Site icon Vistara News

ವಿಸ್ತಾರ TOP 10 NEWS | ಹಿಜಾಬ್‌ ʼಭಿನ್ನ ತೀರ್ಪುʼ; ಉನ್ನತ ಪೀಠಕ್ಕೆ ವರ್ಗಾವಣೆ ಹಾಗೂ ಇನ್ನಿತರ ಪ್ರಮುಖ ಸುದ್ದಿಗಳಿವು

TOP 10 NEWS 13102022

ಬೆಂಗಳೂರು: ಕರ್ನಾಟಕದಿಂದ ಆರಂಭವಾಗಿ ದೇಶಾದ್ಯಂತ ಹರಡಿ ವಿವಾದವೆಬ್ಬಿಸಿದ್ದ ಹಿಜಾಬ್‌ ಧಾರಣೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶದ ಕುರಿತು ಒಮ್ಮತಕ್ಕೆ ಬರಲು ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠಕ್ಕೆ ಸಾಧ್ಯವಾಗಲಿಲ್ಲ. ಇದೀಗ ಮುಖ್ಯ ನ್ಯಾಯಮೂರ್ತಿಯವರ ಪೀಠಕ್ಕೆ ವರ್ಗಾವಣೆ ಆಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಭಾರತ್‌ ಜೋಡೋ, ಬಿಜೆಪಿಯಿಂದ ಜನಸಂಕಲ್ಪ ಯಾತ್ರೆ ಭರಾಟೆ ಜೋರಾಗಿ ನಡೆದಿದೆ, ಸಚಿವ ಗೋಪಾಲಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ, ಬಿಜೆಪಿ ಶಾಸಕ ಉದಯ್‌ ಬಿ. ಗರುಡಾಚಾರ್‌ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Hijab Row | ಹಿಜಾಬ್‌ ಕುರಿತು ಸುಪ್ರೀಂ ಭಿನ್ನ ತೀರ್ಪು, ಉನ್ನತ ಪೀಠಕ್ಕೆ ವರ್ಗಾವಣೆ
ಕರ್ನಾಟಕದಲ್ಲಿ ಭುಗಿಲೆದ್ದು ದೇಶಾದ್ಯಂತ ಸುದ್ದಿಯಾಗಿರುವ ಹಿಜಾಬ್‌ ಪ್ರಕರಣದ‌ (Hijab Row) ಕುರಿತು ಸುಪ್ರೀಂ ಕೋರ್ಟ್‌ ಭಿನ್ನ ತೀರ್ಪು ನೀಡಿದ ಕಾರಣ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ.
ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉಡುಪಿಯ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮೇಲ್ಮನವಿ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ನ್ಯಾಯಪೀಠಕ್ಕೆ, ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಮುಂದಿನ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಿಸ್ತೃತ ಪೀಠ ರಚನೆ ಮಾಡಲಿದ್ದಾರೆ. ಅಲ್ಲಿಯವರೆಗೂ ಕರ್ನಾಟಕ ಹೈಕೋರ್ಟ್ ತೀರ್ಪಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಶಿಕ್ಷಣ ಇಲಾಖೆಯ ಹೊಸ ವೆಬ್‌ ಶುರು; ಶಿಕ್ಷಣ ಸಚಿವರಿಗೆ ನೇರವಾಗಿ ಪತ್ರ ಬರೆಯಲು ಅವಕಾಶ
“ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆʼʼ ಎಂದು ಈಗ ಹೆಸರು ಪಡೆದಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೊಸ ವೆಬ್‌ಸೈಟ್‌ ಅನ್ನು ಲಾಂಚ್‌ ಮಾಡಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ‘ಶಾಲಾ ಶಿಕ್ಷಣ ಮತ್ತು ಸಾಕ್ಷರತೆ’ ಇಲಾಖೆಯ ವೆಬ್ ಪೋರ್ಟಲ್ (EM Portal) ಲೋಕಾರ್ಪಣೆಗೊಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Bharat Jodo | ಅ. 15ರಂದು ಬಳ್ಳಾರಿಯಲ್ಲಿ ಬೃಹತ್‌ ಸಮಾವೇಶ, ಕಾಂಗ್ರೆಸ್‌ ಶಕ್ತಿ ಪ್ರದರ್ಶನಕ್ಕೆ ಪ್ರಿಯಾಂಕಾಗೆ ಆಹ್ವಾನ
ರಾಜ್ಯದಲ್ಲಿ ಕಳೆದ ೧೨ ದಿನಗಳಿಂದ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಯ ಅದ್ಧೂರಿ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಕಾಂಗ್ರೆಸ್‌ ಅಕ್ಟೋಬರ್‌ ೧೫ರಂದು ಬಳ್ಳಾರಿಯಲ್ಲಿ ಬೃಹತ್‌ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯ ಭಾಗವಾಗಿಯೇ ಈ ಬೃಹತ್‌ ಸಮಾವೇಶ ನಡೆಯಲಿದ್ದು, ಅಂದು ಮಧ್ಯಾಹ್ನ ಒಂದು ಗಂಟೆಗೆ ಸಮಾವೇಶ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಜನಸಂಕಲ್ಪ ಯಾತ್ರೆ | ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸಿನದ್ದು: ಸಿಎಂ ಬಸವರಾಜ ಬೊಮ್ಮಾಯಿ
ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸಿನದ್ದು. ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ, ಕಪ್ಪ ಕೊಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೂವಿನಹಡಗಲಿಯಲ್ಲಿ ಆಯೋಜಿಸಲಾಗಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಯೊಬ್ಬರು ಕಪ್ಪ ಕೊಡುವ ಬಗ್ಗೆ ಮಾತನಾಡುತ್ತಾರೆ. ಆ ಸಂಸ್ಕೃತಿ ಇರೋದು ಕಾಂಗ್ರೆಸ್ ನಲ್ಲಿ ಮಾತ್ರ. ತಾವು ಅಧಿಕಾರದಲ್ಲಿದ್ದಾಗ ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ, ಕಪ್ಪ ಕೊಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ. ಕಾಂಗ್ರೆಸ್‌ ರಾಜ್ಯಾಧ್ಯಕ್ಷರು ಕಪ್ಪ ಕೊಡಲು ಹೋಗಿಯೇ ಇಡಿ ಕೈಗೆ ಸಿಲುಕಿಕೊಂಡಿದ್ದಾರೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ವಿರೋಧದ ನಡುವೆಯೂ ಭೂತಾನ್‌ನಿಂದ ಅಡಕೆ ಆಮದು; ಅಗತ್ಯ ಕ್ರಮಗಳಿಗೆ ಕೇಂದ್ರದ ಸೂಚನೆ
ಭೂತಾನ್‌ನಿಂದ ಪ್ರತಿ ವರ್ಷ ಸುಂಕವಿಲ್ಲದೆ 17 ಸಾವಿರ ಮೆಟ್ರಿಕ್‌ಟನ್‌ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಅನುಮತಿ ನೀಡಿರುವುದನ್ನು ರಾಜ್ಯದ ಅಡಕೆ ಬೆಳೆಗಾರರು, ಬೆಳೆಗಾರರ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿರುವುದರ ನಡುವೆಯೇ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಗಳು ಅಡಕೆ ಆಮದಿಗೆ ಸಿದ್ಧತೆ ಆರಂಭಿಸಿವೆ.
ಕನಿಷ್ಠ ಆಮದು ಬೆಲೆಯ (ಎಂಐಸಿ) ಷರತ್ತು ಇಲ್ಲದೇ 17 ಸಾವಿರ ಮೆಟ್ರಿಕ್‌ಟನ್‌ ಹಸಿ ಅಡಕೆಯನ್ನು ಮುಕ್ತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡಿ ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (DGFT) ಸೆ.28 ರಂದು ಅಧಿಸೂಚನೆ ಹೊರಡಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಮುಂಬೈ ಕಂಪನಿಗೆ ಕಾಕಂಬಿ ರಫ್ತು ಅವಕಾಶ: ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಲಂಚ ಆರೋಪ
ರಾಜ್ಯದಲ್ಲಿ ಉತ್ಪಾದನೆ ಆಗುವ ಕಾಕಂಬಿಯನ್ನು (ಮೊಲ್ಯಾಸಿಸ್‌) ರಫ್ತು ಮಾಡಲು ಕಾರವಾರ ಬಂದರಿನಲ್ಲೇ ಸೌಲಭ್ಯವಿದ್ದರೂ ಗೋವಾ ಮೂಲಕ ರಫ್ತು ಮಾಡಲು ಮುಂಬೈ ಮೂಲಕ ಕಂಪನಿಗೆ ಗುತ್ತಿಗೆ ನೀಡಿದ ಆರೋಪ ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಕೇಳಿಬಂದಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವರು ಆರೋಪವನ್ನು ಅಲ್ಲಗಳೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಚಿಕ್ಕಪೇಟೆ BJP ಶಾಸಕ ಉದಯ್‌ ಬಿ. ಗರುಡಾಚಾರ್‌ಗೆ 2 ತಿಂಗಳು ಜೈಲು ಶಿಕ್ಷೆ ಪ್ರಕಟ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್‌ ಬಿ. ಗರುಡಾಚಾರ್‌ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಎರಡು ತಿಂಗಳು ಜೈಲು ಶಿಕ್ಷೆಯನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ತೀರ್ಪು ನೀಡಿದೆ.
2018ರ ಚುನಾವಣೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಗರುಡಾಚಾರ್‌ ಸ್ಪರ್ಧಿಸಿದ್ದರು. ಈ ವೇಳೆ ಚುನಾವಣಾ ಆಯೋಗಕ್ಕೆ ಅಫಿಡವಿಟ್‌ ಸಲ್ಲಿಸುವಾಗ, ಕ್ರಿಮಿನಲ್‌ ಮೊಕದ್ದಮೆಗಳು ಸೇರಿ ಅನೇಕ ಮಾಹಿತಿಗಳನ್ನು ಮುಚ್ಚಿಟ್ಟಿರುವ ಆರೋಪ ಸಾಬೀತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Interest rate hike | ನಿಲ್ಲದ ಹಣದುಬ್ಬರ, ಡಿಸೆಂಬರ್‌ನಲ್ಲಿ 0.50% ಬಡ್ಡಿ ದರ ಏರಿಕೆ ಸಂಭವ
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಡಿಸೆಂಬರ್‌ನಲ್ಲಿ ಪ್ರಕಟಿಸಲಿರುವ ತನ್ನ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ 0.50% ಏರಿಕೆ ಮಾಡುವ ಸಾಧ್ಯತೆ ಇದೆ. (Interest rate hike) ಇದರೊಂದಿಗೆ ರೆಪೊ ದರ ಆಧರಿತ ಎಲ್ಲ ಸಾಲಗಳ ಬಡ್ಡಿ ದರಗಳು ಕೂಡ ಮತ್ತೆ ಅರ್ಧ ಪರ್ಸೆಂಟ್‌ ತನಕ ಏರಿಕೆಯಾಗಲಿದೆ.‌ ಆಹಾರ ವಸ್ತುಗಳ ದರ ಜಿಗಿತದೊಂದಿಗೆ, ರಿಟೇಲ್‌ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ 7.4%ಕ್ಕೆ ಏರಿಕೆಯಾಗಿರುವುದು ಆರ್‌ಬಿಐಗೆ ಸವಾಲಾಗಿ ಪರಿಣಮಿಸಿದೆ. ಇದು ಕಳೆದ ಐದು ತಿಂಗಳಿನಲ್ಲಿಯೇ ಗರಿಷ್ಠ ಮಟ್ಟವಾಗಿದೆ. ಹಣದುಬ್ಬರವು ಆರ್‌ಬಿಐ ಟಾರ್ಗೆಟ್‌ಗಿಂತ ಮೇಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Sensex | ಹಣದುಬ್ಬರ ಹೆಚ್ಚಳಕ್ಕೆ ಷೇರು ಪೇಟೆ ತತ್ತರ, ಸೆನ್ಸೆಕ್ಸ್‌‌ 390 ಅಂಕ ಪತನ

9. BCCI President | ಬಿಸಿಸಿಐ ಅಧ್ಯಕ್ಷ ಗಾದಿ ತೊರೆದ ಬಗ್ಗೆ ಮೌನ ಮುರಿದ ಸೌರವ್‌ ಗಂಗೂಲಿ
ಬಿಸಿಸಿಐ ಅಧ್ಯಕ್ಷ (BCCI President) ಸ್ಥಾನಕ್ಕೆ ಎರಡನೇ ಅವಧಿಗೆ ಮಾಜಿ ಬ್ಯಾಟರ್‌ ಸೌರವ್‌ ಗಂಗೂಲಿ ಅವರನ್ನು ಮುಂದುವರಿಸದಿರುವ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ಪಶ್ಚಿಮ ಬಂಗಾಳ ಚುನಾವಣೆ ವೇಳೆ ಬಿಜೆಪಿಗೆ ನೆರವು ನೀಡದ ಸೌರವ್‌ ಗಂಗೂಲಿ ಅವರನ್ನು ಮುಂದುವರಿಸದೇ ಇರಲು ಬಿಜೆಪಿ ನಿರ್ಧರಿಸಿದೆ ಎಂಬುದಾಗಿ ತೃಣಮೂಲ ಕಾಂಗ್ರೆಸ್‌ ಆರೋಪಿಸಿದೆ. ಇಷ್ಟೆಲ್ಲ ಬೆಳವಣಿಗೆ ನಡುವೆ ಸೌರವ್‌ ಗಂಗೂಲಿ ಗುರುವಾರ ಈ ಬಗ್ಗೆ ಮೌನ ಮುರಿದಿದ್ದು, ತಮಗೆ ಅಧಿಕಾರದಲ್ಲಿ ಮುಂದುವರಿಯಲು ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Video | ಆನ್​ಲೈನ್​​ನಲ್ಲಿ ಬಂದ ಜಾಬ್ ಆಫರ್​ ನಕಲಿಯೋ? ಅಸಲಿಯೋ?-ಪತ್ತೆ ಹಚ್ಚುವ 5 ವಿಧಾನ ತಿಳಿಸಿದ ಕೇಂದ್ರ ಸರ್ಕಾರ
ಸೈಬರ್​​ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಇಂಟರ್​​ನೆಟ್​​ನಲ್ಲಿ ಜನರನ್ನು ವಂಚಿಸುವವರ ಜಾಲ ವಿಸ್ತೃತವಾಗುತ್ತಿದೆ. ಅದರಲ್ಲಿ ಒಂದು ನಕಲಿ ಉದ್ಯೋಗ ಭರವಸೆಗಳನ್ನು ಕೊಟ್ಟು, ಉದ್ಯೋಗಾಕಾಂಕ್ಷಿಗಳನ್ನು ಮೋಸಗೊಳಿಸುವುದು. ‘ನಿರುದ್ಯೋಗಿಗಳಿಗೆ ಸುವರ್ಣಾವಕಾಶ’, ಉದ್ಯೋಗ ಖಾಲಿ ಇದೆ, ಆಕರ್ಷಕ ವೇತನ ನೀಡಲಾಗುವುದು..’ ಹೀಗೆ ಇಂಥ ಟ್ಯಾಗ್​​ಲೈನ್​​ಗಳಡಿ ಹತ್ತುಹಲವು ಆಫರ್​​ಗಳನ್ನು ನೀವು ಫೇಸ್​ಬುಕ್​​ನಲ್ಲೋ, ವಾಟ್ಸ್​ಆ್ಯಪ್​​ಗಳಲ್ಲಿ ಬಂದ ಮೆಸೇಜ್​​ಗಳಲ್ಲೋ ನೋಡಿರುತ್ತೀರಿ. ಹಾಗಂತ ಎಲ್ಲವೂ ಫೇಕ್​ ಎನ್ನಲು ಸಾಧ್ಯವಿಲ್ಲ, ಆದರೆ ಇವುಗಳಲ್ಲಿ ಎಲ್ಲವೂ ಸತ್ಯವಾದ ಆಫರ್​ಗಳೇ ಆಗಿರುವುದಿಲ್ಲ. ಆನ್​ಲೈನ್​ ಮೂಲಕ ಜಾಬ್​ ಆಫರ್​ ಬಂದಾಗ ಅದು ನಕಲಿಯೋ, ಅಸಲಿಯೋ ಎಂದು ಹೇಗೆ ತಿಳಿಯಬಹುದು? ಇಲ್ಲಿವೆ ನೋಡಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದ ಐದು ಪ್ರಮುಖ ಅಂಶಗಳು ಇಲ್ಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಆಸಕ್ತಿಕರ ಸುದ್ದಿಗಳು

ಎಲೆಕ್ಷನ್‌ ಹವಾ | ಸುಳ್ಯ | ಬಿಜೆಪಿಗೇ ʼಮೀಸಲುʼ ಆಗಿರುವ ಕ್ಷೇತ್ರದಲ್ಲಿ 7ನೇ ಗೆಲುವಿನ ನಗೆ ಬೀರುವರೇ ಅಂಗಾರ?
Army Assault Dog | ಉಗ್ರರ ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಸೇನಾ ಶ್ವಾನ ಜೂಮ್​ ಸಾವು

Exit mobile version