ಬೆಂಗಳೂರು: ಇತ್ತ ರಾಜ್ಯ ಸರ್ಕಾರ ರಾಜ್ಯದ ಯಾವುದೇ ಸರ್ಕಾರಿ ಕಚೇರಿ ಒಳಗೆ ಫೋಟೊ, ವಿಡಿಯೊ ಮಾಡುವಂತಿಲ್ಲ ಎಂದು ನಿಷೇಧ ಹೇರುವ ಮೂಲಕ ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾಗಿದ್ದರೆ, ಅತ್ತ ಕೇಂದ್ರ ಸರ್ಕಾರ ಡಿಜಿಟಲ್ ಮಾಧ್ಯಮಗಳ ನಿಯಂತ್ರಣಕ್ಕೆ ಸಿದ್ಧತೆ ನಡೆಸಿದೆ. ರಾಜ್ಯದ ಕೆಲವು ಭಾಗದಲ್ಲಿ ಭಾರಿ ಮಳೆಯಾಗಿದ್ದು, ಅನಾಹುತಗಳ ಸರಣಿ ಮುಂದುವರಿದಿದೆ. ಈ ನಡುವೆ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸುವ ಸಲುವಾಗಿ ಮಹತ್ವದ ಸಭೆ ನಡೆಸಿದೆ. ಎಲ್ಲ ಸುದ್ದಿಗಳೊಂದಿಗೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ʻವಿಸ್ತಾರ TOP 10 NEWSʼ ಇಲ್ಲಿದೆ.
೧. ಸರ್ಕಾರಿ ಕಚೇರಿ ಒಳಗೆ ಫೋಟೊ, ವಿಡಿಯೊ ಮಾಡುವಂತಿಲ್ಲ: ಸರ್ಕಾರದ ಆದೇಶ
ಇನ್ನು ಮುಂದೆ ರಾಜ್ಯದ ಯಾವುದೇ ಸರ್ಕಾರಿ ಕಚೇರಿ ಒಳಗೆ ಫೋಟೊ, ವಿಡಿಯೊ ಮಾಡುವಂತಿಲ್ಲ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕದ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಈ ಆದೇಶ ಹೊರಡಿಸಲಾಗಿದ್ದು, ಕಚೇರಿ ವೇಳೆಯಲ್ಲಿ ವಿಡಿಯೋ, ಫೋಟೊ ಮಾಡುವಂತಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶದಲ್ಲಿ ತಿಳಿಸಿದೆ. ಸರ್ಕಾರದ ಈ ನಡೆಯನ್ನು ವಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಆಡಳಿತದಲ್ಲಿ ಪಾರದರ್ಶಕತೆ ಎಲ್ಲಿ ಎಂದು ಪ್ರಶ್ನಿಸಿವೆ. ( ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೨. ರಾಜ್ಯದಲ್ಲಿ ಮುಂದುವರಿದ ಮಳೆ; ಚಿಕ್ಕಮಗಳೂರಿನಲ್ಲಿ ಕೊಚ್ಚಿ ಹೋದ ಹೆದ್ದಾರಿ!
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದ್ದು, ಮಳೆಯ ಅನಾಹುತಗಳ ಸರಣಿ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ ರಸ್ತೆ ಕೊಚ್ಚಿ ಹೋಗಿದೆ. ಶೃಂಗೇರಿ ತಾಲೂಕಿನ ನೇರಳೆಕೊಡಿಗೆ ಸಮೀಪ ರಸ್ತೆ ಕೊಚ್ಚಿ ಹೋಗಿದ್ದು, ಶೃಂಗೇರಿ-ಆಗುಂಬೆ ಮಾರ್ಗದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನಲ್ಲಿ ಮಳೆಯಿಂದಾಗಿ ಮನೆಕುಸಿದು ಕೂಲಿ ಕಾರ್ಮಿಕ, ಚಿಟ್ಟೂರು ಗ್ರಾಮದ ಅಶೋಕ (32) ಎಂಬುವರು ಮೃತಪಟ್ಟಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೩. ಡಿಜಿಟಲ್ ಮಾಧ್ಯಮಗಳಿಗೆ ಕೇಂದ್ರದ ಕಡಿವಾಣ
ಡಿಜಿಟಲ್ ಮಾಧ್ಯಮ (Digital Media) ಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಜುಲೈ 18ರಿಂದ ಸಂಸತ್ತಿನ ಅಧಿವೇಶನ ಪ್ರಾರಂಭವಾಗಲಿದ್ದು, ಅದರಲ್ಲಿ ಕೇಂದ್ರ ಸರ್ಕಾರ ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಕಾನೂನಿನಲ್ಲಿ ತಿದ್ದುಪಡಿ ಮಾಡಲಿದೆ. ಆ ಮೂಲಕ ಡಿಜಿಟಲ್ ಮಾಧ್ಯಮಗಳಿಗೆ ಕಡಿವಾಣ ಹಾಕಲಿದೆ. ( ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೪. ವಿವಾದಿತ ಪತ್ರಕರ್ತನ ಜತೆ ಹಮೀದ್ ಅನ್ಸಾರಿ ಸ್ನೇಹ; ದಾಖಲೆ ನೀಡಿದ ಬಿಜೆಪಿ
ಪಾಕಿಸ್ತಾನದ ವಿವಾದಿತ ಪತ್ರಕರ್ತ ನುಸ್ರತ್ ಮಿರ್ಜಾ ಅವರ ಜತೆ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸ್ನೇಹ ಹೊಂದಿರುವ ಬಗ್ಗೆ ಬಿಜೆಪಿ ಗಂಭೀರ ಆರೋಪಗಳನ್ನು ಮಾಡಿದೆ. ಜತೆಗೆ ಅವರಿಬ್ಬರ ಸ್ನೇಹಕ್ಕೆ ಸಂಬಂಧಿಸಿ ಫೋಟೊಗಳು ಹಾಗೂ ಕೆಲವೊಂದು ದಾಖಲೆಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ. ಹಮೀದ್ ಅನ್ಸಾರಿ ಅವರು ಈ ಆರೋಪವನ್ನು ತಳ್ಳಿ ಹಾಕಿದ ಬೆನ್ನಲ್ಲೇ ಬಿಜೆಪಿ ದಾಖಲೆಗಳನ್ನು ಬಿಡುಗಡೆ ಮಾಡಿ ತಿರುಗೇಟು ನೀಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೫. ಲಲಿತ್ ಮೋದಿ ಜತೆ ಡೇಟಿಂಗ್: ಕೊನೆಗೂ ಮೌನ ಮುರಿದ ಸುಶ್ಮಿತಾ ಸೇನ್ ಹೇಳಿದ್ದೇನು?
ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ತಾನು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಜೊತೆಗೆ ಡೇಟಿಂಗ್ ನಡೆಸುತ್ತಿರುವುದಾಗಿ ಗುರುವಾರ ರಾತ್ರಿ ಘೋಷಿಸಿದ್ದರು. ತಾನು ಮತ್ತು ಸುಶ್ಮಿತಾ ಜತೆಗಿರುವ ಹಲವು ಚಿತ್ರಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಸುಶ್ಮಿತಾ ನನ್ನ ಜೀವನದ ಅತ್ಯುತ್ತಮ ಗೆಳತಿ ಎಂದು ಬರೆದುಕೊಂಡಿದ್ದರು. ಇದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಲಲಿತ್ ಮೋದಿ ನೇರವಾಗಿ ಇಷ್ಟೊಂದು ವಿಷಯಗಳನ್ನು ಹೇಳಿಕೊಂಡಿದ್ದರೂ ಸುಶ್ಮಿತಾ ಸೇನ್ ಮಾತ್ರ ಈ ಬಗ್ಗೆ ಒಂದು ಮಾತೂ ಆಡಿರಲಿಲ್ಲ. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
6. 1985ರ ಏರ್ ಇಂಡಿಯಾ ಬಾಂಬ್ ಸ್ಫೋಟ ಆರೋಪ ಹೊತ್ತಿದ್ದ ರಿಪುದಮನ್ ಸಿಂಗ್ ಮಲಿಕ್ ಕೆನಡಾದಲ್ಲಿ ಹತ್ಯೆ
1985 ರಲ್ಲಿ ನಡೆದಿದ್ದ ಏರ್ ಇಂಡಿಯಾ ಬಾಂಬ್ ದುರಂತ ಪ್ರಕರಣದಲ್ಲಿ ಆರೋಪಿಯೆನಿಸಿ, ನಂತರ ಖುಲಾಸೆಗೊಂಡಿದ್ದ ಕೆನಡಾ ಮೂಲದ ಸಿಖ್ ನಾಯಕ ರಿಪುದಮನ್ ಸಿಂಗ್ ಮಲಿಕ್‌ನನ್ನು ಗುರುವಾರ ಮುಂಜಾನೆ ಕೆನಡಾದ ಸರ‍್ರೆ ಎಂಬಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಈ ಬಗ್ಗೆ ಕೆನಡಾದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ಬೆಳಗ್ಗೆ 9.30ರ ಹೊತ್ತಿಗೆ ಫೈರಿಂಗ್ ನಡೆದಿದ್ದು, ರಿಪುದಮನ್ ಸಿಂಗ್ ಮಲಿಕ್‌ನನ್ನು ಟಾರ್ಗೆಟ್ ಮಾಡಿಯೇ ಹತ್ಯೆ ಮಾಡಲಾಗಿದೆ. ಆರೋಪಿಗಳು ನಂತರ ಎಸ್‌ಯುವಿ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
7. Keruru Case | ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಹಣವನ್ನು ವಾಪಸ್ ಎಸೆದ ರಜ್ಮಾ!
ಕೆರೂರು ಗುಂಪು ಘರ್ಷಣೆ (Keruru Case) ಪ್ರಕರಣದ ಗಾಯಾಳುಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿ ಆರ್ಥಿಕ ನೆರವನ್ನು ನೀಡಿದಾಗ, ಗಾಯಾಳುಗಳ ಕುಟುಂಬಸ್ಥರು ನಮಗೆ ದುಡ್ಡು ಬೇಡ, ಶಾಂತಿ ಬೇಕು ಎನ್ನುತ್ತ ಹಣವನ್ನು ಕಾರಿನ ಮೇಲೆ ಎಸೆದು ಅಸಮಾಧಾನ ಹೊರಹಾಕಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
8. Fertilizer problems | ಚಾಮರಾಜನಗರದಲ್ಲಿ ರಸಗೊಬ್ಬರಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ ರೈತ ಅಸ್ವಸ್ಥ
ರಾಜ್ಯದಲ್ಲಿ ರಸಗೊಬ್ಬರದ ಕೊರತೆ (Fertilizer problems) ಎದುರಾಗಿದೆಯೇ ಎಂಬ ಸಂಶಯ ಮೂಡತೊಡಗಿದ್ದು, ಈ ಹಿನ್ನೆಲೆಯಲ್ಲಿ ರೈತರು ಸಹ ಸೊಸೈಟಿ ಎದುರು ದಿನಗಟ್ಟಲೇ ಕಾಯುತ್ತಿರುವ ಪ್ರಕರಣಗಳು ವಿವಿಧ ಜಿಲ್ಲೆಗಳಲ್ಲಿ ವರದಿಯಾಗುತ್ತಲೇ ಇದೆ. ಶುಕ್ರವಾರ (ಜುಲೈ ೧೫) ರಸಗೊಬ್ಬರಕ್ಕಾಗಿ ಹನೂರು ಪಟ್ಟಣದ ಸೊಸೈಟಿಯೊಂದರಲ್ಲಿ ನಿಂತಿದ್ದ ರೈತರೊಬ್ಬರು ತೀವ್ರ ಅಸ್ವಸ್ಥರಾಗಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
9. Election 2023 | ಸಾಧನಾ ಸಮಾವೇಶದ ಮೂಲಕ ಪ್ರಚಾರ ನಡೆಸಲು ಬಿಜೆಪಿ ಚಿಂತನ ಸಭೆಯಲ್ಲಿ ತೀರ್ಮಾನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜುಲೈ ೨೮ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಾಧನಾ ಸಮಾವೇಶ ನಡೆಸಲು ಶುಕ್ರವಾರ ನಡೆದ ಬಿಜೆಪಿಯ ಚಿಂತನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ರಾಜ್ಯದಾದ್ಯಂತ ವಿಧಾನಸಭಾ ಚುನಾವಣೆಯ (Election 2023) ಪ್ರಚಾರವನ್ನು ಆರಂಭಿಸಲು ಪಕ್ಷ ತೀರ್ಮಾನಿಸಿದೆ. ರಾಜ್ಯದಲ್ಲಿ ೨೦೨೩ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ೧೫೦ ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸುವ ಕುರಿತು ವಿಸ್ತೃತ ಚರ್ಚೆ ನಡೆದಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
10. NIRF India Rankings 2022 | ಟಾಪ್ 10 ವಿವಿಗಳ ಪಟ್ಟಿ; ಮೊದಲ ಸ್ಥಾನ ಗಳಿಸಿದ ಬೆಂಗಳೂರಿನ ಐಐಎಸ್‌ಸಿ
ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಪಟ್ಟಿ (NIRF India Rankings 2022) ಬಿಡುಗಡೆ ಮಾಡಿದೆ. ವಿಶ್ವವಿದ್ಯಾಲಯ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೊದಲ ಸ್ಥಾನ ಪಡೆದುಕೊಂಡಿದೆ. ಈ ವಿಭಾಗದಲ್ಲಿ ನವ ದೆಹಲಿಯ ಜವಹಾರ್‌ಲಾಲ್ ನೆಹರು ವಿಶ್ವವಿದ್ಯಾಲಯ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿವೆ. ಒಟ್ಟಾರೆ ಉನ್ನತ ಶಿಕ್ಷಣ ರ‍್ಯಾಂಕಿಂಗ್‌ನಲ್ಲಿ ಐಐಎಸ್‌ಸಿ ಎರಡನೇ ಸ್ಥಾನ ಪಡೆದಿದೆ. ಐಐಟಿ ಮದ್ರಾಸ್ ಮೊದಲ ಸ್ಥಾನದಲ್ಲಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)