ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ (Weather Report) ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೊಡಗು ಸೇರಿದಂತೆ ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣವಿರಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 25 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು ದಿಢೀರ್ ಮಳೆಗೆ ಕಾರಣ ತಮಿಳುನಾಡು ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು, ಸಮುದ್ರ ಮಟ್ಟದಿಂದ 7.6 ಕಿ.ಲೋ ಎತ್ತರದವರೆಗೆ ವ್ಯಾಪಿಸಿದೆ. ಈ ಮೇಲ್ಮೈ ಸುಳಿಗಾಳಿಯು ಉತ್ತರ ಒಳನಾಡಿನವರೆಗೂ ವ್ಯಾಪಿಸಿದೆ. ಹೀಗಾಗಿ ಮುಂದಿನ 5 ದಿನಗಳು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಕ್ಟೋಬರ್‌ನಿಂದ ನವೆಂಬರ್ 2ರವರೆಗೆ 33 ಸೆಂ.ಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಮಂಗಳವಾರ ಕನಕಪುರದಲ್ಲಿ 7 ಸೆಂ.ಮೀ, ಕೊಳ್ಳೇಗಾಲ 3, ಕೋಲಾರ, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ 2, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ತೊಂಡೇಭಾವಿ, ಕೃಷ್ಣರಾಜಸಾಗರ, ಮದ್ದೂರು, ಮಳವಳ್ಳಿ , ವೈ.ಎನ್.ಹೊಸಕೋಟೆ, ಬೆಂಗಳೂರು ನಗರ, ದೇವನಹಳ್ಳಿ ಎಂಪ್ರಿ, ರಾಮನಗರ ತಲಾ 1 ಸೆಂ.ಮೀ. ಮಳೆಯಾಗಿದೆ. ಬಾಗಲಕೋಟೆಯಲ್ಲಿ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಇದನ್ನೂ ಓದಿ | IND VS BANGLA | ಮಳೆ ಪೀಡಿತ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ 5 ರನ್ ಗೆಲುವು; ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮ