Site icon Vistara News

ವಿಸ್ತಾರ TOP 10 NEWS | ಜಪಾನ್‌ ಮಾಜಿ ಪ್ರಧಾನಿಯ ಗುಂಡಿಟ್ಟು ಹತ್ಯೆ ಹಾಗೂ ದಿನದ ಇನ್ನಿತರ ಪ್ರಮುಖ ಸುದ್ದಿಗಳಿವು

TOP 10 08072022

ಬೆಂಗಳೂರು: ರಾಜ್ಯದಲ್ಲಿ ಮೂರ್ನಾಲ್ಕು ದಿನದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದ್ದು, ಮುಂದಿನ ಮೂರ್ನಾಲ್ಕು ದಿನವೂ ಹೆಚ್ಚಿನ ಮಳೆಯ ಮುನ್ಸೂಚನೆ ಲಭಿಸಿದೆ. ಜಪಾನ್‌ ಬೆಳವಣಿಗೆಯಲ್ಲಿ ಗಣನೀಯ ಕೊಡುಗೆ ನೀಡಿದ್ದ ಮಾಜಿ ಅಧ್ಯಕ್ಷ ಶಿಂಜೊ ಅಬೆ ಅವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಂದಿರುವುದು ವಿಶ್ವವನ್ನೆ ತಲ್ಲಣಗೊಳಿಸಿದೆ. ಬೆಂಗಳೂರಿನ ಚಾಮರಾಜಪೇಟೆ ಮೈದಾನ ವಿವಾದ ಹೊಸ ತಿರುವು ಪಡೆಯುತ್ತಿದೆ. ಅಕ್ರಮ ಗೋಹತ್ಯೆ ಕುರಿತು ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ ಎನ್ನುವುದು ಸೇರಿದಂತೆ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Rain News | ನಿಲ್ಲದ ಮಳೆ ಗೋಳು, ಜಲಾವೃತ ಪ್ರದೇಶಗಳು ಸಾಲು ಸಾಲು
ರಾಜ್ಯದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ವಿವಿಧೆಡೆ ಭಾರಿ ಅವಾಂತರ ಸೃಷ್ಟಿಸಿದೆ. ಮಳೆಯಿಂದ ನದಿ ನೀರು ಅಪಾಯದ ಮಟ್ಟ ತಲುಪುತ್ತಿರುವುದರಿಂದ ಸೇತುವೆಗಳು ಜಲಾವೃತವಾಗಿವೆ. ಹಲವೆಡೆ ಗುಡ್ಡ, ರಸ್ತೆಗಳು ಕುಸಿದಿವೆ. ವಿದ್ಯುತ್‌ ಕಂಬಗಳು, ಮರಗಳು ನೆಲಕಚ್ಚಿದ್ದು, ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ. ಹಾಗಾಗಿ ಮಳೆ ಗೋಳು ಇನ್ನೂ ಮುಗಿದಿಲ್ಲ ಎನ್ನುವಂತಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಮನೆಯೊಳಗೆ ನೀರು ನುಗ್ಗಿದರೆ ₹10 ಸಾವಿರ ಪರಿಹಾರ: ಮಳೆ ಹಾನಿ ಕುರಿತು ಸಿಎಂ ಬೊಮ್ಮಾಯಿ ಸಭೆ

2. ಗುಂಡೇಟಿನಿಂದ ಗಾಯಗೊಂಡಿದ್ದ ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನ; ಪಿಎಂ ಮೋದಿ ಸಂತಾಪ
ಶುಕ್ರವಾರ ಬೆಳಗ್ಗೆ ಜಪಾನ್‌ ಪಶ್ಚಿಮ ನಗರ ನಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಗುಂಡಿನ ದಾಳಿಗೆ ಒಳಗಾದ ಜಪಾನ್‌ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ (67) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಾಜಿ ಯೋಧ ತೆಟ್ಸಾಯ ಯಾಮಗಾಮಿ ಎಂಬಾತ ಗುರಿಯಿಟ್ಟು ಗುಂಡು ಹೊಡೆದಿದ್ದ. ಒಂದು ಗುಂಡು ಶಿಂಜೊ ಎದೆಗೆ ಬಿದ್ದಿತ್ತು. ಇನ್ನೊಂದು ಗುಂಡು ಅವರ ಕುತ್ತಿಗೆಗೆ ಬಿದ್ದಿತ್ತು. ಗುಂಡಿನ ದಾಳಿಗೆ ಒಳಗಾಗುತ್ತಿದ್ದಂತೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಅವರಿಗೆ ಪ್ರಾಥಮಿಕವಾಗಿ ಸಿಪಿಆರ್‌ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕೊನೆಗೂ ಅವರು ಬದುಕುಳಿಯಲಿಲ್ಲ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಜಪಾನ್‌ಗೆ ಅಬೆನಾಮಿಕ್ಸ್‌ ಕೊಟ್ಟ ಶಿಂಜೊ, ʻಅಬ್ಬಾʼ ಎನಿಸುವ 10 ವಿಶೇಷ ಸಂಗತಿಗಳು
ಶಿಂಜೊ ಅಬೆಯಂತೆಯೇ ಹತ್ಯೆಯಾದ ಜಗತ್ತಿನ ಹತ್ತು ನಾಯಕರಿವರು

3. ವಿರೋಧಕ್ಕೆ ಎಚ್ಚೆತ್ತ ಸರ್ಕಾರ: ಶೂ, ಸಾಕ್ಸ್‌ಗೆ ₹132 ಕೋಟಿ ಅನುಮೋದನೆ ನೀಡಿದ ಸಿಎಂ
ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ತಿಂಗಳು ಕಳೆದರೂ ಮಕ್ಕಳಿಗೆ ಶಾಲಾ ಸಮವಸ್ತ್ರ ಹಾಗೂ ಶೂ, ಸಾಕ್ಸ್‌ ಸಿಕ್ಕಿಲ್ಲ. ಹೀಗಾಗಿ ಮಕ್ಕಳ ಪೋಷಕರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ವರ್ಷ ಶೂ ಸಾಕ್ಸ್‌ ನೀಡಲು ಹಣವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ ನಂತರವಂತೂ ಆಕ್ರೋಶ ಹೆಚ್ಚಾಗಿದ್ದರಿಂದ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಶಾಲಾ ಮಕ್ಕಳ ಶೂ, ಸಾಕ್ಸ್ ಹಂಚಿಕೆಗೆ 132 ಕೋಟಿ ರೂ. ಅನುಮೋದನೆ ನೀಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೪. ಮತ್ತೆ ಕಾಲು ಕೆದರಿ ಕಿರಿಕ್‌ ಮಾಡಿದ ಚೀನಾ: ಲಡಾಕ್‌ ಗಡಿ ಭಾಗದಲ್ಲಿ ಹಾರಾಡಿದ ವಿಮಾನ
ಆಗಾಗ ಭಾರತದ ವಿರುದ್ಧ ಕಾಲು ಕೆದರಿ ಜಗಳಕ್ಕೆ ನಿಲ್ಲುವ ಚೀನಾ ಈ ಬಾರಿ ಲಡಾಖ್‌ ಭಾಗದಲ್ಲಿ ಕಿರಿಕ್‌ ಮಾಡಿದೆ. ಚೀನಾದ ವಿಮಾನವೊಂದು ಪೂರ್ವ ಲಡಾಖ್‌ನ ವಾಸ್ತವಿಕ ಗಡಿ ರೇಖೆಯ ಅತ್ಯಂತ ಸಮೀಪದಲ್ಲಿ ಹಾರಾಡಿದೆ. ಜೂನ್‌ ಕೊನೆಯ ವಾರದಲ್ಲಿ ಈ ಘಟನೆ ನಡೆದಿದೆ. ಚೀನಾ ಸೇನೆಯ ಕಿತಾಪತಿಯ ಸುಳಿವನ್ನು ಪಡೆದ ಭಾರತೀಯ ವಾಯುಪಡೆ ತಕ್ಷಣವೇ ಜಾಗೃತವಾಗಿ ಯಾವುದೇ ಆಕ್ರಮಣ ಕೃತ್ಯವನ್ನು ಎದುರಿಸಲು ಸಜ್ಜಾಯಿತು ಎಂದು ಸರಕಾರದ ಮೂಲಗಳು ತಿಳಿಸಿವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

5. ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ: ಶಾಸಕ ಜಮೀರ್‌ ಅಹ್ಮದ್‌
ಅನೇಕ ದಿನಗಳಿಂದ ವಿವಾದಕ್ಕೆ ಕಾರಣವಾಗಿರುವ ಚಾಮರಾಜಪೇಟೆ ಆಟದ ಮೈದಾನದಲ್ಲಿ ಇದೇ ವರ್ಷದಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ವಕ್ಕೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಗುತ್ತದೆ ಎಂದು ಚಾಮರಾಜಪೇಟೆ ಶಾಸಕ ಬಿ.ಜಡ್‌. ಜಮೀರ್‌ ಅಹ್ಮದ್‌ ಖಾನ್‌ ಶುಕ್ರವಾರ ತಿಳಿಸಿದ್ದಾರೆ. ವಿವಾದದ ಕುರಿತಂತೆ ಚರ್ಚಿಸಲು ತಮ್ಮ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿ ಆಯೋಜನೆಯಾಗಿದ್ದ ಎಲ್ಲ ವಾರ್ಡ್‌ಗಳ ಸಭೆಯಲ್ಲಿ ಜಮೀರ್‌ ಈ ವಿಷಯ ತಿಳಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೬. ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್‌ ಮೈತ್ರಿ: ಯಾವ ಸಮಸ್ಯೆಯೂ ಇಲ್ಲ ಎಂದ ನಾಯಕರು
ಅನೇಕ ದಿನಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಡಿ.ಕೆ. ಶಿವಕುಮಾರ್‌ ವರ್ಸಸ್‌ ಸಿದ್ದರಾಮಯ್ಯ ಶೀತಲ ಯುದ್ಧಕ್ಕೆ ಕೊನೆ ಸಿಗಲಿದೆಯೇ ಎಂಬ ಆಶಾಭಾವನೆ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮೂಡಿದೆ. ಇಬ್ಬರೂ ನಾಯಕರು ಶುಕ್ರವಾರ ಉಪಾಹಾರದ ನೆಪದಲ್ಲಿ ಸಾಕಷ್ಟು ಹೊತ್ತು ಮಾತನಾಡಿದ್ದಾರೆ. ಬೆಳಗ್ಗೆ ಸಿದ್ದರಾಮಯ್ಯ ಅವರ ಮನೆಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ತಾವಿಬ್ಬರೂ ಒಂದಾಗಿದ್ದೇವೆ ಎಂಬ ಸಂದೇಶ ನೀಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

7. ಅಕ್ರಮ ಗೋ ಹತ್ಯೆ | ರಾಜ್ಯದಲ್ಲೇ ಮೊದಲ ಬಾರಿಗೆ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು, ಖಾದರ್‌ ಆಕ್ರೋಶ
ಅಕ್ರಮವಾಗಿ ಗೋ ಹತ್ಯೆ, ಗೋವು ಕಳವು ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಲು ಆರೋಪಿಗಳ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಪ್ರಯೋಗಕ್ಕೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಮುಂದಾಗಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಗೋ ಹತ್ಯೆ ಮತ್ತು ಗೋಮಾಂಸ ಮಾರಾಟ ಆರೋಪಿಗೆ ಈ ದಂಡನೆಯ ಅಸ್ತ್ರ ಬಳಕೆ ಮಾಡಲಾಗಿದೆ. ಇದಕ್ಕೆ ಮಾಜಿ ಸಚಿವ ಯು.ಟಿ. ಖಾದರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೮. PSI Scam | 1,974 ಪುಟಗಳ ಚಾರ್ಜ್‌ಶೀಟ್​ ಸಲ್ಲಿಕೆ: ದಿವ್ಯಾ ಹಾಗರಗಿ ಡೀಲ್‌ ಮಾಹಿತಿ ಬಹಿರಂಗ
ರಾಜ್ಯದಲ್ಲಿಯೇ ಭಾರಿ ಸಂಚಲನ ಮೂಡಿಸಿರುವ ಪಿಎಸ್​ಐ ನೇಮಕಾತಿ ಹಗರಣದಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿ 1974 ಪುಟಗಳ ಆರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ಈ ಕುರಿತ ಮಾಹಿತಿ ಲಭ್ಯವಾಗಿದ್ದು, ಆರೋಪಿ ದಿವ್ಯಾ ಹಾಗರಗಿ ಕುರಿತು ಕುತೂಹಲಕರ ವಿಚಾರಗಳನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ. ಕಲಬುರಗಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದ್ದ ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಚಾರ್ಜ್‌ಶೀಟ್​ ಸಲ್ಲಿಕೆ ಮಾಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

9. Good News | ಹಬ್ಬದ ವೇಳೆಗೆ ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ಎಸಿಗಳ ದರದಲ್ಲಿ ಇಳಿಕೆ ನಿರೀಕ್ಷೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ಪರಿಣಾಮ ಕಚ್ಚಾ ವಸ್ತುಗಳ ದರಗಳು ಇಳಿಯುತ್ತಿವೆ. ಇದರಿಂದಾಗಿ ಫ್ರಿಡ್ಜ್‌, ವಾಷಿಂಗ್‌ ಮೆಷಿನ್, ಮೈಕ್ರೊವೇವ್‌, ಏರ್‌ ಕಂಡೀಷನರ್‌ಗಳ ದರ ಇಳಿಕೆಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ ತಾಮ್ರದ ದರದಲ್ಲಿ ೨೧ % ಹಾಗೂ ಉಕ್ಕಿನ ದರದಲ್ಲಿ ೧೯ % ಇಳಿಕೆಯಾಗಿದೆ. ಅಲ್ಯುಮಿನಿಯಂ ದರದಲ್ಲಿ ೩೫ % ತಗ್ಗಿದೆ. ಹೀಗಾಗಿ ಈ ಹಿಂದೆ ಉತ್ಪಾದನಾ ವೆಚ್ಚ ಏರಿದ್ದರಿಂದ ದರಗಳನ್ನು ಹೆಚ್ಚಿಸಿದ್ದ ಗೃಹೋಪಕರಣಗಳ ಉತ್ಪಾದಕ ಕಂಪನಿಗಳು ಇದೀಗ ದರ ಇಳಿಕೆ ಮಾಡುವ ಸಾಧ್ಯತೆ ಇದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೧೦. GOOD NEWS: ಡಯಾಬಿಟಿಸ್‌, ಹೃದಯ, ಕಿಡ್ನಿ ಕಾಯಿಲೆಯ ಔಷಧಗಳ ದರ ಇಳಿಕೆ ಶೀಘ್ರ
ಕೇಂದ್ರ ಸರ್ಕಾರವು ಡಯಾಬಿಟಿಸ್‌, ಹೃದಯ, ಕಿಡ್ನಿ ಮತ್ತು ಇತರ ಕಾಯಿಲೆಗಳ ಉಪಶಮನಕ್ಕೆ ಬಳಸುವ ಔಷಧಗಳ ಮಾರಾಟದಲ್ಲಿ ಲಾಭಾಂಶವನ್ನು ನಿಗದಿಪಡಿಸುವ ಮೂಲಕ ದರವನ್ನು ಇಳಿಸಲು ನಿರ್ಧರಿಸಿದೆ. ಸರ್ಕಾರ ಔಷಧ ಉತ್ಪಾದಕರ ದರ ಮತ್ತು ಎಂಆರ್‌ಪಿ ದರದ ನಡುವಣ ವ್ಯತ್ಯಾಸವನ್ನು (Trade margin) ನಿರ್ಧರಿಸಲಿದೆ. ಇದರಿಂದ ಸರ್ಕಾರಕ್ಕೆ ಈ ಔಷಧಗಳ ದರ ನಿಯಂತ್ರಣಕ್ಕೆ ಸಾಧ್ಯವಾಗಲಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version