ಬೆಂಗಳೂರು: ಬುಧವಾರ ದಿನಪೂರ್ತಿ ದೇಶದಲ್ಲಿ ಅತ್ಯಂತ ಪ್ರಮುಖ ಘಟನಾವಳಿಗಳು ಜರುಗಿದವು. 5G ತರಂಗಾಂತರ ಹರಾಜಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದರೆ, ಸತತ 10 ಗಂಟೆ ರಾಹುಲ್ ಗಾಂಧಿಯವರನ್ನು ಇಡಿ ವಿಚಾರಣೆ ನಡೆಸಿದೆ. ಸತತ 8ನೇ ಬಾರಿ ಬಸವರಾಜ ಹೊರಟ್ಟಿ ಎಂಎಲ್‌ಸಿ ಆಗಿದ್ದಾರೆ, ಕಾಶ್ಮೀರದಲ್ಲಿ ಈ ವರ್ಷ 100 ಉಗ್ರರ ಸಂಹಾರವಾಗಿದೆ, 10 ವರ್ಷದ ನಂತದ ದೇಶದಲ್ಲಿ ಪೋಲಿಯೋ ವೈರಸ್ ಪತ್ತೆಯಾಗಿದೆ. ಇಂತಹ 10 ಪ್ರಮುಖ ಸುದ್ದಿಗಳ ಹೂರಣ ಇಲ್ಲಿದೆ.
೧.. ವಿಧಾನ ಪರಿಷತ್ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ವಿಜಯ: ಅರುಣ್ ಶಹಾಪುರಗೆ ಸೋಲು
ರಾಜ್ಯವಷ್ಟೆ ಅಲ್ಲ, ರಾಷ್ಟ್ರದ ರಾಜಕಾರಣದಲ್ಲಿ ಹೊಸ ದಾಖಲೆಯೊಂದು ಬುಧವಾರ ಬರೆಯಲ್ಪಟ್ಟಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ. ಈಗಾಗಲೆ ಏಳು ಬಾರಿ ಎಂಎಲ್‌ಸಿ ಆಗಿರುವ ಹೊರಟ್ಟಿ ಇದೀಗ ಎಂಟನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಗುರಿಕಾರ್ ವಿರುದ್ಧ ಜಯಗಳಿಸಿದ್ದಾರೆ. ಈ ಅವಧಿ ಮುಕ್ತಾಯವಾಗುವ ವೇಳೆಗೆ ಅವರು ಎಂಎಲ್‌ಸಿ ಆಗಿ 48 ವರ್ಷ ಪೂರೈಸುತ್ತಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಸತತ ಎರಡು ಬಾರಿ ಜಯಗಳಿಸಿದ್ದ ಬಿಜೆಪಿಯ ಅರುಣ್ ಶಹಾಪುರ ಅವರು ಮೂರನೇ ಬಾರಿ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ವಿರುದ್ಧ ಸೋಲನುಭವಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೨.. 5G ಸ್ಪೆಕ್ಟ್ರಮ್ ಹರಾಜಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಮುಂಬರುವ 5ಜಿ ಸ್ಪೆಕ್ಟ್ರಮ್ ಹರಾಜಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ನಡೆದಿದೆ ಎಂದು ಮೂಲಗಳು ತಿಳಿಸಿವೆ. ದೂರಸಂಪರ್ಕ ಇಲಾಖೆ ಈ ಬಗ್ಗೆ ಅಧಿಸೂಚನೆಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ. ಹರಾಜು ಪ್ರಕ್ರಿಯೆಗೆ ಮಾರ್ಗದರ್ಶಿ ಬಿಡುಗಡೆಯಾಗಲಿದೆ. ಟ್ರಾಯ್ ಕಳೆದ ಏಪ್ರಿಲ್‌ನಲ್ಲಿ 5ಜಿ ಹರಾಜಿಗೆ ಶಿಫಾರಸು ಮಾಡಿತ್ತು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೩.. 24 ಗಂಟೆ ಕಳೆದರೂ ಮುಗಿಯದ ರಾಹುಲ್ ವಿಚಾರಣೆ, ನಿಲ್ಲದ ಕಾಂಗ್ರೆಸ್ ಬೀದಿ ಕಾಳಗ
ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಮೂರು ದಿನಗಳಾದರೂ ತನ್ನ ಗ್ರಿಲ್ಲಿಂಗ್‌ನ್ನು ನಿಲ್ಲಿಸುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಮೂರು ದಿನಗಳಲ್ಲಿ ಒಟ್ಟು 24 ಗಂಟೆಗೂ ಅಧಿಕ ಸಮಯ ರಾಹುಲ್ ಗಾಂಧಿ ವಿಚಾರಣೆಗೆ ಒಳಗಾಗಿದ್ದಾರೆ. ಇ.ಡಿ. ಅಧಿಕಾರಿಗಳು ಅವರಿಗೆ ೧೦೦ರಷ್ಟು ಪ್ರಶ್ನೆಗಳನ್ನು ಕೇಳಿ ಲಿಖಿತ ಉತ್ತರವನ್ನು ಪಡೆದಿದ್ದಾರೆ ಎನ್ನಲಾಗಿದೆ.(ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೪.. ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ: ಮಾಜಿ ಸಚಿವ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಕವಿಶೈಲದಿಂದ ಪಾದಯಾತ್ರೆ
ರಾಷ್ಟ್ರಕವಿ ಕುವೆಂಪು ಅವರಿಗೆ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಪಕ್ಷ ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಬುಧವಾರ ಪಾದಯಾತ್ರೆ ಹಮ್ಮಿಕೊಂಡಿತ್ತು. ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯ ಪುಸ್ತಕವನ್ನೇ ಮುಂದುವರಿಸಬೇಕು, ಕುವೆಂಪುರವರನ್ನ ಅವಮಾನಿಸಿದ ರೋಹಿತ್ ಚಕ್ರತೀರ್ಥರ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಡಿರುವ ಬದಲಾವಣೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಪಾದಯಾತ್ರೆ ನಡೆಸಲಾಗುತ್ತಿದ್ದು, ಹಿರಿಯ ಕಲಾವಿದ ಹಂಸಲೇಖ ಪಾದಯಾತ್ರೆಗೆ ಬುಧವಾರ ಮುಂಜಾನೆ ಚಾಲನೆ ನೀಡಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಪಾದಯಾತ್ರೆ ಬಳಿಕ ನಡೆದ ಬೃಹತ್ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭಾಗವಹಿಸಿದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೈರು ಹಾಜರಾಗಿದ್ದರು.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೫..ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಗ್ಗೆ ವಿಪಕ್ಷಗಳ ಅಭಿಪ್ರಾಯ ತಿಳಿಯಲು ಇಚ್ಛಿಸಿದ ಪ್ರಧಾನಿ ಮೋದಿ
ಭಾರತದ ಮುಂದಿನ ರಾಷ್ಟ್ರಪತಿ ಯಾರಾಗಬಹುದು?- ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರ ಸಂಖ್ಯೆಯನ್ನು ಗಮನಿಸಿದರೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬುದು ಸ್ಪಷ್ಟ. ಇದೆಲ್ಲದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ಅಭಿಪ್ರಾಯ ಏನೆಂದು ತಿಳಿದುಕೊಳ್ಳಲು ಬಯಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ರಾಷ್ಟ್ರಪತಿ ಚುನಾವಣೆ ಯಲ್ಲಿ ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಭರ್ಜರಿ ಕಸರತ್ತು ನಡೆಯುತ್ತಿದೆ. ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅಥವಾ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಖ್ ಅಬ್ದುಲ್ಲಾ ಆಯ್ಕೆಯಾಗುವ ಸಾಧ್ಯತೆ ಇದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೬.. ಗುರುವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. ಗುರುವಾರ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಆರಂಭ
ದ್ವಿತೀಯ ಪಿಯುಸಿ ಫಲಿತಾಂಶ ನಾಳೆಯೇ (ಜೂ.೧೬) ಪ್ರಕಟವಾಗಲಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಆದರೆ ಪಿಯುಸಿ ಫಲಿತಾಂಶ ನಾಳೆ ಪ್ರಕಟವಾಗುವುದಿಲ್ಲ. ವಿದ್ಯಾರ್ಥಿಗಳು ಊಹಾಪೋಹಕ್ಕೆ ಒಳಗಾಗಬಾರದು. ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಫೋನ್ ಕರೆ ಮೂಲಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಎಂಜಿನಿಯರಿಂಗ್, ಕೃಷಿ, ವಿಜ್ಞಾನ ಮುಂತಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಿಇಟಿ-2022ರ ಪರೀಕ್ಷೆ ಜೂನ್ 16ರಿಂದ ಆರಂಭವಾಗಲಿದೆ.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೭.. ವಿಧಾನಸಭೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ ಖಚಿತ; ತಂದೆಯ ಕ್ಷೇತ್ರದಿಂದಲೇ ʼಶಿಕಾರಿʼ?
ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈ ಮಾತನ್ನು ಸ್ವತಃ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತುಮಕೂರಿನಲ್ಲಿ ಖಚಿತಪಡಿಸಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವುದು ಇನ್ನೂ ನಿರ್ಧಾರ ಆಗಿಲ್ಲ. ಆದರೆ ಸ್ಪರ್ಧೆ ಮಾಡುತ್ತಾರೆ. ಕ್ಷೇತ್ರದ ಕುರಿತು ಇನ್ನೂ ನಿರ್ಧಾರ ಮಾಡಬೇಕು ಎಂದಿದ್ದಾರೆ.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೮.. ಕಾಶ್ಮೀರದಲ್ಲಿ ಇಬ್ಬರು ಲಷ್ಕರೆ ಭಯೋತ್ಪಾದಕರ ಹತ್ಯೆ, ಈ ವರ್ಷ 100 ಉಗ್ರರ ಸಂಹಾರ
ಜಮ್ಮು ಕಾಶ್ಮೀರದ ಶೋಪಿಯಾನ್ ಎಂಬಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು ಇಬ್ಬರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇದರೊಂದಿಗೆ ಜಮ್ಮು ಕಾಶ್ಮೀರದಲ್ಲಿ ಈ ವರ್ಷ ಹತರಾದ ಭಯೋತ್ಪಾದಕರ ಸಂಖ್ಯೆ 100ಕ್ಕೆ ಏರಿದೆ. ಅವರಲ್ಲಿ 30 ಮಂದಿ ಪಾಕ್ ಮೂಲದವರಾಗಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೯.. ದಶಕದ ನಂತರ ದೇಶದಲ್ಲಿ ಪೋಲಿಯೋ ವೈರಸ್ ಪತ್ತೆ : ಕೋಲ್ಕತ್ತದಲ್ಲಿ ಹೈ ಅಲರ್ಟ್
ದೇಶದಲ್ಲಿ 10 ವರ್ಷಗಳ ನಂತರ ಪೋಲಿಯೋ ವೈರಸ್ ಪತ್ತೆಯಾಗಿದೆ. ಪೋಲಿಯೋ ವೈರಸ್‌ನ ಹೊಸ ತಳಿ ಕೋಲ್ಕತ್ತದಲ್ಲಿ ಪತ್ತೆಯಾಗಿರುವುದರಿಂದ ಪಶ್ಚಿಮ ಬಂಗಾಳದ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಮಕ್ಕಳ ಮೇಲೆ ನಿಗಾ ಇಡಲು ಎಚ್ಚರಿಕೆ ನೀಡಲಾಗಿದೆ. 2011ರಲ್ಲಿ ಕೊನೆಯ ಬಾರಿಗೆ ದೇಶದಲ್ಲಿ ಪೋಲಿಯೋ ಪ್ರಕರಣ ದಾಖಲಾಗಿತ್ತು. ಪಶ್ಚಿಮ ಬಂಗಾಳದ ಹಾವ್ಡಾದಲ್ಲಿ 12 ವರ್ಷದ ಬಾಲಕಿಗೆ ಪೋಲಿಯೋ ಸೋಂಕು ತಗುಲಿತ್ತು. ಬಳಿಕ 2014ರ ಮಾರ್ಚ್ 27 ರಂದು ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ದೇಶವಾಗಿ ಘೋಷಿಸಿತ್ತು.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೧೦.. ಬೆಂಗಳೂರಿನಲ್ಲಿ ಜೂ.20ರಂದು ಮೋದಿ ರೋಡ್ ಶೋ; ಅಭೂತಪೂರ್ವ ಸ್ವಾಗತಕ್ಕೆ ಸಿಎಂ ಸೂಚನೆ
ಬಿಜೆಪಿ ಅಧಿಕಾರದಲ್ಲಿ ಇರದ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಅದಕ್ಕಿಂತ ಕಡಿಮೆಯಾಗದಂತೆ ನಾವು ಸ್ವಾಗತ ಕೋರಬೇಕು. ಇದು ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಅವರ ಭೇಟಿಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)