Site icon Vistara News

Weather Report : ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭರ್ಜರಿ ವರ್ಷಧಾರೆ; ಹೆಚ್ಚು ಕಡೆ ಬರಿ ಮೋಡ!

Heavy rains lash coastal and Malnad districts

ಬೆಂಗಳೂರು: ಮುಂದಿನ 24 ಗಂಟೆಯೊಳಗೆ ರಾಜ್ಯದ ಕರಾವಳಿ (coastal) ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮಲೆನಾಡು (Malnad) ಜಿಲ್ಲೆಗಳಲ್ಲಿಯೂ ಗುಡುಗಿನೊಂದಿಗೆ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ (Weather Report) ತಿಳಿಸಿದೆ.

ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದೆ. ಆದರೆ, ಆಗಾಗ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: Lokayukta Raid: ಮತ್ತಷ್ಟು ಅಧಿಕಾರಿಗಳಿಗೆ ಲೋಕಾ ದಾಳಿ ಶಾಕ್‌, ಕೃಷಿ ಇಲಾಖೆ ಅಧಿಕಾರಿ ಮನೆಯಲ್ಲಿ ಆಮೆ ಪತ್ತೆ!

ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ ಜಿಲ್ಲೆಯಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಂಭವವಿದ್ದು, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಇನ್ನು ಉಳಿದಂತೆ ಈ ಭಾಗದಲ್ಲಿ ಭಾಗಶಃ ಮೋಡ ಕವಿದ ವಾತಾವರಣವೇ ಇರಲಿದೆ ಎಂದು ಹೇಳಲಾಗಿದೆ. ಈ ಭಾಗದ ಉಳಿದ ಜಿಲ್ಲೆಗಳ ಅಲ್ಲಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಲೆನಾಡು ಜಿಲ್ಲೆಗಳಲ್ಲೂ ಸಾಧಾರಣ ಪ್ರದರ್ಶನ

ಮಲೆನಾಡು ಪ್ರದೇಶವೆಂದರೆ ಮಳೆಗೆ ಹೆಸರುವಾಸಿ. ಈ ಭಾಗಗಳಲ್ಲಿ ಜೂನ್‌ ತಿಂಗಳಿನಿಂದಲೇ ಭರ್ಜರಿ ಮಳೆಯಾಗುತ್ತದೆ. ಆದರೆ, ಜೂನ್‌ ಮಾಸ ಕಳೆಯುತ್ತಾ ಬಂದರೂ ಭರ್ಜರಿಯಾಗಿ ಮಳೆಯಾಗುವ ಯಾವ ಮುನ್ಸೂಚನೆಯೂ ಕಾಣಿಸುತ್ತಿಲ್ಲ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ಲಘುವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯಲ್ಲಿ ವ್ಯಾಪಕ ಮಳೆ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಈ ವಾತಾವರಣ ಮುಂದುವರಿಯಲಿದೆ. ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Illicit affair: ನಂಗೆ ಪೊಲೀಸ್‌ ಅಶೋಕನೇ ಗಂಡನಾಗಿ ಬೇಕು ಅಂತಿದ್ದಾಳೆ ಈ ವಿವಾಹಿತ ಮಹಿಳೆ!

ಮೀನುಗಾರರಿಗೆ ಎಚ್ಚರಿಕೆ

ಮುಂದಿನ 24 ಗಂಟೆಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ.ನಿಂದ 55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಜತೆಗೆ ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಡಲತೀರದ ನಿವಾಸಿಗಳು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚಿಸಲಾಗಿದೆ.

Exit mobile version