ಗುಡುಗು ಮುನ್ನೆಚ್ಚರಿಕೆ
ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶವು ಕೂಡ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 35-45 ಕಿಮೀ ಇಂದ 55 ಕಿಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಬುಧವಾರದಂದು ಕರಾವಳಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಯಾದಗಿರಿಯ ಕವಾಡಿಮಟ್ಟಿ ಏಆರ್‌ಜಿ 6 ಸೆಂ.ಮೀ ಮಳೆಯಾಗಿದೆ. ಕಲಬುರಗಿಯ ಸುಲೇಪೇಟೆ 3 ಸೆಂ.ಮೀ ಹಾಗೂ ಕೋಡ್ಲಾ, ಚಿಂಚೋಳಿ, ಕುಣಿಗಲ್, ಹೆಸರಘಟ್ಟ, ತುಮಕೂರಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಬೆಳ್ತಂಗಡಿ, ಕಾರವಾರ, ಕೋಟ, ಹೊನಾವರ ಹಾಗೂ ಮುಧೋಳೆ, ಅಡಕಿ, ಸೇಡಂ, ಸೈದಾಪುರ, ಬೀದರ್ ಪಿಟಿಒ, ಬೀದರ್, ಹುಮನಾಬಾದ್, ಬಾಳೆಹೊನ್ನೂರು, ಕೊಟ್ಟಿಗೆಹಾರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಗರಿಷ್ಠ ಉಷ್ಣಾಂಶ 41.5 ಡಿಗ್ರಿ ಸೆಲ್ಸಿಯಸ್ ಕಲಬುಗಿರಯಲ್ಲಿ ದಾಖಲಾಗಿದೆ.
ಬಿರುಗಾಳಿ ಮಳೆಗೆ ಕೊಪ್ಪಳ ತತ್ತರ
ಕೊಪ್ಪಳ ತಾಲೂಕಿನ ಕುಟುಗನಹಳ್ಳಿ ಗ್ರಾಮದಲ್ಲಿ ಗುರುವಾರ (ಜೂ. 8) ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಅಸ್ತಮಾ ಕಾಯಿಲೆಗೆ ಔಷಧಿ ಪಡೆಯಲು ಬಂದಿದ್ದ ಜನರು ಪರದಾಡಿದರು. ಕುಟುಗನಹಳ್ಳಿಯಲ್ಲಿ ಅಸ್ತಮಾಕ್ಕೆ ವನಸ್ಪತಿ ಔಷಧಿ ನೀಡಲಾಗುತ್ತಿದೆ. ಔಷಧಿಗಾಗಿ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಜನರು ಬಂದಿದ್ದಾರೆ. ಮಳೆಗೆ ಕೆಲವರು ಮರದಡಿ ಆಶ್ರಯ ಪಡೆದರೆ, ಹಲವರು ತಾವು ತಂದಿದ್ದ ಕೊಡೆಗಳ ಸಹಾಯವನ್ನು ಪಡೆದಿದ್ದರು. ಜತೆಗೆ ಅಕ್ಕಿ ಚೀಲವನ್ನು ಹಿಡಿದು ಕ್ಯೂನಲ್ಲಿ ನಿಂತಿರುವುದು ಕಂಡು ಬಂತು.
ಕಾರಿನ ಮೇಲೆ ಉರುಳಿ ಬಿದ್ದ ಮರ
ಕೊಪ್ಪಳ ನಗರ ಹೊರವಲಯದ ವಿಶ್ವತೇಜ ಮೋಟರ್ಸ್ ಬಳಿ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಡಸ್ಟರ್ ಕಾರನ್ನು ಸರ್ವಿಸ್‌ಗಾಗಿ ನಿಲ್ಲಿಸಲಾಗಿತ್ತು. ಭಾರಿ ಗಾಳಿ ಮಳೆಗೆ ಮರವು ಕಾರಿನ ಮೇಲೆ ಬಿದ್ದಿದ್ದು, ಜಖಂಗೊಂಡಿದೆ.
ಇನ್ನು ಬಿಸಿಲಿನಿಂದ ಕಂಗೆಟ್ಟಿದ್ದ ಮಂಗಳೂರಿನ ಜನರಿಗೆ ವರುಣ ತಂಪೆರೆದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಮಳೆ ಸುರಿಯುತ್ತಿದೆ. ಮಳೆ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಮಳೆಯಿಂದಾಗಿ ಜನರು ಸಂತಸಗೊಂಡಿದ್ದಾರೆ.
ಇದನ್ನೂ ಓದಿ: Monsoon Precaution: ಮಳೆಗಾಲಕ್ಕೆ ಶುರುವಾಯ್ತು ಕ್ಷಣಗಣನೆ; ಈ ಆ್ಯಪ್‌ಗಳು ಈಗ ನಿಮಗೆ ಅತ್ಯಗತ್ಯ
ಕೋಲಾರದಲ್ಲಿ ಆಲಿಕಲ್ಲು ಮಳೆ
ಕೋಲಾರ ಹಾಗೂ ಶ್ರೀನಿವಾಸಪುರದಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಭಾರಿ ಮಳೆ ಸುರಿದಿದೆ. ಕೆಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆ ಆಗುತ್ತಿದ್ದು, ತರಕಾರಿ ತೋಟಗಳಿಗೆ ಹಾನಿ ಆಗಿದೆ. ಮಾವು ಬೆಳೆಗಾರರಿಗೆ ಕಾಯಿ ಉದುರುವ ಭೀತಿ ಎದುರಾಗಿದೆ. ಇನ್ನೂ ಎರಡು ದಿನಗಳ ಕಾಲ ಕೋಲಾರ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಇದೆ. ಹೀಗಾಗಿ ರೈತರು ಮುಂಜಾಗ್ರತಾ ಕ್ರಮವನ್ನು ತೆಗೆದು ಕೊಳ್ಳಲು ಕೃಷಿ ವಿಜ್ಞಾನ ಕೇಂದ್ರ ಸೂಚನೆ ನೀಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ