ಬೆಂಗಳೂರು: ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಚಟುವಟಿಕೆಗಳ ಇನ್ನಷ್ಟು ಸುದ್ದಿಗಳು ಹೊರಬರುತ್ತಿವೆ. ರಾಜ್ಯ ರಾಜಕೀಯದಲ್ಲಿ ಪೋಸ್ಟರ್ ಕದನ ಶುರುವಾಗಿದ್ದು, ಸಿಎಂ ಬೊಮ್ಮಾಯಿ ಅವರ ವಿರುದ್ಧ ಕಾಂಗ್ರೆಸ್ ನಡೆಸಿದ್ದ PayCM ಪ್ರಕರಣವನ್ನು ರಾಜ್ಯ ಸರ್ಕಾರ ಸಿಸಿಬಿಗೆ ವರ್ಗಾವಣೆ ಮಾಡಿದೆ. 40% ಆರೋಪದ ಜತೆಗೆ ಸಿದ್ದರಾಮಯ್ಯ ಅವಧಿಯ ನೇಮಕಾತಿಗಳ ಚರ್ಚೆ ಸದನದಲ್ಲಿ ಗುರುವಾರ ಜಟಾಪಟಿಗೆ ಕಾರಣವಾಗುವ ಸಾಧ್ಯತೆಯಿದೆ, ಹಿಜಾಬ್ ಪ್ರಕರಣಕ್ಕೆ ಪಿಎಫ್‌ಐ ಕುಮ್ಮಕ್ಕು ನೀಡಿರುವ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಚರ್ಚೆಯಾಗಿದೆ, ಮೂನ್‌ಲೈಟಿಂಗ್ ಮಾಡುತ್ತಿದ್ದ 300 ಸಿಬ್ಬಂದಿಯನ್ನು ವಿಪ್ರೊ ವಜಾ ಮಾಡಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Shivamogga terror | ಶಂಕಿತ ಉಗ್ರರಿಂದ ತುಂಗೆ ಮಾತ್ರವಲ್ಲ ನೇತ್ರಾವತಿ ನದಿ ತೀರದಲ್ಲೂ ಬಾಂಬ್ ರಿಹರ್ಸಲ್
ನಿಷೇಧಿತ ಉಗ್ರ ಸಂಘಟನೆಗಳ ಜತೆ ಸಂಬಂಧ ಹೊಂದಿದ್ದಲ್ಲದೆ, ಸ್ಥಳೀಯವಾಗಿ ಬಾಂಬ್ ಸ್ಫೋಟಕ್ಕೆ ತಯಾರಿ ನಡೆಸುತ್ತಿದ್ದರು ಎಂಬ ಆರೋಪದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರನ್ನು ಬುಧವಾರ ಶಿವಮೊಗ್ಗ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರು ಬಾಂಬ್ ತಯಾರಿ, ಸ್ಫೋಟಕ ಪರೀಕ್ಷೆಗಳನ್ನು ನಡೆಸಿದ್ದಾರೆ ಎನ್ನಲಾಗಿದ್ದು ಈ ಚಟುವಟಿಕೆಗಳು ಎಲ್ಲೆಲ್ಲಿ ನಡೆದಿವೆ ಎನ್ನುವ ಮಾಹಿತಿಯ ಆಧಾರದಲ್ಲಿ ಅವರನ್ನು ಆಯಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡುವ ಪ್ರಕ್ರಿಯೆ ಮುಂದುವರಿಸಿದೆ. ಬಂಧಿತರು ಶಿವಮೊಗ್ಗ ಹಳೆ ಗುರುಪುರದ ತುಂಗಾ ನದಿ ತೀರದಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿಯ ನೇತ್ರಾವತಿ ನದಿ ತೀರದಲ್ಲೂ ಬಾಂಬ್ ಸ್ಫೋಟದ ತಾಲೀಮು ನಡೆಸಿದ್ದಾರೆ ಎನ್ನುವುದು ಬಯಲಾಗಿದೆ. ಹೀಗಾಗಿ ಬುಧವಾರ ಸಂಜೆಯ ಹೊತ್ತಿಗೆ ಅವರನ್ನು ಬಂಟ್ವಾಳಕ್ಕೆ ಕರೆ ತರಲಾಗಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
2. ರಾಜಕೀಯದಲ್ಲಿ QR ಕೋಡ್ ಕದನ: ಕಾಂಗ್ರೆಸ್‌ನ ʼPay CMʼಗೆ ಉತ್ತರವಾಗಿ ಭಾರತ್ ಜೋಡೊ ಪೋಸ್ಟರ್ ಹರಿಬಿಟ್ಟ BJP, ಸಿಸಿಬಿಗೆ ಪ್ರಕರಣ ವರ್ಗಾಯಿಸಿದ ರಾಜ್ಯ ಸರ್ಕಾರ
ರಾಜ್ಯ ಸರ್ಕಾರ ವಿರುದ್ಧ ಪೋಸ್ಟರ್ ಕದನ ಆರಂಭಿಸಿದ್ದ ಕಾಂಗ್ರೆಸ್ ಪೇ ಸಿಎಂ ಪೋಸ್ಟರ್‌ಗಳನ್ನು ಬೆಂಗಳೂರಿನ ವಿವಿಧೆಡೆ ಅಂಟಿಸಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಅಭಿಯಾನವನ್ನು ಟೀಕಿಸಿ ಸಾಮಾಜಿಕ ಜಾಲತಾಣ ಪೋಸ್ಟರ್ ಹರಿಬಿಟ್ಟಿದೆ. ಬಿಜೆಪಿಯ ಸಾಮಾಜಿಯ ಜಾಲತಾಣ ಖಾತೆಯ ಮೂಲಕ, ಭಾರತ್ ಜೋಡೊ ಯಾತ್ರೆಯ ಸಮಯದಲ್ಲಿ ಕೇರಳದಲ್ಲಿ ನಡೆದಿದ್ದ ಘಟನೆಯನ್ನು ಉಲ್ಲೇಖಿಸಿದೆ. ಈ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೋಸ್ಟರ್ ಜಗಳ ತಾರಕಕ್ಕೇರಿದೆ.
ಪೇಸಿಎಂ ಎಂದು ಪೋಸ್ಟರ್ ಅಂಟಿಸಿದ್ದರು ವಿವಿಧೆಡೆ ಆರು ಎಫ್‌ಐಆರ್ ದಾಖಲಾಗಿದ್ದವು, ಇದೀಗ ಅದೆಲ್ಲ ಪ್ರಕರಣಗಳನ್ನೂ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
3. BJP ಸರ್ಕಾರದ 40% ಜತೆಗೆ ಸಿದ್ದರಾಮಯ್ಯ ಸರ್ಕಾರದ 100% ಅವಧಿಯ ಚರ್ಚೆ: ಗುರುವಾರ ಜಂಗೀಕುಸ್ತಿ ನಿರೀಕ್ಷೆ
ರಾಜ್ಯ ಸರ್ಕಾರದ ವಿರುದ್ಧ ಈಗಾಗಲೆ ಬಹಿರಂಗವಾಗಿ ನಡೆಯುತ್ತಿರುವ 40% ಅಭಿಯಾನವನ್ನು ಸದನದೊಳಗೂ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಆದರೆ ಇದೀಗ ಬಿಜೆಪಿ ಸರ್ಕಾರದ ಜತೆಗೆ ಸಿದ್ದರಾಮಯ್ಯ ಅವರ ಸರ್ಕಾರದ ಪೂರ್ಣ ಅವಧಿಯಲ್ಲಿ ನಡೆದಿರಬಹುದಾದ ಹಗರಣಗಳನ್ನೂ ಚರ್ಚೆಗೆ ಎತ್ತಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಈ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಯಮ 60ರ ಅಡಿಯಲ್ಲಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೇಳಿದರು. ಆದರೆ ಇದು 60ರ ಅಡಿಯಲ್ಲಿ ಸಾಧ್ಯವಿಲ್ಲ ಎಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಯಮ 69ರ ಅಡಿಯಲ್ಲಿ, ಬಿಜೆಪಿ ಸದಸ್ಯರು ಸಲ್ಲಿಸಿರುವ ಮತ್ತೊಂದು ಪ್ರಸ್ತಾವನೆ ಜತೆಗೆ ತೆಗೆದುಕೊಳ್ಳೋಣ ಎಂದರು. ಅದು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ನೇಮಕಾತಿಗಳ ಕುರಿತ ಪ್ರಸ್ತಾವನೆ ಆಗಿತ್ತು. ಇದೀಗ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಈ ವಿಚಾರ ಗುರುವಾರ ಜಟಾಪಟಿಗೆ ಕಾರಣವಾಗುವ ಎಲ್ಲ ಸಾಧ್ಯತೆ ಇದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸದನದ ಇನ್ನಿತರ ಸುದ್ದಿಗಳು
✅ವಿವಾದಾತ್ಮಕ ಮಸೂದೆ ಮಂಡನೆಗೆ ಮುಂದಾದ ಸರ್ಕಾರ: ಭೂಕಬಳಿಕೆ ವಿಧೇಯಕ ಗುರುವಾರಕ್ಕೆ ಮುಂದೂಡಿಕೆ
✅ವಿಸಿ ನೇಮಕಕ್ಕೆ ₹20 ಕೋಟಿ, ಮಂಗಳೂರು ವಿವಿ ಸಭೆ ಬೆಂಗಳೂರಲ್ಲಿ !: ಇದರ ನಡುವೆಯೇ 7+1 ಹೊಸ ವಿವಿ ಸ್ಥಾಪನೆ
4. ಪಂಚಮಸಾಲಿ ಮೀಸಲಾತಿಗೆ ಬಿ.ಎಸ್. ಯಡಿಯೂರಪ್ಪ ಅಡ್ಡ ಬಂದಿದ್ದಾರ?: ಈ ಕುರಿತು ಸಚಿವ ನಿರಾಣಿ ಸ್ಪಷ್ಟನೆ
ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಡ್ಡಗಾಲು ಹಾಕಿದ್ದಾರೆ ಎಂಬ ಆರೋಪಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ ಆರ್. ನಿರಾಣಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ, ಯಡಿಯೂರಪ್ಪನವರು ತಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಲು ಅಡ್ಡಿಯಾಗಿದ್ದಾರೆ ಎಂದು ಪಂಚಮಸಾಲಿ ಸಮುದಾಯದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳು ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಯಡಿಯೂರಪ್ಪ ಒತ್ತಡ ಹಾಕಿದ್ದಾರೆ, ಹೀಗಾಗಿ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಎಂದು ಕರೆ ಕೊಟ್ಟಿರುವುದು ಸರಿಯಲ್ಲ ಎಂದಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
5. Hijab Row | ಹಿಜಾಬ್ ವಿವಾದದ ಹಿಂದೆ ಪಿಎಫ್‌ಐ ಕುಮ್ಮಕ್ಕು, ಕರ್ನಾಟಕ ಸರ್ಕಾರಕ್ಕೆ ಹೆಚ್ಚಿನ ಮಾಹಿತಿ ಕೇಳಿದ ಸುಪ್ರೀಂ
ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ವಿವಾದದ (Hijab Row) ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಕೈವಾಡ ಇದೆ ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಬೆನ್ನಲ್ಲೇ, “ಪಿಎಫ್‌ಐ ಕುಮ್ಮಕ್ಕಿನ ಕುರಿತು ಹೆಚ್ಚಿನ ಮಾಹಿತಿ ನೀಡಿ” ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಬುಧವಾರವೂ ಸುಪ್ರೀಂ ಕೋರ್ಟ್ ವಿಚಾರಣೆ ಮುಂದುವರಿಸಿತು. “ಅದು ಉಡುಪಿ ಇರಬಹುದು, ಕುಂದಾಪುರ ಇರಬಹುದು. ಅಲ್ಲೆಲ್ಲ, ಹಿಜಾಬ್ ವಿವಾದವು ಅತಿರೇಕಕ್ಕೇರಲು, ವಿದ್ಯಾರ್ಥಿಗಳು ಕಾಲೇಜು ಪ್ರವೇಶಿಸದೆ ಗೇಟ್‌ಗಳ ಮುಂದೆಯೇ ನಿಲ್ಲುವುದರ ಹಿಂದೆ ಸಂಘಟನೆಗಳ ಕೈವಾಡವಿದೆ” ಎಂದು ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿದರು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
6. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹಾಗೂ ಸಂಪುಟ ಸಚಿವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಮಯದಲ್ಲಿ ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ, ಬೈರತಿ ಬಸವರಾಜ್, ಮುನಿರತ್ನ, ಗೋಪಾಲಯ್ಯ ಜೆ.ಸಿ. ಮಾಧುಸ್ವಾಮಿ ಜತೆಗಿದ್ದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, “ದೇವೇಗೌಡರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಬಹಳ ಆತ್ಮೀಯವಾಗಿ, ಲವಲವಿಕೆಯಿಂದ ಮಾತನಾಡಿದ್ದಾರೆ. ಸಾಕಷ್ಟು ಹಳೆಯ ವಿಚಾರಗಳನ್ನು ಮೆಲಕು ಹಾಕಿದರಲ್ಲದೆ ರಾಜ್ಯಕ್ಕೆ ಒಳ್ಳೆಯದು ಮಾಡಬೇಕೆಂಬ ನಿಟ್ಟಿನಲ್ಲಿ ಅವರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಆರೋಗ್ಯ ಚೆನ್ನಾಗಿರಲಿ. ನೂರ್ಕಾಲ ಚೆನ್ನಾಗಿ ಬಾಳಲಿ. ರಾಜ್ಯಕ್ಕೆ ಅವರಿಂದ ಇನ್ನಷ್ಟು ಮಾರ್ಗದರ್ಶನ ಸಿಗುವಂತಾಗಲಿ” ಎಂದು ತಿಳಿಸಿದರು. ದೇವೇಗೌಡರನ್ನು ಭೇಟಿ ಮಾಡಲು ಮಂಗಳವಾರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ ತೆರಳಿದ್ದರು.
7. Moonlighting | ಎರಡೆರಡು ಕಡೆ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೊ
ಸಾಫ್ಟ್‌ವೇರ್ ದಿಗ್ಗಜ ವಿಪ್ರೊ ಕಂಪನಿಯು ಎರಡೆರಡು ಕಡೆ ಕೆಲಸ ಮಾಡುತ್ತಿದ್ದ ತನ್ನ 300 ಉದ್ಯೋಗಿಗಳನ್ನು ಸೇವೆಯಿಂದ (Moonlighting) ವಜಾಗೊಳಿಸಿದೆ. ಕಂಪನಿಯಲ್ಲಿ ಇದ್ದುಕೊಂಡೇ ಪ್ರತಿಸ್ಪರ್ಧಿ ಕಂಪನಿಯ ಪರವಾಗಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಪತ್ತೆ ಮಾಡಲಾಗಿದ್ದು, ವಜಾಗೊಳಿಸಲಾಗಿದೆ ಎಂದು ವಿಪ್ರೊದ ಕಾರ್ಯಕಾರಿ ಅಧ್ಯಕ್ಷ ರಿಶಾದ್ ಪ್ರೇಮ್‌ಜೀ ಬುಧವಾರ ತಿಳಿಸಿದರು. ” ಇದು ಕಂಪನಿಯ ಸಮಗ್ರತೆಯ ನಿಯಮಾವಳಿಗಳ ಉಲ್ಲಂಘನೆ. ಹೀಗಾಗಿ ಅಂಥ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿದ್ದೇವೆʼʼ ಎಂದು ರಿಶಾದ್ ಪ್ರೇಮ್‌ಜೀ ತಿಳಿಸಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
8. Adani | ಷೇರುಗಳ ದರ ಸ್ಫೋಟದಿಂದ ಅದಾನಿಗೆ ದಿನಕ್ಕೆ 1,612 ಕೋಟಿ ರೂ. ಗಳಿಕೆ, ಒಂದೇ ವರ್ಷದಲ್ಲಿ ಸಂಪತ್ತು ಇಮ್ಮಡಿ!
ಅದಾನಿ ಸಮೂಹದ ಕಂಪನಿಗಳ ಷೇರುಗಳ ದರ ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರಿ ಜಿಗಿತಕ್ಕೀಡಾಗಿದೆ. ಇದರ ಪರಿಣಾಮವಾಗಿ ಗೌತಮ್ ಅದಾನಿ (Adani) ಕಳೆದೊಂದು ವರ್ಷದಿಂದೀಚೆಗೆ ದಿನಕ್ಕೆ ಸರಾಸರಿ 1,612 ಕೋಟಿ ರೂ. ಸಂಪತ್ತು ಗಳಿಸಿದ್ದಾರೆ. ಐಐಎಫ್‌ಎಲ್ ವೆಲ್ತ್ ಹುರಾನ್ ಇಂಡಿಯಾ ಸಂಸ್ಥೆಯ ಪ್ರಕಾರ, ಗೌತಮ್ ಅದಾನಿ ಅವರು ಅಮೆಜಾನ್ ಸ್ಥಾಪಕ ಜೆಫ್ ಬಿಜೋಸ್ ಅವರನ್ನೂ ಹಿಂದಿಕ್ಕಿ ವಿಶ್ವದ ಎರಡನೇ ಸಿರಿವಂತ ಉದ್ಯಮಿ ಎನ್ನಿಸಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
9. ವಿಸ್ತಾರ Explainer | ಬುಡಕಟ್ಟು ಮತದಾರರನ್ನು ಸೆಳೆಯಲು ಬಿಜೆಪಿ ಹಾಕಿದ ಪಟ್ಟು ಯಾವುದು?
2014ರ ಲೋಕಸಭೆಯ ಚುನಾವಣೆ ಪ್ರಚಂಡ ಗೆಲುವಿನ ಬಳಿಕ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ಮತದಾರರನ್ನು ಸೆಳೆಯುವ ತಂತ್ರಗಳೇ ಬದಲಾಗಿವೆ. ಯಾವೆಲ್ಲ ವರ್ಗಗಳು ಬಿಜೆಪಿಯಿಂದ ದೂರವಿದ್ದವೋ ಆ ಎಲ್ಲ ವರ್ಗಗಳ ಮತದಾರರನ್ನು ತನ್ನೆಡೆಗೆ ಸೆಳೆಯಲು ಚುನಾವಣೆಯಿಂದ ಚುನಾವಣೆಗೆ ಯಶಸ್ವಿಯಾಗುತ್ತಿದೆ ಬಿಜೆಪಿ(BJP). ಚುನಾವಣೆಯಿಂದ ಚುನಾವಣೆಗೆ ಹೊಸ ಮತದಾರರಿಗೆ ಗಾಳ ಹಾಕುವ ಬಿಜೆಪಿ(BJP), 2024ರ ಲೋಕಸಭೆ ಚುನಾವಣೆಗೆ ಬುಡಕಟ್ಟು ಸಮುದಾಯವನ್ನು ಸೆಳೆಯಲು ಮುಂದಾಗಿದೆ. ಇದಕ್ಕಾಗಿ ಬಿಜೆಪಿ ಮಾಡುತ್ತಿರುವ ಪ್ಲ್ಯಾನ್ ಏನು? ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
10. ಬೆಂಗಳೂರು ಟ್ರಾಫಿಕ್ನಲ್ಲಿ ಸಿಲುಕಿದ್ದಾಗ ಹುಟ್ಟಿದ ಪ್ರೀತಿ; ಈತನ ಲವ್ಸ್ಟೋರಿಗೆ ಸಾಕ್ಷಿಯಾದ ಫ್ಲೈಓವರ್ದು ಬದಲಾಗದ ಸ್ಥಿತಿ !
ಪ್ರೀತಿ ಹೇಗಾದರೂ ಹುಟ್ಟಬಹುದು..ಯಾರ ಮೇಲಾದರೂ ಹುಟ್ಟಬಹುದು. ಕೇಳುತ್ತ ಹೋದರೆ ಒಬ್ಬೊಬ್ಬರ ಪ್ರೀತಿಯ ಹಿಂದೆಯೂ ಒಂದೊಂದು ಕಥೆ ಇರುತ್ತದೆ. ಸದ್ಯ ಈಗ ಸುದ್ದಿಯಾಗಿರೋದು ಬೆಂಗಳೂರಿನ ವ್ಯಕ್ತಿಯೊಬ್ಬರ ಲವ್ಸ್ಟೋರಿ. ಬೆಂಗಳೂರು ಟ್ರಾಫಿಕ್ಗೆ ಸದಾ ಬೈಯುವ ಮಂದಿ ನಾವು..ಆದರಿಲ್ಲಿ ಈ ವ್ಯಕ್ತಿಗೆ ಅದೇ ಬೆಂಗಳೂರು ಟ್ರಾಫಿಕ್ ಸಿಗ್ನಲ್ನಲ್ಲೇ ಅವರ ಪ್ರೀತಿ ಸಿಕ್ಕಿದೆ. ಅಂದು ಯಾರ ಮೇಲೆ ಪ್ರೀತಿಯಾಯಿತೋ ಅದೇ ಹುಡುಗಿಯನ್ನು ಮದುವೆಯನ್ನೂ ಆಗಿದ್ದಾರೆ. ಹಾಗೇ, ಪ್ರೀತಿಸಿದ ಹೃದಯಗಳೆರಡೂ ಕೈ ಹಿಡಿದು ಎರಡು ವರ್ಷಗಳೇ ಕಳೆದು ಹೋಗಿದ್ದರೂ ಈ ಲವ್ಸ್ಟೋರಿ ಮತ್ತೀಗ ಸುದ್ದಿಯಾಗಿದೆ. ತನ್ನ ಲವ್ ಸ್ಟೋರಿಯನ್ನು ರೆಡ್ಡಿಟ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆ ವ್ಯಕ್ತಿ ಕೊನೆಗೊಂದು ಮಜವಾದ ಟ್ವಿಸ್ಟ್ ಕೂಡ ಕೊಟ್ಟಿದ್ದಾರೆ..! ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.