ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಕರ್ನಾಟಕ ಒಬ್ಬ ಐಪಿಎಸ್ ಹಾಗೂ ಐಎಎಸ್ ಅಧಿಕಾರಿ ಬಂಧನಕ್ಕೊಳಗಾದ ದಿನ. ಪಿಎಸ್‌ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪಾಲ್‌ರನ್ನು ಸಿಐಡಿ ಪೊಲೀಸರು ಬಂಧಿಸಿದರೆ ಭೂವ್ಯಾಜ್ಯಕ್ಕೆ ಸಂಬಂಧಿಸಿ ಲಂಚ ಆರೋಪದಲ್ಲಿ ಜೆ. ಮಂಜುನಾಥ್‌ರನ್ನು ಎಸಿಬಿ ವಶಕ್ಕೆ ಪಡೆದಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಪ್ರಯತ್ನ, ರಾಜ್ಯದ ವಿವಿಧೆಡೆ ಮಳೆಯ ಆರ್ಭಟ ಮುಂದುವರಿದಿದೆ, ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಬಹುಮತ ಗಳಿಸಿದ್ದಾರೆ ಎಂಬುದೂ ಸೇರಿ ದೇಶದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ; ಎಡಿಜಿಪಿ ಅಮೃತ್ ಪಾಲ್ ಬಂಧನ
ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವಿಚಾರಣೆ ನಡೆಸಿದ ವೇಳೆ ಈ ಹಿಂದೆ ನೇಮಕಾತಿ ವಿಭಾಗದಲ್ಲಿ ಡಿಜಿಯಾಗಿದ್ದ ಅಮೃತ್ ಪಾಲ್ ವಿರುದ್ಧ ಆರೋಪ ಕೇಳಿಬಂದಿತ್ತು. ಹೀಗಾಗಿ ಅವರನ್ನು ನಾಲ್ಕನೇ ಬಾರಿ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. 545 ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಮೃತ್ ಪಾಲ್ ಅವರ ಕಚೇರಿಯಲ್ಲೇ ಓಎಂಆರ್ ಶೀಟ್ ತಿದ್ದಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ರಾಜ್ಯದ ಇತಿಹಾಸದಲ್ಲೇ ಎಡಿಜಿಪಿ ಬಂಧನವಾಗಿರುವ ಪ್ರಕರಣ ಇದೇ ಮೊದಲು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
2. ಭೂವ್ಯಾಜ್ಯದಲ್ಲಿ ಲಂಚ: ಬೆಂಗಳೂರು ನಗರ ಡಿಸಿಯಾಗಿದ್ದ ಜೆ. ಮಂಜುನಾಥ್ ಬಂಧನ
ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗ ಭೂ ವ್ಯಾಜ್ಯಕ್ಕೆ ಸಂಬಂಧಿಸಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಅವರನ್ನು ಎಸಿಬಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಮೇ 21ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಉಪ ತಹಸಿಲ್ದಾರ್ ಮಹೇಶ್, ಗುತ್ತಿಗೆ ನೌಕರ ಚೇತನ್ ಎಂಬವರಿಂದ 5 ಲಕ್ಷ ರೂ. ಲಂಚ ಪಡೆಯುತ್ತಿರುವಾಗ ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಪಾತ್ರದ ಬಗ್ಗೆ ಆರೋಪ ಕೇಳಿಬಂದಿತ್ತು. ಕೆಳ ಹಂತದ ಅಧಿಕಾರಿಗಳ ಮೂಲಕ ಮಂಜುನಾಥ್ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪವಿತ್ತು. ಆದರೂ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳದ ಎಸಿಬಿ ವಿರುದ್ಧ ಹೈಕೋರ್ಟ್ ಚಾಟಿ ಬೀಸಿತ್ತು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
3. ರಾಜ್ಯದಲ್ಲಿ ಮಳೆ ಅಬ್ಬರ: ವಿವಿಧೆಡೆ ರಸ್ತೆ, ಸೇತುವೆಗಳು ಜಲಾವೃತ
ಕಳೆದ ಕೆಲವು ದಿನಗಳಿಂದ ಕೊಡಗು, ದಕ್ಷಿಣ ಕನ್ನಡ ಸೇರಿ ವಿವಿಧೆಡ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ. ಅನೇಕ ಕಡೆಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆಗಳು ಮುಳುಗಡೆಯಾಗಿವೆ. ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಭಾರಿ ಮಳೆಯಿಂದಾಗಿ ಕಾವೇರಿ ನದಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಚಿಕ್ಕಮಗಳೂರಿನ ಕುದುರೆಮುಖ ಸುತ್ತಮುತ್ತ ಭಾನುವಾರ ರಾತ್ರಿಯಿಡೀ ಇಡೀ ರಾತ್ರಿ ಮಳೆ ಸುರಿದಿದೆ. ಭಾರೀ ಮಳೆಗೆ ಮೈದುಂಬಿ ಹರಿಯುತ್ತಿರುವ ಭದ್ರಾ ನದಿಯ ಕಾರಣಕ್ಕೆ ಕಳಸದ ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ. ದಕ್ಷಿಣ ಕನ್ನಡದಲ್ಲಿಯೂ ಮಳೆ ಮುಂದುವರಿದಿದ್ದು, ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಆದರೆ ಗಾಳಿ ಮುಂದುವರಿದಿದ್ದು, 64.5 ಮಿ.ಮೀ.ನಿಂದ 115.5 ಮಿ.ಮೀ.ವರೆಗೆ ಮಳೆ ಬೀಳುವ ಸೂಚನೆಯಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
4. ಸಿದ್ದರಾಮೋತ್ಸವ ಕೇವಲ ಜನುಮ ದಿನ ಕಾರ್ಯಕ್ರಮವೆ? srlopcm75ನಲ್ಲಿದೆ ಈ ಒಗಟಿಗೆ ಉತ್ತರ!
ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮ ದಿನ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಆಗಸ್ಟ್ 3ರಂದು ಆಯೋಜಿಸಲಾಗುತ್ತಿದೆ ಎನ್ನುವುದು ಈಗಾಗಲೆ ಸಾಕಷ್ಟು ಚರ್ಚೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಈಗಾಗಲೆ ಮುನಿಸಿಗೆ ಕಾರಣವಾಗಿರುವ ಸಿದ್ದರಾಮೋತ್ಸವ ಕೇವಲ ಒಂದು ದಿನದ ಕಾರ್ಯಕ್ರಮ ಅಲ್ಲ. ಅದು ನಿಶ್ಚಿತವಾಗಿ ಸಿದ್ದರಾಮಯ್ಯ ಅವರನ್ನು ಮುಂದಿನ ಸಿಎಂ ಮಾಡುವ ಪ್ರಯತ್ನ ಎಂಬುದು ದಿನೇದಿನೆ ಸ್ಪಷ್ಟವಾಗುತ್ತಿದೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಕಾರ್ಯಕ್ರಮ ಆಯೋಜನೆ ಸಂಬಂಧ ರಚನೆ ಮಡಲಾಗಿರುವ ಇಮೇಲ್ ವಿಳಾಸ srlopcm75@gmail.com ಎನ್ನುವುದೇ ಸಾಕಷ್ಟು ಕತೆಗಳನ್ನು ಹೇಳುತ್ತಿವೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೫. Maha politics: ಸಿಎಂ ಆಗಿ ವಿಶ್ವಾಸ ಮತ ಗೆದ್ದ ಏಕನಾಥ್ ಶಿಂಧೆಗೆ 164 ಶಾಸಕರ ಬೆಂಬಲ, ಅಘಾಡಿಗೆ ಕೇವಲ 99
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಣ ಮಾಡಿದ್ದ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ವಿಧಾನಸಭೆಯ ಅಂಗಣದಲ್ಲಿ ತಮಗಿರುವ ಬಹುಮತವನ್ನು ಸಾಬೀತುಪಡಿಸುವ ಮೂಲಕ ವಿಶ್ವಾಸಮತವನ್ನು ಗೆದ್ದಿದ್ದಾರೆ. ಏಕನಾಥ್ ಶಿಂಧೆ ಅವರು ಸೋಮವಾರ ಬೆಳಗ್ಗೆ ೧೧ ಗಂಟೆಗೆ ವಿಶ್ವಾಸಮತ ಯಾಚಿಸಿದ್ದು, ಅವರಿಗೆ ೧೬೪ ಮತಗಳು ಲಭಿಸಿವೆ. ೨೮೮ ಸದಸ್ಯರ ಸದನದಲ್ಲಿ ೧೪೫ ಮ್ಯಾಜಿಕ್ ಸಂಖ್ಯೆ ಆಗಿದೆ. ಈ ಮೂಲಕ ಅವರು ದೊಡ್ಡ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದಿದ್ದಾರೆ. ವಿಶ್ವಾಸ ಮತದ ವಿರುದ್ಧ ಕೇವಲ ೯೯ ಮತಗಳು ಮಾತ್ರ ಬಿದ್ದಿವೆ. ಅಂದರೆ ಮಹಾ ವಿಕಾಸ ಅಘಾಡಿ ಕೂಟದಲ್ಲಿ ಕೆಲವರು ವಿಶ್ವಾಸಮತಕ್ಕೆ ಗೈರುಹಾಜರಾಗಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
6. Security threat: ಆಂಧ್ರದಲ್ಲಿ ಮೋದಿ ಹೆಲಿಕಾಪ್ಟರ್ ಸಮೀಪವೇ ಹಾರಾಡಿದ ಕಪ್ಪು ಬಲೂನುಗಳು
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ವಿಮಾನದ ಸಮೀಪವೇ ರಾಶಿ ರಾಶಿ ಕಪ್ಪು ಬಲೂನುಗಳು ಹಾರಾಡಿ ಆತಂಕ ಸೃಷ್ಟಿಸಿದ ವಿದ್ಯಮಾನ ಸೋಮವಾರ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಇದು ಮೋದಿ ಅವರ ಭದ್ರತೆಗೆ ಭಾರಿ ಅಪಾಯಕಾರಿಯಾಗಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆಂಧ್ರ ಪ್ರದೇಶ ಕಾಂಗ್ರೆಸ್ ಮೋದಿ ಅವರ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಕೆಲವು ಬಲೂನುಗಳನ್ನು ಹಾರಿಸಲಾಗಿದ್ದು, ಅವುಗಳಲ್ಲಿ ಕೆಲವು ಮೋದಿ ಅವರ ಹೆಲಿಕಾಪ್ಟರ್‌ನ ಅತ್ಯಂತ ಸಮೀಪದಲ್ಲೇ ಹಾರಿವೆ. ಒಂದು ಕಡೆ ಕಾಂಗ್ರೆಸ್‌ನ ಪ್ರತಿಭಟನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದರೆ, ಈ ವಿದ್ಯಮಾನ ಭದ್ರತಾ ವೈಫಲ್ಯ ಎಂದು ಕೂಡಾ ಬಿಂಬಿತವಾಗುತ್ತಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೭. ಸಿಗರೇಟ್ ಸೇದುತ್ತಿರುವ ಕಾಳಿ ಪೋಸ್ಟರ್! ನಿರ್ಮಾಪಕಿ ವಿರುದ್ಧ ದೂರು ದಾಖಲು
ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ದೇಶನದ ಸಾಕ್ಷ್ಯಚಿತ್ರದ ಪೋಸ್ಟರ್ ವಿರುದ್ಧ ಎಲ್ಲೆಡೆ ಆಕ್ರೋಶ ಶುರುವಾಗಿದೆ. ಲೀನಾ ಅವರು ಇತ್ತೀಚೆಗೆ ತಮ್ಮ ಮುಂಬರುವ ಸಾಕ್ಷ್ಯಚಿತ್ರದ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟರ್‌ನಲ್ಲಿ ಮಹಿಳೆಯೊಬ್ಬರು ಹಿಂದೂ ದೇವತೆಯ ವೇಷವನ್ನು ಧರಿಸಿದ್ದಾರೆ, ಫೋಟೊದಲ್ಲಿ ಕಾಳಿ ಮಾತೆಯ ವೇಷಧಾರಿ ಸಿಗರೇಟು ಸೇದುತ್ತಿರುವ ದೃಶ್ಯವಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
8. Drone terror: ಕಾಶ್ಮೀರ ಗಡಿ ಭಾಗದಲ್ಲಿ ಪಾಕಿಸ್ತಾನಿ ಡ್ರೋನ್ ಹಾರಾಟ, ಭದ್ರತಾ ಪಡೆಗಳ ದೌಡು
ಜಮ್ಮು ವಲಯದ ರಿಯಾಸಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗ್ರಾಮಸ್ಥರ ಸಹಕಾರದಿಂದ ನಡೆದ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಮೂಲಕ ಲಷ್ಕರೆ ತಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಿದ ಘಟನೆ ಇನ್ನೂ ಹಸಿರಾಗಿರುವ ನಡುವೆಯೇ ಇನ್ನೊಂದು ಆತಂಕಕಾರಿ ಘಟನೆ ನಡೆದಿದೆ. ಸಾಂಬಾ ಜಿಲ್ಲೆಯ ಭಾರತ- ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಬರುವ ರಾಜಪುರ ಪ್ರದೇಶದಲ್ಲಿ ಭಾನುವಾರ ಪಾಕಿಸ್ತಾನ ಮೂಲದ ಡ್ರೋನ್ ಸಂಚರಿಸಿರುವುದು ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಈ ಭಾಗದಲ್ಲಿ ಡ್ರೋನ್ ಒಂದು ಹಾರಾಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೯. ವಿಸ್ತಾರ Explainer: ನಂಬಿ ಕೆಟ್ಟವರಲ್ಲ! ದೇಶಪ್ರೇಮಿ ವಿಜ್ಞಾನಿ
ಆರ್. ಮಾಧವನ್ ಅವರು ನಾಯಕನಾಗಿ ನಟಿಸಿರುವ ʻರಾಕೆಟ್ರಿ: ದಿ ನಂಬಿ ಎಫೆಕ್ಟ್ʼ ಸಿನೆಮಾ ಹಿರಿತೆರೆಯನ್ನು ಆವರಿಸಿದೆ. ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಪಡೆಯುತ್ತಿದೆ. ಇದು ಭಾರತೀಯ ಬಯೋಪಿಕ್‌ಗಳ ಪಟ್ಟಿಗೆ ಇನ್ನೊಂದು ಸೊಗಸಾದ ಸೇರ್ಪಡೆ. ನಮ್ಮ ದೇಶ ಕಂಡ ಪ್ರಾಮಾಣಿಕ, ಅನುಭವಿ ವೈಮಾನಿಕ ಎಂಜಿನಿಯರ್ ಒಬ್ಬರನ್ನು ಸುಳ್ಳು ಬೇಹುಗಾರಿಕೆ ಆರೋಪ ಹೊರಿಸಿ ಚಿತ್ರಹಿಂಸೆ ನೀಡಿ, ಅವರ ಬದುಕನ್ನೇ ನಾಶ ಮಾಡಿದ ದುಷ್ಟ ವ್ಯವಸ್ಥೆಯ ಇಂಚಿಂಚನ್ನೂ ಈ ಸಿನಿಮಾ ಬಯಲಿಗೆ ತಂದಿಟ್ಟಿದೆ. ಇದು ಡಾ.ನಂಬಿ ನಾರಾಯಣನ್ ಅವರ ಜೀವನದ, ಅವರು ಎದುರಿಸಿದ ದುಷ್ಟವ್ಯೂಹದ ಕತೆ. ಯಾರಿವರು ನಂಬಿ? ಯಾಕೆ ಸುದ್ದಿಯಾದವರು? (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
10. ಜ್ಞಾನವಾಪಿ ವಿವಾದ: ಪೂಜೆಗೆ ಅವಕಾಶ ನೀಡಬಾರದು ಎಂದು ವಾದಿಸಿದ ಮುಸ್ಲಿಂ ಅರ್ಜಿದಾರರು, ವಿಚಾರಣೆ ಮುಂದೂಡಿಕೆ
ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದ ಒಳಗೆ ಇರುವ ಶೃಂಗಾರ ಗೌರಿ ಸ್ಥಳದಲ್ಲಿರುವ ಹಿಂದೂ ದೇವರ ಚಿತ್ರಗಳಿಗೆ ಪೂಜೆ ಮಾಡಲು ಅವಕಾಶ ಕೋರಿ ಐವರು ಮಹಿಳಾ ಭಕ್ತರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಅರ್ಹವೇ ಎಂಬ ವಿಚಾರಕ್ಕೆ ಸಂಬಂಧಿಸಿ ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆ ಮರು ಆರಂಭಗೊಂಡಿದೆ. ಪೂಜೆಗೆ ಅವಕಾಶ ನೀಡಲಾಗದು ಎಂದು ಮುಸ್ಲಿಂ ಅರ್ಜಿದಾರರು ಈ ವೇಳೆ ವಾದಿಸಿದರು. ಅಂಜುಮಾನ್ ಇನ್ತೆಜಾಮಿಯಾ ಮಸೀದಿ ಸಮಿತಿ ವಕೀಲರು ತಮ್ಮ ವಾದ ಮಂಡಿಸಿ, ೧೯೯೧ರ ಪೂಜಾಸ್ಥಳಗಳ ಕಾಯಿದೆಯ ಪ್ರಕಾರ ಇಲ್ಲಿ ಪೂಜೆಗೆ ಅವಕಾಶ ನೀಡಲಾಗದು ಎಂದು ಹೇಳಿದರು. ವಾದವನ್ನು ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ ೧೨ಕ್ಕೆ ಮುಂದೂಡಿತು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)