಿದ್ದ ರಿಲಯನ್ಸ್‌ ಸಾಮ್ರಾಜ್ಯ ೨೦೦೫ರಲ್ಲಿ ಎರಡಾಗಿ ವಿಭಜನೆಯಾದ ಬಳಿಕವೂ ಕೆಲ ವರ್ಷಗಳ ಕಾಲ ಸೋದರರ ನಡುವೆ ಭಾರಿ ಕಾನೂನು ಸಂಘರ್ಷ ಮುಂದುವರಿದಿತ್ತು. ಅಷ್ಟು ದೊಡ್ಡ ಉದ್ದಿಮೆಗಳ ಸಮೂಹವನ್ನೇ ಕಟ್ಟಿದ್ದರೂ, ಧೀರೂಭಾಯಿ ಅಂಬಾನಿ ಒಂದು ತಪ್ಪು ಮಾಡಿದ್ದರು. ಈಗ ಮುಖೇಶ್‌ ಅಂಬಾನಿ ಆ ತಪ್ಪು ಮಾಡಲಿಲ್ಲ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

7. ಬರುವವರಿಗೆ ಸ್ವಾಗತ: ಎಸ್‌.ಟಿ. ಸೋಮಶೇಖರ್‌ ಹಾಗೂ ಇತರರಿಗೆ ಸಿದ್ದರಾಮಯ್ಯ ಓಪನ್‌ ಆಫರ್‌
ನವ ದೆಹಲಿಯಲ್ಲಿ ಎರಡು ದಿನ ರಾಹುಲ್‌ ಗಾಂಧಿ ಅವರೊಂದಿಗೆ ಚುನಾವಣಾ ಕಾರ್ಯತಂತ್ರ, ಪ್ರಚಾರ ಹಾಗೂ ಸಿದ್ಧತೆ ಸಭೆ ನಡೆಸಿ ಬಂದ ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇದೀಗ ಬಿಜೆಪಿ ಸರ್ಕಾರದ ಸಚಿವರಿಗೆ ಓಪನ್‌ ಆಫರ್‌ ನೀಡಿದ್ದಾರೆ. ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಸಿದ್ದರಾಮಯ್ಯ ಟ್ವೀಟ್‌ ಮಾಡಿರುವುದು ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

8. ಗರ್ಭಿಣಿಯನ್ನು 8 ಕಿ.ಮೀ. ಕಾಡು ಮಾರ್ಗದಲ್ಲಿ 4 ಗಂಟೆ ಹೊತ್ತೊಯ್ದರು: ಚಾಮರಾಜನಗರದ ಗ್ರಾಮಸ್ಥರ ಬವಣೆ
ಮಹದೇಶ್ವರ ಬೆಟ್ಟ ಅರಣ್ಯದ ಗ್ರಾಮಸ್ಥರು ನಾಗರಿಕ ಸಮಾಜದ ಬಹುತೇಕ ಮೂಲಸೌಕರ್ಯಗಳಿಂದ ವಂಚಿತರಾಗಿರುವುದಕ್ಕೆ ತಾಜಾ ಉದಾಹರಣೆಯೊಂದು ಲಭಿಸಿದೆ. ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದಯ್ಯಲು ಕನಿಷ್ಠ ಸಾರಿಗೆ ವ್ಯವಸ್ಥೆಯೂ ಇಲ್ಲದೆ, ಸರ್ಕಾರದ ಯೋಜನೆಯೂ ಉಪಯೋಗಕ್ಕೆ ಬಾರದೆ ಕಾಡು ದಾರಿಯಲ್ಲಿ ಬಟ್ಟೆಯ ಜೋಲಿಯಲ್ಲಿ ಕಟ್ಟಿ ಹೊತ್ತೊಯ್ದಿರುವ ಘಟನೆಯು ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಅಣಕಿಸುವಂತಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

9. ರಾಜ್ಯಾದ್ಯಂತ ಮಳೆ ಆರ್ಭಟ: ಹೈ ಅಲರ್ಟ್‌ ಘೋಷಣೆ, ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ
ರಾಜ್ಯದ ಕರಾವಳಿ ತಾಲೂಕುಗಳು, ವಿಜಯನಗರ, ಮಂಡ್ಯ ಸೇರಿ ರಾಜ್ಯಾದ್ಯಂತ ಗುರುವಾರ ಮಳೆ ಆರ್ಭಟ ಜೋರಾಗಿತ್ತು. ಹಲವಾರು ಕಡೆಗಳಲ್ಲಿ ಹವಾಮಾನ ಇಲಾಖೆ ಮನ್ನೆಚ್ಚರಿಕೆ ಕ್ರಮವಾಗಿ ಹೈ ಅಲರ್ಟ್‌ ಘೋಷಿಸಿದೆ. ದಕ್ಷಿಣ ಕನ್ನಡದಲ್ಲಿ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

10. MISSION SUCCESS: ಸಿಂಗಾಪುರದ ಮೂರು ಉಪಗ್ರಹಗಳನ್ನು ಕಕ್ಷೆ ಸೇರಿಸಿದ ಬೀಗಿದ ISRO
ಸಿಂಗಾಪುರದ ಮೂರು ಉಪಗ್ರಹಗಳನ್ನು ಹೊತ್ತು ನಭಕ್ಕೇರಿದ ಪಿಎಸ್‌ಎಲ್‌ವಿ ಸಿ-೫೩ ಭಾರತೀಯ ಬಾಹ್ಯಾಕಾಶ ಸಂಶೋಧನಾ ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ಬರೆಯಿತು. ಗುರುವಾರ ಸಂಜೆ ೬.೦೨ಕ್ಕೆ ಶ್ರೀ ಹರಿ ಕೋಟಾದ ಉಪಗ್ರಹ ಉಡಾವಣಾ ಕೇಂದ್ರದಿಂದ ಬಂಗಾರದ ಬಣ್ಣದ ಧೂಮವನ್ನು ಚಿಮ್ಮುತ್ತಾ ನಭೋಮಂಡಲವನ್ನು ಬೇಧಿಸುತ್ತಾ ಸಾಗಿದ ಕ್ಷಣವನ್ನು ಇಸ್ರೊದ ವಿಜ್ಞಾನಿಗಳು ಅತ್ಯಂತ ಭಾವುಕರಾಗಿ ವೀಕ್ಷಿಸಿ ಹೆಮ್ಮೆಯಿಂದ ಬೀಗಿದರು. ಇದು ಇಸ್ರೋ ಪಿಎಸ್‌ಎಲ್‌ವಿ ಮೂಲಕ ನಡೆಸಿದ ೫೫ನೇ ಉಡಾವಣೆಯಾಗಿದ್ದು, ಎರಡನೇ ಲಾಂಚ್‌ ಪ್ಯಾಡ್‌ನಿಂದ ನಡೆದ ೧೬ನೇ ಹಾರಾಟ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version