Site icon Vistara News

ಮಂಡ್ಯದಲ್ಲಿ ಉರಿಗೌಡ, ನಂಜೇಗೌಡರ ಹೆಸರಲ್ಲಿ ಶಾಶ್ವತ ಮಹಾದ್ವಾರ ನಿರ್ಮಿಸುತ್ತೇವೆ: ಸಿ.ಟಿ. ರವಿ

We will build a permanent mahadwara in the name of Urigowda and Nanjegowda in Mandya says CT Ravi

ಕೊಪ್ಪಳ: ಮಂಡ್ಯದಲ್ಲಿ ಭಾನುವಾರ (ಮಾ. 12) ದಶಪಥ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಖ್ಯದ್ವಾರಕ್ಕೆ ಇಡಲಾಗಿದ್ದ ಉರಿಗೌಡ, ನಂಜೇಗೌಡ ಮಹಾ ದ್ವಾರದ ಹೆಸರನ್ನು ಬದಲಾವಣೆ ಮಾಡಿರುವುದಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಚ್ಚರಿ ವ್ಯಕ್ತಪಡಿಸಿದ್ದು, ಏಕೆ ತೆರವು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾವು ಅಲ್ಲಿ ಶಾಶ್ವತವಾಗಿ ದ್ವಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಉರಿಗೌಡ, ನಂಜೇಗೌಡ ಮಹಾ ದ್ವಾರದ ಹೆಸರನ್ನು ರಾತ್ರೋರಾತ್ರಿ ಬದಲಿಸಲಾಗಿದೆ. ಉರಿಗೌಡ, ನಂಜೇಗೌಡ ಅವರು ಮತಾಂಧ ಟಿಪ್ಪುವನ್ನು ಕೊಂದವರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರ ಹೆಸರನ್ನು ಮಹದ್ವಾರಕ್ಕೆ ಇಡಲಾಗಿತ್ತು. ಈಗ ಏಕೆ ಆ ಹೆಸರನ್ನು ಬದಲಾಯಿಸಲಾಗಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ನಾವು ಶಾಶ್ವತವಾಗಿ ಅವರ ಹೆಸರಿನ ದ್ವಾರವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ಎಂದು ಬದಲು

ಉರಿಗೌಡ, ನಂಜೇಗೌಡ ಎಂಬ ಹೆಸರಿನ ಬಗ್ಗೆ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ಎಂದು (Modi in Karnataka) ಮರು ನಾಮಕರಣ ಮಾಡಲಾಗಿತ್ತು. ಉರಿಗೌಡ, ನಂಜೇಗೌಡ ಎಂದು ಹೆಸರಿಗೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Modi in Karnataka: ಹೆದ್ದಾರಿ ಮಾಡಿದ್ದು, ಐಐಟಿ ತಂದಿದ್ದು ತಾವೇ ಎಂದು ಕೆಲವರು ಜಾಹೀರಾತು ನೀಡುತ್ತಿದ್ದಾರೆ: ಪ್ರಲ್ಹಾದ ಜೋಶಿ ಟೀಕೆ

ಟ್ವೀಟ್‌ನಲ್ಲಿ ಖಂಡಿಸಿದ್ದ ಸಿ.ಟಿ. ರವಿ

ಮುಖ್ಯದ್ವಾರಕ್ಕೆ ಉರಿಗೌಡ ಮತ್ತು ನಂಜೇಗೌಡ ಅವರ ಹೆಸರು ಇಟ್ಟಿರುವುದಕ್ಕೆ ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಸಿ.ಟಿ ರವಿ ಅವರು ಸರಣಿ ಟ್ವೀಟ್‌ ಮಾಡಿ ಮೂಲಕ ಖಂಡಿಸಿದ್ದರು.

ಬೆಂಗಳೂರು- ಮೈಸೂರು ದಶಪಥ ಯೋಜನೆಯ ಉದ್ಘಾಟನೆ ಕಾರ್ಯಕ್ರಮ ಪ್ರಯುಕ್ತ ಮಂಡ್ಯದಲ್ಲಿ ಉರಿಗೌಡ ಮತ್ತು ನಂಜೇಗೌಡರ ಹೆಸರಿನ ದ್ವಾರ ಅಳವಡಿಸಿರುವುದನ್ನು ನೋಡಿ ಕೆಲವರಿಗೆ ಉರಿ ಹತ್ತಿಕೊಂಡಿದೆ. ದ್ವಾರ ತೆಗೆಸುವಂತೆ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. ಟಿಪ್ಪುವನ್ನು ಕೊಂದವರಿಗೆ ನಾಡ ಗೌರವ ಸಿಗುವುದನ್ನೂ ಇವರಿಂದ ಸಹಿಸಲಾಗುವುದಿಲ್ಲ ಎಂದು ಸಿಟಿ ರವಿ ಟ್ವೀಟ್‌ನಲ್ಲಿ ಖಂಡಿಸಿದ್ದರು.

ಟಿಪ್ಪುವನ್ನು ಕೊಂದರು ಎಂಬ ಕಾರಣಕ್ಕೆ ಉರಿಗೌಡರು ಹಾಗೂ ನಂಜೇಗೌಡರು ಕಪೋಲಕಲ್ಪಿತ ವ್ಯಕ್ತಿಗಳೇ?
ಟಿಪ್ಪುವಿನ ವಿರುದ್ಧ ಹೋರಾಡಿದವರು ಸಿದ್ದರಾಮಯ್ಯ ಪಾಲಿಗೆ ದೇಶದ್ರೋಹಿಗಳೇ? ಇರಬಹುದು ಬಿಡಿ, ಟರ್ಕಿಯ ಸುಲ್ತಾನನನ್ನು ಆಹ್ವಾನಿಸಿದ ಟಿಪ್ಪು ಮತ್ತು ವಿದೇಶಿ ನೆರವು ಕೇಳಿದ ಇವರ ನಾಯಕರ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ತನ್ನ ಸ್ವಾರ್ಥಕ್ಕಾಗಿ ಟರ್ಕಿ, ಫ್ರೆಂಚರಿಗೆ ಮೈಸೂರನ್ನು ಆಳಲು ಆಹ್ವಾನ ನೀಡಿದ ಟಿಪ್ಪು ನಿಮ್ಮ ಪಾಲಿಗೆ ದೇಶಪ್ರೇಮಿ, ಅವನನ್ನು ಕೊಂದ ಉರಿಗೌಡ ಮತ್ತು ನಂಜೇಗೌಡರು ಕಾಲ್ಪನಿಕ ವ್ಯಕ್ತಿಗಳೇ? ಎಂದು ಸಿ.ಟಿ. ರವಿ ಪ್ರಶ್ನೆ ಮಾಡಿದ್ದರು.

ಕೊಡವರ ನರಮೇಧ ನಡೆಸಿದ ಟಿಪ್ಪುವನ್ನು ಕೊಂದ ಉರಿಗೌಡ ಮತ್ತು ನಂಜೇಗೌಡರ ದ್ವಾರ ತೆಗೆಯಿರಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಮಂಡ್ಯದ ವೀರರಿಗೆ ಅವಮಾನ ಮಾಡಿದ್ದಾರೆ. ಹಿಂದುಗಳ ನರಮೇಧಕ್ಕೆ ಪ್ರತೀಕಾರ ತೀರಿಸಿದವರನ್ನು ವೀರರೆಂದು ಹೇಳಿಕೊಂಡರೂ ಇವರಿಗೆ ಅಸಹನೆ. ಇದು ಓಲೈಕೆ ರಾಜಕಾರಣದ ಪರಮಾವಧಿ ಎಂದು ಸಿ.ಟಿ. ರವಿ ಟ್ವೀಟ್‌ನಲ್ಲಿ ಟೀಕಿಸಿದ್ದರು.

ಇದನ್ನೂ ಓದಿ: Modi in Karnataka : ಮಂಡ್ಯದಲ್ಲಿ ವಿವಾದಕ್ಕೀಡಾಗಿದ್ದ ಉರಿಗೌಡ, ನಂಜೇಗೌಡ ದ್ವಾರದ ಹೆಸರು ಬದಲಾವಣೆ

ರಾಜ್ಯದಲ್ಲಿ ಹಿಂದುಗಳ ನರಮೇಧ ನಡೆಸಿದ ಟಿಪ್ಪುವಿನ ಜಯಂತಿ ಆರಂಭಿಸಿದ ಸಿದ್ದರಾಮಯ್ಯ ಅವರಿಗೆ ಹೈದರಾಲಿಯ ಸೈನಿಕರನ್ನು ಒನಕೆಯಿಂದಲೇ ಬಡಿದ ಓಬವ್ವ, ಚಿತ್ರದುರ್ಗದ ಮೇಲೆ ದಂಡೆತ್ತಿ ಬಂದ ಹೈದರಾಲಿಯನ್ನು ಮೂರು ಬಾರಿ ಹಿಮ್ಮೆಟ್ಟಿಸಿದ ಮದಕರಿ ನಾಯಕ, ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ ಮೈಸೂರು ಒಡೆಯರ್ ವಂಶಸ್ಥರು ನೆನಪಾಗುವುದೇ ಇಲ್ಲ ಎಂದು ರವಿ ಟೀಕಿಸಿದ್ದರು. ಅಲ್ಲದೆ, ಮಂಡ್ಯದ ವೀರ ಪುರುಷರ ಹೆಸರಲ್ಲಿ ಹಾಕಿದ ಕಮಾನು ಮಂಡ್ಯದ ವೀರರಿಗೆ ಸಂದ ಗೌರವ ಎಂದೂ ಹೇಳಿದ್ದರು.

Exit mobile version