Site icon Vistara News

ವಿಸ್ತಾರ TOP 10 NEWS | ಮತ್ತೆ ಗುಡುಗಿದ ಹೈಕೋರ್ಟ್‌ನಿಂದ ರಾಜ್ಯದಲ್ಲಿ ಭಾರಿ ಮಳೆವರೆಗೆ ಪ್ರಮುಖ ಸುದ್ದಿಗಳಿವು

vistara top 10

ಬೆಂಗಳೂರು: ಎಸಿಬಿ ಕಾರ್ಯವೈಖರಿ ಕುರಿತು ಈಗಾಗಲೆ ಎರಡು ಬಾರಿ ಕಠಿಣ ಮಾತುಗಳನ್ನಾಡಿರುವ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರು ಗುರುವಾರ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಸೇರಿ ರಾಜ್ಯದ ವಿವಿಧೆಡೆ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ, ಹಿಂದು ದೇವರನ್ನು ಅಪಮಾನಿಸುವ ಲೀನಾ ಅಧಿಕಪ್ರಸಂಗತನ ಮುಂದುವರಿದಿದೆ ಎಂಬುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Weather Report: ಉತ್ತರಕನ್ನಡ ಜಿಲ್ಲೆಗೆ ರೆಡ್‌ ಅಲರ್ಟ್‌ ಘೋಷಣೆ: ಸಮುದ್ರಕ್ಕೆ ಇಳಿಯದಂತೆ ವಾರ್ನಿಂಗ್‌
ರಾಜ್ಯದ ಹಲವೆಡೆ ಬಿಟ್ಟುಬಿಡದೇ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಗುರುವಾರ ಮಧ್ಯಾಹ್ನದಿಂದಲ್ಲೇ ಉತ್ತರಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಜುಲೈ 9ರ ಬೆಳಗ್ಗೆ 8:30ರವರೆಗೆ ಗಾಳಿ ಸಹಿತ ಭಾರೀ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ. ಸಮುದ್ರ ಮಟ್ಟದಲ್ಲಿ ಭಾರಿ ಪ್ರಮಾಣದ ಅಲೆಗಳು ಏಳುವ ಸಾಧ್ಯತೆ ಇದ್ದು, ಕಡಲತೀರ ಹಾಗೂ ನದಿಪಾತ್ರದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
ರಾಜ್ಯದಲ್ಲಿ ಸತತ ಮಳೆ, ಭರ್ತಿಯತ್ತ ಸಾಗಿದ ಪ್ರಮುಖ ಜಲಾಶಯಗಳು

2. ಲೀನಾ ಅಧಿಕ ಪ್ರಸಂಗತನ; ಶಿವ ಪಾರ್ವತಿ ಪಾತ್ರಧಾರಿಗಳು ಸಿಗರೇಟ್‌ ಸೇದುವ ಫೋಟೋ ಪೋಸ್ಟ್‌
ತಮಿಳುನಾಡು ಮೂಲದ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಹುಚ್ಚಾಟ ನಿಲ್ಲುತ್ತಿಲ್ಲ. ಈಕೆ ಪೋಸ್ಟ್‌ ಮಾಡಿದ್ದ ಕಾಳಿ ದೇವಿಯ ಪೋಸ್ಟರ್‌ನ್ನು ಟ್ವಿಟರ್‌ ಈಗಾಗಲೇ ಡಿಲೀಟ್‌ ಮಾಡಿದೆ. ಕಾಳಿ ಕೈಯಲ್ಲಿ ಸಿಗರೇಟ್‌ ಮತ್ತು ಎಲ್‌ಜಿಬಿಟಿಕ್ಯೂ ಸಮುದಾಯದ ಬಾವುಟ ಕೊಟ್ಟು ಚಿತ್ರಿಸಿದ್ದ ಈ ಪೋಸ್ಟರ್‌ ತುಂಬ ವಿವಾದ ಸೃಷ್ಟಿಸಿತ್ತು. ಇಂದು ಮುಂಜಾನೆ ಇನ್ನೊಂದು ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ ಶಿವ-ಪಾರ್ವತಿಯ ಪಾತ್ರಧಾರಿಗಳು ಸಿಗರೇಟ್‌ ಸೇದುತ್ತಿರುವ ದೃಶ್ಯ ಇದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೩. UK Politics: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ, ಸುನಕ್‌ ಮುಂದಿನ ಪಿಎಂ?
ಬ್ರಿಟಿಷ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಚಿವರ ಸರಣಿ ರಾಜೀನಾಮೆ, ಹಿಂದೆಂದೂ ಕಂಡರಿಯದಷ್ಟು ನಾಯಕರ ವಲಸೆ ಮತ್ತು ಪದತ್ಯಾಗಕ್ಕೆ ಕೇಳಿಬಂದ ತೀವ್ರ ಒತ್ತಡಕ್ಕೆ ಮಣಿದ ಹಿರಿಯ ನಾಯಕ ಇದೀಗ ಹುದ್ದೆ ತೊರೆಯಲು ನಿರ್ಧರಿಸಿದ್ದಾರೆ. ಗುರುವಾರ ಅವರು ಪದತ್ಯಾಗ ಮಾಡಿದ್ದು, ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಇನ್ಫೋಸಿಸ್‌ ಸ್ಥಾಪಕರಾದ ನಾರಾಯಣಮೂರ್ತಿ, ಸುಧಾ ಮೂರ್ತಿ ದಂಪತಿಯ ಅಳಿಯ ಋಷಿ ಸುನಕ್‌ ಅವರು ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

4. ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಬಾಳ ಸಂಗಾತಿ ಡಾ. ಗುರುಪ್ರೀತ್‌ ಕೌರ್‌: ಯಾರೀ ಚೆಲುವೆ, ಮೊದಲ ಭೇಟಿ ಎಲ್ಲಿ?
ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಮತ್ತು ಡಾ. ಗುರುಪ್ರೀತ್‌ ಕೌರ್‌ ಹೊಸ ಬಾಳಿನ ಹೊಸಿಲು ತುಳಿದು ಸಂಭ್ರಮಿಸಿದ್ದಾರೆ. ಗುರುವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಅತ್ಯಂತ ಆತ್ಮೀಯರ ಉಪಸ್ಥಿತಿಯಲ್ಲಿ ವೈವಾಹಿಕ ಜೀವನವನ್ನು ಪ್ರವೇಶಿಸಿದರು. ಹಾಗಿದ್ದರೆ, ಮಾನ್‌ ಅವರ ಬಾಳ ಸಂಗಾತಿಯಾಗಿರುವ ಡಾ. ಗುರುಪ್ರೀತ್‌ ಯಾರು? ಅವರಿಬ್ಬರ ಮೊದಲ ಭೇಟಿ ಎಲ್ಲಾಯ್ತು? ಈ ನವ ಜೋಡಿಯ ಕುರಿತು ಅನೇಕ ಕುತೂಹಲಕರ ಮಾಹಿತಿ ಇದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೫. ಮತ್ತೊಮ್ಮೆ ಬೀದಿಗಿಳಿದ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು: ಕಾಯಂ ಸಾಧ್ಯವಿಲ್ಲ ಎಂದ ಸಚಿವ ಡಾ.ಕೆ.ಸುಧಾಕರ್
ನಾ ಕೊಡೆ, ನೀ ಬಿಡೇ ಎಂಬ ಪರಿಸ್ಥಿತಿ ಆರೋಗ್ಯ ಇಲಾಖೆಯ ಗುತ್ತಿಗೆ/ಹೊರಗತ್ತಿಗೆ ನೌಕರರ ನಡುವೆ ಸೃಷ್ಟಿಯಾಗಿದೆ. ರಾಜ್ಯಾದ್ಯಂತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ಕೆಲಸಕ್ಕೆ ಗೈರು ಹಾಜರಾಗಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಯಾವುದೇ ಕಾರಣಕ್ಕೂ ನೌಕರಿ ಕಾಯಂ ಮಾಡಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಆದರೆ, ಯೋಜನೆ ಇರುವವರೆ ಸೇವೆಯಿಂದ ತೆಗೆಯುವುದಿಲ್ಲ ಎಂಬ ಬಗ್ಗೆ ಖಾತ್ರಿ ಕೊಡಬಹುದು ಎಂದು ಹೇಳಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

‌6. ಎಡಿಜಿಪಿ ಆತ್ಮಸಾಕ್ಷಿ ಕೇಳಿಕೊಳ್ಳಲಿ: ಎಸಿಬಿ ವಿರುದ್ಧ ಮತ್ತೆ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಆಕ್ರೋಶ
ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಪಡೆಯುತ್ತಿರುವ ವೇಳೆ ಎಸಿಬಿ ದಾಳಿ ನಡೆಸಿದ ಪ್ರಕರಣದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಮತ್ತೆ ಎಸಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸಿಬಿ ಇಲ್ಲಿವರೆಗೆ ಸಲ್ಲಿಸಿರುವ ಎಲ್ಲ ಬಿ ರಿಪೋರ್ಟ್‌ಗಳ ವರದಿಯನ್ನೂ ನೀಡಬೇಕು ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದರು. ಅದರಂತೆ ಏಕಸದಸ್ಯ ಪೀಠದ ಎದುರು ಗುರುವಾರ ವಿಚಾರಣೆಗೆ ಹಾಜರಾದ ಎಸಿಬಿ ಪರ ವಕೀಲರು 105 ಪುಟಗಳ ದಾಖಲೆಗಳನ್ನು ಸಲ್ಲಿಸಿದರು. 819 ಸರ್ಚ್ ವಾರಂಟ್‌ಗಳನ್ನು ಪಡೆಯಲಾಗಿತ್ತು. 28 ಸರ್ಚ್ ವಾರಂಟ್ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಬಿ ರಿಪೋರ್ಟ್‌ಗಳ ಕುರಿತೂ ವರದಿ ಸಲ್ಲಿಸಿದರು. ಆದರೆ ದಾಖಲೆಗಳು ಅಪೂರ್ಣವಾಗಿದ್ದರಿಂದ ನ್ಯಾಯಮೂರ್ತಿಗಳು ಮತ್ತೆ ಅಸಮಾಧಾನಗೊಂಡಿದ್ದಾರೆ. ಎಸಿಬಿ ಎಡಿಜಿಪಿಯ ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲಿ ಎಂದಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೭. ಆಗಸ್ಟ್‌ 28ರಂದು Indo-Pak ಹಣಾಹಣಿ
ಮುಂಬರುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಶ್ರೀಲಂಕಾದಲ್ಲೇ ನಡೆಯುವುದು ಬಹುತೇಕ ಖಚಿತವಾಗಿದ್ದು, ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಆಗಸ್ಟ್‌ ೨೮ರಂದು ಗುಂಪು ಹಂತದ ಪಂದ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ.ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ತಂಡ ಒಂದೇ ಗುಂಪಿನಲ್ಲಿದ್ದು, ಟೂರ್ನಿ ಆರಂಭಗೊಂಡ ಮರುದಿನವೇ ಕಾದಾಟ ನಡೆಸಲಿವೆ ಎಂದು ಹೇಳಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

8. ಸಿದ್ದರಾಮೋತ್ಸವ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ: ಡಿ.ಕೆ. ಶಿವಕುಮಾರ್‌ ಅಚ್ಚರಿಯ ಹೇಳಿಕೆ
ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ವರ್ಷದ ಹುಟ್ಟುಹಬ್ಬ ಕಾಂಗ್ರೆಸ್‌ ಪಕ್ಷದ್ದೇ ಕಾರ್ಯಕ್ರಮ ಎಂಬ ಅಚ್ಚರಿಯ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಇಬ್ಬರೂ ನವದೆಹಲಿಯಲ್ಲಿ ಇತ್ತೀಚೆಗೆ ರಾಹುಲ್‌ ಗಾಂಧಿಯವರ ಜತೆ ಸಭೆ ನಡೆಸಿದ್ದರು. ಸತತ ಎರಡು ದಿನ ನಡೆದ ಸಭೆಯ ನಡುವೆ, 75ನೇ ವರ್ಷದ ಕಾರ್ಯಕ್ರಮಕ್ಕೆ ಆಗಮಿಸುವಂತೆ ರಾಹುಲ್‌ ಗಾಂಧಿ ಅವರನ್ನು ಸಿದ್ದರಾಮಯ್ಯ ಆಹ್ವಾನಿಸಿದ್ದಾಗಿ ತಿಳಿಸಿದ್ದರು. ಆದರೆ ಇದೀಗ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೯. ಹರ್ಷ ಹತ್ಯೆ ಪ್ರಕರಣ | ಹಿಂದು ಯುವಕರಿಗೆ ಬೆಲೆಯೇ ಇಲ್ಲವೆ?: ಸಾಹಿತಿಗಳಿಂದ ಸರ್ಕಾರಕ್ಕೆ ಪತ್ರ
ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹಿಂದು ಸಂಘಟನೆ ಕಾರ್ಯಕರ್ತ ಹರ್ಷನ ಆರೋಪಿಗಳಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡುತ್ತಿರುವ ಕುರಿತು ಸಾಹಿತಿಗಳು ಮತ್ತು ಲೇಖಕರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೇಖಕಿ ಹಾಗೂ ಮಾಜಿ ವಿಧಾನ ಪರಿಷತ್‌ ಸದಸ್ಯೆ ಡಾ. ಎಸ್. ಆರ್. ಲೀಲಾ, ಶತಾವಧಾನಿ ಡಾ. ಆರ್. ಗಣೇಶ್‌, ಲೇಖಕ ಸಂದೀಪ್ ಬಾಲಕೃಷ್ಣ, ವಿಮರ್ಶಕ ಡಾ. ಜಿ.ಬಿ. ಹರೀಶ್, ಪ್ರಕಾಶಕ ಕೆ .ಆರ್. ಹರ್ಷ, ವಾಸುಕಿ, ರಾಮಚಂದ್ರ, ಫಣಿರಾಜ್, ಜೀವನ್, ಪೂರ್ಣಿಮಾ ಮತ್ತಿತರರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

10. Upcoming Kannada Movie | ಒಂದೇ ದಿನ ತೆರೆಗೆ ಅಪ್ಪಳಿಸಲಿವೆ ಆರು ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?
ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು (Upcoming Kannada Movie ) ತೆರೆಗೆ ಬರಲು ಸಜ್ಜಾಗಿವೆ. ಇದೀಗ ಅಭಿಮಾನಿಗಳಿಗೆ ಯಾವ ಸಿನಿಮಾ ನೋಡಲಿ ಎಂಬ ಕುತೂಹಲ ಶುರುವಾಗಿದೆ. ಶುಕ್ರವಾರ (ಜು.೮) ಆರು ಕನ್ನಡ ಸಿನಿಮಾಗಳು ಒಂದೇ ಬಾರಿಗೆ ಥಿಯೇಟರ್‌ಗೆ ಲಗ್ಗೆ ಇಡಲಿವೆ. ಸಿಎಂ ಪಾತ್ರದಲ್ಲಿ ಸುಮಲತಾ ಅಂಬರೀಷ್ ನಟನೆಯ ʻಹೋಪ್ʼ, ಲವ್ ಜಾನರ್ ಹೊಂದಿರುವ ಪೃಥ್ವಿ ಅಂಬಾರ್‌ ಹಾಗೂ ‌ಪ್ರಿಯಾಂಕ ತಿಮ್ಮೇಶ್‌ ಅಭಿನಯದ ʻಶುಗರ್ ಲೆಸ್ʼ , ಚಂದ್ರ ಕೀರ್ತಿ, ಪವನ್ ಗೌಡ ನಟನೆಯ ʻತೂತು ಮಡಿಕೆʼ, ಲಿಖಿತ್ ಶೆಟ್ಟಿ, ಅಮೃತ ಅಯ್ಯoಗಾರ್ ಫನ್ ಎಂಟರ್ಟೈನ್ಮೆಂಟ್ ಸಿನಿಮಾ ʻಅಬ್ಬಬ್ಬʼ ಹಾಗೂ ಉಪೇಂದ್ರ ಮನೆತನದ ಕುಡಿ ನಿರಂಜನ್ ನಟನೆಯ ʻನಮ್ಮ ಹುಡುಗರುʼ ಈ ಎಲ್ಲಾ ಸಿನಿಮಾಗಳು ಜುಲೈ 8ಕ್ಕೆ ತೆರೆಗೆ ಬರಲಿವೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version