ಬೆಂಗಳೂರು: ಕಳೆದ ಕೆಲವು ತಿಂಗಳು ಹಿಜಾಬ್, ಹಲಾಲ್ ಎನ್ನುತ್ತ ನಡೆದಿದ್ದ ವಿವಾದಗಳು ತಣ್ಣಗಾಗಿ ನಂತರ ಹಿಂದು ಕಾರ್ಯಕರ್ತರ ಹತ್ಯೆಯಿಂದ ಉದ್ವಿಗ್ನಗೊಂಡಿದ್ದ ರಾಜ್ಯದಲ್ಲಿ ಇದೀಗ ಸಾವರ್ಕರ್-ಟಿಪ್ಪು ವಿವಾದ ಭುಗಿಲೆದ್ದಿದೆ. ಸದ್ಯ ಮೂರು ಜಿಲ್ಲೆಗಳಿಗೆ ವಿವಾದ ವಿಸ್ತಾರವಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಹಿರಿಯ ಸಚಿವ ಮಾಧುಸ್ವಾಮಿ ಹೇಳಿಕೆಯಿಂದ ಸಿಎಂ ಬೊಮ್ಮಾಯಿ ಸರ್ಕಾರ ಸಂಕಷ್ಟಕ್ಕೆ ಒಳಗಾಗಿದೆ, ಕಾಶ್ಮೀರದಲ್ಲಿ ಮತ್ತೊಬ್ಬ ಪಂಡಿತರ ಹತ್ಯೆಯಾಗಿದೆ, ಶ್ರೀಲಂಕಾದಲ್ಲಿ ಚೀನಾ ನೌಕೆಯಿಂದ ಆತಂಕ ಎದುರಾಗಿದೆ, ಭಾರತದ ಫುಟ್‌ಬಾಲ್‌ಗೆ ಆಘಾತ ತಟ್ಟಿದೆ, ರಸ್ತೆ ಅಪಘಾತದಲ್ಲಿ ೧೦ ಯೋಧರು ಮೃತಪಟ್ಟಿದ್ದಾರೆ ಎಂಬುದು ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ, ಆರೋಪಿಗೆ ಪೊಲೀಸ್ ಗುಂಡೇಟು
ಸ್ವಾತಂತ್ರ್ಯ ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಭಾವಚಿತ್ರದಿಂದ ಆರಂಭವಾದ ಗಲಭೆ ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಮಾಡಿದೆ. ಹಲ್ಲೆಗೊಳಗಾಗಿರುವ ಪ್ರೇಮ್ ಸಿಂಗ್, ಹಣೆಗೆ ತಿಲಕ ಇಟ್ಟಿದ್ದೇ ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ಬಂಧಿತರನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಗಲಭೆಗಳ ಕುರಿತು ಕಾಂಗ್ರೆಸ್, ಬಿಜೆಪಿ ನಡುವೆ ರಾಜಕೀಯ ವಾಗ್ವಾದವೂ ನಡೆದಿದೆ. ವಿವಾದ ಇದೀಗ ಶಿವಮೊಗ್ಗದಿಂದ ತುಮಕೂರು, ಉಡುಪಿಗೂ ಹಬ್ಬಿದ್ದು, ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಶಿವಮೊಗ್ಗ ಗಲಭೆಗಳ ಕುರಿತು ಸಂಪೂರ್ಣ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಶಿವಮೊಗ್ಗ, ತುಮಕೂರು ಬಳಿಕ ಉಡುಪಿ: ಹಿಂದು ರಾಷ್ಟ್ರ ಎಂಬ ತಲೆಬರಹ ಇರುವ ಬ್ಯಾನರ್ ತೆರವಿಗೆ ಪಿಎಫ್‌ಐ ಆಗ್ರಹ
2. ಸಿಎಂ ಕೇಳಿದ್ರೆ ರಾಜೀನಾಮೆ: ಸಹೋದ್ಯೋಗಿಗಳು ಎನ್ನೋದಕ್ಕೆ ಗೌರವ ಉಳಿದಿಲ್ಲ ಎಂದ ಮಾಧುಸ್ವಾಮಿ
ರಾಜ್ಯ ಸರ್ಕಾರ ನಡೆಯುತ್ತಿರುವ ಕುರಿತು ಸಾಮಾಜಿಕ ಕಾರ್ಯಕರ್ತರೊಬ್ಬರ ಜತೆಗೆ ಮಾತನಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಸಚಿವ ಜೆ.ಸಿ. ಮಾಧುಸ್ವಾಮಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ. ಸರ್ಕಾರ ನಡೆಯುತ್ತಿಲ್ಲ ಎಂದು ಮೂರನೇ ವ್ಯಕ್ತಿ ಜತೆ ಹೇಳುವ ಪರಿಸ್ಥಿತಿ ನನಗೆ ಇಲ್ಲ. ಅವನು ಎಲ್ಲರಿಗೂ ಗೊತ್ತಿರುವ ವ್ಯಕ್ತಿಯೇನೂ ಅಲ್ಲ. ಈ ಘಟನೆ ಎಷ್ಟು ದಿನದ ಹಿಂದೆ ನಡೆದಿದೆ ಎನ್ನುವುದು ಕೂಡ ನನಗೆ ಗೊತ್ತಿಲ್ಲ. ಈ ಆಡಿಯೊ ಏಕೆ ವೈರಲ್ ಆಗಿದೆ ಎನ್ನುವುದೂ ಗೊತ್ತಿಲ್ಲ ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
3. ಬಾದಾಮಿಯಲ್ಲಿ ಅಡ್ಜಸ್ಟ್‌ಮೆಂಟ್?: ಚುನಾವಣೆಗೆ ಎರಡು ದಿನ ಮೊದಲು ಶ್ರೀರಾಮುಲು ಎಲ್ಲಿದ್ದರು?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದ ಕ್ಷೇತ್ರಗಳೆಂದರೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಮೈಸೂರಿನ ಚಾಮುಂಡೇಶ್ವರಿ. ಈ ಎರಡೂ ಕ್ಷೇತ್ರಗಳಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಇನ್ನೇನು ಸಿದ್ದರಾಮಯ್ಯ ಎರಡೂ ಕಡೆ ಸೋತು ರಾಜಕೀಯ ಜೀವನ ಮುಗಿಸಿದರು ಎನ್ನುವಷ್ಟರಲ್ಲೆ ಕೇವಲ 1,696 ಮತಗಳ ಅಂತರದಲ್ಲಿ ಗೆದ್ದು ಮರುಜೀವ ಪಡೆದರು. ಈ ಕುರಿತು, ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸ್ವತಃ ಶ್ರೀರಾಮುಲು ಆಡಿರುವ ಮಾತು ಈಗ ಚರ್ಚೆಗೆ ಗ್ರಾಸವಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
4. ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನು ಹತ್ಯೆ ಮಾಡಿದ ಉಗ್ರರು; ಆತನ ಸಹೋದರನಿಗೆ ಗಂಭೀರ ಗಾಯ
ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಸರಣಿ (Kashmiri Pandit shot dead) ಮುಂದುವರಿದಿದೆ. ಈ ಸಮುದಾಯಕ್ಕೆ ಸೇರಿದ ಸುನೀಲ್ ಕುಮಾರ್ ಎಂಬಾತನನ್ನು ಉಗ್ರರು ಇಂದು ಹತ್ಯೆ ಮಾಡಿದ್ದಾರೆ. ಹಾಗೇ, ಈತನ ಸಹೋದರ ಪಿಂಟು ಕುಮಾರ್ ಮೇಲೆ ಕೂಡ ಅಟ್ಯಾಕ್ ಆಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
5. ಶ್ರೀಲಂಕಾ ಬಂದರು ತಲುಪಿದ ಚೀನಾ ಬೇಹುಗಾರಿಕೆ ನೌಕೆ; ಅದಕ್ಕೂ ಮೊದಲೇ ವಿಮಾನ ಕಳಿಸಿದ ಭಾರತ
ಚೀನಾದ ಬೇಹುಗಾರಿಕಾ ನೌಕೆ ಯುವಾನ್ ವಾಂಗ್ 5 ಇಂದು (ಆಗಸ್ಟ್ 16) ಮುಂಜಾನೆ ಶ್ರೀಲಂಕಾದ ಹಂಬನ್ಟೋಟ ಬಂದರಿಗೆ ತಲುಪಿದೆ. ಈ ನೌಕೆಯನ್ನು ಚೀನಾ ಸಂಶೋಧನಾ ಮತ್ತು ಸಮೀಕ್ಷಾ ನೌಕೆ ಎಂದು ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಇದು ಚೀನಾದ ಪೀಪಲ್ ಲಿಬರೇಶನ್ ಆರ್ಮಿಗೆ ಸೇರಿದ ಒಂದು ಬೇಹುಗಾರಿಕಾ ಹಡಗು. ಶ್ರೀಲಂಕಾದಲ್ಲಿ ಚೀನಾವೇ ನಿರ್ಮಿಸಿರುವ ಹಂಬನ್ಟೋಟ ಬಂದರಿನಲ್ಲಿ ಇದು ಶಾಶ್ವತವಾಗಿ ಲಂಗರು ಹಾಕಲಿದೆ. ಹೀಗೆ ಬಂದ ಹಡಗಿನಲ್ಲಿ ಸುಮಾರು 2000 ನಾವಿಕರು ಇದ್ದಾರೆ ಎಂದು ವರದಿಯಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಶ್ರೀಲಂಕಾದಲ್ಲಿ ಲಂಗರು ಹಾಕಿದ ಚೀನಾ ನೌಕೆ; ಭಾರತದ ಆತಂಕವೇನು?, ರಕ್ಷಣೆಗಾಗಿ ಮಾಡಿಕೊಂಡ ಸಿದ್ಧತೆಗಳೇನು?
6. Aadhaar Mandatory | ಸರಕಾರಿ ಸೌಲಭ್ಯ, ಸಬ್ಸಿಡಿ ಪಡೆಯಲು ಇನ್ನು ಆಧಾರ್ ಕಡ್ಡಾಯ
ಸರಕಾರದ ಸೌಲಭ್ಯ, ಯೋಜನೆಗಳ ಅನುಕೂಲ ಹಾಗೂ ಸಬ್ಸಿಡಿ ಪಡೆಯಲು ಇನ್ನು ಆಧಾರ್ ಕಾರ್ಡ್ (Aadhaar Mandatory) ಕಡ್ಡಾಯವಾಗಿದೆ. ಅನರ್ಹ ವ್ಯಕ್ತಿಗಳು ಸರಕಾರದ ಸೌಲಭ್ಯ ಪಡೆಯುವುದನ್ನು ತಪ್ಪಿಸಲು ಹಾಗೂ ಯೋಜನೆಯ ಲಾಭವನ್ನು ಸರಿಯಾಗಿ ಫಲಾನುಭವಿಗಳಿಗೆ ತಲುಪಿಸುವ ದೃಷ್ಟಿಯಲ್ಲಿ ಆಧಾರ್ ಕಡ್ಡಾಯಗೊಳಿಸಲಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಕೇಂದ್ರದ ಎಲ್ಲ ಸಚಿವಾಲಯ ಹಾಗೂ ಎಲ್ಲ ರಾಜ್ಯ ಸರಕಾರಗಳಿಗೆ ಈ ಕುರಿತು ಸುತ್ತೋಲೆ ಹೊರಡಿಸಿದೆ. ಸರಕಾರದ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಬೇಕು ಎಂದು ಸೂಚಿಸಿದೆ. ಆಗಸ್ಟ್ ೧೧ರಂದೇ ಯುಐಡಿಎಐ ಸುತ್ತೋಲೆ ಹೊರಡಿಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
7. Football | ಭಾರತೀಯ ಫುಟ್ಬಾಲ್ ಒಕ್ಕೂಟವನ್ನು ನಿಷೇಧಿಸಿದ ಫಿಫಾ, ಏನಿದಕ್ಕೆ ಕಾರಣ?
ನಿಯಮಕ್ಕೆ ಅನುಗುಣವಾಗಿ ಕಾರ್ಯಾಚರಣೆ ನಡೆಸದ ಹಾಗೂ ಆಡಳಿತ ಮಂಡಳಿ ನೇಮಕದ ವಿಚಾರದಲ್ಲಿ ಗೊಂದಲಕ್ಕೆ ಬಿದ್ದಿರುವ ಅಖಿಲ ಭಾರತ ಫುಟ್ಬಾಲ್ ಒಕ್ಕೂಟವನ್ನು (AIFF) ವಿಶ್ವ ಫುಟ್ಬಾಲ್ ಒಕ್ಕೂಟ (FIFA) ಮಂಗಳವಾರ ನಿಷೇಧಿಸಿ ಪ್ರಕಟಣೆ ಹೊರಡಿಸಿದೆ. ಇದರಿಂದಾಗಿ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಬೇಕಾಗಿದ್ದ ೧೭ರ ವಯೋಮಿತಿಯ ಮಹಿಳೆಯರ ವಿಶ್ವ ಕಪ್‌ಗೆ ಆತಿಥ್ಯ ಪಡೆದಿದ್ದ ಭಾರತಕ್ಕೆ ಹಿನ್ನಡೆ ಉಂಟಾಗಿದೆ. ಈ ಕುರಿತು ಮಂಗಳವಾರ ಫಿಫಾ ಪ್ರಕಟಣೆ ಹೊರಡಿಸಿದ್ದು, ಸ್ಥಾನಮಾನ ಉಲ್ಲಂಘನೆ ಹಾಗೂ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಮೂರನೇ ವ್ಯಕ್ತಿಯ ಅನಗತ್ಯ ಹಸ್ತಕ್ಷೇಪದಿಂದಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
8. ವಿಸ್ತಾರ Explainer | ಮೈನಸ್ 60 ಡಿಗ್ರಿ ಚಳಿಯಲ್ಲಿ ವಾಸ, 3 ತಿಂಗಳಿಗೊಮ್ಮೆ ಸ್ನಾನ: ಇದು ಸಿಯಾಚಿನ್ ಯೋಧರ ಸ್ಥಿತಿ!
ಹಿಮಾಲಯದ ಪೂರ್ವ ಕಾರಕೋರಮ್ ಪರ್ವತ ಶ್ರೇಣಿಯಲ್ಲಿರುವ ಸಿಯಾಚಿನ್ ನೀರ್ಗಲ್ಲು ಪ್ರದೇಶವು ಭಾರತದ ರಕ್ಷಣೆಗೆ ಹೇಳಿಮಾಡಿಸಿದಂತಿದೆ. ಆದರೆ ನಮ್ಮ ಯೋಧರಿಗೆ ಅದು ಯಮಪಾಶವಾಗಿದೆ. ಇಂತಹ ನೀರ್ಗಲ್ಲಿನಲ್ಲಿ ೧೯೮೪ರಲ್ಲಿ ನಾಪತ್ತೆಯಾದ ಯೋಧ ಲಾನ್ಸ್ ನಾಯಕ್ ಚಂದ್ರಶೇಖರ್ ಅವರ ಶವವು ೩೮ ವರ್ಷಗಳ ನಂತರ ಅಂದರೆ, ಕಳೆದ ಆಗಸ್ಟ್ ೧೩ರಂದು ಪತ್ತೆಯಾಗಿರುವುದು ಸಿಯಾಚಿನ್‌ನ ಭೀಕರತೆಗೆ ನಿದರ್ಶನವಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
9. 39 ಐಟಿಬಿಪಿ ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದ ಬಸ್ ಅಪಘಾತ; 10 ಸೈನಿಕರ ದುರ್ಮರಣ
37ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP jawans) ಮತ್ತು ಇಬ್ಬರು ಜಮ್ಮು-ಕಾಶ್ಮೀರ ಪೊಲೀಸರು, ಒಟ್ಟು 39 ಜನ ಪ್ರಯಾಣ ಮಾಡುತ್ತಿದ್ದ ಬಸ್ವೊಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನದಿ ಕಣಿವೆಗೆ ಬಿದ್ದಿದೆ. ಈ ದುರಂತದಲ್ಲಿ ಐಟಿಬಿಪಿಯ 10 ಸಿಬ್ಬಂದಿ ದುರ್ಮರಣಕ್ಕೀಡಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ. ಅಮರನಾಥ ಯಾತ್ರೆ ಸಂಚರಿಸುವ ಮಾರ್ಗಗಳಲ್ಲಿ ಕರ್ತವ್ಯದಲ್ಲಿದ್ದ ಇವರು ಜಮ್ಮು-ಕಾಶ್ಮೀರ ಪೊಲೀಸ್ ಡಿಪಾರ್ಟ್ಮೆಂಟ್ಗೆ ಸೇರಿದ ಬಸ್ನಲ್ಲಿ ಚಂದನ್ವಾರಿಯಿಂದ ಶ್ರೀನಗರ ಪೊಲೀಸ್ ಕಂಟ್ರೋಲ್ ರೂಮ್ಗೆ ತೆರಳುತ್ತಿದ್ದರು. ಬಸ್ನ ಬ್ರೇಕ್ ಫೇಲ್ ಆಗಿ ಈ ದುರ್ಘಟನೆ ನಡೆದಿದೆ ಎಂದು ಐಟಿಬಿಪಿ ಪ್ರಕಟಣೆಯಲ್ಲಿ ತಿಳಿಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
10. ಬಿಹಾರ ಸಂಪುಟ ರಚನೆ; ಗೃಹ ಖಾತೆ ಉಳಿಸಿಕೊಂಡ ನಿತೀಶ್, ಲಾಲು ಪುತ್ರರಿಗೆ ಸಿಕ್ಕಿದ್ದು ಯಾವ ಖಾತೆ?
ಬಿಹಾರ ಮಹಾ ವಿಕಾಸ ಅಘಾಡಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಇಂದು ಸಂಪುಟ ರಚನೆಯೂ ಆಗಿದೆ. ಆರ್ಜೆಡಿ ಪಕ್ಷದ 16, ಜೆಡಿಯುದ 11, ಕಾಂಗ್ರೆಸ್ನ ಇಬ್ಬರು ಮತ್ತು ಹಿಂದುಸ್ಥಾನಿ ಆವಾಮ್ ಮೋರ್ಚಾ (ಎಚ್ಎಎಂ)ದ ಒಬ್ಬರು ಮತ್ತು ಒಬ್ಬ ಸ್ವತಂತ್ರ್ಯ ಶಾಸಕ ಸೇರಿ, ಒಟ್ಟ 31 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ಮತ್ತೊಂದು ಪ್ರಮುಖ ವಿಷಯವೆಂದರೆ, ಈ ಬಾರಿ ಬಿಹಾರ ಕ್ಯಾಬಿನೆಟ್ನಲ್ಲಿ ಐವರು ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ. ಕಳೆದ, ಎನ್ಡಿಎ-ಜೆಡಿಯು ಮೈತ್ರಿ ಸರ್ಕಾರದ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಒಬ್ಬ ಸಚಿವ ಮಾತ್ರ ಇದ್ದರು. ಹಾಗೇ, ಯಾದವ ಸಮುದಾಯಕ್ಕೆ ಒಟ್ಟು ಏಳು ಸಚಿವ ಸ್ಥಾನ ಕೊಡಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.