ಬೆಂಗಳೂರು: ಶಿವಮೊಗ್ಗ ಪೊಲೀಸರು ಉಗ್ರ ಜಾಲವೊಂದನ್ನು ಭೇದಿಸಿದ್ದು, ಮೂವರು ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿರುವುದು ದಾಖಲಿಸಿರುವುದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. 545 ಪಿಎಸ್‌ಐ ನೇಮಕದಲ್ಲಿ ನಡೆದ ಹಗರಣದ ಕುರಿತು ವಿಧಾನಸಭೆಯಲ್ಲಿ ಚರ್ಚೆ ವೇಳೆ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಗದ್ದಲ ನಡೆದಿದೆ, ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಗುಜರಾತಿ ಸಿನಿಮಾ ನಾಮನಿರ್ದೇಶನವಾಗಿದೆ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಹೋರಾಟ ಸಿಎಂ ಬೊಮ್ಮಾಯಿ ಮನೆವರೆಗೂ ಬಂದಿದೆ, ಐಸಿಸಿ ನಿಯಮಗಳಲ್ಲಿ ಬದಲಾವಣೆ ಎನ್ನುವುದು ಸೇರಿ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Shivamogga terror | ಸಾವರ್ಕರ್-ಟಿಪ್ಪು ಗಲಾಟೆಗೂ ಉಗ್ರ ಜಾಲ ಪತ್ತೆಗೂ ಲಿಂಕ್, ಜಬಿ ವಿಚಾರಣೆ ವೇಳೆ ಸಿಕ್ತು ಸುಳಿವು
ಶಿವಮೊಗ್ಗ ಪೊಲೀಸರು ನಡೆಸಿದ ಉಗ್ರ ಜಾಲ ಬಯಲು ಕಾರ್ಯಾಚರಣೆಗೂ ಆಗಸ್ಟ್ ೧೫ರಂದು ಶಿವಮೊಗ್ಗದಲ್ಲಿ ನಡೆದ ಸಾವರ್ಕರ್-ಟಿಪ್ಪು ಫ್ಲೆಕ್ಸ್ ಗಲಾಟೆಗೂ ಸಂಬಂಧವಿರುವುದನ್ನು ಸ್ವತಃ ಎಸ್‌ಪಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಒಪ್ಪಿಕೊಂಡಿದ್ದಾರೆ. ಹಾಗಂತ, ಇದು ನೇರ ಸಂಬಂಧವೇನೂ ಅಲ್ಲ. ಸಾವರ್ಕರ್ ಪ್ರಕರಣದ ವೇಳೆ ನಡೆದ ಚೂರಿ ಇರಿತ ಪ್ರಕರಣದ ಆರೋಪಿಯ ವಿಚಾರಣೆಯ ವೇಳೆ ಈ ಜಾಲದ ಸುಳಿವು ಸಿಕ್ಕಿದೆ.
ಶಿವಮೊಗ್ಗ ಪೊಲೀಸರು ಉಗ್ರ ಜಾಲವೊಂದನ್ನು ಭೇದಿಸಿದ್ದು, ಮೂವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ. ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯ ಮಹಮ್ಮದ್ ಶಾರೀಕ್, ಶಿವಮೊಗ್ಗದ ಸಿದ್ಧೇಶ್ವರ ನಗರದ ಸೈಯದ್ ಯಾಸಿನ್ ಮತ್ತು ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ ಇವರು ದುಷ್ಕೃತ್ಯ ನಡೆಸಲು ಸಂಚು ನಡೆಸುತ್ತಿದ್ದರು, ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸರು ಇವರಲ್ಲಿ ಯಾಸಿನ್ ಮತ್ತು ಮಾಜ್‌ನನ್ನು ಬಂಧಿಸಿದ್ದಾರೆ. ಶಾರೀಕ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತರನ್ನು ಸೆಪ್ಟೆಂಬರ್ ೧೯ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. PSI Scam | ಗದ್ದಲದಲ್ಲೇ ಸರ್ಕಾರದ ಉತ್ತರ, ತಾಳ್ಮೆ ಕಳೆದುಕೊಂಡ ಪ್ರಿಯಾಂಕ್ ಖರ್ಗೆ: ಚರ್ಚೆ ಮುಕ್ತಾಯ
ರಾಜ್ಯ ಪೊಲೀಸ್ ಇಲಾಖೆಗೆ ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿಯಲ್ಲಿ ನಡೆದಿರುವ ಹಗರಣದ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆ ಗದ್ದಲವಾಗಿ ಮಾರ್ಪಟ್ಟು, ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವೈಯಕ್ತಿಕ ಆರೋಪಗಳಿಗೂ ಕಾರಣವಾಯಿತು. ಸರ್ಕಾರ ಈ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿತು ಎಂದು ಸಿದ್ದರಾಮಯ್ಯ ಹೇಳಿದರೆ, ಸರ್ಕಾರದ ಪರವಾಗಿ ಸಿಎಂ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಸೇರಿ ಅನೇಕರು ಮಾತನಾಡಿದರು. ತಾವು ನಡೆಸಿದ್ದ ಪತ್ರಿಕಾಗೋಷ್ಠಿ ಕುರಿತು ಸಮರ್ಥನೆ ಮಾಡಿಕೊಳ್ಳಲು ಹರಸಾಹಸ ಪಟ್ಟ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಅನೇಕ ಸಂದರ್ಭಗಳಲ್ಲಿ ತಾಳ್ಮೆ ಕಳೆದುಕೊಂಡರು. ನಿಯಮ 69 ರ ಅಡಿಯಲ್ಲಿ ಈ ಚರ್ಚೆಯನ್ನು ಒಂದೇ ದಿನಕ್ಕೆ ಮುಕ್ತಾಯಗೊಳಿಸಲಾಗಿದೆ ಎಂದು ಘೊಷಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸದನವನ್ನು ಬುಧವಾರಕ್ಕೆ ಮುಂದೂಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಪಂಚಮಸಾಲಿ ಮೀಸಲು ಹೋರಾಟ: ಸಿಎಂ ಬೊಮ್ಮಾಯಿ ಶಿಗ್ಗಾಂವ್ ನಿವಾಸದೆದುರು ಬೃಹತ್ ಪತಿಭಟನೆ, ಸಾವಿರಾರು ಮಂದಿ ಭಾಗಿ
೨ಎ ಮೀಸಲಾತಿಗಾಗಿ ಕಳೆದ ಹಲವು ವರ್ಷದಿಂದ ಹೋರಾಟ ಮಾಡುತ್ತಿರುವ ಪಂಚಮಸಾಲಿ ಸಮಾಜ ಸೋಮವಾರ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವ್ ನಿವಾಸಕ್ಕೇ ಮುತ್ತಿಗೆ ಹಾಕಿದೆ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಳಗ್ಗಿನಿಂದಲೇ ಇಲ್ಲಿ ಬೃಹತ್ ಪ್ರತಿಭಟನೆ ಆರಂಭಗೊಂಡಿದ್ದು, ಬಳಿಕ ಮೆರವಣಿಗೆ ಮೂಲಕ ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಮುಖ್ಯಮಂತ್ರಿಗಳ ನಿವಾಸವನ್ನು ತಲುಪಿದೆ. ಸವಣೂರು-ಶಿಗ್ಗಾಂವ್ ರಸ್ತೆಯನ್ನು ಬಂದ್ ಮಾಡಿ ನಡೆಸಿರುವ ಈ ಪ್ರತಿಭಟನೆ ಮತ್ತು ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಉತ್ತರಿಸಿದ ಸಿಎಂ ಬೊಮ್ಮಾಯಿ, ಈಗಾಗಲೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವಿಚಾರಣೆ ನಡೆಸುತ್ತಿದೆ. ಇನ್ನು 12-13 ಜಿಲ್ಲೆಗಳ ವಿಚಾರಣೆ ಬಾಕಿಯಿದ್ದು, ವರದಿ ನೀಡಿದ ಕೂಡಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Super Speciality Hospital | ಉತ್ತರ ಕನ್ನಡದಲ್ಲಿ ಪಿಪಿಪಿ ಮಾದರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲವೇ ಮೆಡಿಕಲ್ ಕಾಲೇಜು
ಉತ್ತರ ಕನ್ನಡ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಇಲ್ಲವೇ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಚರ್ಚೆ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕುಮಟಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಂಗಳವಾರ ಸರ್ಕಾರ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಸ್ಥಳ ಪರಿಶೀಲನೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಉ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕುಮಟಾಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, “ಪಿಪಿಪಿ ಮಾದರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲವೇ ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ವಿಸ್ತಾರ PF info | ಆರೋಗ್ಯ, ಅಂಗವೈಕಲ್ಯಕ್ಕೆ ಪಿಂಚಣಿ ನೆರವು ನೀಡಲು ಇಪಿಎಫ್‌ಒ ಚಿಂತನೆ
ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯು (EPFO) ಆರೋಗ್ಯ, ಹೆರಿಗೆ, ಅಂಗ ವೈಕಲ್ಯಕ್ಕೆ ಸಂಬಂಧಿಸಿ ಪಿಂಚಣಿ ನೆರವು ನೀಡಲು ಚಿಂತನೆ ನಡೆಸಿದೆ. ಇಪಿಎಫ್‌ಒ ಪ್ರಾಥಮಿಕ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವ ದೃಷ್ಟಿಯಿಂದ ಹೊಸ ಸೌಲಭ್ಯಗಳನ್ನು ನೀಡಲು ಪರಿಶೀಲಿಸುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Hijab Row | ಪಿಎಫ್‌ಐ ಕುಮ್ಮಕ್ಕಿನಿಂದಾಗಿ ಹಿಜಾಬ್‌ಗೆ ಒತ್ತಾಯ, ಸುಪ್ರೀಂಗೆ ಕರ್ನಾಟಕ ಸರ್ಕಾರ ಮಾಹಿತಿ
ಕರ್ನಾಟಕದಲ್ಲಿ ಉಂಟಾದ ಹಿಜಾಬ್ ವಿವಾದದ (Hijab Row) ಕುರಿತು ಸುಪ್ರೀಂ ಕೋರ್ಟ್ ಎಂಟನೇ ದಿನದ ವಿಚಾರಣೆ ನಡೆಸಿದೆ. ರಾಜ್ಯದಲ್ಲಿ ಏಕೆ ವಿದ್ಯಾರ್ಥಿನಿಯರು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಬೇಕು ಎನ್ನುತ್ತಿದ್ದಾರೆ ಎಂಬುದನ್ನು ಕರ್ನಾಟಕ ಸರ್ಕಾರವು ಕೋರ್ಟ್‌ಗೆ ಮಾಹಿತಿ ನೀಡಿದೆ. “ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದಿಂದ ಪ್ರೇರೇಪಿತರಾಗಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ಬೇಕು ಎಂದು ಕೋರ್ಟ್ ಮೊರೆ ಹೋಗಿದ್ದಾರೆ” ಎಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Cong Prez Poll | ಸ್ನೇಕ್ ಬೋಟ್ ರೇಸ್ನಲ್ಲಿ ರಾಹುಲ್ ಗಾಂಧಿ ಮಸ್ತಿ; ಕಾಂಗ್ರೆಸ್ ಅಧ್ಯಕ್ಷ ಗಾದಿಗ್ಯಾರು ಅಭ್ಯರ್ಥಿ?
ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಚುನಾವಣೆ ಸಮೀಪಿಸುತ್ತಿದೆ. ಸೆಪ್ಟೆಂಬರ್ 24ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಕ್ಟೋಬರ್ 17ರಂದು ಚುನಾವಣೆ ನಡೆದು, ಅಕ್ಟೋಬರ್ 19ಕ್ಕೆ ಅಧ್ಯಕ್ಷ ಯಾರೆಂಬುದು ಗೊತ್ತಾಗಲಿದೆ. ರಾಹುಲ್ ಗಾಂಧಿಯನ್ನೇ ಮತ್ತೊಮ್ಮೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಬೇಕು ಎಂದು ಈಗಾಗಲೇ ಏಳು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ಣಯವನ್ನೂ ಅಂಗೀಕರಿಸಿದೆ. ಇಷ್ಟೆಲ್ಲದರ ಮಧ್ಯೆ ಕಾಂಗ್ರೆಸ್ಗೆ ಮುಂದಿನ ಅಧ್ಯಕ್ಷರನ್ನಾಗಿ ಶಶಿ ತರೂರ್ ಅವರನ್ನು ನೇಮಕ ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ. ಸೋನಿಯಾ ಗಾಂಧಿಯೂ ಇದಕ್ಕೆ ಅಸ್ತು ಎಂದಿದ್ದಾರೆ ಎಂಬುದೊಂದು ಮಾಹಿತಿಯೂ ಲಭ್ಯವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. (ಅಂಕಣ) ನನ್ನ ದೇಶ ನನ್ನ ದನಿ | ರಾಣಿಯ ಸಿಂಹಾಸನದ ಕಾಲಿಗೆ ತಮ್ಮನ್ನೇ ತಾವು ಕಟ್ಟಿಕೊಂಡವರು
ಬ್ರಿಟನ್‌ನ ರಾಣಿಯ ಸಾವಿಗಾಗಿ ಕಣ್ಣೀರುಗರೆಯುವ ಮೊದಲು, ಬ್ರಿಟಿಷ್ ರಾಜಸತ್ತೆ ಭಾರತೀಯರ ಮೇಲೆ ನಡೆಸಿದ ದೌರ್ಜನ್ಯ ಮತ್ತು ಅದಕ್ಕಾಗಿ ಕಿಂಚಿತ್ತೂ ವಿಷಾದಿಸದ ರಾಣಿಯ, ರಾಜಮನೆತನದ ಸ್ವಭಾವವನ್ನೂ ಮರೆಯದಿರೋಣ ಎನ್ನುತ್ತಾರೆ ಹಿರಿಯ ಸಂಶೋಧಕರಾದ ಅಜ್ಜಂಪುರ ಮಂಜುನಾಥ್ ಅವರು. ʼನನ್ನ ದೇಶ ನನ್ನ ದನಿʼ ಅಂಕಣವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
9. Chhello Show | ಆಸ್ಕರ್ ಸ್ಪರ್ಧೆಗೆ ಭಾರತದ ಯಾವ ಚಿತ್ರ ಆಯ್ಕೆ? ಆರ್‌ಆರ್‌ಆರ್, ಕಾಶ್ಮೀರ್ ಫೈಲ್ಸ್ ಅಲ್ಲವೇ ಅಲ್ಲ!
ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಹಾಗೂ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದವರೆಲ್ಲರೂ, ಈ ಬಾರಿ ಆಸ್ಕರ್ ವಿದೇಶಿ ಚಿತ್ರ ವಿಭಾಗಕ್ಕೆ ಈ ಸಿನಿಮಾಗಳನ್ನು ಕಳುಹಿಸಬೇಕು ಎನ್ನುತ್ತಿದ್ದರು. ಆದರೆ, ಎಲ್ಲರ ನಿರೀಕ್ಷೆ ಹುಸಿಯಾಗಿದ್ದು, ಗುಜರಾತ್ ಭಾಷೆಯ ‘ಛೆಲೋ ಶೋ’ (Chhello Show) ಚಿತ್ರ ಆಸ್ಕರ್ ಸ್ಪರ್ಧೆಗೆ ಅಧಿಕೃತ ಭಾರತೀಯ ಚಿತ್ರವಾಗಿ ಆಯ್ಕೆಯಾಗಿದೆ. ಈ ಬಗ್ಗೆ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಘೋಷಣೆ ಮಾಡಿದೆ.
ಪಾನ್ ನಳಿನ್ ಛೆಲೋ ಶೋ ಚಿತ್ರದ ನಿರ್ದೇಶಕರು. ಈ ಅನಿರೀಕ್ಷಿತ ಆಯ್ಕೆಯಿಂದ ಅವರು ಖುಷಿಗೊಂಡಿದ್ದಾರೆ. ಆರ್‌ಆರ್‌ಆರ್, ದಿ ಕಾಶ್ಮೀರ್ ಫೈಲ್ಸ್‌ನಂಥ ಚಿತ್ರಗಳನ್ನು ಹಿಂದಿಕ್ಕಿ ಛೆಲೋ ಶೋ ಸಿನಿಮಾ ಆಯ್ಕೆಯಾಗಿರುವುದರಿಂದ ಅವರ ಆನಂದಕ್ಕೆ ಪಾರವೇ ಇಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಚೆಂಡಿಗೆ ಎಂಜಲು ಬಳಸುವ ಪದ್ಧತಿ ಸಂಪೂರ್ಣ ನಿಷೇಧ, ಕ್ರಿಕೆಟ್ ನಿಯಮಗಳಲ್ಲಿ ಬದಲಾವಣೆ ತಂದ ಐಸಿಸಿ
ಟಿ೨೦ ವಿಶ್ವ ಕಪ್‌ಗೆ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕ್ರಿಕೆಟ್ ಆಟದ ನಿಯಮಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಹೀಗಾಗಿ ಮುಂಬರುವ ಟಿ೨೦ ವಿಶ್ವ ಕಪ್ ಬದಲಾದ ನಿಯಮಗಳೊಂದಿಗೆ ನಡೆಯಲಿದ್ದು, ಆಟಗಾರರು ಅದಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಪ್ರಮುಖವಾಗಿ ಚೆಂಡಿಗೆ ಹೊಳಪು ನೀಡಲು ಎಂಜಲು ಹಚ್ಚುವ ಕ್ರಮವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮಂಕಡ್ ಔಟ್‌ಗೆ ನಿಯಮದ ಮಾನ್ಯತೆ ಲಭಿಸಿದ್ದು ಇನ್ನು ಮುಂದೆ ರನ್‌ಔಟ್ ಎಂದೇ ಪರಿಗಣಿಸಲಾಗುತ್ತದೆ.
ಐಸಿಸಿಯ ಮುಖ್ಯ ಕಾರ್ಯಕಾರಿ ಸಮಿತಿ (ಸಿಇಸಿ) ಸಭೆಯಲ್ಲಿ ಈ ಬದಲಾವಣೆಗಳಿಗೆ ಸಮ್ಮತಿ ಸಿಕ್ಕಿದೆ. ಈ ಬದಲಾವಣೆಗಳನ್ನು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರ ಮುಂದಾಳತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಶಿಫಾರಸು ಮಾಡಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.