ಬೆಂಗಳೂರು: ಚಾಮರಾಜಪೇಟೆ ಮೈದಾನವನ್ನು ಬಿಬಿಎಂಪಿ ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಣೆ ಮಾಡಿದ್ದರೂ ವಿವಾದ ಇನ್ನೂ ಇತ್ಯರ್ಥಗೊಳ್ಳುವಂತೆ ಕಾಣಿಸುತ್ತಿಲ್ಲ. ಇದೀಗ ಬಿಬಿಎಂಪಿ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಹೈಕೋರ್ಟ್ ಮೆಟ್ಟಿಲೇರಿದೆ.
ಇತ್ತೀಚಿನವರೆಗೂ ಈದ್ಗಾ ಮೈದಾನದ ಒಡೆತನದ ಬಗ್ಗೆ ತುಂಬಾ ವಿವಾದಗಳು ಇರಲಿಲ್ಲ. ಅದು ವಕ್ಫ್ ಬೋರ್ಡ್ ಆಸ್ತಿ ಎಂದೇ ಎಲ್ಲರೂ ತಿಳಿದಿದ್ದರು. ಆದರೆ, ಯಾವಾಗ ವಕ್ಫ್ ಬೋರ್ಡ್ ಬಳಿ ಈ ಬಗ್ಗೆ ದಾಖಲೆ ಇಲ್ಲ ಎನ್ನುವುದು ತಿಳಿಯಿತೋ ನಾಗರಿಕ ಒಕ್ಕೂಟ ವೇದಿಕೆ ಬಿಬಿಎಂಪಿ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿ ಆಟದ ಮೈದಾನದ ಈಗಿನ ಸ್ಥಿತಿಗತಿಯ ವಿವರ ಕೇಳಿತ್ತು. ಆರಂಭದಲ್ಲಿ ಇದು ಬಿಬಿಎಂಪಿಯದೇ ಆಸ್ತಿ ಎಂದು ಆಯುಕ್ತರು ಹೇಳಿದ್ದರು. ಆದರೆ, ವಕ್ಫ್ ಬೋರ್ಡ್ ತಾನು ಸುಪ್ರೀಂಕೋರ್ಟ್‌ನಿಂದ ಈ ಬಗ್ಗ್ಗೆ ಆದೇಶ ಪಡೆದಿರುವುದಾಗಿ ಹೇಳಿತ್ತು.
ಆಗ ಬಿಬಿಎಂಪಿ ಜಂಟಿ ಆಯುಕ್ತರು ಮೈದಾನ ವಕ್ಫ್ ಬೋರ್ಡ್‌ಗೆ ಸೇರಿದ್ದೆಂಬ ಬಗ್ಗೆ ದಾಖಲೆಗಳಿದ್ದರೆ ಕೊಡಿ ಎಂದು ಸೂಚಿಸಿ ಗಡುವು ನೀಡಿದ್ದರು. ಆದರೆ, ನಿಗದಿತ ಗಡುವಿನೊಳಗೆ ಯಾವುದೇ ದಾಖಲೆಗಳನ್ನು ನೀಡಲು ವಕ್ಫ್ ಬೋರ್ಡ್ ವಿಫಲವಾದ ಹಿನ್ನೆಲೆಯಲ್ಲಿ ಜಾಗವನ್ನು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಘೋಷಣೆ ಮಾಡಿದೆ. ಅದಾದ ಬಳಿಕವೇ ಮೈದಾನದಲ್ಲಿ ಸಹಾಯಕ ಕಮೀಷನರ್ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಧ್ವಜಾರೋಹಣವನ್ನು ನಡೆಸಿದ್ದು.
ವಕ್ಫ್ ಬೋರ್ಡ್ ನಿಲುವೇನು?
ಚಾಮರಾಜಪೇಟೆ ಮೈದಾನದ ಮಾಲೀಕತ್ವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಬಿಬಿಎಂಪಿಯ ಜಂಟಿ ಆಯುಕ್ತರಿಗೆ ಇಲ್ಲ. ಇದುವರೆಗೂ ಈದ್ಗಾ ಮೈದಾನ ವಕ್ಫ್ ಬೋರ್ಡ್ ಆಧೀನದಲ್ಲಿತ್ತು. ಹೀಗಾಗಿ ಜಂಟಿ ಆಯುಕ್ತರ ಆದೇಶ ರದ್ದು ಮಾಡಬೇಕು- ಎನ್ನುವ ವಾದವನ್ನು ಮುಂದಿಟ್ಟುಕೊಂಡು ವಕ್ಫ್ ಬೋರ್ಡ್ ಕೋರ್ಟ್ ಮೆಟ್ಟಿಲೇರಿದೆ. ಗುರುವಾರ ಮಧ್ಯಾಹ್ನ ೨.೩೦ಕ್ಕೆ ವಿಚಾರಣೆ ನಡೆಯಲಿದೆ.
ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ತಿಳಿದ ಕೂಡಲೇ ಈ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಗಿದೆ. ಇದೀಗ ಗಣೇಶೋತ್ಸವಕ್ಕೂ ಸಿದ್ಧತೆ ನಡೆಯುತ್ತಿದೆ. ಈ ಹಂತದಲ್ಲಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಸ್ವಲ್ಪ ಮಟ್ಟಿಗೆ ಗೊಂದಲವನ್ನು ಸೃಷ್ಟಿಸಿರುವ ಸಾಧ್ಯತೆಗಳು ಕಂಡುಬಂದಿವೆ.
ಇದನ್ನೂ ಓದಿ| ಚಾಮರಾಜಪೇಟೆ | ಸಮೀಪಿಸುತ್ತಿದೆ ಗಣೇಶೋತ್ಸವ: ಆದರೂ ಇನ್ನೂತೀರ್ಮಾನಕ್ಕೆ ಸರಕಾರ ಮೀನಮೇಷ