ಬೆಂಗಳೂರು: ದೇಶದೆಲ್ಲೆಡೆ ಬೆಲೆಯೇರಿಕೆಯಾಗುತ್ತಿದೆ ಎಂಬುದನ್ನು ವಿರೋಧಿಸುವ ಜತೆಗೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. ಮುರುಘಾಶ್ರೀಗಳ ಪ್ರಕರಣದಲ್ಲಿ ಪೊಲೀಸರು ಮಹಜರು ಮುಗಿಸಿದ್ದು, ಸೋಮವಾರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವುದು ದೇಶವನ್ನೇ ಬೆಚ್ಚಿಬೀಳಿಸಿದೆ ಎನ್ನುವುದೂ ಸೇರಿ ದಿನಪೂರ್ತಿ ನಡೆದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಪ್ರಧಾನಿ ಮೋದಿ ತರುವ ಯೋಜನೆಗಳಿಂದ ಬಡವರಿಗೇನು ಪ್ರಯೋಜನವಾಗುತ್ತಿದೆ?: ರಾಹುಲ್ ಗಾಂಧಿ ಪ್ರಶ್ನೆ
ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ನಿಂದ ಆಯೋಜಿಸಿರುವ ಮೆಹಂಗಾಯಿ ಪರ್ ಹಲ್ಲಾ ಬೋಲ್ (Mehangai Par Halla Bol) ಬೃಹತ್ ಪ್ರತಿಭಟನಾ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದರು. ‘ಭಾರತದಲ್ಲಿ ದ್ವೇಷ ಹೆಚ್ಚುತ್ತಿದೆ. ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಯ ಭಯ ಎಲ್ಲೆಡೆ ಏರಿಕೆಯಾಗುತ್ತಿದೆ. ಬಿಜೆಪಿ ಮತ್ತು ಆರ್ಎಸ್ಎಸ್ಗಳು ದೇಶವನ್ನು ವಿಭಜಿಸುತ್ತಿವೆ. ಇಡೀ ದೇಶದಲ್ಲಿ ಎದ್ದಿರುವ ಭಯ ಮತ್ತು ದ್ವೇಷದ ವಾತಾವರಣದಿಂದ ಇಬ್ಬರು ಉದ್ಯಮಿಗಳು ಮಾತ್ರ ಲಾಭ ಪಡೆಯುತ್ತಿದ್ದಾರೆ’ ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ಎಲ್ಲಿ ನೋಡಿದರೂ ದ್ವೇಷ, ಸಿಟ್ಟು, ಗಲಭೆಗಳೇ. ಬಡವರು, ರೈತರು, ಸಣ್ಣ ವ್ಯಾಪಾರಿಗಳು ಈ ಸರ್ಕಾರದಿಂದ ಯಾವುದೇ ಅನುಕೂಲ ಪಡೆಯುತ್ತಿಲ್ಲ. ಪ್ರಧಾನಿ ಮೋದಿ ನೋಟು ಬ್ಯಾನ್ ಮಾಡಿದ್ದರಿಂದ ಬಡವರಿಗೆ ಪ್ರಯೋಜನವಾಯಿತಾ? ಎಂದು ಪ್ರಶ್ನಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಮುರುಘಾಶ್ರೀ ಪ್ರಕರಣ | ಮಹಜರು ಮುಗಿಸಿದ ಪೊಲೀಸರು: ಸೋಮವಾರ ಕಸ್ಟಡಿ ಮುಕ್ತಾಯ
ಇಬ್ಬರು ಬಾಲಕಿಯರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರಘಾ ಶರಣರನ್ನು ಮಠಕ್ಕೆ ಕರೆತಂದಿರುವ ಪೊಲೀಸರು ಮಹಜರು ನಡೆಸಿದ್ದಾರೆ.
ಬೆಳಗ್ಗೆ 11.30ರ ಸುಮಾರಿಗೆ ಮುರುಘಾ ಶರಣರನ್ನು ಮಠಕ್ಕೆ ಪೊಲೀಸರು ಕರೆತಂದರು. ಮಾಧ್ಯಮದವರಿಗೆ ಒಳಗಿನ ದೃಶ್ಯಗಳು ಕಾಣದಂತೆ ಪೊಲೀಸ್ ವಾಹನದೊಳಗೆ ಬಟ್ಟೆಯಿಂದ ಸಂಪೂರ್ಣ ಮುಚ್ಚಲಾಗಿತ್ತು. ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಆಗಮಿಸಿದ ಪೊಲೀಸರು, ಬಾಲಕಿಯರು ಹೇಳಿಕೆಯಲ್ಲಿ ತಿಳಿಸಿರುವ ಸ್ಥಳಗಳನ್ನು ತಪಾಸಣೆ ಮಾಡಿದರು. ಸೋಮವಾರಕ್ಕೆ ಸ್ವಾಮೀಜಿಯ ಪೊಲೀಸ್ ಕಸ್ಟಡಿ ಮುಕ್ತಾಯವಾಗಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ಮುರುಘಾ ಮಠದಲ್ಲಿ ನಾಳೆ ಸಾಮೂಹಿಕ ವಿವಾಹ; ಮದುವೆಯಿಂದ ಹಿಂದೆ ಸರಿದ 3 ಜೋಡಿ
3. Cyrus Mistry | ಟಾಟಾ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ವಿಧಿವಶ
ಟಾಟಾ ಸನ್ಸ್ ಸಂಸ್ಥೆಯ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ (54) (Cyrus Mistry) ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಿಂದ ಮುಂಬೈಗೆ ಮರ್ಸಿಡೀಸ್ ಕಾರ್‌ನಲ್ಲಿ ತೆರಳುತ್ತಿದ್ದಾಗ ಪಾಲ್ಘರ್‌ನಲ್ಲಿ ಅಪಘಾತ ಸಂಭವಿಸಿದೆ. “ಪಾಲ್ಘರ್ ಬಳಿಯ ಸೂರ್ಯ ನದಿಯ ಸೇತುವೆ ಮೇಲೆ ಮಧ್ಯಾಹ್ನ 3.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸೈರಸ್ ಮಿಸ್ತ್ರಿ ಅವರ ಜತೆ ಕಾರು ಚಾಲಕ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಮಿಸ್ತ್ರಿ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಮತ್ತಿಬ್ಬರನ್ನು ಗುಜರಾತ್ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೈರಸ್ ಮಿಸ್ತ್ರಿ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ | ಮಿಸ್ತ್ರಿ ಇದ್ದ ಕಾರ್ ಓಡಿಸುತ್ತಿದ್ದ ಆ ಮಹಿಳೆ ಯಾರು?
4. ಚಾಮರಾಜಪೇಟೆ ಮೈದಾನದ ಬಳಿ ಗಣೇಶೋತ್ಸವ ಫೈಟ್; ಹಿಂದು ಸಂಘಟನೆ ಜತೆಗೆ ಜಮೀರ್ ಅಹ್ಮದ್ ಗಣೇಶ ಪೂಜೆ
ಚಾಮರಾಜಪೇಟೆ ಮೈದಾನದ ಪಕ್ಕದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ವಿಚಾರವಾಗಿ ಪೊಲೀಸ್ ಮತ್ತು ಹಿಂದು ಸಂಘಟನೆಗಳ ನಡುವೆ ಹಗ್ಗಜಗ್ಗಾಟದ ಬೆನ್ನಲ್ಲೇ ಮೈದಾನದ ಪಕ್ಕದಲ್ಲಿ ೧೮ ಅಡಿ ಎತ್ತರದ ಬೃಹತ್ ಗಣೇಶ ಕೂರಿಸಲಾಗಿದೆ. ಇದೇ ವೇಳೆ ಶಾಸಕ ಜಮೀರ್ ನೇತೃತ್ವದಲ್ಲೂ ಗಣೇಶ ಪ್ರತಿಷ್ಠಾಪನೆ ನಡೆಯುತ್ತಿದ್ದು, ಮತ್ತೆ ಗಣೇಶೋತ್ಸವ ಗದ್ದಲ ತಾರಕಕ್ಕೇರಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Ghulam Nabi Azad | ನನ್ನ ಪಕ್ಷಕ್ಕೆ ಹಿಂದೂಸ್ತಾನಿ ಹೆಸರಿಡುವೆ, ಗಂಗೆ-ಯಮುನೆ ಸಂಸ್ಕೃತಿ ಎತ್ತಿ ಹಿಡಿಯುವೆ!
ಸುದೀರ್ಘ ಪಯಣದ ಬಳಿಕ ಕಾಂಗ್ರೆಸ್ಸಿಗೆ ವಿದಾಯ ಹೇಳಿರುವ ಗುಲಾಂ ನಬಿ ಆಜಾದ್ (Ghulam Nabi Azad) ಅವರು ಭಾನುವಾರ ಹೊಸ ಪಕ್ಷ ಘೋಷಿಸದಿದ್ದರೂ, ಪಕ್ಷದ ಹೆಸರು ಹಾಗೂ ಅದರ ಸಂಸ್ಕೃತಿ, ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. “ನನ್ನ ನೂತನ ಪಕ್ಷಕ್ಕೆ ಹಿಂದೂಸ್ತಾನಿ ಹೆಸರಿಡುತ್ತೇನೆ. ಪಕ್ಷವು ಗಂಗೆ-ಯಮುನೆಯ ಸಂಸ್ಕೃತಿಯನ್ನು ಪ್ರತಿಫಲಿಸುವಂತೆ ಇರುತ್ತದೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಬಳಿಕ ಜಮ್ಮುವಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, “ನನ್ನ ಪಕ್ಷಕ್ಕೆ ಇದುವರೆಗೆ ಹೆಸರಿಟ್ಟಿಲ್ಲ. ಕಣಿವೆಯ ಜನರೇ ಪಕ್ಷದ ಹೆಸರು ಹಾಗೂ ಧ್ವಜವನ್ನು ತೀರ್ಮಾನಿಸುತ್ತಾರೆ. ಒಟ್ಟಿನಲ್ಲಿ ಪಕ್ಷವು ದೇಶೀಯತೆಯನ್ನು ಪ್ರತಿನಿಧಿಸುವಂತೆ ಇರುತ್ತದೆ” ಎಂದು ತಿಳಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಸರ್ಕಾರಿ ನೌಕರರಿಗೆ ಇನ್ನು ಮುಂದೆ ಕ್ಯಾಶ್‌ಲೆಸ್ ಆರೋಗ್ಯ ಸೇವೆ; ಜಾರಿಗೆ ಬರಲಿದೆ KASS ಯೋಜನೆ
ನೌಕರರು ಮತ್ತು ಕುಟುಂಬದ ಅವಲಂಬಿತ ಸದಸ್ಯರುಗಳಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ʼಜ್ಯೋತಿ ಸಂಜೀವಿನಿʼ ಯೋಜನೆಯ ಪ್ರಯೋಜನವನ್ನು ಇನ್ನು ಮುಂದೆ ಎಲ್ಲ ಸರ್ಕಾರಿ ನೌಕರರೂ ಪಡೆದುಕೊಳ್ಳಬಹುದು.
2014ರಲ್ಲಿಯೇ ಜಾರಿಗೆ ಬಂದಿದ್ದ “ಜ್ಯೋತಿ ಸಂಜೀವಿನಿʼʼ ಯೋಜನೆಯ ಮುಂದುವರಿದ ಭಾಗವಾಗಿ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆʼʼ (KASS) ಜಾರಿಗೆ ಬರುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಪ್ಟೆಂಬರ್ 6ರಂದು ಚಾಲನೆ ನೀಡಲಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಅರವಿಂದ ಲಿಂಬಾವಳಿ ಹೇಳಿಕೆ ವಿರೋಧಿಸಿ ಬೀದಿಗಿಳಿದ ಮಹಿಳಾ ಕಾಂಗ್ರೆಸ್, ವರದಿ ಕೇಳಿದ ಬಿಜೆಪಿ ವರಿಷ್ಠರು
ಬಿಜೆಪಿ ಹಿರಿಯ ನಾಯಕ ಹಾಗೂ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ, ಮಹಿಳೆಯೊಬ್ಬರ ಜತೆಗೆ ವಾಗ್ವಾದ ನಡೆಸಿದ್ದು ಹಾಗೂ ನಂತರ ನೀಡಿದ ಹೇಳಿಕೆ ಇದೀಗ ಪ್ರತಿಪಕ್ಷ ಕಾಂಗ್ರೆಸ್‌ಗೆ ಆಹಾರವಾಗಿದೆ. ಮಹಿಳಾ ಕಾಂಗ್ರೆಸ್ ವತಿಯಿಂದ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಗಿದೆ. ಇದೇ ವೇಳೆ ಲಿಂಬಾವಳಿ ಪ್ರಕರಣದಲ್ಲಿ ಬಿಜೆಪಿಗೆ ಮುಜುಗರ ಉಂಟಾಗಿದ್ದು, ಕೇಂದ್ರದ ವರಿಷ್ಠರು ವರದಿ ಕೇಳಿದ್ದಾರೆ ಎನ್ನಲಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಪ್ರಧಾನಿ ಮುಖ ಇಷ್ಟವಾಗಲ್ಲ ಅಂದ್ರೂ ರೇಡ್ ಆಗತ್ತೆ ಎಂದ ಸುಪ್ರೀಂ ಮಾಜಿ ನ್ಯಾಯಮೂರ್ತಿ; ಸಚಿವ ಕಿರಣ್ ರಿಜಿಜು ತಿರುಗೇಟು
ದೇಶದಲ್ಲಿ ಈಗ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲದಂತಾಗಿದೆ ಎಂದು ಹೇಳಿದ್ದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರಿಗೆ ಕಾನೂನು ಸಚಿವ ಕಿರಣ್ ರಿಜಿಜು ಖಡಕ್ ತಿರುಗೇಟು ಕೊಟ್ಟಿದ್ದಾರೆ. ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನ ಕೊಟ್ಟಿದ್ದ ಬಿ.ಎನ್.ಶ್ರೀಕೃಷ್ಣ, ‘ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ನಾನೊಂದು ಸಾರ್ವಜನಿಕ ಪ್ರದೇಶದಲ್ಲಿ ನಿಂತು ನನಗೆ ಪ್ರಧಾನಮಂತ್ರಿ ಮುಖ ಇಷ್ಟವಾಗುತ್ತಿಲ್ಲ ಎಂದು ಹೇಳಿದರೂ ಸಾಕು, ಮರುದಿನವೇ ನನ್ನ ಮೇಲೆ ರೇಡ್ ಆಗುತ್ತದೆ. ನಾನು ಅರೆಸ್ಟ್ ಆಗುತ್ತೇನೆ, ಜೈಲು ಸೇರುತ್ತೇನೆ. ಆದರೆ ಅದಕ್ಕೊಂದು ಸೂಕ್ತ ಕಾರಣವೇ ಇರುವುದಿಲ್ಲ. ಒಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿದೆ’ ಎಂದಿದ್ದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. KK Shailaja | ಏಷ್ಯಾದ ನೊಬೆಲ್ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಿದ ಕೇರಳ ಮಾಜಿ ಸಚಿವೆ ಕೆ.ಕೆ.ಶೈಲಜಾ, ಕಾರಣ ಏನು?
ಕೇರಳ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ (KK Shailaja) ಅವರು ಏಷ್ಯಾದ ನೊಬೆಲ್ ಎಂದೇ ಖ್ಯಾತಿಯಾದ, ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಪ್ರಶಸ್ತಿ ಸಮಿತಿಯು ಶೈಲಜಾ ಅವರಿಗೆ ಪ್ರಶಸ್ತಿ ಕುರಿತು ಪತ್ರ ಬರೆದಿದ್ದು, ಪತ್ರ ತಲುಪಿದ ಬಳಿಕ ಅವರು ಪ್ರಶಸ್ತಿಯನ್ನು ಸ್ವೀಕರಿಸದಿರಲು ತೀರ್ಮಾನಿಸಿದ್ದಾರೆ.
“ವೈಯಕ್ತಿಕ ನೆಲೆಗಟ್ಟಿನಲ್ಲಿ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸ್ವೀಕರಿಸಲು ಇಷ್ಟಪಡುವುದಿಲ್ಲ. ಸಿಪಿಐ(ಎಂ) ವರಿಷ್ಠರ ಜತೆ ಚರ್ಚಿಸಿ, ಪ್ರಶಸ್ತಿ ಸ್ವೀಕರಿಸದಿರಲು ನಿರ್ಧರಿಸಿದ್ದೇನೆ” ಎಂದು ಶೈಲಜಾ ಅವರು ಸುದ್ದಿಗಾರರಿಗೆ ತಿಳಿಸಿದರು. ಪ್ರಶಸ್ತಿ ತಿರಸ್ಕರಿಸಿದ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರೂ ಪ್ರತಿಕ್ರಿಯಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. 2024ರೊಳಗೆ ಬಿಜೆಪಿ 50 ಲೋಕಸಭಾ ಕ್ಷೇತ್ರ ಕಳೆದು ಕೊಳ್ಳುತ್ತದೆ; ಹೇಗೆಂದು ವಿವರಿಸಿದ ನಿತೀಶ್ ಕುಮಾರ್
ಬಿಜೆಪಿಯ ಒಡೆದು ಆಳುವ ನೀತಿ ಇಷ್ಟವಾಗುತ್ತಿಲ್ಲ ಎಂದು ಎನ್ಡಿಎ ಒಕ್ಕೂಟದಿಂದ ಹೊರಬಂದು, ಬಿಹಾರದಲ್ಲಿ ಆರ್ಜೆಡಿ-ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಮಹಾ ಘಟ್ ಬಂಧನ್ ಸರ್ಕಾರ ರಚನೆ ಮಾಡಿ, 8ನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೆ ಏರಿದ ನಿತೀಶ್ ಕುಮಾರ್, ‘2024ರ ಲೋಕಸಭಾ ಚುನಾವಣೆಗೂ ಪೂರ್ವ ಬಿಜೆಪಿ 50 ಸೀಟ್ಗಳನ್ನು ಕಳೆದುಕೊಳ್ಳುತ್ತದೆ’ ಎಂದು ಭವಿಷ್ಯ ನುಡಿದಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.