ಬೆಂಗಳೂರು: ರಾಜ್ಯದಲ್ಲಿ ಇನ್ನು ನಾಲ್ಕು ದಿನ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ. ಅಲ್ಲದೆ, 11 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ (Rain News) ಸುರಿಯಲಿದೆ ಎಂದು ಹವಾಮಾನ ಇಲಾಖೆ (Weather report) ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ರಾಜ್ಯದ ಹಲವು ಕಡೆ ಗುಡುಗು, ಮಿಂಚಿನ ಸಹಿತ ಮಳೆಯಾಗಲಿದೆ. ಜತೆಗೆ ಉತ್ತರ ಒಳನಾಡಿನಲ್ಲಿ ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಬಿರುಗಾಳಿ ವೇಗವು ಗಂಟೆ 40-45 ಕಿ.ಮೀ.ನಿಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಅಂದಾಜಿಸಲಾಗಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: Siddaramaiah: ಸಿಎಂ ಸಿದ್ದರಾಮಯ್ಯ ಪತ್ನಿ ಆಸ್ಪತ್ರೆಗೆ ದಾಖಲು, ದಿಲ್ಲಿ ಪ್ರಯಾಣ ಸಮಯ ಬದಲು
ಬೆಂಗಳೂರಿನಲ್ಲಿ ಮೋಡ ಹೆಚ್ಚು
ಬೆಂಗಳೂರು ಹಾಗೂ ಸುತ್ತಮುತ್ತ ಕೆಲವು ಬಾರಿ ಭಾರಿ ಮಳೆಯಾಗಲಿದೆಯಾದರೂ ಬುಧವಾರ (ಜೂನ್ 21) ಹೆಚ್ಚಾಗಿ ಮೋಡ ಕವಿದ ವಾತಾವರಣ ಇರಲಿದೆ. ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್ ಇದ್ದರೆ, ಗರಿಷ್ಠ ಉಷ್ಣಾಂಶ 24 ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಯೆಲ್ಲೋ ಅಲರ್ಟ್?
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಅತಿ ಹೆಚ್ಚು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು ದಾವಣಗೆರೆ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮತ್ತು ಮಂಡ್ಯದಲ್ಲಿ ವ್ಯಾಪಕ ಮಳೆಯಾಗಲಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಧಾರವಾಡ, ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯನಗರ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಒಮ್ಮೊಮ್ಮೆ ಭಾರಿ ಮಳೆಯಾಗಲಿದೆ. ಮಲೆನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಬಾರಿ ಆಗಲಿದೆಯಾ ವಾಡಿಕೆ ಮಳೆ?
ಜೂನ್ ತಿಂಗಳು ಮುಕ್ತಾಯಕ್ಕೆ ಬಂದರೂ ರಾಜ್ಯದ ಬಹುತೇಕ ಕಡೆ ಮಳೆ ಆಗುತ್ತಿರಲಿಲ್ಲ. ಈಗ ಒಂದೆರಡು ದಿನಗಳಿಂದ ಅಲ್ಲಲ್ಲಿ ಹೆಚ್ಚು ಮಳೆಯಾಗುತ್ತಿದೆ. ಆದರೆ, ಹವಾಮಾನ ಇಲಾಖೆ ತಜ್ಞರ ಪ್ರಕಾರ, ಈ ಬಾರಿಯೂ ವಾಡಿಕೆಯಂತೆ ಮುಂಗಾರು ಮಳೆಯಾಗಲಿದೆ. ಜೂನ್ 21ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಎ. ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: Road accident: ಲಾರಿ, ಬೈಕ್ ಮುಖಾಮುಖಿ ಡಿಕ್ಕಿ; ಬೈಕ್‌ನಲ್ಲಿದ್ದ ಯುವಕ, ಯುವತಿ ಸ್ಥಳದಲ್ಲೇ ಸಾವು
ಇಲ್ಲೆಲ್ಲ ತಾಪಮಾನ ಹೆಚ್ಚಳ
ಮಳೆಯಾಗುವ ಸಾಧ್ಯತೆ ಇದ್ದರೂ ವಾತಾವರಣದಲ್ಲಿ ಮಾತ್ರ ತಂಪಾಗಲು ಇನ್ನೂ ಸಮಯ ಬೇಕಿದೆ. ಕಾರಣ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 4-5 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.