Site icon Vistara News

Weather Report : ಇಂದಿನಿಂದ ಕರಾವಳಿಯಲ್ಲಿ ಭೋರ್ಗರೆಯುವ ಮಳೆ; ಒಳನಾಡಲ್ಲಿ 50:50!

karantaka Rain Alert and women in rain

ಬೆಂಗಳೂರು: ರಾಜ್ಯಾದ್ಯಂತ ನೈರುತ್ಯ ಮುಂಗಾರು (Monsoon rain) ತನ್ನ ಬಲ ಪ್ರದರ್ಶನವನ್ನು ಮುಂದುವರಿಸಿದೆ. ಉತ್ತಮ ಆರಂಭವನ್ನು ಕಾಣದೆ ಮಂದಗತಿಯಲ್ಲಿ ಸಾಗಿದ್ದ ಮಳೆರಾಯ, ಜುಲೈ ತಿಂಗಳಲ್ಲಿ ತನ್ನ ವೇಗವನ್ನು ಪಡೆದುಕೊಂಡಿದ್ದಾನೆ. ಈ ನಿಟ್ಟಿನಲ್ಲಿ ಕಳೆದ ಹತ್ತು ದಿನಗಳಿಂದೀಚೆಗೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ (coastal regions) ಎಡೆಬಿಡದೆ ಮಳೆ ಸುರಿಯುತ್ತಿದೆ. ಮುಂದಿನ 24 ಗಂಟೆವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಭಾರಿ ಮಳೆಯಾಗುವ (Rain Alert) ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು (Weather report) ನೀಡಿದೆ. ಇನ್ನು ಒಳನಾಡು ಜಿಲ್ಲೆಗಳಲ್ಲಿ 50:50 ಮಳೆಯಾಗುವ ವಾತಾವರಣ ಇದೆ. ಕೆಲವು ಭಾಗದಲ್ಲಿ ಯಾವುದೇ ಮಳೆಯ ಮುನ್ಸೂಚನೆ ಇಲ್ಲ.

ರಾಜ್ಯದ ಕೆಲವು ಕಡೆಗೆ ಸಂಜೆ ವೇಳೆಗೆ ಗುಡುಗು, ಮಿಂಚು ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ಆದರೆ, ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ (Orange Alert) ನೀಡಲಾಗಿದೆ. ಕೆಲವೊಮ್ಮ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.

Rainfall in coastal regions

ಇದನ್ನೂ ಓದಿ: Kidnap Case : ಹಾಡಹಗಲೇ ಟ್ಯೂಷನ್‌ಗೆ ಹೊರಟಿದ್ದ 9 ವರ್ಷದ ಬಾಲಕಿಯ ಅಪಹರಣ ಯತ್ನ

ಉತ್ತರದ 7 ಕಡೆ ಮಳೆ, 3 ಕಡೆ ಒಣಹವೆ!

ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್‌, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿಯ ಕೆಲವು ಕಡೆ ಮಳೆಯಾಗಲಿದೆ. ಉಳಿದಂತೆ ಬಾಗಲಕೋಟೆ, ಕೊಪ್ಪಳ, ವಿಜಯಪುರದಲ್ಲಿ ಒಣಹವೆ (Dry weather) ಇರಲಿದೆ.

ದಕ್ಷಿಣ ಒಳನಾಡಿನ ಜಿಲ್ಲೆಯಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಹಾಗೂ ಕೊಡಗು, ಕೋಲಾರ, ಮಂಡ್ಯ ಸೇರಿದಂತೆ ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ. ದಾವಣಗೆರೆ, ಬಳ್ಳಾರಿ ಜಿಲ್ಲೆಗೆ ಯಾವುದೇ ಮಳೆ ಸೂಚನೆ ಇಲ್ಲ.

5 ಜಿಲ್ಲೆಗಳಲ್ಲಿ ಒಣ ಹವೆ ಪರಿಸ್ಥಿತಿ

ಹೀಗಾಗಿ ಒಟ್ಟಾರೆಯಾಗಿ ಮಳೆ ಆಗದ ಪ್ರದೇಶವನ್ನು ನೋಡುವುದಾದರೆ ಬಾಗಲಕೋಟೆ, ಕೊಪ್ಪಳ, ವಿಜಯಪುರ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣವೇ ಇರುವುದರ ಬಗ್ಗೆ ಹೇಳಲಾಗಿದೆ. ಆದರೆ, ಈ ವೇಳೆ ಈ ಭಾಗದ ಹವಾಮಾನ ಸ್ಥಿತಿಯಲ್ಲಿ ಅಲ್ಪ ಬದಲಾವಣೆ ಕಂಡರೆ ಒಂದೆರೆಡು ಕಡೆಗಳಲ್ಲಿ ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರಲ್ಲಿ ಸಾಧಾರಣ ಮಳೆ

ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಹೆಚ್ಚೇ ಇರಲಿದ್ದು, ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಗಾಳಿ ಸಹಿತ ಮಳೆಯಾಗುವ (Bangalore Rain today) ಸಾಧ್ಯತೆ ಇದೆ. ಆದರೆ, ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Opposition Meet: ಬೆಂಗಳೂರಿನಲ್ಲಿ ಸೇರಲಿರುವ 24 ವಿಪಕ್ಷಗಳ ಮುಖಂಡರು, ಸೋನಿಯಾ ನೇತೃತ್ವದಲ್ಲಿ 2ನೇ ಸಭೆ

“ಮಳೆ”ನಾಡಲ್ಲಿ ಮಳೆ ಕೊರತೆ!

ಜುಲೈ 1 ರಿಂದ ಜುಲೈ 11 ರವರೆಗೆ ನಡೆದ ಮಳೆ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (Karnataka State Natural Disaster Monitoring Centre) ವಿಶ್ಲೇಷಣಾ ವರದಿಯನ್ನು ನೀಡಿದೆ. ಇದರ ಪ್ರಕಾರ, ಕರ್ನಾಟಕದ 13 ಜಿಲ್ಲೆಗಳಲ್ಲಿ “ಹೆಚ್ಚುವರಿ” ಅಥವಾ “ಭಾರಿ” ಮಳೆಯಾಗಿದೆ. ಆದರೆ 12 ಜಿಲ್ಲೆಗಳಲ್ಲಿ “ಸಾಮಾನ್ಯ” ಮಳೆಯಾಗಿದೆ. ಇನ್ನು ಕೋಲಾರ, ಮಂಡ್ಯ ಸಹಿತ ಮಳೆಯೇ ಹೆಚ್ಚು ಬೀಳುವ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ “ಕೊರತೆ” (deficit of rain) ಸ್ಥಿತಿಯು ಕಂಡುಬಂದಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Exit mobile version