Site icon Vistara News

ವಿಸ್ತಾರ TOP 10 NEWS | ಮುಗಿಯದ ಮಹಾ ಬಿಕ್ಕಟ್ಟಿನಿಂದ ಮುರ್ಮು ನಾಮಪತ್ರದವರೆಗಿನ ಪ್ರಮುಖ ಸುದ್ದಿಗಳಿವು

Vistara top 10 june 24 2022

ಬೆಂಗಳೂರು: ಕಳೆದು ಐದು ದಿನದಿಂದ ನಡೆಯುತ್ತಿರುವ ಮಹಾರಾಷ್ಟ್ರ ಬಿಕ್ಕಟ್ಟು ಮುಂದುವರಿದೇ ಇದೆ. ರಾಷ್ಟ್ರಪತಿ ಚುನಾವಣೆ ಅಖಾಡಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ. ರಾಹುಲ್‌ ಗಾಂಧಿಯವರ ವಿಚಾರಣೆ ಕುರಿತು ಇ.ಡಿ ಹೇಳಿದ ಅಚ್ಚರಿಯ ಹೇಳಿಕೆ ಏನು, ಬಿಬಿಎಂಪಿ ವಾರ್ಡ್‌ ವಿಂಗಡಣೆ ಮಾಡಲು ಬಳಸಿದ್ದು ಸಂಖ್ಯಾಶಾಸ್ತ್ರದ ಆಧಾರದಲ್ಲಿ ಏಕೆ ಎನ್ನುವುದರಿಂದ ಹಿಡಿದು ದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಚಿತ್ರಣ ವಿಸ್ತಾರ TOP 10 NEWS ಗುಚ್ಛದಲ್ಲಿ…

೧. Maha politics: ಹಿಗ್ಗಿದ ಶಿಂಧೆ ಟೀಮ್‌, ಭಾವುಕತೆ, ಆಕ್ರೋಶಕ್ಕೆ ಮೊರೆ ಹೋದ ಉದ್ಧವ್‌ ಠಾಕ್ರೆ
ಮಹಾರಾಷ್ಟ್ರ ರಾಜಕಾರಣದಲ್ಲಿ ಶುಕ್ರವಾರ ಆರೋಪ ಪ್ರತ್ಯಾರೋಪಗಳದೇ ಸುರಿಮಳೆ. ಒಮ್ಮೆ ಸ್ವಲ್ಪ ತಣ್ಣಗಾದಂತೆ ಕಂಡರೆ ಇನ್ನೊಮ್ಮೆ ಬೆಂಕಿ ಬಿರುಗಾಳಿ. ಗುವಾಹಟಿಯ ಹೋಟೆಲ್‌ನಲ್ಲಿರುವ ಬಂಡಾಯ ನಾಯಕ ಏಕನಾಥ್‌ ಶಿಂಧೆ ಬಣದ ಬಲ ನಾಲ್ಕು ಶಿವಸೇನಾ ಶಾಸಕರ ಸೇರ್ಪಡೆಯಿಂದ ಹೆಚ್ಚಾಗಿದೆ. ಅದೇ ಹೊತ್ತಿಗೆ ನಿರಂತರವಾಗಿ ಶಾಸಕರನ್ನು ಕಳೆದುಕೊಳ್ಳುತ್ತಿರುವ ಉದ್ಧವ್‌ ಠಾಕ್ರೆ ಒಮ್ಮೆ ಭಾವುಕರಾಗಿ, ಇನ್ನೊಮ್ಮೆ ಆಕ್ರೋಶದಿಂದ ಮಾತನಾಡಿದರು. ಉದ್ಧವ್‌ ಠಾಕ್ರೆ ತಮ್ಮ ಸಿಎಂ ಹುದ್ದೆ ಬಿಡಲು ಸಿದ್ಧ ಆದರೆ, ಬಿಜೆಪಿ ಜತೆ ಮೈತ್ರಿ ಇಲ್ಲ ಎಂದಿದ್ದಾರೆ. ಆದರೆ, ಶಿಂಧೆ ಬಣ ಕಾಂಗ್ರೆಸ್‌-ಎನ್‌ಸಿಪಿ ಜತೆಗಿನ ಮೈತ್ರಿ ಕಡಿದುಕೊಳ್ಳಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

೨. ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ; ಪ್ರಧಾನಿ ಮೋದಿ ಉಪಸ್ಥಿತಿ
ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ, ಜಾರ್ಖಂಡ್ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಇಂದು ನಾಮಪತ್ರ (Droupadi Murmu Nominations)‌ ಸಲ್ಲಿಸಿದರು. ರಾಷ್ಟ್ರಪತಿ ಚುನಾವಣೆ ಜುಲೈ 18ಕ್ಕೆ ನಡೆಯಲಿದೆ. ಪ್ರಧಾನಿ ಮೋದಿಯವರು ಮೊದಲ ಸೂಚಕರಾಗಿದ್ದಾರೆ. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

3. ಬಿಬಿಎಂಪಿ 243 ವಾರ್ಡ್‌ ರಚನೆಯಾಗಿದ್ದು ಸಂಖ್ಯಾಶಾಸ್ತ್ರದ ಆಧಾರದಲ್ಲಿ!
ಕರ್ನಾಟಕದ ಐದನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸುಮಾರು ಒಂದೂವರೆ ವರ್ಷದಿಂದ ಚುನಾವಣೆ ಇಲ್ಲದೆ ಬಡವಾಗಿದೆ. ಇದೀಗ ಸುಪ್ರೀಂಕೋರ್ಟ್‌ ಆದೇಶಕ್ಕೆ ಕಟ್ಟುಬಿದ್ದು ಗಡಿಬಿಡಿಯಲ್ಲಿ ವಾರ್ಡ್‌ ಮರುವಿಂಗಡಣೆ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿದೆ. ಈ ಹಿಂದೆ ಇದ್ದ 198 ವಾರ್ಡ್‌ಗಳ ಸಂಖ್ಯೆ ಇದೀಗ 243ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಇದರಲ್ಲಿ ಆಸಕ್ತಿಕರ ವಿಚಾರ ಏನು ಎಂದರೆ, 243 ವಾರ್ಡ್‌ ನಿಗದಿ ಮಾಡಲು ಬಳಸಿದ್ದು “ಸಂಖ್ಯಾಶಾಸ್ತ್ರʼದ ಮಾರ್ಗ ಎನ್ನುವುದು! (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ನಡೆದಿದ್ದು ಬಿಜೆಪಿ ಕಚೇರಿ, ಕೇಶವ ಕೃಪಾದಲ್ಲಿ ಎಂದ ರಾಮಲಿಂಗಾರೆಡ್ಡಿ

೪. ಸೆಪ್ಟೆಂಬರ್‌ ಬಳಿಕ ಉಚಿತ ಪಡಿತರ ಯೋಜನೆಯ ವಿಸ್ತರಣೆಗೆ ಹಣಕಾಸು ಸಚಿವಾಲಯದ ಆಕ್ಷೇಪ
ಹಣಕಾಸು ಸಚಿವಾಲಯ ಉಚಿತ ಪಡಿತರ ಯೋಜನೆಯನ್ನು ಸೆಪ್ಟೆಂಬರ್‌ ಬಳಿಕ ಮುಂದುವರಿಸಲು ಹಣಕಾಸು ಸಚಿವಾಲಯ ಆಕ್ಷೇಪಿಸಿದೆ. ಉಚಿತ ಪಡಿತರ ಯೋಜನೆಯ ವಿಸ್ತರಣೆ ಅಥವಾ ಯಾವುದೇ ಮಹತ್ತರ ತೆರಿಗೆ ಕಡಿತಕ್ಕೆ ಮುಂದಾದರೆ ಸರ್ಕಾರದ ವಿತ್ತೀಯ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯ ಎಚ್ಚರಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

5. ಕೈ ಪಕ್ಷದಿಂದ ಒಂದು ಕಾಲು ಹೊರಗಿಟ್ಟ ಎಂ.ಆರ್‌. ಸೀತಾರಾಮ್‌: ಡಿಕೆಶಿ ವಿರುದ್ಧ ಆಕ್ರೋಶ
ಬೆಂಗಳೂರಿನ ಕೇಂದ್ರ ಭಾಗ ಮಲ್ಲೇಶ್ವರದ ಶಾಸಕರಾಗಿದ್ದ, ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಎಂ.ಆರ್‌. ಸೀತಾರಾಮ್‌ ಪಕ್ಷ ತೊರೆಯಲು ಬಹುತೇಕ ನಿಶ್ಚಯ ಮಾಡಿದ್ದಾರೆ. ತಮ್ಮ ಹಿರಿತನ ಹಾಗೂ ಪ್ರಾಮಾಣಿಕತೆಗೆ ಸತತವಾಗಿ ಆದ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ಅರಮನೆ ಮೈದಾನದಲ್ಲಿ ಶುಕ್ರವಾರ ಬೃಹತ್‌ ಸಮಾವೇಶ ನಡೆಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಸಂದೇಶ ರವಾನಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

6. 26/11 ಮುಂಬೈ ದಾಳಿಯ ಸಂಚುಕೋರ ಸಜೀದ್‌ ಮಿರ್‌ನನ್ನು ಬಂಧಿಸಿದ್ದಾಗಿ ಹೇಳಿದ ಪಾಕಿಸ್ತಾನ
2008ರ ನವೆಂಬರ್‌ 26ರಂದು ಮುಂಬೈ ಮೇಲೆ ನಡೆದ ಭೀಕರ ಉಗ್ರದಾಳಿಯ ಸಂಚುಕೋರ ಸಜೀದ್‌ ಮಿರ್‌ನನ್ನು ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿದೆ. ಇಲ್ಲೊಂದು ವಿಚಿತ್ರ ಎಂದರೆ, ಸಜೀದ್‌ ಮಿರ್‌ ಬದುಕಿಯೇ ಇಲ್ಲ, ಆತ ಮೃತಪಟ್ಟಿದ್ದಾನೆ ಎಂದು ಕಳೆದ ವರ್ಷ ಇದೇ ಪಾಕಿಸ್ತಾನ ಹೇಳಿಕೊಂಡಿತ್ತು ಎಂದು ನಿಕ್ಕಿ ಏಷ್ಯಾ ಎಂಬ ಪತ್ರಿಕೆ ವರದಿ ಮಾಡಿದೆ. ಯುಎಸ್‌ನ ಸಂಯುಕ್ತದಳದ ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಯಲ್ಲಿ ಸಜೀದ್‌ ಮಿರ್‌ ಹೆಸರು ಕೂಡ ಇದ್ದು, ಈತನ ತಲೆಗೆ 5ಮಿಲಿಯನ್‌ ಡಾಲರ್‌ ಬಹುಮಾನವನ್ನೂ ಘೋಷಿಸಲಾಗಿತ್ತು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

7. ಸರ್ಕಾರಕ್ಕೆ ಮತ್ತೊಂದು ಪತ್ರ ಕಂಟಕ: ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ 75 ಗಣ್ಯರ ಮನವಿ
ಪಠ್ಯಪುಸ್ತಕ ವಿವಾದದಿಂದ ಹೊರಬರಲು ಸರ್ಕಾರ ಒದ್ದಾಡುತ್ತಿರುವಾಗಲೇ ರಾಜ್ಯ ಸರ್ಕಾರದ ಮೇಲೆ ಮತ್ತೊಮ್ಮೆ ಸಾಹಿತಿಗಳು ಒತ್ತಡ ತಂತ್ರ ಮುಂದುವರಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆಗೆ ರಚಿಸಲಾಗಿದ್ದ ಲೇಖಕ ರೋಹಿತ್‌ ಚಕ್ರತೀರ್ಥ ಸಮಿತಿಯನ್ನು ವಜಾ ಮಾಡುವಂತೆ ಈ ಹಿಂದೆ 83 ಸಾಹಿತಿಗಳ ಪತ್ರ ಬರೆದಂತೆಯೇ ಇದೀಗ ಎಡಪಂಥೀಯ ಚಿಂತಕರು, ನಿವೃತ್ತ ಅಧಿಕಾರಿಗಳನ್ನೊಳಗೊಂಡ 75 ಗಣ್ಯರು, ರಾಜ್ಯದಲ್ಲಿ ಕೋಮು ಸಾಮರಸ್ಯ ಕಾಪಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೮. ಮೋಸಗಾರ cricket umpire ಈಗ ಸೆಕೆಂಡ್ ಹ್ಯಾಂಡ್‌ ವಸ್ತುಗಳ ಮಾರಾಟಗಾರ!
ಇವರು ಪಾಕಿಸ್ತಾನ ದೇಶೀ ಕ್ರಿಕೆಟ್‌ ತಂಡದ ಪರ ೧೭೦ ಪಂದ್ಯಗಳನ್ನಾಡಿದ ಆಟಗಾರ. ೨೦೦೦ದಿಂದ ೨೦೧೩ರವರೆಗೆ ಐಸಿಸಿ ಎಲೈಟ್‌ ಅಂಪೈರ್‌ಗಳ ಪ್ಯಾನೆಲ್‌ ಸದಸ್ಯರಾಗಿದ್ದು, ನೂರಾರು ಪಂದ್ಯಗಳಿಗೆ cricket umpire ಕಾರ್ಯ ಮಾಡಿದವರು. ಇಂಥವರು ಈಗ ಲಾಹೋರ್‌ನ ಬೀದಿಯಲ್ಲಿ ಸೆಕೆಂಡ್‌ ಹ್ಯಾಂಡ್‌ ವಸ್ತುಗಳನ್ನು ಮಾರುತ್ತಿದ್ದಾರೆ. ಅವರೇ ಅಸಾದ್‌ ರವೂಫ್‌. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

9. Text book | ಪಠ್ಯ ಪುಸ್ತಕ ಪರಿಷ್ಕರಣೆ ಎಡವಟ್ಟು ತಿದ್ದಲಿದೆ ಶಿಕ್ಷಣ ಇಲಾಖೆ!
ರಾಜ್ಯಾದ್ಯಂತ ಶಾಲೆಗಳು ಶುರುವಾದರೂ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುಗಿಯುವ ಹಾಗೆ ಕಾಣುತ್ತಿಲ್ಲ. ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಒಂದು ಹಂತಕ್ಕೆ ಬಂತು ಎನ್ನುವಾಗಲೇ ಮತ್ತೊಂದು ಹಂತಕ್ಕೆ ತಲುಪಿ ಗುದ್ದಾಟ ಶುರುವಾಗಿದೆ. ಪಠ್ಯದಲ್ಲಿನ ಎಡವಟ್ಟು ಸರಿಪಡಿಸುವ ಹೊಣೆಯನ್ನು ಈಗ ಸರ್ಕಾರ ಶಿಕ್ಷಣ ಇಲಾಖೆಗೆ ಒಪ್ಪಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

10. ಸುಸ್ತಾಯಿತು ಎಂದು ಶೇ.20ರಷ್ಟು ಪ್ರಶ್ನೆಗಳಿಗೆ ರಾಹುಲ್‌ ಗಾಂಧಿ ಉತ್ತರಿಸಲೇ ಇಲ್ಲ; ಕೌಂಟರ್‌ ಕೊಟ್ಟ ಇ ಡಿ
ಐದು ಸುತ್ತುಗಳ ಇ.ಡಿ. ವಿಚಾರಣೆ ಎದುರಿಸಿದ ಬಳಿಕ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi) ʼಅದೇನೂ ಮಹಾನ್‌ ವಿಷಯ ಅಲ್ಲವೇ ಅಲ್ಲʼ ಎಂಬರ್ಥದಲ್ಲಿ ಮಾತನಾಡಿದ್ದರು. ʼನಾನು ಸತತವಾಗಿ 10-12 ತಾಸು ಕುಳಿತು ವಿಚಾರಣೆ ಎದುರಿಸಿದ್ದನ್ನು ನೋಡಿ ಇ.ಡಿ. ಅಧಿಕಾರಿಗಳೇ ಆಶ್ಚರ್ಯ -ಖುಷಿ ವ್ಯಕ್ತಪಡಿಸಿದ್ದರು. ರಾಹುಲ್‌ ಗಾಂಧಿ ಈ ಹೇಳಿಕೆ ನೀಡಿದ ಬೆನ್ನಲ್ಲೇ ಇ.ಡಿ. ಮೂಲಗಳಿಂದ ಇನ್ನೊಂದು ಬಗೆಯ ಮಾಹಿತಿ ಹೊರಬಿದ್ದಿದೆ. ʼವಿಚಾರಣೆ ವೇಳೆ ರಾಹುಲ್‌ ಗಾಂಧಿ ಶೇ.20ರಷ್ಟು ಪ್ರಶ್ನೆಗೆಳಿಗೆ ಉತ್ತರಿಸಲಿಲ್ಲ. ನನಗೆ ತುಂಬ ಬಳಲಿಕೆ-ಸುಸ್ತಾಗುತ್ತಿದೆ ಎಂದೇ ಹೇಳುತ್ತಿದ್ದರುʼ ಎಂಬುದಾಗಿ ತಿಳಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version